ರಾಮ್‌ಚರಣ್ ನಟನೆಯ 'ಪೆದ್ದಿ' ಚಿತ್ರದಲ್ಲಿ ಕನ್ನಡ ನಟಿ ಐಟಂ ಸಾಂಗ್?
ತೆಲುಗು ಸಿನಿಮಾಗಳಲ್ಲಿ ಐಟಂ ಸಾಂಗ್ ಕ್ರೇಜ್ ಕಮ್ಮಿ ಆಗ್ತಿಲ್ಲ. 'ಪುಷ್ಪ'-2 ಚಿತ್ರದಲ್ಲಿ ಶ್ರೀಲೀಲಾ 'ಕಿಸ್ಸಿಕ್' ಎಂದು ಕುಣಿದು ರಂಗೇರಿಸಿದ್ದು ಗೊತ್ತೇಯಿದೆ. ಸಾಂಗ್ ತಕ್ಕ ಮಟ್ಟಿಗೆ ಹಿಟ್ ಆಗಿತ್ತು. ಇದೀಗ ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ಸ್ಪೆಷಲ್ ಸಾಂಗ್ ಬಗ್ಗೆ ಚರ್ಚೆ ಶುರುವಾಗಿದೆ.
ಬುಚ್ಚಿಬಾಬು ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಇದು. ಜಾನ್ವಿ ಕಪೂರ್ ಚಿತ್ರದಲ್ಲಿ ರಾಮ್‌ಚರಣ್ ಜೋಡಿಯಾಗಿ ನಟಿಸುತ್ತಿದ್ದಾರೆ. ಕನ್ನಡ ನಟ ಶಿವಣ್ಣ ಕೂಡ ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ರಾಮನವಮಿ ಸಂಭ್ರಮದಲ್ಲಿ ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿತ್ತು.

'ಪೆದ್ದಿ' ಚಿತ್ರದಲ್ಲಿ ರಾಮ್‌ಚರಣ್ ಕ್ರೀಡಾಪಟು ಪಾತ್ರದಲ್ಲಿ ನಟಿಸುತ್ತಿದ್ದಾರೆ. 80, 90ರ ದಶಕದಲ್ಲಿ ಹಳ್ಳಿಗಾಡಿನ ಭಾಗಗಳಲ್ಲಿ ಆಡುತ್ತಿದ್ದ ಕ್ರಿಕೆಟ್ ಕಬ್ಬಡಿ ರೀತಿಯ ಆಟಗಳಲ್ಲಿ ಪೆದ್ದಿ ಭಾಗವಹಿಸುವ ಕಥೆ ಚಿತ್ರದಲ್ಲಿದೆ. 'ರಂಗಸ್ಥಳಂ' ರೀತಿ ಹಳ್ಳಿ ಸೊಗಡಿನ ಕಥೆಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಸುಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. 'ರಂಗಸ್ಥಳಂ' ಚಿತ್ರದ ಸಹ ನಿರ್ದೇಶಕನಾಗಿದ್ದ ಸುಕುಮಾರ್ ಶಿಷ್ಯ ಬುಚ್ಚಿಬಾಬು ಇದೀಗ 'ಪೆದ್ದಿ' ಕಥೆ ಹೇಳುತ್ತಿದ್ದಾರೆ.
'ರಂಗಸ್ಥಳಂ' ಚಿತ್ರದಲ್ಲಿ ಕೂಡ ಒಂದು ಬಿಂದಾಸ್ ಡ್ಯಾನ್ಸಿಂಗ್ ನಂಬರ್ ಇತ್ತು. 'ಜಿಗೇಲು ರಾಣಿ' ಎಂದು ಪೂಜಾ ಹೆಗ್ಡೆ ಹೆಜ್ಜೆ ಹಾಕಿದ್ದರು. ಅಂಥದ್ದೇ ಟಪ್ಪಾಂಗುಚಿ ಸಾಂಗ್ 'ಪೆದ್ದಿ' ಚಿತ್ರದಲ್ಲಿ ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಅಂದಹಾಗೆ 'ಪೆದ್ದಿ' ಸ್ಪೆಷಲ್ ಸಾಂಗ್‌ನಲ್ಲಿ ಶ್ರೀಲೀಲಾ ಹೆಜ್ಜೆ ಹಾಕುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ. 'ಪುಷ್ಪ'-2 ಬಳಿಕ ಮತ್ತೊಮ್ಮೆ ಕಿಸ್ ಬೆಡಗಿ ಸ್ಪೆಷಲ್ ಸಾಂಗ್‌ಗೆ ಕುಣಿಯುತ್ತಾರೆ ಎನ್ನಲಾಗ್ತಿದೆ.
'ಪುಷ್ಪ'-2 ಚಿತ್ರದಲ್ಲಿ 'ಕಿಸ್ಸಿಕ್' ಎಂದು ಶ್ರೀಲೀಲಾ ಹೆಜ್ಜೆ ಹಾಕಿದ್ದರು. ಹಾಡಿಗೆ ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಕಂಪೋಸ್ ಮಾಡಿದ್ದರು. ಆದರೆ 'ಪುಷ್ಪ' ಚಿತ್ರದ 'ಊ ಅಂಟಾವಾ' ಮಟ್ಟಕ್ಕೆ ಈ ಸಾಂಗ್ ಸದ್ದು ಮಾಡಲಿಲ್ಲ. ಇನ್ನು ಶ್ರೀಲೀಲಾ ಈಗಾಗಲೇ ಬಾಲಿವುಡ್ ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದ್ದಾರೆ. 'ಆಶಿಕಿ'-3 ಚಿತ್ರದ ಟೀಸರ್ ಸಹ ರಿಲೀಸ್ ಆಗಿದೆ. ತೆಲುಗಿನಲ್ಲಿ ಬೆಂಗಳೂರು ಬೆಡಗಿಯ ಕ್ರೇಜ್ ಕಮ್ಮಿ ಆಗುತ್ತಿದ್ದಂತೆ ಬಾಲಿವುಡ್ ಕಡೆ ಮುಖ ಮಾಡಿದ್ದಾರೆ.

'ಪೆದ್ದಿ' ಚಿತ್ರಕ್ಕೆ ಆಸ್ಕರ್ ವಿಜೇತ ಎ. ಆರ್ ರಹಮಾನ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಹಾಗಾಗಿ ಚಿತ್ರದ ಆಲ್ಬಮ್ ಬಗ್ಗೆ ಕುತೂಹಲ ಮೂಡಿದೆ. ಚಿತ್ರದಲ್ಲಿ ರಾಮ್ ಚರಣ್ ರಗಡ್ ಲುಕ್‌ನಲ್ಲಿ ನಟಿಸುತ್ತಿದ್ದು ಈಗಾಗಲೇ ಪೋಸ್ಟರ್ ಹಾಗೂ ಟೀಸರ್‌ನಲ್ಲಿ 'ಪೆದ್ದಿ' ಆರ್ಭಟ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರದಲ್ಲಿ ಜಗಪತಿ ಬಾಬು ಸೇರಿ ಘಟನುಘಟಿ ಕಲಾವಿದರು ನಟಿಸುತ್ತಿದ್ದಾರೆ. ವೃದ್ದಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.
ತಮಿಳಿನ 'ಪರಾಶಕ್ತಿ' ಸಿನಿಮಾದಲ್ಲಿ ಶಿವಕಾರ್ತಿಕೇಯನ್ ಜೋಡಿಯಾಗಿ ಶ್ರೀಲೀಲಾ ನಟಿಸುತ್ತಿದ್ದಾರೆ. ತೆಲುಗಿನ 'ಲೆನಿನ್' ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿದ್ದಾರೆ. ಬಾಲಿವುಡ್‌ನಲ್ಲಿ ಮತ್ತಷ್ಟು ಕಥೆಗಳನ್ನು ಕೇಳುತ್ತಿದ್ದು ರಶ್ಮಿಕಾ ಮಂದಣ್ಣ ಬಳಿಕ ಶ್ರೀಲೀಲಾ ಕೂಡ ಹಿಂದಿ ಚಿತ್ರರಂಗದಲ್ಲಿ ಬ್ಯುಸಿಯಾಗುತ್ತಿದ್ದಾರೆ. ಮುಂದೆ ದೊಡ್ಡ ದೊಡ್ಡ ಅವಕಾಶಗಳನ್ನು ಪಡೆಯುವ ಸುಳಿವು ಸಿಗುತ್ತಿದೆ.
ಮುಂದಿನ ವರ್ಷ ರಾಮ್‌ಚರಣ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾರ್ಚ್ 27ಕ್ಕೆ 'ಪೆದ್ದಿ' ಸಿನಿಮಾ ತೆರೆಗೆ ಬರಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಕನ್ನಡದಲ್ಲಿ ಕೂಡ ಟೀಸರ್ ರಿಲೀಸ್ ಆಗಿತ್ತು. ಇನ್ನು 24 ಗಂಟೆಗಳಲ್ಲಿ 35 ಮಿಲಿಯನ್‌ಗೂ ಅಧಿಕ ವೀವ್ಸ್ ಸಾಧಿಸಿ ಟೀಸರ್ ಸೂಪರ್ ಹಿಟ್ ಆಗಿತ್ತು. ಇತ್ತೀಚೆಗೆ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ತಂಡದ ಆಟಗಾರರು 'ಪೆದ್ದಿ' ಸ್ಟೈಲ್ ರೀ-ಕ್ರಿಯೇಟ್ ಮಾಡಿದ್ದರು.


Click it and Unblock the Notifications











