ಕಿಚ್ಚ ಸುದೀಪ್ ಅಕ್ಕನ ಮಗ ನಟಿಸುತ್ತಿದ್ದ 'ಜಿಮ್ಮಿ' ಸಿನಿಮಾ ನಿಂತೇ ಹೋಯ್ತಾ?
ಚಿತ್ರರಂಗದಲ್ಲಿ ಸೆಟ್ಟೇರುವ ಸಿನಿಮಾಗಳೆಲ್ಲಾ ತೆರೆಗೆ ಬರುತ್ತದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಕೆಲ ಸಿನಿಮಾಗಳು ಆರಂಭದಲ್ಲೇ ನಿಂತು ಬಿಡುತ್ತವೆ. ಮತ್ತೆ ಕೆಲವರು ಅರ್ಧ ಚಿತ್ರೀಕರಣ ಮುಗಿಸಿ ನಿಂತ ಉದಾಹರಣೆ ಇದೆ. ಅಷ್ಟೆಲ್ಲಾ ಯಾಕೆ ಚಿತ್ರೀಕರಣ ಮುಗಿಸಿದ ಮೇಲೆ ಕೂಡ ಬಿಡುಗಡೆ ಆಗದೇ ಉಳಿದ ಚಿತ್ರಗಳಿವೆ.
ಸಿನಿಮಾ ಇಂಡಸ್ಟ್ರಿಯಲ್ಲಿ ಕೋಟಿ ಕೋಟಿ ವ್ಯವಹಾರ ನಡೆಯುತ್ತದೆ. ಹಾಗಾಗಿ ಸರಿಯಾಗಿ ಡೀಲ್ ಮಾಡಬೇಕು ಇಲ್ಲದೇ ಇದ್ದರೆ ನಷ್ಟ ಕಟ್ಟಿಟ್ಟಬುತ್ತಿ. ಅದಕ್ಕೆ ಕೆಲವರು ವರ್ಕ್ ಆಗಲ್ಲ ಎಂದು ಗೊತ್ತಾಗುತ್ತಿದ್ದಂತೆ ಚಿತ್ರವನ್ನು ಅರ್ಧಕ್ಕೆ ನಿಲ್ಲಿಸಿಬಿಡುತ್ತಾರೆ. ಸುದೀಪ್ ಸಹೋದರಿ ಮಗ ಸಂಚಿಂತ್ ಸಂಜೀವ್ ಹೀರೊ ಆಗಿ ಚಿತ್ರರಂಗಕ್ಕೆ ಬರಬೇಕಿತ್ತು. ಆದರೆ ಆ ಸಿನಿಮಾ ನಿಂತು ಹೋಗಿದೆ ಎನ್ನುವ ಗುಸುಗುಸು ಶುರುವಾಗಿದೆ.

ಸಂಚಿತ್ ಸಂಜೀವ್ ನಿರ್ದೇಶಿಸಿ ನಟಿಸಬೇಕಿದ್ದ 'ಜಿಮ್ಮಿ' ಸಿನಿಮಾ ಟೀಸರ್ ಕೆಲ ದಿನಗಳ ಹಿಂದೆ ರಿಲೀಸ್ ಆಗಿತ್ತು. ಟೈಟಲ್ ಲಾಂಚ್ ಈವೆಂಟ್ ಅದ್ಧೂರಿಯಾಗಿ ನೆರವೇರಿತ್ತು. ಬಳಿಕ ಮುಹೂರ್ತ ಸಹ ನಡೆದಿತ್ತು. ಸುಪ್ರಿಯಾನ್ವಿ ಸ್ಟುಡಿಯೋಸ್, ಲಹರಿ ಫಿಲ್ಮ್ಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಬ್ಯಾನರ್‌ಗಳ ಅಡಿಯಲ್ಲಿ 'ಜಿಮ್ಮಿ' ಸಿನಿಮಾ ನಿರ್ಮಾಣ ಆಗಬೇಕಿತ್ತು.
'ಜಿಮ್ಮಿ' ಚಿತ್ರ ನಿರ್ಮಾಣಕ್ಕೆ ಪ್ರಿಯಾ ಸುದೀಪ್ ಜೊತೆ ಕೆ. ಪಿ ಶ್ರೀಕಾಂತ್ ಹಾಗೂ ಜಿ. ಮನೋಹರ್ ಕೈ ಜೋಡಿಸಿದ್ದರು. ಆದರೆ ಇದೀಗ ಸಿನಿಮಾ ನಿಂತೇ ಹೋಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಇದೆಲ್ಲದರ ನಡುವೆ ಕೆಆರ್‌ಜಿ ಸ್ಟುಡಿಯೋಸ್ ಜೊತೆ ಸುಪ್ರಿಯಾನ್ವಿ ಸ್ಟುಡಿಯೋಸ್ ಹೊಸ ಸಿನಿಮಾ ಘೋಷಣೆಗೆ ಮುಂದಾಗಿದ್ದಾರೆ.
ಹೊಸ ವರ್ಷದ ಸಂಭ್ರಮದಲ್ಲಿ ಸಂಚಿಕ್ ಸಂಜೀವ್ ಹೊಸ ಸಿನಿಮಾ ಘೋಷಣೆ ಆಗುವ ಸುಳಿವು ಸಿಕ್ಕಿದೆ. 'ಹೊಸ ವರ್ಷಕ್ಕೆ ಹೊಸ ಬ್ರ್ಯಾಂಡ್' ಎಂದು ಕೆಆರ್‌ಜಿ ಸಂಸ್ಥೆ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಪೋಸ್ಟರ್ ನೋಡಿದರೆ ಇದು ಮೈಸೂರಿನಲ್ಲಿ ನಡೆಯುವ ಕಥೆ ಎನ್ನುವುದು ಗೊತ್ತಾಗುತ್ತಿದೆ. ಚಿತ್ರದ ಟೈಟಲ್ ಏನು? ಕತೆ ಏನು? ನಿರ್ದೇಶಕರು ಯಾರು? ಎನ್ನುವ ಬಗ್ಗೆ ಶೀಘ್ರದಲ್ಲೇ ಮಾಹಿತಿ ಸಿಗಲಿಲ್ಲ.

ಶುರುವಾಗುವ ಸಿನಿಮಾ ನಿಂತು ಹೋಗುವುದು ಹೊಸದೇನು ಅಲ್ಲ. ಇವತ್ತು ಸ್ಟಾರ್ ನಟರಾಗಿ ಗುರ್ತಿಸಿಕೊಂಡಿರುವವರು ಆರಂಭದಲ್ಲಿ ಇಂತಹ ಅಡೆತಡೆ ಎದುರಿಸಿರುವ ಉದಾಹರಣೆಗಳಿವೆ. ಸ್ವತಃ ಸುದೀಪ್ ನಟಿಸಿದ ಕೆಲ ಚಿತ್ರಗಳು ಆರಂಭದಲ್ಲೇ ನಿಂತಿದ್ದವು. ಸಂಚಿತ್ ಸಂಜೀವ್ ಹೊಸ ಚಿತ್ರದ ಮೂಲಕ ಬೆಳ್ಳಿ ಪರದೆಗೆ ಜಿಗಿಯುವ ಸುಳಿವು ಸಿಗುತ್ತಿದೆ.
ಬಹಳ ತರಬೇತಿ ಪಡೆದು ಸಂಚಿತ್ ಚಿತ್ರರಂಗಕ್ಕೆ ಬರುತ್ತಿದ್ದಾರೆ. ನ್ಯೂಯಾರ್ಕ್ ಅಕಾಡೆಮಿಯಲ್ಲಿ ಸಿನಿಮಾ ನಿರ್ಮಾಣ, ಆಕ್ಟಿಂಗ್ ಹಾಗೂ ಸಿನಿಮಾಟೋಗ್ರಫಿಯನ್ನು ಕಲಿತಿದ್ದಾರೆ. ಎಂಎಂಎ ಫೈಟಿಂಗ್‌ನಲ್ಲಿ ಕೂಡ ಕೋರ್ಸ್ ಮುಗಿಸಿ ಬಂದಿದ್ದಾರೆ. ತಮ್ಮ ಮೊದಲ ಚಿತ್ರವನ್ನು ತಾವೇ ನಿರ್ದೇಶನ ಮಾಡಲು ಮುಂದಾಗಿದ್ದರು. ಹೊಸ ವರ್ಷ ಘೋಷಣೆ ಆಗುವ ಚಿತ್ರಕ್ಕೆ ಯಾರು ಆಕ್ಷನ್ ಕಟ್ ಹೇಳ್ತಾರೆ ಕಾದು ನೋಡಬೇಕಿದೆ.
'ಜಿಮ್ಮಿ' ಸಿನಿಮಾ ಕೂಡ ಬರುತ್ತಾ? ಕೆಆರ್‌ಜಿ ಸ್ಟುಡಿಯೋದಲ್ಲಿ ಸಂಚಿತ್ 2ನೇ ಸಿನಿಮಾ ಶುರುವಾಗುತ್ತಾ ಕಾದು ನೋಡಬೇಕಿದೆ. 'ಜಿಮ್ಮಿ' ಚಿತ್ರ ನಿಂತಿದೆ ಎನ್ನುವ ವದಂತಿ ಹರದಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಲಬ್ಯವಾಗಿಲ್ಲ. ಇನ್ನು ಈಗಾಗಲೇ ಅಭಿಮಾನಿಗಳು ಸಂಚಿತ್ ಅವರನ್ನು ಜ್ಯೂನಿಯರ್ ಕಿಚ್ಚ ಎಂದು ಕರೆಯಲು ಆರಂಭಿಸಿದ್ದಾರೆ. ಹಾಗಾಗಿ ಅವರ ಲಾಂಚಿಂಗ್ ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಸಂಚಿತ್ ಎರಡನೇ ಸಿನಿಮಾ ಅಪ್‌ಡೇಟ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications











