'ಕಾಂತಾರ- 1' ಬಜೆಟ್ 100 ಕೋಟಿ ರೂ. ಅಲ್ಲ; ಅದಕ್ಕಿಂತಲೂ ಎರಡು ಪಟ್ಟು ಹೆಚ್ಚು?
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ- 1' ಸಿನಿಮಾ ಬಿಡುಗಡೆಗೂ ಮುನ್ನ ಸಖತ್ ಸದ್ದು ಮಾಡ್ತಿದೆ. ದೇಶವಿದೇಶಗಳಲ್ಲಿ 30 ದೇಶಗಳಲ್ಲಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಭಾರತದಲ್ಲೇ 7000 ಸ್ಕ್ರೀನ್‌ಗಳಲ್ಲಿ ಈ ವಾರ ಸಿನಿಮಾ ತೆರೆಗಪ್ಪಳಿಸಲಿದೆ. ಚಿತ್ರದ ಬಜೆಟ್ ಬಗ್ಗೆ ಚಿತ್ರತಂಡ ಮಾತನಾಡುತ್ತಿಲ್ಲ.
ಅಂದಾಜು 15 ಕೋಟಿ ರೂ. ಬಜೆಟ್‌ನಲ್ಲಿ 'ಕಾಂತಾರ' ಸಿನಿಮಾ ಬಿಡುಗಡೆ ಆಗಿತ್ತು. ಅದಕ್ಕಿಂತ 10 ಪಟ್ಟು ದೊಡ್ಡ ಸಿನಿಮಾ ಪ್ರೀಕ್ವೆಲ್ ಎನ್ನಲಾಗುತ್ತಿತ್ತು. ಅಂದಾಜು 100 ಕೋಟಿ ರೂ, ಬಜೆಟ್‌ನಲ್ಲಿ ಸಿನಿಮಾ ಮೂಡಿ ಬರುತ್ತಿದೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಅಚ್ಚರಿಯ ವಿಚಾರ ಅಂದರೆ ಅದಕ್ಕಿಂತಲೂ 2 ಪಟ್ಟು ಹೆಚ್ಚು ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ ಎನ್ನುವ ಗುಸುಗುಸು ಶುರುವಾಗಿದೆ. ರಿಷಬ್ ಶೆಟ್ಟಿ ಸಂಭಾವನೆ ಸೇರಿ ಸಿನಿಮಾ ಬಜೆಟ್ ಬರೋಬ್ಬರಿ 300 ಕೋಟಿ ರೂ. ಎನ್ನುವ ಊಹಾಪೋಹ ಶುರುವಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ಈಗಾಗಲೇ ಓಟಿಟಿ ರೈಟ್ಸ್ 120 ಕೋಟಿ ರೂ. ಹಾಗೂ ಸ್ಯಾಟಲೈಟ್ ರೈಟ್ಸ್ 80 ಕೋಟಿ ರೂ.ಗೆ ಮಾರಾಟವಾಗಿ ಭರ್ಜರಿ ಬ್ಯುಸಿನೆಸ್ ಮಾಡಿದೆ. ಆಂಧ್ರ, ತೆಲಂಗಾಣ ಡಿಸ್ಟ್ರಿಬ್ಯೂಷನ್ ರೈಟ್ಸ್ 100 ಕೋಟಿ ರೂ.ಗೂ ಸೇಲ್ ಆಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. 250 ದಿನಗಳ ಕಾಲ ರಿಷಬ್ ಶೆಟ್ಟಿ ಸಿನಿಮಾ ಚಿತ್ರೀಕರಣ ನಡೆಸಿದ್ದಾರೆ. ದೊಡ್ಡ ದೊಡ್ಡ ಸೆಟ್‌ಗಳನ್ನು ಹಾಕಿ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಕೆಲ ದಿನಗಳ ಕಾಲ 1000 ಮಂದಿ ಸಹ ಕಲಾವಿದರು ಚಿತ್ರೀಕರಣದಲ್ಲಿ ಭಾಗಿ ಆಗಿರುವುದು ಇದೆ.
ಸಂದರ್ಶನಗಳಲ್ಲಿ 'ಕಾಂತಾರ- 1' ಸಿನಿಮಾ ಬಜೆಟ್ ಬಗ್ಗೆ ಎದುರಾಗುವ ಪ್ರಶ್ನೆಗಳಿಗೆ ರಿಷಬ್ ಶೆಟ್ಟಿ ಉತ್ತರಿಸದೇ ನುಣುಚಿಕೊಳ್ಳುತ್ತಿದ್ದಾರೆ. ಈಗಾಗಲೇ 'ಕಾಂತಾರ- 1' ಸಿನಿಮಾ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿ ಭರ್ಜರಿ ರೆಸ್ಪಾನ್ಸ್ ಪಡೆದಿಕೊಂಡಿದೆ. ಈಗಾಗಲೇ ಲಕ್ಷ ಲಕ್ಷ ಟಿಕೆಟ್ ಮಾರಾಟವಾಗಿದೆ. ಬುಧವಾರ(ಅಕ್ಟೋಬರ್ 1) ರಾತ್ರಿ ಶುರುವಾಗುವ ಪೇಯ್ಡ್ ಪ್ರೀಮಿಯರ್ ಶೋ ಟಿಕೆಟ್ ಬುಕ್ಕಿಂಗ್‌ಗಾಗಿ ಕೆಲವರು ಕಾಯುತ್ತಿದ್ದಾರೆ. ಕರ್ನಾಟಕ ಮಾತ್ರವಲ್ಲ ಉತ್ತರಭಾರತದಲ್ಲಿ ಕೂಡ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ದೊಡ್ಡದಾಗಿ ಓಪನಿಂಗ್ ಪಡೆಯುವ ನಿರೀಕ್ಷೆಯಿದೆ.
'ಕಾಂತಾರ' ಸಿನಿಮಾ 300 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಹಾಗಾಗಿ ಪ್ರೀಕ್ವೆಲ್ ಅನ್ನು ಅದಕ್ಕಿಂತಲೂ ದೊಡ್ಡದಾಗಿ ತೆರೆಗೆ ತರುವ ಪ್ರಯತ್ನ ನಡೀತಿದೆ. ಆಂಧ್ರ, ತೆಲಂಗಾಣದಲ್ಲಿ ಟಿಕೆಟ್ ದರ ಹೆಚ್ಚಿಸಲು ಸರ್ಕಾರದ ಬಳಿ ಮನವಿ ಮಾಡಲಾಗಿದ್ದು ಅನುಮತಿ ಸಿಗುವ ನಿರೀಕ್ಷೆಯಿದೆ. ಅದೇ ಕಾರಣಕ್ಕೆ ಆಂಧ್ರ, ತೆಲಂಗಾಣದಲ್ಲಿ ಇನ್ನು ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿಲ್ಲ. ಸಿನಿಮಾ ಬಜೆಟ್ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಟಿಕೆಟ್ ದರ ಹೆಚ್ಚಿಸಿಕೊಳ್ಳಲು ಅನುಮತಿ ಕೇಳಿರುವ ಸಾಧ್ಯತೆಯಿದೆ.
ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಮಹತ್ವಾಕಾಂಕ್ಷೆಯ ಸಿನಿಮಾ ಇದು. ಹಾಗಾಗಿ ಅದಕ್ಕೆ ತಕ್ಕಂತೆ ಮೇಕಿಂಗ್, ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ. ರಿಷಬ್ ಶೆಟ್ಟಿ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್, ಹೃತಿಕ್ ರೋಷನ್, ಪೃಥ್ವಿರಾಜ್ ಸುಕುಮಾರನ್, ಶಿವಕಾರ್ತಿಕೇಯನ್ ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಸಾಥ್ ನೀಡಿದ್ದರು. ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ತೆಲುಗು ಪ್ರೀ ರಿಲೀಸ್ ಈವೆಂಟ್‌ಗೆ ಜ್ಯೂ. ಎನ್‌ಟಿಆರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
'ಕಾಂತಾರ- 1' ಸಿನಿಮಾ 1000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡುವ ಲೆಕ್ಕಾಚಾರ ಶುರುವಾಗಿದೆ. ಸ್ಪ್ಯಾನಿಷ್ ಭಾಷೆಗೆ ಸಿನಿಮಾ ಡಬ್ ಆಗಿ ರಿಲೀಸ್ ಆಗುತ್ತಿದೆ. ಓವರ್‌ಸೀಸ್ ಮಾರ್ಕೆಟ್‌ನಲ್ಲಿ ಕೂಡ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ.


Click it and Unblock the Notifications











