»   » ಬೇಡ ಬೇಡ ಕಮಲ್‌ ಎಂಬ ಬೆಂಕಿಯ ಸಂಗ :ವಾಣಿ ಗಣಪತಿ ಎಚ್ಚರಿಕೆ

ಬೇಡ ಬೇಡ ಕಮಲ್‌ ಎಂಬ ಬೆಂಕಿಯ ಸಂಗ :ವಾಣಿ ಗಣಪತಿ ಎಚ್ಚರಿಕೆ

Posted By:
Subscribe to Filmibeat Kannada

ಕಮಲ ಹಾಸನ್‌ ಒಬ್ಬ ಊಸರವಳ್ಳಿ. ಅವನ ನಿಜವಾದ ಬಣ್ಣ ಏನಂತ ತಿಳಿಯದೆಯೇ ಸಹವಾಸ ಮಾಡಿದರೆ ಅಂಥವರಿಗೆ ಕೆಡಕು ಕಟ್ಟಿಟ್ಟ ಬುತ್ತಿ. ಯಾರೋ ಹೊಸ ಹುಡುಗಿ ಅವನ ಪ್ರೇಮ ಪಾಶದಲ್ಲಿ ಸಿಲುಕಿದ್ದಾಳೆ ಅಂತ ಕೇಳಿದ್ದೇನೆ. ಆಕೆ ಜಾಣೆಯಾದರೆ, ಕಮಲ್‌ ಸಂಗ ಬಿಡುತ್ತಾಳೆ. ಇದು ಆಕೆಗೆ ನನ್ನ ಎಚ್ಚರಿಕೆ!

ಹದಿನೈದು ವರ್ಷಗಳ ಹಿಂದೆ ಕಮಲ ಹಾಸನ್‌ನಿಂದ ವಿಚ್ಛೇದನ ಪಡೆದ ನೃತ್ಯಾಂಗನೆ ವಾಣಿ ಗಣಪತಿ ಮಾತಿದು. ಕುಮುದಮ್‌ ಎಂಬ ತಮಿಳು ವಾರ ಪತ್ರಿಕೆಗೆ ಕೊಟ್ಟಿರುವ ಸಂದರ್ಶನದಲ್ಲಿ ಕಮಲ್‌ ವಿರುದ್ಧ ಹರಿಹಾಯ್ದಿರುವ ವಾಣಿ ಗಣಪತಿ, ಈ ಮೂಲಕ ದೀರ್ಘ ಕಾಲದ ಮೌನ ಮುರಿದಿರುವುದು ವಿಶೇಷ. ಕಳೆದ ಹದಿನೈದು ವರ್ಷಗಳಲ್ಲಿ ಪತ್ರಿಕೆಯಾಂದಕ್ಕೆ ಈಕೆ ಕೊಟ್ಟಿರುವ ಮೊದಲ ಸಂದರ್ಶನ ಇದು.

ಮೌನ ಮುರಿದ ವಾಣಿ ಮಾತುಗಳಲ್ಲಿ ವರ್ಷಗಳಿಂದ ಮಡುಗಟ್ಟಿದ್ದ ಅಳಲು ಹೊರಬಿದ್ದಿದೆ. ಅದರ ಸಾರ ಹೀಗಿದೆ...

ಕಮಲ್‌ ನೇರವಾಗಿ ಡೈವೋರ್ಸ್‌ ಪ್ರಸ್ತಾಪ ಮಾಡುವುದಿಲ್ಲ. ಹೆಣ್ಣನ್ನು ಅಂಥಾ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿಗೆ ತಳ್ಳುತ್ತಾನೆ. ನನಗೆ ಮಕ್ಕಳಾಗಲಿಲ್ಲ ಅನ್ನುವ ಕಾರಣ ಮೊದಲು ಹೇಳಿದ. ತನ್ನ ಅಪ್ಪ- ಅಮ್ಮನ ಬಳಿ ಆಡಿದ್ದು ಬೇರೆಯೇ ಮಾತು. ಅವರಲ್ಲಿ ಹೇಳಿದ್ದು - ಸಿನಿಮಾಗಳಲ್ಲಿ ನಟಿಸುವುದು ನನಗೆ ಇಷ್ಟವಿಲ್ಲ ಅನ್ನುವ ನೆಪ. ನಾನು ಏನು ಅಂತ ಅತ್ತೆ-ಮಾವನಿಗೆ ಗೊತ್ತಿತ್ತು. ಕಮಲ್‌ ಒಬ್ಬ ಒಳ್ಳೆ ನಟ ಅಂತ ಗೊತ್ತಿದ್ದ ನಾನು ಅವನನ್ನು ನಟಿಸಬೇಡ ಅಂತ ಯಾಕೆ ಹೇಳಲಿ ?

ಡಿವೋರ್ಸ್‌ಗೆ ಎರಡು ವರ್ಷ ಮುಂಚೆಯಿಂದಲೇ ಸಾರಿಕಾ ಸಂಗ ಮಾಡಿದ್ದ. ಆಕೆ ಗರ್ಭಿಣಿಯಾಗುವವರೆಗೂ ನಾನು ತಾಳ್ಮೆ ಮುರಿಯಲಿಲ್ಲ. ಆಮೇಲೆ ಆತನೊಟ್ಟಿಗೆ ಸಂಸಾರ ಮಾಡುವುದು ದುಸ್ತರವಾಯಿತು.

ಸಾರಿಕಾ ಬಗ್ಗೆ ನನಗೆ ಕೋಪವಿಲ್ಲ. ಕಮಲ್‌ ಜೊತೆ ನನ್ನ ಸಂಬಂಧ ಮುರಿದಾಗ ಬೇಜಾರಾಗಿತ್ತು, ನಿಜ. ಆದರೆ ಮುಂದೊಂದು ದಿನ ಆಕೆಗೂ ನನ್ನ ಪರಿಸ್ಥಿತಿ ಬರುತ್ತದೆ ಅನ್ನುವುದು ನನ್ನ ನಿರೀಕ್ಷೆಯಾಗಿತ್ತು. ಸಾರಿಕಾಗೆ ಕಮಲ್‌ ಡಿವೋರ್ಸ್‌ ಕೊಡುತ್ತಾನೆ ಅನ್ನುವ ಸುದ್ದಿ ಕೇಳಿ ನನಗೆ ತೀರಾ ನೋವಾಯಿತು. ಒಂದು ಹೆಣ್ಣಾಗಿ ನಾನು ಅನುಭವಿಸಿದ ಯಾತನೆಯನ್ನೇ ಆಕೆಯೂ ಅನುಭವಿಸಬೇಕು. ಅದರ ತೀವ್ರತೆ ನನಗೆ ಗೊತ್ತಿತ್ತು.

ತನ್ನ ತಪ್ಪುಗಳನ್ನು ಮುಚ್ಚಿ ಹಾಕಲು ಸುಳ್ಳು ಹೆಣೆಯುವುದರಲ್ಲಿ ಅವನು ನಿಸ್ಸೀಮ. ಅವನ ಬ್ಯಾಂಕ್‌ ಬ್ಯಾಲೇನ್ಸ್‌ನ ನಾನು ಖಾಲಿ ಮಾಡಿದೆ ಅಂತ ಸಿಮಿ ಗರ್ವಾಲ್‌ ಮಾಡಿದ ಸಂದರ್ಶನದಲ್ಲಿ ಈಚೆಗೆ ಹೇಳಿದ್ದನ್ನು ನೋಡಿ, ನಾನು ದಂಗಾದೆ. ಈಗ ಕಮಲ್‌ ಇನ್ನೊಬ್ಬ ಹುಡುಗಿಯ ಜೊತೆ ಲಲ್ಲೆ ಹೊಡೆಯುತ್ತಿದ್ದಾನೆ ಅನ್ನುವುದನ್ನು ಕೇಳಿ, ಮನಸ್ಸು ತಡೆಯಲಿಲ್ಲ. ಮೌನ ಬಂಗಾರ ಅಂತ ನಂಬಿದ್ದ ನಾನು ಅದನ್ನು ಮುರಿಯಲೇಬೇಕಾದ ಸಮಯ ಇದು. ಕಮಲ್‌ ಇನ್ನೆಷ್ಟು ಹುಡುಗಿಯರ ಬಾಳು ಹಾಳು ಮಾಡುವನೋ ಏನೋ? ಅದಾಗದಿರಲಿ ಅನ್ನುವುದು ನನ್ನ ಆಶಯ. ಈ ಹೊಸ ಹುಡುಗಿ ನನ್ನ ಮಾತನ್ನು ಕಿವಿ ಮೇಲೆ ಹಾಕಿಕೊಳ್ಳಲಿ.

ಅಂದಹಾಗೆ, ವಾಣಿ ಎಲ್ಲೂ ಈ ಹೊಸ ಹುಡುಗಿಯ ಹೆಸರನ್ನು ಹೇಳಿಲ್ಲ. ಆ ಹುಡುಗಿ ಸಿಮ್ರಾನ್‌ ಅಂತ ನಮ್ಮಲ್ಲೂ ಪ್ರಕಟಿಸಿದ್ದೆವು. ಒಬ್ಬ ಒಳ್ಳೆಯ ನಟನ ನಿಜ ಜೀವನದ ಪುಟಗಳು ಎಂತೆಂಥಾ ಕಲೆಗಳಿಂದ ಕೂಡಿರುತ್ತವೆ ಅನ್ನುವುದು ಸಾಮಾನ್ಯ ಪ್ರೇಕ್ಷಕನ ಮನಸ್ಸಿಗೆ ನಿಲುಕದ ವಿಷಯ.

ಕಮಲ ಹಾಸನ್‌ ಬಗ್ಗೆ ನಿಮ್ಮ ಅಭಿಪ್ರಾಯವೇನು?

ವಾರ್ತಾ ಸಂಚಯ
ಯಾವ ಹೂವು ಯಾರ ಮುಡಿಗೋ... ಸಿಮ್ರಾನ್‌ ಪ್ರೇಮ ಯಾರಿಗೋ..

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada