ಚೆನ್ನೈಗೆ ಹಾರಿದ ಕನ್ನಡದ ಬುಲ್ ಬುಲ್ , ''ಕೂಲಿ'' ಚಿತ್ರದಲ್ಲಿ ''ರಜಿನಿಕಾಂತ್'' ಜೊತೆ ರಚಿತಾ ರಾಮ್ ..?
ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜಿನಿಕಾಂತ್ ಅವರಿಗೆ ಯಾವುದೇ ಪಾತ್ರ ನೀಡಿದರೂ, ಅದಕ್ಕೆ ಸೂಪರ್ರೋ ಸೂಪರ್ರು ಎಂಬ ಪ್ರತಿಕ್ರಿಯೆ ವ್ಯಕ್ತವಾಗುತ್ತೆ. ಇಳಿ ವಯಸ್ಸಿನಲ್ಲಿಯೂ ಒಪ್ಪಿಕೊಂಡ ಪಾತ್ರ ಮತ್ತು ಚಿತ್ರಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡು ಇಂದಿನ ಹದಿ ಹರೆಯದ ಹೀರೋಗಳೂ ಕೂಡ ನಾಚುವಂತೆ ಅಮೋಘ ಅಭಿನಯ ಮಾಡುವ ರಜಿನಿಕಾಂತ್ ಜೊತೆ ಒಮ್ಮೆಯಾದರೂ ತೆರೆ ಹಂಚಿಕೊಳ್ಳಬೇಕು ಎನ್ನುವ ಬಯಕೆ ಭಾಷೆಯ ಭೇದ ಭಾವ ಇಲ್ಲದೇ ಎಲ್ಲರಲ್ಲಿಯೂ ಇದೆ. ನಮ್ಮ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಕೂಡ ಇದರಿಂದ ಹೊರತಾಗಿಲ್ಲ.
ಹೀಗಾಗಿಯೇ ಮೊನ್ನೆ ಕೂಲಿ ಚಿತ್ರದಲ್ಲಿ ಪಾತ್ರವೊಂದನ್ನು ನಿರ್ವಹಿಸುವ ಅವಕಾಶ ಸಿಕ್ಕಾಗ ಉಪೇಂದ್ರ ಎರಡು ಕೈಯಿಂದ ಆ ಅವಕಾಶ ಬಾಚಿಕೊಂಡರು. ತಮ್ಮ ಸಂಭ್ರಮವನ್ನೂ ಹಂಚಿಕೊಂಡಿದ್ದರು. ಹೀಗಿರುವಾಗ ಇದೀಗ ಕೂಲಿ ಅಂಗಳದಿಂದ ಮತ್ತೊಂದು ಸುದ್ದಿ ಹೊರ ಬಂದಿದೆ. ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ರಚಿತಾ ರಾಮ್ ರಜಿನಿಕಾಂತ್ ಮತ್ತು ಉಪೇಂದ್ರ ಅಭಿನಯದ ಕೂಲಿ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ ಸದ್ಯಕ್ಕೆ ಎಲ್ಲೆಡೆ ಕೇಳಿ ಬರುತ್ತಿದೆ.

ಹೌದು, ಹಿಂದೊಮ್ಮೆ ಕನ್ನಡದಲ್ಲಿ ಒಂದು ವರ್ಷಕ್ಕಾಗುವಷ್ಟು ಬ್ಯುಸಿಯಾಗಿರುತ್ತಿದ್ದ ರಚಿತಾ ರಾಮ್, ಕೂಲಿ ಚಿತ್ರದಲ್ಲಿ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ ಎನ್ನುವ ಮಾತು ಸದ್ಯ ಚೆನ್ನೈನಿಂದ ಬೆಂಗಳೂರುವರೆಗೆ ಕೇಳಿ ಬರುತ್ತಿದೆ.ರಚಿತಾ ರಾಮ್ ಈಗಾಗಲೇ ನಿರ್ದೇಶಕ ಲೋಕೇಶ್ ಕನಕರಾಜ್ ಅವರನ್ನು ಚೆನ್ನೈನಲ್ಲಿ ಭೇಟಿ ಮಾಡಿದ್ದಾರೆ, ಚಿತ್ರದ ಕುರಿತು ಚರ್ಚೆಯನ್ನು ಮಾಡಿದ್ದಾರೆ ಎನ್ನುವ ಸುದ್ದಿಯೂ ಕೂಡ ಸದ್ಯಕ್ಕೆ ಪಸರ್ ಆಗಿದೆ.
ಹಾಗೊಂದು ವೇಳೆ ಹರಿದಾಡುತ್ತಿರುವ ಈ ಸುದ್ದಿ ನಿಜವೇ ಆದಲ್ಲಿ ರಚಿತಾ ರಾಮ್ ಅವರಿಗೆ ಬಂಪರ್ ಲಾಟರಿ ಹೊಡೆದಂತೆ ಅನ್ನುವುದರಲ್ಲಿ ತಪ್ಪಿಲ್ಲ. ಯಾಕೆಂದರೆ ರಚಿತಾ ಈಗಾಗಲೇ ಸೂಪರ್ ಮಚ್ಚಿ ಚಿತ್ರದ ಮೂಲಕ ತೆಲುಗು ಚಿತ್ರರಂಗವನ್ನು ಪ್ರವೇಶಿಸಿದ್ದಾರೆ. ಇನ್ನೂ ತಮಿಳು ಚಿತ್ರರಂಗದಲ್ಲಿ ಮೊದಲ ಸಿನಿಮಾನೇ ರಜಿನಿಕಾಂತ್ ಅವರ ಸಿನಿಮಾ ಆದರೆ ಅವಕಾಶಗಳ ಹೆಬ್ಬಾಗಿಲು ಕೂಡ ತೆರೆಯುವ ಸಾಧ್ಯತೆ ಇದೆ. ಈ ಚಿತ್ರವನ್ನು ರಚಿತಾ ರಾಮ್ ಒಪ್ಪಿಕೊಂಡಿದ್ದೇ ಆದಲ್ಲಿ ರಚಿತಾ ರಾಮ್ ತ್ರಿಭಾಷಾ ನಟಿಯಾಗಿ ಕೂಡ ಹೊರಹೊಮ್ಮಲಿದ್ದಾರೆ. ಯಾರಿಗೆ ಗೊತ್ತು ರಶ್ಮಿಕಾ ಅವರಂತೆ ಮುಂದೊಂದು ದಿನ ರಚಿತಾ ರಾಮ್ ಬಾಲಿವುಡ್‌ಗೆ ಹೋದರು ಹೋಗಬಹುದು.

ಉಳಿದಂತೆ ರಚಿತಾ ರಾಮ್ ಇತ್ತೀಚೆಗಷ್ಟೇ ಸಂಜು ವೆಡ್ಸ್ ಗೀತಾ ಚಿತ್ರದ ಎರಡನೇ ಭಾಗದ ಚಿತ್ರೀಕರಣವನ್ನು ಮುಗಿಸಿದ್ದಾರೆ. ತಮ್ಮ ಗುರು ದರ್ಶನ್ ಅವರನ್ನೂ ಕೂಡ ಪರಪ್ಪನ ಅಗ್ರಹಾರಕ್ಕೆ ತೆರಳಿ ಮಾತನಾಡಿಸಿಕೊಂಡು ಬಂದಿದ್ದಾರೆ. ಇನ್ನೂ ಡಾರ್ಲಿಂಗ್ ಕೃಷ್ಣ ಅವರ ಜೊತೆ ಲವ್ ಮೀ Or ಹೇಟ್ ಮೀ ಚಿತ್ರಕ್ಕೆ ರಚಿತಾ ರಾಮ್ ಹಿಂದೆ ಬಣ್ಣ ಹಚ್ಚಿದ್ದರು. ದೀಪಕ್ ಗಂಗಾಧರ್ ನಿರ್ದೇಶನದ ಈ ಚಿತ್ರ ಹಾಗೇ ನೋಡಿದರೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿಯೇ ಬಿಡುಗಡೆಯಾಗುತ್ತೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಒಂದು ವರ್ಷ ಕಳೆದರೂ ಈ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ ಅನ್ನುವುದು ಬೇರೆ ವಿಷಯ.
ಒಟ್ನಲ್ಲಿ ಸದ್ಯಕ್ಕೆ ರಜಿನಿಕಾಂತ್ ಚಿತ್ರದಲ್ಲಿ ರಚಿತಾ ರಾಮ್ ಕಾಣಿಸಿಕೊಳ್ಳಲಿದ್ದಾರೆ ಅನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ನಿಜಕ್ಕೂ ರಜಿನಿಕಾಂತ್ ಅಭಿನಯದ ಕೂಲಿ ಚಿತ್ರದಲ್ಲಿ ರಚಿತಾ ರಾಮ್ ಆಕ್ಟ್ ಮಾಡ್ತಾರಾ, ಒಂದು ವೇಳೆ ಮಾಡಿದ್ದೇ ಆದಲ್ಲಿ ಯಾವ ಪಾತ್ರವನ್ನು ರಚಿತಾ ನಿರ್ವಹಿಸಲಿದ್ದಾರೆ ಎನ್ನುವ ಪ್ರಶ್ನೆ ಕಾಡುವುದು ಸಹಜ. ಇದಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರೇ ಉತ್ತರ ಕೊಡ್ತಾರಾ ಅನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











