Yash: ಮಾರ್ಚ್ 21ಕ್ಕೆ 'KGF 2' ಸರ್ಪ್ರೈಸ್, ಶುರುವಾಗ್ತಿದೆ ರಾಕಿ ಖದರ್!
ಕನ್ನಡದ ಬಹುನಿರೀಕ್ಷಿತ ಸಿನಿಮಾ 'ಕೆಜಿಎಫ್ 2' ಅಬ್ಬರ ಶುರುವಾಗೋಕೆ ಇನ್ನು ಒಂದು ತಿಂಗಳು ಮಾತ್ರ ಬಾಕಿದೆ. ಏಪ್ರಿಲ್ 14ಕ್ಕೆ ಬಹು ನಿರೀಕ್ಷಿತ 'KGF 2' ಸಿನಿಮಾ ರಿಲೀಸ್ ಆಗಲಿದೆ. ಈ ದಿನಕ್ಕಾಗಿ ರಾಕಿ ಭಾಯ್ ಅಭಿಮಾನಿಗಳು ಕಾದು ಕುಳಿತಿದ್ದರು. ಇನ್ನು ಸಿನಿಮಾ ರಿಲೀಸ್ ಹತ್ತಿರ ಆಗುತ್ತಿದ್ದ ಹಾಗೆ ಸಿನಿಮಾ ಪ್ರಚಾರ ಕಾರ್ಯಗಳು ಇನ್ನೂ ಜೋರಾಗಿ ಶುರುವಾಗಲಿವೆ.
ಚಿತ್ರದ ರಿಲೀಸ್‌ಗೆ ಒಂದು ತಿಂಗಳು ಬಾಕಿ ಇರುವಾಗಲೇ ಸಿನಿಮಾ ತಂಡ ಪ್ರಚಾರ ಕಾರ್ಯ ಶುರುಮಾಡಿದೆ. ಇಲ್ಲಿತನಕ 'ಕೆಜಿಎಫ್ 2' ಚಿತ್ರದ ಟೀಸರ್ ನೋಡಿಕೊಂಡೆ ಅಭಿಮಾನಿಗಳು ಕಾಲ ದೂಡುತ್ತಿದ್ದಾರೆ. ಸಿನಿಮಾದ ಟ್ರೈಲರ್, ಹಾಡುಗಳಿಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಈ ಬಾರಿ ಸಂಗೀತ ಮಾಂತ್ರಿಕ ರವಿಬಸ್ರೂರು ಮಾಡಿರುವ ಮ್ಯಾಜಿಕ್ ನೋಡಲು ಎಲ್ಲರೂ ಕಾಯುತ್ತಿದ್ದಾರೆ.
ಚಿತ್ರತಂಡ 'ಕೆಜಿಎಫ್ 2'ನ ಒಂದೊಂದೇ ಕಂಟೆಂಟ್ ಬಿಡಲು ನಿರ್ಧಾರ ಮಾಡಿದೆ. ಹಾಗಾಗಿ ಚಿತ್ರದ ಮೊದಲ ಹಾಡನ್ನು ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದೆ ಚಿತ್ರತಂಡ. 'ಕೆಜಿಎಫ್ 2' ಮೊದಲ ಹಾಡನ್ನು ನೋಡಲು ಸಿನಿಪ್ರಿಯರು ಕಾತರರಾಗಿದ್ದಾರೆ.
'ಕೆಜಿಎಫ್ 2' ಮೊದಲ ಹಾಡು ಮಾರ್ಚ್ 21ಕ್ಕೆ!
ಮಾರ್ಚ್ 21ಕ್ಕೆ 'ಕೆಜಿಎಫ್ 2' ಚಿತ್ರದ ಮೊದಲ ಹಾಡಿ ರಿಲೀಸ್ ಆಗಲಿದೆ. ಈ ಬಗ್ಗೆ ಸಿನಿಮಾ ತಂಡ ಅಧಿಕೃತ ಮಾಹಿತಿ ನೀಡಿದೆ. ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಿರ್ಮಾಣ ಸಂಸ್ಥೆ ಹೊಂಬಾಳೆ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ. ಈ ಬಗ್ಗೆ ಪೋಸ್ಟರ್ ಹಂಚಿಕೊಂಡು ಟ್ವೀಟ್ ಮಾಡಿರುವ ಪ್ರಶಾಂತ್ ನೀಲ್ 'ಸಿದ್ಧರಾಗಿ ತೂಫಾನ್ ಬರ್ತಿದೆ. ಮಾರ್ಚ್ 21, 11.07ಕ್ಕೆ ತೂಫಾನ್ ಲಿರಿಕಲ್ ವಿಡಿಯೋ ರಿಲೀಸ್ ಆಗುತ್ತಿದೆ' ಎಂದು ಬರೆದುಕೊಂಡಿದ್ದಾರೆ.

5 ಭಾಷೆಗಳಲ್ಲಿ ಬರಲಿದೆ 'ಕೆಜಿಎಫ್ 2' ಹಾಡು!
'ಕೆಜಿಎಫ್ 2' ಸಿನಿಮಾ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಹಾಗಾಗಿ ಈ ಚಿತ್ರದ ಮೊದಲ ಹಾಡು ಕೂಡ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಹಾಡಿನ ಪೋಸ್ಟರ್ ಕೂಡ 5 ಭಾಷೆಯಲ್ಲಿ ರಿಲೀಸ್ ಮಾಡಲಾಗಿದೆ. ಟ್ಟಿಟ್ಟರ್‌ನಲ್ಲಿ ಈ ಪೋಸ್ಟರ್‌ಗಳು ಟ್ರೆಂಡಿಂಗ್ ಲಿಸ್ಟ್ ಸೇರಿವೆ. ಹಾಡಿನ ಟೈಟಲ್ ತೂಫಾನ್, ಅಂದರೆ ಬಿರುಗಾಳಿ ಎನ್ನುವ ಅರ್ಥ ಬರುತ್ತದೆ. ಒಂದು ಅಂದಾಜಿನ ಪ್ರಕಾರ, ಈ ಹಾಡು ಚಿತ್ರದ ನಾಯಕನನ್ನು ಗುಣಗಾನ ಮಾಡುವ ನಿಟ್ಟಿನಲ್ಲಿ ಇರಲಿದೆ ಎನ್ನುವ ಸುಳಿವು ಸಿಕ್ಕಿದೆ.

ಹಾಡಿನ ಬಳಿಕ ಚಿತ್ರ ಟ್ರೈಲರ್ ರಿಲೀಸ್!
ಚಿತ್ರದ ಮೊದಲ ಹಾಡು, ಈ ಸಿನಿಮಾದಲ್ಲಿ ರಾಕಿಭಾಯ್ ಅಂದರೆ ನಟ ಯಶ್ ಹೇಗೆ ಕಾಣಿಸಿಕೊಳ್ಳಬಹುದು ಎಂಬ ಸಣ್ಣ ಸುಳಿವು ಸಿಗಲಿದೆ. ಇನ್ನು ಈ ಹಾಡಿನ ಬಳಿಕ ಚಿತ್ರತಂಡ ಟ್ರೈಲರ್ ಕೂಡ ರಿಲೀಸ್ ಮಾಡಲಿದೆ. ಈಗಾಗಲೇ ಟ್ರೈಲರ್ ರಿಲೀಸ್ ದಿನಾಂಕವನ್ನು ಕೂಡ ಚಿತ್ರತಂಡ ಪ್ರಕಟ ಮಾಡಿದ್ದು, ಮಾರ್ಚ್ 27ಕ್ಕೆ ಸಿನಿಮಾದ ಟ್ರೈಲರ್ ರಿಲೀಸ್ ಆಗಲಿದೆ. ಹಾಡಿನ ಬಳಿಕವೇ ಟ್ರೈಲರ್ ರಿಲೀಸ್ ಆಗುತ್ತಿದೆ. ಹಾಗಾಗಿ ಸಿನಿಮಾ ಮೇಲೆ ಮತ್ತಷ್ಟು ನಿರೀಕ್ಷೆ ಹುಟ್ಟು ಹಾಕುವ ಯೋಜನೆ ಚಿತ್ರತಂಡಕ್ಕೆ ಇದೆ ಅನಿಸುತ್ತದೆ.

ಹೇಗಿರಲಿದೆ 'ಕೆಜಿಎಫ್ 2' ಸಿನಿಮಾದ ಅಂತ್ಯ?
ಇನ್ನು 'ಕೆಜಿಎಫ್ 2' ಚಿತ್ರಕ್ಕಿಂತಲೂ, ಚಿತ್ರದ ಕ್ಲೈಮ್ಯಾಕ್ಸ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಯಾಕೆಂದರೆ 'ಕೆಜಿಎಫ್ 3' ಬರುವುದು ಅನುಮಾನವೇ. ಹಾಗಾಗಿ ರಾಕಿ ಭಾಯ್ ಸಾಮ್ರಾಜ್ಯದ ಅಂತ್ಯ ಆಗುತ್ತಾ? ಇಲ್ಲಾ ಇನಾದ್ರೂ ಟ್ವಿಸ್ಟ್ ಇರುತ್ತಾ ಅನ್ನುವ ಕುತೂಹಲವಿದೆ. ಹಾಗಾಗಿ ಕ್ಲೈಮ್ಯಾಸ್ ಹೇಗೆ ಇರಲಿದೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲಗಳು ಹಬ್ಬಿವೆ. ಈಗಾಗಲೇ ಈ ಚಿತ್ರದಲ್ಲಿ ರಾಕಿಭಾಯ್ ಅಂತ್ಯ ಆಗುತ್ತೆ ಎನ್ನುವ ಊಹಾ ಪೊಹಗಳು ಹಬ್ಬಿವೆ. ಆದರೆ, ಊಹಾ-ಪೋಹಗಳನ್ನು ತಿಳಿಯಲು ಸಿನಿಮಾ ಬಿಡುಗಡೆಯಾಗುವವರೆಗೂ ಕಾಯಲೇಬೇಕು.


Click it and Unblock the Notifications











