ಅಬ್ಬಬ್ಬಾ.. 'ಕಾಂತಾರ'- 3ಗೆ ಮಾಸ್ಟರ್ ಪ್ಲ್ಯಾನ್; ಊಹೆಗೂ ನಿಲುಕದ ರಿಷಬ್ ಸಂಭಾವನೆ!
ಭಾರತೀಯ ಚಿತ್ರರಂಗದಲ್ಲೀಗ ಸೀಕ್ವೆಲ್ ಸಿನಿಮಾಗಳ ಟ್ರೆಂಡ್ ನಡೀತಿದೆ. ಮೊದಲಿಗೆ ಒಂದು ಅದ್ಭುತ ಸಿನಿಮಾ ಪ್ರಪಂಚ ಸೃಷ್ಟಿಸಿ ಸರಣಿ ರೀತಿಯಲ್ಲಿ ಒಂದರ ಹಿಂದೆ ಒಂದು ಸಿನಿಮಾ ಕಟ್ಟಿಕೊಡುವ ಲೆಕ್ಕಾಚಾರ ಇದು. ರಾಜಮೌಳಿ 'ಬಾಹುಬಲಿ' ಸರಣಿ ಚಿತ್ರಗಳಿಂದ ಅದಕ್ಕೆ ಭದ್ರ ಬುನಾದಿ ಹಾಕಿದ್ದರು. 'KGF' ಸರಣಿ ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.
'ಬಾಹುಬಲಿ' ಸರಣಿ ಬಳಿಕ ಹಲವು ಕಥೆಗಳನ್ನು ಎರಡು ಭಾಗಗಳಾಗಿ ಕಟ್ಟಿಕೊಡುವ ಪ್ರಯತ್ನಗಳು ನಡೀತು. ಕೆಲವರು ಗೆದ್ದರೆ ಮತ್ತೆ ಕೆಲವರು ಸೋತಿದ್ದಾರೆ. ಇನ್ನು ಕಥೆಯನ್ನು ಮುಂದುವರೆಸುವುದು ಮಾತ್ರವಲ್ಲ, ಹಿಂದಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನಗಳು ನಡೆದಿದೆ. ಒಂದೇ ಕಥೆಯನ್ನು ಎರಡು ಭಾಗಗಳಾಗಿ ಹೇಳುವುದು ಒಂದು ಲೆಕ್ಕ, ಗೆದ್ದ ಸಿನಿಮಾ ಕಥೆಯನ್ನು ಒತ್ತಾಯಪೂರ್ವಕವಾಗಿ ಹಿಗ್ಗಿಸುವ ಸಾಹಸಗಳು ನಡೆಯುತ್ತಿದೆ. 'ಕಾಂತಾರ' ಸರಣಿ ಚಿತ್ರಗಳ ವಿಚಾರದಲ್ಲಿ ಕೂಡ ಅದೇ ಲೆಕ್ಕಾಚಾರ ನಡೀತಿದೆ.

ಈಗಾಗಲೇ 'ಕಾಂತಾರ' ಸಿನಿಮಾ ಭರ್ಜರಿ ಸಕ್ಸಸ್ ಕಂಡಿದೆ. ಸದ್ಯ ಅದರ ಪ್ರೀಕ್ವೆಲ್ ಪ್ರೇಕ್ಷಕರ ಮುಂದೆ ಬರಲು ದಿನಗಣನೆ ಶುರುವಾಗಿದೆ. ಅಕ್ಟೋಬರ್ 2ಕ್ಕೆ 'ಕಾಂತಾರ ಚಾಪ್ಟರ್-1' ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರಗಪ್ಪಳಿಸಲಿದೆ. ಇದೆಲ್ಲದರ ನಡುವೆ 'ಕಾಂತಾರ- 3' ಸಿನಿಮಾ ಕೂಡ ಕಟ್ಟಿಕೊಡುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. 'ಕಾಂತಾರ' ಎಂದು ಸೂಪರ್ ಹಿಟ್ ಬ್ರ್ಯಾಂಡ್‌ನಲ್ಲೇ ಮತ್ತೊಂದು ಸಿನಿಮಾ ನಿರ್ಮಾಣವಾಗುವ ಊಹಾಪೋಹ ಇದು.
'ಕಾಂತಾರ'-1 ಮೇಕಿಂಗ್ ಝಲಕ್ ನೋಡಿದರವು ಹುಬ್ಬೇರಿಸಿದ್ದಾರೆ. ಸಿನಿಮಾ ಅನಾಯಾಸವಾಗಿ 1000 ಕೋಟಿ ರೂ. ಕಲೆಕ್ಷನ್ ಮಾಡುತ್ತದೆ ಎಂದು ಅಭಿಮಾನಿಗಳು ಅಂದಾಜಿಸುತ್ತಿದ್ದಾರೆ. ಇನ್ನು ದೊಡ್ಡಮಟ್ಟದಲ್ಲಿ ಸಿನಿಮಾ ಪ್ರಮೋಷನ್, ಮಾರ್ಕೆಟಿಂಗ್ ಹಾಗೂ ರಿಲೀಸ್ ಪ್ಲ್ಯಾನ್ ನಡೀತಿದೆ. ಇತ್ತೀಚೆಗೆ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ಆರಂಭಿಸಿದ್ದಾರೆ. ಪರಭಾಷಿಕರು ಕೂಡ ಸಿನಿಮಾ ನೋಡಲು ಕಾತರದಿಂದ ಕಾಯುವಂತಾಗಿದೆ.
ಸಾಕಷ್ಟು ಸಂಕಷ್ಟಗಳ ನಡುವೆ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರದ ಸಹಕಲಾವಿದರು 3 ಜನ ನಾನಾ ಕಾರಣಗಳಿಂದ ಸಾವನ್ನಪ್ಪಿದ್ದರು. ಆದರೆ ಅದನ್ನು ಚಿತ್ರದೊಂದಿಗೆ ಹೋಲಿಸಿ ಕೆಲವರು ಮಾತನಾಡಿದ್ದರು. ಇನ್ನು ಸಹಕಲಾವಿದರಿದ್ದ ಮಿನಿ ಬಸ್ ಪಲ್ಟಿ ಆಗಿದ್ದು ಚಿತ್ರೀಕರಣದ ವೇಳೆ ದೋಣಿ ಮುಗುಚಿಬಿದ್ದಿದ್ದು ಕೂಡ ವಿಘ್ನ ಎಂದೇ ಚರ್ಚೆಯಾಯಿತು. ಅದನ್ನೆಲ್ಲಾ ಮೀರಿ ಚಿತ್ರೀಕರಣ ಮುಗಿಸಿ ರಿಷಬ್ ಶೆಟ್ಟಿ ನಿಟ್ಟುಸಿರು ಬಿಟ್ಟಿದ್ದಾರೆ. ಈ ಬಾರಿ ಮತ್ತೆ ನಮ್ಮ ಮಣ್ಣಿನ ಕಥೆಯನ್ನು ಅದ್ಭುತವಾಗಿ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ.

ಅಂದಹಾಗೆ 'ಕಾಂತಾರ'-1 ಬಳಿಕ ರಿಷಬ್ ಶೆಟ್ಟಿ ಬೇರೆ ಬೇರೆ ಸಿನಿಮಾಗಳಲ್ಲಿ ನಟಿಸಲಿದ್ದಾರೆ. ತೆಲುಗಿನ 'ಜೈ ಹನುಮಾನ್' ಹಾಗೂ ಹಿಂದಿಯಲ್ಲಿ ಶಿವಾಜಿ ಬಯೋಪಿಕ್ ಸಿನಿಮಾಗಳು ಘೋಷಣೆಯಾಗಿದೆ. ಆದರೆ ಅದಕ್ಕೂ ಮುನ್ನ ತೆಲುಗಿನ ಮತ್ತೊಂದು ಚಿತ್ರದಲ್ಲಿ ರಿಷಬ್ ನಟಿಸೋ ಸುದ್ದಿ ಬಂದಿದೆ. ರಾಜಮೌಳಿ ಶಿಷ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು ಸಿತಾರ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿದೆ. ವರ್ಷಾಂತ್ಯಕ್ಕೆ ಈ ಸಿನಿಮಾ ಶುರುವಾಗಲಿದೆ. ಇದೆಲ್ಲದರ ನಡುವೆ 'ಕಾಂತಾರ- 3' ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.
'KGF' ಕಥೆಯನ್ನು ಎರಡು ಭಾಗಗಳಾಗಿ ತೆರೆಗೆ ತರುವುದಾಗಿ ಪ್ರಶಾಂತ್ ನೀಲ್ ಅಂಡ್ ಟೀಂ ಹೇಳಿತ್ತು. ಆದರೆ ಚಾಪ್ಟರ್- 2 ಕ್ಲೈಮ್ಯಾಕ್ಸ್‌ನಲ್ಲಿ ಸಣ್ಣ ಟ್ವಿಸ್ಟ್ ಕೊಟ್ಟು ಚಾಪ್ಟರ್- 3 ಬಗ್ಗೆ ಕ್ರೇಜಿ ನ್ಯೂಸ್ ಕೊಟ್ಟಿದ್ದರು. ಸದ್ಯ 'ಕಾಂತಾರ- 1' ಸಿನಿಮಾ ವಿಚಾರದಲ್ಲಿ ಕೂಡ ಇದೇ ರಿಪೀಟ್ ಆಗುವ ಸಾಧ್ಯತೆ ದಟ್ಟವಾಗಿದೆ. ಕೊನೆಯಲ್ಲಿ ಟ್ವಿಸ್ಟ್ ಇಟ್ಟು ಪಾರ್ಟ್- 3 ಬಗ್ಗೆ ಕುತೂಹಲ ಮೂಡಿಸುವ ಸಾಧ್ಯತೆಯಿದೆ. ಸದ್ಯಕ್ಕೆ ಸಿನಿಮಾ ಮಾಡದೇ ಇದ್ದರೂ ಮುಂದಿನ ದಿನಗಳಲ್ಲಿ ಕಥೆಯನ್ನು ಮುಂದುವರೆಸಿ ಸಿನಿಮಾ ಮಾಡಲು ವೇದಿಕೆ ಸಿದ್ಧಮಾಡಿಕೊಳ್ಳುತ್ತಾರೆ ಎನ್ನಲಾಗ್ತಿದೆ.
ಬರೀ 15 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ 'ಕಾಂತಾರ' ಸಿನಿಮಾ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಇದೀಗ ಪ್ರೀಕ್ವೆಲ್ ಬಜೆಟ್ 100 ಕೋಟಿ ರೂ. ಮೀರಿದೆ ಎನ್ನಲಾಗ್ತಿದೆ. ಅದಕ್ಕೆ ತಕ್ಕಂತೆ ರಿಷಬ್ ಶೆಟ್ಟಿ ಸಂಭಾವನೆ ಕೂಡ ಹಲವು ಪಟ್ಟು ಜಾಸ್ತಿಯಾಗಿದೆ. ಚಾಪ್ಟರ್-1 ಕ್ರೇಜ್ ನೋಡಿದ್ರೆ ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡುತ್ತದೆ ಎಂದು ಅಂದಾಜಿಸಲಾಗುತ್ತಿದೆ. ಅದೇ ನಿಜವಾದರೆ ಚಾಪ್ಟರ್-3ಗೆ ರಿಷಬ್ ಶೆಟ್ಟಿ ಸಂಭಾವನೆ ಎಂದು ಊಹಿಸುವುದು ಕಷ್ಟ.


Click it and Unblock the Notifications











