ಆ ಪ್ಯಾನ್ ಇಂಡಿಯಾ ಸಿನಿಮಾ ಪಾರ್ಟ್ -2 ನಿಂತೇ ಹೋಯ್ತಾ? ಅಭಿಮಾನಿಗಳಿಗೆ ಬೇಸರ
'ಬಾಹುಬಲಿ' ಹಾಗೂ 'KGF' ಸಿನಿಮಾಗಳು ಎರಡು ಭಾಗಗಳಾಗಿ ಪ್ರೇಕ್ಷಕರ ಮುಂದೆ ಬಂದು ಗೆದ್ದಿದ್ದವು. ಮುಂದೆ ಇದೇ ರೀತಿ ಸಾಕಷ್ಟು ಪ್ರಯತ್ನಗಳು ನಡೀತು. ಕೆಲವರು ಸಫಲರಾಗಿದ್ದಾರೆ. ಸರಣಿ ಸಿನಿಮಾಗಳನ್ನು ಒಂದರ ಹಿಂದೆ ಒಂದರಂತೆ ತೆರೆಗೆ ತರುವುದು ವಾಡಿಕೆ. ಆದರೆ ಇತ್ತೀಚೆಗೆ ಕೊಂಚ ಗ್ಯಾಪ್ ಕೊಟ್ಟು ಪಾರ್ಟ್-2 ಮಾಡುವ ಲೆಕ್ಕಾಚಾರ ಶುರುವಾಗಿದೆ.
'ದೇವರ- 2', 'ಸಲಾರ್- 2', 'ಕಲ್ಕಿ 2898 AD -2' ಹೀಗೆ ಕೆಲ ಸಿನಿಮಾಗಳ ಸೀಕ್ವೆಲ್ ಯಾವಾಗ ಬರುತ್ತದೆ ಎನ್ನುವುದು ಗೊತ್ತಿಲ್ಲ. 'KGF' ಚಾಪ್ಟರ್- 3 ಯಾವಾಗ ಎನ್ನುವ ಪ್ರಶ್ನೆ ಕೂಡ ಅಭಿಮಾನಿಗಳನ್ನು ಕಾಡುತ್ತಿದೆ. ಆದರೆ ಜ್ಯೂ. ಎನ್‌ಟಿಆರ್ ನಟನೆಯ 'ದೇವರ- 2' ಸಿನಿಮಾ ನಿಂತೇಹೋಯ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಗುಲ್ಲಾಗಿದೆ. ತಾರಕ್ ಅಭಿಮಾನಿಗಳಿಗೆ ಇದು ನಿಜಕ್ಕೂ ದೊಡ್ಡ ಆಘಾತವನ್ನು ನೀಡಿದೆ.

'ದೇವರ' ಸಿನಿಮಾದ ಮೊದಲ ಭಾಗದ ಬಿಡುಗಡೆಗೂ ಮುನ್ನವೇ ಎರಡನೇ ಭಾಗದ ಬಗ್ಗೆ ಚರ್ಚೆಗಳು ನಡೆಯುತ್ತಾ ಬಂದಿದ್ದವು. ಆದರೆ ಈ ರೀತಿ ದಿಢೀರ್ ಆಗಿ ಸಿನಿಮಾ ನಿಂತಿದೆ ಎಂಬ ವದಂತಿ ಕೇಳಿಬಂದಿರುವುದು ಅಚ್ಚರಿ ಮೂಡಿಸಿದೆ. ಸಿನಿಮಾ ಮೂಲಗಳ ಪ್ರಕಾರ ಈ ವದಂತಿಗಳು ಬಲವಾಗಿ ಕೇಳಿಬರುತ್ತಿವೆ. ಒಂದು ವೇಳೆ 'ದೇವರ- 2' ಸಿನಿಮಾ ರದ್ದಾದರೆ ಎನ್‌ಟಿಆರ್ ಅವರ ಮುಂದಿನ ಪ್ರಾಜೆಕ್ಟ್‌ಗಳು ಯಾವುದು ಎಂಬ ಕುತೂಹಲ ಹೆಚ್ಚಾಗಿದೆ. ಸದ್ಯಕ್ಕೆ ಇದು ಕೇವಲ ವದಂತಿ ಮಾತ್ರ ಎಂಬುದನ್ನು ನೆನಪಿನಲ್ಲಿಡಬೇಕು.
'ದೇವರ 2' ಸಿನಿಮಾ ನಿಂತು ಹೋಗಲು ಮುಖ್ಯ ಕಾರಣ ಕಥೆಯ ಬಗ್ಗೆ ಜೂನಿಯರ್ ಎನ್.ಟಿ.ಆರ್ ತೃಪ್ತರಾಗದಿರುವುದು. ಹೌದು, ನಿರ್ದೇಶಕ ಕೊರಟಾಲ ಶಿವ ಅವರು ಎರಡನೇ ಭಾಗಕ್ಕಾಗಿ ಹೊಸ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡುತ್ತಿದ್ದರು. ಆದರೆ ಆ ಕಥೆ ಕೇಳಿದ ನಂತರ ಎನ್ಟಿಆರ್ ಅವರು ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಒಂದು ಬ್ಲಾಕ್‌ಬಸ್ಟರ್ ಸಿನಿಮಾ ನೀಡಲು ಕಥೆ ಪ್ರೇಕ್ಷಕರ ಹೃದಯಕ್ಕೆ ತಟ್ಟಬೇಕು. ಆದರೆ ಈ ಸ್ಕ್ರಿಪ್ಟ್‌ನಲ್ಲಿ ಆ ಶಕ್ತಿ ಇಲ್ಲ ಎಂದು ಅವರು ಭಾವಿಸಿದ್ದಾರಂತೆ.

ಕೊರಟಾಲ ಶಿವ ಮತ್ತು ಜ್ಯೂ. ಎನ್‌ಟಿಆರ್ ಇಬ್ಬರೂ ಟಾಲಿವುಡ್‌ನ ಪ್ರಮುಖ ಹೆಸರುಗಳು. ಈ ಹಿನ್ನೆಲೆಯಲ್ಲಿ ಹೀರೋಗೆ ಕಥೆ ಇಷ್ಟವಾಗದಿರುವುದು ದೊಡ್ಡ ಮಟ್ಟದ ವಿವಾದ ಮತ್ತು ಚರ್ಚೆಗೆ ಕಾರಣವಾಗಿದೆ. ಸದ್ಯಕ್ಕೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. 'ದೇವರ' ಚಿತ್ರದಲ್ಲಿ ತಾರಕ್ ಜೋಡಿಯಾಗಿ ಜಾನ್ವಿ ಕಪೂರ್ ನಟಿಸಿದ್ದರು. ಸೈಫ್ ಅಲಿಖಾನ್ ವಿಲನ್ ಆಗಿ ಅಬ್ಬರಿಸಿದ್ದರು. ದ್ವಿಪಾತ್ರದಲ್ಲಿ ತಾರಕ್ ನಟಿಸಿ ಗಮನ ಸೆಳೆದಿದ್ದರು. ಆದರೆ ಸಿನಿಮಾ ದೊಡ್ಡದಾಗಿ ಗೆಲ್ಲಲಿಲ್ಲ. ಇದೇ ಕಾರಣಕ್ಕೆ ಸೀಕ್ವೆಲ್ ಅನುಮಾನ ಎನ್ನುವ ಚರ್ಚೆ ಶುರುವಾಗಿದೆ.
ಸದ್ಯ ಪ್ರಶಾಂತ್ ನೀಲ್ ನಿರ್ದೇಶನದ 'ಡ್ರ್ಯಾಗನ್' ಚಿತ್ರದಲ್ಲಿ ತಾರಕ್ ನಟಿಸುತ್ತಿದ್ದಾರೆ. ಈ ಚಿತ್ರ ಎರಡು ಭಾಗಗಳಾಗಿ ತೆರೆಗೆ ಬರುತ್ತದೆ ಎನ್ನಲಾಗ್ತಿದೆ. ಅದೇ ಕಾರಣಕ್ಕೆ 'ದೇವರ- 2' ನಿಂತು ಹೋಗುವ ಅನುಮಾನ ಮೂಡಿದೆ. 'ಡ್ರ್ಯಾಗನ್' ಸಿನಿಮಾ 2 ಭಾಗಗಳಾಗಿ ಬಂದರೆ ಎರಡ್ಮೂರು ವರ್ಷ ತಾರಕ್ ಬ್ಯುಸಿ ಆಗುತ್ತಾರೆ. ಅಲ್ಲಿಯವರೆಗೆ ಕೊರಟಾಲ ಶಿವ ಬೇರೆ ಸಿನಿಮಾ ಮಾಡದೇ ಕಾಯೋದಕ್ಕೆ ಆಗುವುದಿಲ್ಲ. ಇದೇ ಕಾರಣಕ್ಕೆ 'ದೇವರ- 2' ನಿಲ್ಲಬಹುದು ಎನ್ನಲಾಗ್ತಿದೆ.
ಕಳೆದ ವರ್ಷ ಬಂದಿದ್ದ 'ದೇವರ' ಸಿನಿಮಾ ಫಲಿತಾಂಶದ ಬಗ್ಗೆ ಭಿನ್ನಾಭಿಪ್ರಾಯ ಇದೆ. ಸಿನಿಮಾ ಸೂಪರ್ ಹಿಟ್ ಎಂದು ಕೆಲವರು ಹೇಳುತ್ತಾರೆ. ಇಲ್ಲ ನಿರ್ಮಾಪಕರಿಗೆ ನಷ್ಟವಾಗಿದೆ ಎನ್ನುವ ವಾದವೂ ಇದೆ. ಸೋತಿರುವ ಚಿತ್ರಕ್ಕೆ ಸೀಕ್ವೆಲ್ ಬೇಕಾ? ಪ್ರೇಕ್ಷಕರಿಗೆ ಅಷ್ಟು ಕುತೂಹಲ ಕೂಡ ಇಲ್ಲ ಎನ್ನಲಾಗ್ತಿದೆ.


Click it and Unblock the Notifications











