UI Vs Max:'ಮ್ಯಾಕ್ಸ್'ಗೆ ಎದುರಾಯ್ತಾ ಥಿಯೇಟರ್ ಕಂಟಕ?ಕೆವಿಎನ್-ಕೆಆರ್‌ಜಿ ಸ್ಟುಡಿಯೋ ಮಧ್ಯೆ ಸಿಕ್ಕಿಕೊಂಡ್ರಾ ಜಯಣ್ಣ?
ಡಿಸೆಂಬರ್ 20ರಂದು ರಿಯಲ್ ಸ್ಟಾರ್ ಉಪೇಂದ್ರ 'ಯುಐ' ಸಿನಿಮಾ ರಿಲೀಸ್ ಆಗಿದೆ. ಇದರ ಹಿಂದೇನೆ ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಕೂಡ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ನಾಳೆ (ಡಿಸೆಂಬರ್ 25) ರಿಲೀಸ್ ಆಗುತ್ತಿರುವ ಈ ಸಿನಿಮಾಗೆ ಥಿಯೇಟರ್ ಸಮಸ್ಯೆ ಎದುರಾಗಿದೆ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.
'ಯುಐ' ಹಾಗೂ 'ಮ್ಯಾಕ್ಸ್' ಸಿನಿಮಾಗಳು ಐದು ದಿನಗಳ ಅಂತರದಲ್ಲಿ ರಿಲೀಸ್ ಆಗುತ್ತಿದೆ ಅನ್ನೋದು ಗೊತ್ತಾದಾಗಲೇ ಇಂತಹದ್ದೊಂದು ಸಮಸ್ಯೆ ಎದುರಾಗಬಹುದು ಅಂತ ನಿರೀಕ್ಷೆ ಮಾಡಲಾಗಿತ್ತು. ಕೆಲವು ಥಿಯೇಟರ್‌ಗಳಲ್ಲಿ 'ಮ್ಯಾಕ್ಸ್' ರಿಲೀಸ್ ಆಗುತ್ತಿರುವುದು ಕಿಚ್ಚ ಸುದೀಪ್‌ಗೂ ಇಷ್ಟವಿಲ್ಲ ಅನ್ನೋ ಮಾತು ಕೇಳಿ ಬರುತ್ತಿದೆ. ಯಾಕಂದ್ರೆ, ಆ ಚಿತ್ರಮಂದಿರಗಳು ಅಪ್ಪಟ ಕನ್ನಡದ ಥಿಯೇಟರ್‌ಗಳು ಅಲ್ಲ.

ರಿಯಲ್ ಸ್ಟಾರ್ ಉಪೇಂದ್ರ 'ಯುಐ' ಸಿನಿಮಾವನ್ನು ಕೆವಿಎನ್ ಸ್ಟುಡಿಯೋ ರಿಲೀಸ್ ಮಾಡಿದ್ದರೆ, 'ಮ್ಯಾಕ್ಸ್' ಸಿನಿಮಾವನ್ನು ಕೆಆರ್‌ಜಿ ಸ್ಟುಡಿಯೋ ರಿಲೀಸ್‌ಗೆ ಮುಂದಾಗಿದೆ. ಹೀಗಾಗಿ ಇಬ್ಬರು ಸೂಪರ್‌ಸ್ಟಾರ್‌ಗಳ ಸಿನಿಮಾವನ್ನು ಎರಡು ದೊಡ್ಡ ನಿರ್ಮಾಣ ಸಂಸ್ಥೆಗಳು ರಿಲೀಸ್ ಮಾಡುತ್ತಿವೆ. ಈ ಕಾರಣಕ್ಕೆ ಥಿಯೇಟರ್ ವಿಚಾರದಲ್ಲಿ ವಿತರಕ ಹಾಗೂ ನಿರ್ಮಾಪಕ ಜಯಣ್ಣ ಮಧ್ಯದಲ್ಲಿ ಸಿಕ್ಕಿಕೊಂಡಿದ್ದಾರಂತೆ.
ಅಷ್ಟಕ್ಕೂ ಉಪೇಂದ್ರ ನಿರ್ದೇಶಿಸಿ 'ಯುಐ' ಸಿನಿಮಾಗೂ ಕಿಚ್ಚ ಸುದೀಪ್ ನಟಿಸುತ್ತಿರುವ 'ಮ್ಯಾಕ್ಸ್' ಸಿನಿಮಾಗೂ ವಿತರಕ ಜಯಣ್ಣಗೂ ಏನು ಸಂಬಂಧ? ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಸ್ಯಾಂಡಲ್‌ವುಡ್‌ನ ಜನಪ್ರಿಯ ವಿತರಕ ಜಯಣ್ಣ. ಕರ್ನಾಟಕದ ಉದ್ದಗಲಕ್ಕೂ ಇವರ ಬಳಿಕ ಒಳ್ಳೆಯ ಥಿಯೇಟರ್ ಸೆಟಪ್ ಇದೆ. ಸಿನಿಮಾ ರಿಲೀಸ್‌ಗೆ ಅಂತ ಮುಂದಾದರೇ, ಜಯಣ್ಣ ಅವರನ್ನು ಸಂಪರ್ಕ ಮಾಡುತ್ತಾರೆ. ಇತ್ತ ಜಯಣ್ಣ ಕೂಡ ಕೆವಿಎನ್ ಪ್ರೊಡಕ್ಷನ್ ಹಾಗೂ ಕೆಆರ್‌ಜಿ ಸ್ಟುಡಿಯೋ ಎರಡು ಸಂಸ್ಥೆಗಳ ಜೊತೆನೂ ಉತ್ತಮ ಸಂಬಂಧ ಹೊಂದಿದ್ದಾರೆ.

'ಯುಐ' ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ವಿತರಣೆ ಮಾಡಿದೆ. ಹೀಗಾಗಿ ಜಯಣ್ಣ ಬಳಿ ಇರುವ ಕೆಲವು ಥಿಯೇಟರ್‌ಗಳಲ್ಲಿ 'ಯುಐ' ರಿಲೀಸ್ ಆಗಿದೆ. ಹಾಗೇ ಕೆಆರ್‌ಜಿ ಸ್ಟುಡಿಯೋ ಜೊತೆ ಸೇರಿ ಜಯಣ್ಣ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ ಅವರೊಂದಿಗಿನ ಸಂಬಂಧ ಕೂಡ ಅಷ್ಟೇ ಚೆನ್ನಾಗಿದೆ. ಈ ಕಾರಣಕ್ಕೆ 'ಮ್ಯಾಕ್ಸ್' ಗೂ ಕೆಲವು ಥಿಯೇಟರ್‌ಗಳನ್ನು ಕೇಳುತ್ತಿದ್ದಾರೆ. ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಎರಡು ನಿರ್ಮಾಣ ಸಂಸ್ಥೆಗಳ ಮಧ್ಯೆ ಸೇರಿಕೊಂಡು ಜಯಣ್ಣ ಒದ್ದಾಡುವಂತಹ ಸ್ಥಿತಿ ನಿರ್ಮಾಣ ಆಗಿದೆ ಎಂಬುದು ಸುದ್ದಿ.
ಉದಾಹರಣೆಗೆ 'ಮ್ಯಾಕ್ಸ್' ರಿಲೀಸ್‌ಗೆ ಮೈಸೂರಿನ ಗಾಯತ್ರಿ ಥಿಯೇಟರ್ ಅನ್ನು ಕೇಳುತ್ತಿದ್ದಾರೆ. ಆದರೆ, ಇದೂವರೆಗೂ ಮಾರ್ನಿಂಗ್ ಫ್ಯಾನ್ಸ್ ಶೋ ಹಾಗೂ ರಾತ್ರಿ 9.45 ಶೋ ಒಂದೇ ಕನ್ಫರ್ಮ್ ಆಗಿದ್ದು, ಎರಡನೇ ದಿನದಿಂದ ಬುಕಿಂಗ್ ಯಾವುದೂ ಓಪನ್ ಆಗಿಲ್ಲ. ಹಾಗೇ ಕನಕಪುರದಲ್ಲಿ ಗೋಪಾಲ ಕೃಷ್ಣ 250 ಸೀಟಿಂಗ್ ಕ್ಯಾಪಾಸಿಟಿ ಇರುವ ಥಿಯೇಟರ್ ಸಿಕ್ಕಿದ್ದು, ಅದು ಚಿಕ್ಕ ಥಿಯೇಟರ್ ಆಯ್ತು ಅಂತ ಚಿತ್ರತಂಡ ಅಸಮಧಾನ ಹೊರ ಹಾಕಿದೆ ಎನ್ನಲಾಗಿದೆ.
ಇನ್ನು ಬೆಂಗಳೂರಿನಲ್ಲೂ ಕೆಲವು ಸಿಕ್ಕಿರುವ ಕೆಲವು ಚಿತ್ರಮಂದಿರಗಳ ಬಗ್ಗೆ 'ಮ್ಯಾಕ್ಸ್' ತಂಡಕ್ಕೆ ಅಸಮಧಾನವಿದೆ ಎನ್ನಲಾಗಿದೆ. ಅಮೃತ್ ಚಿತ್ರಮಂದಿರ, ಸ್ವಾಗತ್ ಪೂರ್ಣಿಮಾ ಎರಡು ಟೈಮಿಂಗ್ ಅಸಮಧಾನವಿದ್ದು, ಇಂತಹ ಹಲವು ಚಿತ್ರಮಂದಿರಗಳಿವೆ.
ಹಾಗೇ ಭಾರತಿ, ಮೋಹನ್, ವಿಕ್ಟರಿ ಸಿನಿಮಾಸ್, ಊರ್ವಶಿಯಲ್ಲಿ ಇದೂವರೆಗೂ 'ಮ್ಯಾಕ್ಸ್' ಪ್ರದರ್ಶನ ಕನ್ಫರ್ಮ್ ಆಗಿಲ್ಲ ಎನ್ನಲಾಗಿದೆ. ಇದರೊಂದಿಗೆ ಕೆಂಗೇರಿ ರಾಬಿನ್ ಥಿಯೇಟರ್‌ನಲ್ಲಿ ಕೇವಲ ಫ್ಯಾನ್ಸ್ ಶೋ ಅಷ್ಟೇ ಕೊಟ್ಟಿದ್ದಾರೆ ಅಂತ ಹೇಳಲಾಗುತ್ತಿದೆ. ಈ ಕಾರಣಕ್ಕೆ 'ಮ್ಯಾಕ್ಸ್' ವಿತರಣೆ ಸರಿಯಾಗಿ ಆಗುತ್ತಿಲ್ಲ ಅಂತ ಚಿತ್ರತಂಡ ಕೆಆರ್‌ಜಿ ವಿರುದ್ಧ ಬೇಸರ ಹೊರ ಹಾಕಿದೆ. ಹೀಗಾಗಿ ಕೆಆರ್‌ಜಿ ಜಯಣ್ಣ ಮೇಲೆ ಒತ್ತಡ ಹಾಕುತ್ತಿದೆ. ಆದರೆ, ಜಯಣ್ಣ ಕೆವಿಎನ್ ಪ್ರೊಡಕ್ಷನ್‌ಗೆ ಥಿಯೇಟರ್ ಕೊಡಿ ಅಂತ ಕೇಳುವುದಕ್ಕೆ ಆಗುತ್ತಿಲ್ಲ. ಹೀಗಾಗಿ ಮಧ್ಯೆ ಜಯಣ್ಣ ಸಿಕ್ಕಿಕೊಂಡು ಒದ್ದಾಡುತ್ತಿದ್ದಾರೆ ಅನ್ನೋದು ಸುದ್ದಿ. ಆದರೆ, ಈ ಬಗ್ಗೆ ಅಧಿಕೃತವಾಗಿ ಮೂವರೂ ಎಲ್ಲೂ ಕೇಳಿಕೆ ಕೊಟ್ಟಿಲ್ಲ.


Click it and Unblock the Notifications











