ಪರಮಶಿವ ಪ್ರಭಾಸ್ ಪಕ್ಕ ಪಾರ್ವತಿಯಾಗಿ ಬಾಲಿವುಡ್ ನಟಿ? ನಯನತಾರಾ ನಟಿಸಲ್ವಾ?
ಟಾಲಿವುಡ್‌ನಲ್ಲಿ ಬಹಳ ವರ್ಷಗಳ ನಂತರ ಒಂದು ಭಕ್ತಿ ಪ್ರಧಾನ ಪೌರಾಣಿಕ ಸಿನಿಮಾ ನಿರ್ಮಾಣವಾಗುತ್ತಿದೆ. ಮಂಚು ವಿಷ್ಣು 'ಕಣ್ಣಪ್ಪ'ನಾಗಿ ಪ್ರೇಕ್ಷಕರನ್ನು ಭಕ್ತಿ ಸಾಗರದಲ್ಲಿ ತೇಲಿಸಲು ಮುಂದಾಗಿದ್ದಾರೆ. ದೂರದ ನ್ಯೂಜಿಲೆಂಡ್‌ನಲ್ಲಿ ಸಂಪೂರ್ಣ ಸಿನಿಮಾ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಪ್ರಭಾಸ್, ಶಿವರಾಜ್‌ಕುಮಾರ್, ಮೋಹನ್ ಲಾಲ್ ಅತಿಥಿ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಬಾಲಿವುಡ್ ನಟಿ ಮಧೂ ಸೇರಿದಂತೆ ಘಟಾನುಘಟಿ ಕಲಾವಿದರು ತಾರಾಗಣದಲ್ಲಿದ್ದಾರೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು ಫಸ್ಟ್ ಲುಕ್ ಪೋಸ್ಟರ್ ಸಹ ರಿಲೀಸ್ ಆಗಿದೆ. ಹಾಲಿವುಡ್ ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ವತಃ ಮಂಚು ವಿಷ್ಣು ತಂದೆ ಹಿರಿಯ ನಟ ಮೋಹನ್ ಲಾಲ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಕಣ್ಣಪ್ಪನ ಕುರಿತು ಈಗಾಗಲೇ ಸಾಕಷ್ಟು ಸಿನಿಮಾಗಳು ಬಂದಿವೆ. ಮೊದಲಿಗೆ ಕನ್ನಡದಲ್ಲಿ ಡಾ. ರಾಜ್‌ಕುಮಾರ್ 'ಬೇಡರ ಕಣ್ಣಪ್ಪ' ಆಗಿ ನಟಿಸಿದ್ದರು. ಬಳಿಕ ಶಿವರಾಜ್‌ಕುಮಾರ್ ಕೂಡ ಕಣ್ಣಪ್ಪನ ಪಾತ್ರ ಮಾಡಿದ್ದರು. 'ಶಿವ ಮೆಚ್ಚಿದ ಕಣ್ಣಪ್ಪ'ನಾಗಿ ನಟಿಸಿದ್ದರು.
ಇದೇ ಕಥೆ ಆಧರಿಸಿ ತೆಲುಗಿನಲ್ಲಿ ಕೃಷ್ಣಂರಾಜು 'ಕನ್ನಪ್ಪ' ಸಿನಿಮಾ ಮಾಡಿದ್ದರು. ಪ್ರಭಾಸ್ ಕಣ್ಣಪ್ಪ ಆಗಿ ನಟಿಸಬೇಕು ಎನ್ನುವುದು ದೊಡ್ಡಪ್ಪನ ಆಸೆಯಾಗಿತ್ತು. ಅದು ಸಾಧ್ಯವಾಗಲಿಲ್ಲ. ಹಾಗಾಗಿ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

'ಕಣ್ಣಪ್ಪ' ಚಿತ್ರದಲ್ಲಿ ಪ್ರಭಾಸ್ ಪರಮಶಿವನಾಗಿ ನಟಿಸುತ್ತಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇನ್ನು ಪಾರ್ವತಿಯಾಗಿ ನಯನತಾರಾ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ನಟಿ ಮಧೂ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದರು. ಆದರೆ ಈಗ ಆ ಪಾತ್ರಕ್ಕೆ ಬಾಲಿವುಡ್ ನಟಿಯ ಆಗಮನವಾಗುತ್ತಿದೆ ಎನ್ನುವ ಚರ್ಚೆ ಶುರುವಾಗಿದೆ. ಬಾಲಿವುಡ್ ಕ್ವೀನ್ ಕಂಗನಾ ರಾಣಾವತ್ 'ಕಣ್ಣಪ್ಪ' ಚಿತ್ರದಲ್ಲಿ ಪಾರ್ವತಿಯಾಗಿ ನಟಿಸುತ್ತಾರೆ ಅನ್ನೋ ಊಹಾಪೋಹ ಹಬ್ಬಿದೆ.
ಪ್ರಭಾಸ್ ಹಾಗೂ ಕಂಗನಾ ಈ ಹಿಂದೆ 'ಏಕ್ ನಿರಂಜನ್' ಚಿತ್ರದಲ್ಲಿ ನಟಿಸಿದ್ದರು. ಪೂರಿ ಜಗನ್ನಾಥ್ ನಿರ್ದೇಶನದ ಈ ಚಿತ್ರ 14 ವರ್ಷಗಳ ಹಿಂದೆ ತೆರೆಕಂಡಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಕಣ್ಣಪ್ಪ' ಸಿನಿಮಾ ತೆರೆಗೆ ಬರಲಿದೆ. ಹಾಗಾಗಿ ತೆಲುಗು, ತಮಿಳು, ಮಲಯಾಳಂ ಸ್ಟಾರ್ ನಟರನ್ನು ತಾರಾಗಣಕ್ಕೆ ಸೇರಿಕೊಂಡಿರುವ ಸಾಧ್ಯತೆಯಿದೆ. ಕಂಗನಾ ನಟಿಸಿದ್ರೆ ಬಾಲಿವುಡ್‌ನಲ್ಲೂ ಸಿನಿಮಾ ಬಗ್ಗೆ ಕ್ರೇಜ್ ಶುರುವಾಗಲಿದೆ. ಕಂಗನಾ ಪಾರ್ವತಿ ಆಗಿ ನಟಿಸ್ತಾರಾ? ಬೇರೆ ಪಾತ್ರ ಮಾಡ್ತಾರಾ ಕಾದು ನೋಡಬೇಕಿದೆ.


Click it and Unblock the Notifications











