ಹೊಸ ಸಿನಿಮಾಕ್ಕೆ 'ಕೆಜಿಎಫ್' ಗಿಂತಲೂ ದುಪ್ಪಟ್ಟು ಸಂಭಾವನೆ ಪಡೆದ ಶ್ರೀನಿಧಿ ಶೆಟ್ಟಿ!
'ಕೆಜಿಎಫ್' ಸಿನಿಮಾ ಸರಣಿ ಹಲವರನ್ನು ನಟರಿಂದ ಸ್ಟಾರ್‌ಗಳನ್ನಾಗಿ ಮಾಡಿದೆ. ಆ ಪಟ್ಟಿಯಲ್ಲಿ ನಟಿ ಶ್ರೀನಿಧಿ ಶೆಟ್ಟಿ ಸಹ ಇದ್ದಾರೆ.
ಶ್ರೀನಿಧಿ ಶೆಟ್ಟಿಗೆ 'ಕೆಜಿಎಫ್' ಮೊದಲ ಸಿನಿಮಾ, ಮೊದಲ ಸಿನಿಮಾದಿಂಲೇ ರಾಷ್ಟ್ರಮಟ್ಟದಲ್ಲಿ ಗುರುತು ಪಡೆದುಕೊಂಡಿದ್ದಾರೆ ಈ ನಟಿ. 'ಕೆಜಿಎಫ್' ಸಿನಿಮಾ ಪೂರ್ಣ ಪ್ರಮಾಣದಲ್ಲಿ ನಾಯಕ ಪ್ರಧಾನ ಸಿನಿಮಾ ಆದರೂ ಸಿಕ್ಕ ಅವಕಾಶದಲ್ಲಿಯೇ ಗಮನ ಸೆಳೆಯಲು ಶ್ರೀನಿಧಿ ಶೆಟ್ಟಿ ಸಫಲರಾಗಿದ್ದಾರೆ.
ಅದೇ ಕಾರಣದಿಂದ ಹಲವು ಅವಕಾಶಗಳು ಶ್ರೀನಿಧಿಯನ್ನು ಅರಸಿ ಬರುತ್ತಿವೆ. 'ಕೆಜಿಎಫ್ 2' ಸಿನಿಮಾಕ್ಕಾಗಿ ಬೇರಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳದೆ ಸುಮ್ಮನಿದ್ದ ಶ್ರೀನಿಧಿ ಶೆಟ್ಟಿ ಈಗ ಸಾಲು-ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನೊಂದು ಗಮನ ಸೆಳೆವ ವಿಷಯವೆಂದರೆ ಶ್ರೀನಿಧಿ ಶೆಟ್ಟಿ ತಮಿಳಿನ ಸಿನಿಮಾ ವೊಂದಕ್ಕೆ 'ಕೆಜಿಎಫ್'ಗಿಂತಲೂ ದುಪ್ಪಟ್ಟು ಸಂಭಾವನೆ ಪಡೆದಿದ್ದಾರಂತೆ!

ತಮಿಳಿನ 'ಕೋಬ್ರಾ' ಸಿನಿಮಾದಲ್ಲಿ ನಟಿಸಿರುವ ಶ್ರೀನಿಧಿ
ಶ್ರೀನಿಧಿ ಶೆಟ್ಟಿ, ತಮಿಳಿನ 'ಕೋಬ್ರಾ' ಸಿನಿಮಾದಲ್ಲಿ ನಟಿಸಿದ್ದಾರೆ. 'ಕೆಜಿಎಫ್' ಚಾಪ್ಟರ್ 1 ಬಳಿಕ ಈ ಸಿನಿಮಾದಲ್ಲಿ ಶ್ರೀನಿಧಿ ನಟಿಸಿದ್ದರು. ತಮ್ಮ ಸಂಪೂರ್ಣ ಡೇಟ್ಸ್ ಅನ್ನು 'ಕೆಜಿಎಫ್'ಗೆ ಮಾತ್ರವೇ ಮೀಸಲಿಟ್ಟಿದ್ದ ಶ್ರೀನಿಧಿ, ನಿರ್ಮಾಣ ಸಂಸ್ಥೆಯಿಂದ ಅನುಮತಿ ಪಡೆದು ನೆಚ್ಚಿನ ನಟ ಚಿಯಾನ್ ವಿಕ್ರಂ ಜೊತೆಗೆ 'ಕೋಬ್ರಾ' ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಇದೀಗ ಬಿಡುಗಡೆ ಆಗುತ್ತಿದೆ. ಈ ಸಿನಿಮಾಕ್ಕೆ ಉತ್ತಮ ಮೊತ್ತದ ಸಂಭಾವನೆಯನ್ನೇ ಶ್ರೀನಿಧಿ ಶೆಟ್ಟಿ ಪಡೆದಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.

ಉತ್ತಮ ಸಂಭಾವನೆ ಪಡೆದಿರುವ ಶ್ರೀನಿಧಿ ಶೆಟ್ಟಿ
'ಕೆಜಿಎಫ್' ಶ್ರೀನಿಧಿ ಶೆಟ್ಟಿಗೆ ಮೊದಲ ಸಿನಿಮಾ ಆದ್ದರಿಂದ ಹೆಚ್ಚಿನ ಮೊತ್ತದ ಸಂಭಾವನೆ ಶ್ರೀನಿಧಿಗೆ ಸಿಕ್ಕಿರಲಿಲ್ಲ. ಬಳಿಕ 'ಕೆಜಿಎಫ್ 2' ಸಿನಿಮಾಕ್ಕೆ ಸುಮಾರು ಮೂರು ಕೋಟಿ ಸಂಭಾವನೆಯನ್ನು ಶ್ರೀನಿಧಿ ಶೆಟ್ಟಿ ಪಡೆದುಕೊಂಡರು ಎಂಬ ಮಾತುಗಳು ಹರಿದಾಡಿದವು. ಇದೀಗ ತಮಿಳಿನ 'ಕೋಬ್ರಾ' ಸಿನಿಮಾಕ್ಕೆ ಬರೋಬ್ಬರಿ 6 ಕೋಟಿ ಸಂಭಾವನೆಯನ್ನು ಶ್ರೀನಿಧಿ ಶೆಟ್ಟಿ ಪಡೆದಿದ್ದಾರಂತೆ.

'ಕೆಜಿಎಫ್'ಗಾಗಿ ಆರು ವರ್ಷ ಮೀಸಲಿಟ್ಟಿದ್ದ ನಟಿ
'ಕೆಜಿಎಫ್'ಗಾಗಿ ಬರೋಬ್ಬರಿ ಆರು ವರ್ಷ ಸಮಯವನ್ನು ನಟಿ ಶ್ರೀನಿಧಿ ಶೆಟ್ಟಿ ಮೀಸಲಿಟ್ಟಿದ್ದರು. ಅವರೇ ಹೇಳಿಕೊಂಡಂತೆ 2016 ರಲ್ಲಿ 'ಕೆಜಿಎಫ್' ಸಿನಿಮಾಕ್ಕೆ ಸಹಿ ಹಾಕಿದರು. 2022 ರ ಫೆಬ್ರವರಿ 'ಕೆಜಿಎಫ್ 2' ಸಿನಿಮಾದ ಡಬ್ಬಿಂಗ್ ಮುಗಿಸಿದರು. ಆ ನಂತರ ಸಿನಿಮಾದ ಪ್ರಚಾರದಲ್ಲೂ ಪಾಲ್ಗೊಂಡರು. ಅಲ್ಲಿಗೆ ಬರೋಬ್ಬರಿ ಆರು ವರ್ಷ ಅವರು ಈ ಸಿನಿಮಾಕ್ಕಾಗಿ ಮೀಸಲಿಟ್ಟಿದ್ದರು. ಈ ಆರು ವರ್ಷದ ಅವಧಿಯಲ್ಲಿ ಅವರು ತಮಿಳಿನ 'ಕೋಬ್ರಾ' ಬಿಟ್ಟು ಇನ್ಯಾವ ಸಿನಿಮಾದಲ್ಲಿಯೂ ನಟಿಸಿಲ್ಲ.

ಚಿಯಾನ್ ವಿಕ್ರಂ ನಟನೆಯ ಸಿನಿಮಾ
'ಕೋಬ್ರಾ' ಸಿನಿಮಾದಲ್ಲಿ ತಮಿಳಿನ ಸ್ಟಾರ್ ನಟ ಚಿಯಾನ್ ವಿಕ್ರಂ ನಟಿಸಿದ್ದಾರೆ. ಈ ಸಿನಿಮಾವು ಥ್ರಿಲ್ಲರ್ ಕತೆಯನ್ನು ಹೊಂದಿದ್ದು, ವಿಕ್ರಂ ಮಡದಿಯ ಪಾತ್ರದಲ್ಲಿ ಶ್ರೀನಿಧಿ ನಟಿಸಿದ್ದಾರೆ. ಸಿನಿಮಾದಲ್ಲಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಸಹ ಮುಖ್ಯ ಪಾತ್ರದಲ್ಲಿ ನಟಿಸಿರುವುದು ವಿಶೇಷ. ಜೊತೆಗೆ ಮೃಣಾಲಿನಿ ರವಿ, ಮಿಯಾ ಜಾರ್ಜಿಯಾ, ರೋಷನ್ ಮ್ಯಾಥಿವ್, ಮೀನಾಕ್ಷಿ ಗೋವಿಂದ ರಾಜನ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಅಜಯ್ ಜ್ಞಾನಮುತ್ತು, ನಿರ್ಮಾಣ ಲಲಿತ್ ಕುಮಾರ್, ಸಂಗೀತ ಎ.ಆರ್.ರೆಹಮಾನ್ ಅವರದ್ದಾಗಿದೆ.


Click it and Unblock the Notifications











