ಸುದೀಪ್- ಚೇರನ್ ಸಿನಿಮಾ ನಿಂತೇ ಹೋಯ್ತಾ? 'ಮ್ಯಾಕ್ಸ್' ಚಿತ್ರದಲ್ಲಿ ಶ್ರೀನಿಧಿ ನಟಿಸ್ತಿದ್ದಾರಾ?
ಕಿಚ್ಚ ಸುದೀಪ್ ನಟನೆಯ 'ಹೆಬ್ಬುಲಿ' ಸಿನಿಮಾ ರೀ ರಿಲೀಸ್ ಆಗಿದೆ. ಮತ್ತೊಂದು ಕಡೆ 'ಮ್ಯಾಕ್ಸ್' ಸಿನಿಮಾ ಯಾವಾಗ ರಿಲೀಸ್ ಎಂದು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇತ್ತೀಚೆಗೆ 'ಮ್ಯಾಕ್ಸ್' ಟೀಸರ್ ಬಂದು ಸದ್ದು ಮಾಡಿದ್ದು ಗೊತ್ತೇಯಿದೆ.
ಶೀಘ್ರದಲ್ಲೇ 'ಮ್ಯಾಕ್ಸ್' ಸಿನಿಮಾ ರಿಲೀಸ್ ಎಂದು ಟೀಸರ್‌ನಲ್ಲಿ ಹೇಳಲಾಗಿತ್ತು. ಸದ್ಯ ಪೋಸ್ಟ್ ಪ್ರೊಡಕ್ಷನ್ಸ್ ವರ್ಕ್ ಭರದಿಂದ ಸಾಗುತ್ತಿದೆ. ಆದಷ್ಟು ಬೇಗ ಸಿನಿಮಾ ತೆರೆಗೆ ತರುವ ಪ್ರಯತ್ನಗಳು ನಡೀತಿದೆ. ವಿಜಯ್ ಕಾರ್ತಿಕೇಯನ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ಮ್ಯಾಕ್ಸ್' ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ.

ವರಲಕ್ಷ್ಮಿ ಶರತ್‌ಕುಮಾರ್, ಸುನಿಲ್, ಸಂಯುಕ್ತಾ ಹೊರನಾಡ್ ಸೇರಿದಂತೆ ದೊಡ್ಡ ತಾರಾಗಣ 'ಮ್ಯಾಕ್ಸ್' ಚಿತ್ರದಲ್ಲಿದೆ. ಇನ್ನು 'KGF' ಬೆಡಗಿ ಶ್ರೀನಿಧಿ ಶೆಟ್ಟಿ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಸುದೀಪ್ ಹಾಗೂ ತಮಿಳು ನಿರ್ದೇಶಕ ಚೇರನ್ ಕಾಂಬಿನೇಷನ್‌ನಲ್ಲಿ ಒಂದು ಸಿನಿಮಾ ಘೋಷಣೆ ಆಗಿತ್ತು. ಆ ಚಿತ್ರಕ್ಕೂ ಶ್ರೀನಿಧಿ ನಾಯಕಿ ಎನ್ನಲಾಗಿತ್ತು.
'ಮ್ಯಾಕ್ಸ್' ಬಳಿಕ ಸುದೀಪ್ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಬಗ್ಗೆ ಇನ್ನು ಗೊಂದಲವಿದೆ. ಕಳೆದ ವರ್ಷ ಕಿಚ್ಚನ ಹುಟ್ಟುಹಬ್ಬದ ಸಂಭ್ರಮದಲ್ಲಿ ನಾಲ್ಕೈದು ಸಿನಿಮಾಗಳು ಘೋಷಣೆ ಆಗಿತ್ತು. ಅದರಲ್ಲಿ ಅನೂಪ್ ಭಂಡಾರಿ ನಿರ್ದೇಶನದ 'ಬಿಲ್ಲ ರಂಗ ಬಾಷ' ಕೂಡ ಇದೆ. 'ಮ್ಯಾಕ್ಸ್' ಬಳಿಕ ಇದೇ ಸಿನಿಮಾ ಶುರುವಾಗುತ್ತದೆ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಕೇಳಿಬರ್ತಿದೆ.

ಚೇರನ್ ನಿರ್ದೇಶನದ ಸಿನಿಮಾ ಸದ್ಯಕ್ಕಿಲ್ಲ. ಮುಂದಿನ ದಿನಗಳಲ್ಲಿ ಈ ಸಿನಿಮಾ ಸೆಟ್ಟೇರಬಹುದು ಎನ್ನುವ ಗುಸುಗುಸು ಕೇಳಿಬರ್ತಿದೆ. ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಬೇಕಿದೆ. 'ಮ್ಯಾಕ್ಸ್' ಬಳಿಕ ಸುದೀಪ್ 'ಬಿಲ್ಲ ರಂಗ ಬಾಷ' ಆಗೋದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ಸೆಪ್ಟೆಂಬರ್ 2ಕ್ಕೆ ಸುದೀಪ್ ಹುಟ್ಟುಹಬ್ಬ. ಆ ಸಮಯದಲ್ಲಿ ಎಲ್ಲದ್ದಕ್ಕೂ ಉತ್ತರ ಸಿಗಲಿದೆ.
ಇನ್ನು 'KGF' ಸರಣಿ ಬಳಿಕ ಶ್ರೀನಿಧಿ ಶೆಟ್ಟಿ ಹೆಚ್ಚು ಅವಕಾಶಗಳು ಸಿಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ ರೀತಿ ಆಗಲಿಲ್ಲ. ಕನ್ನಡದಲ್ಲಿ ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ. ತಮಿಳಿನ 'ಕೋಬ್ರಾ' ಚಿತ್ರದಲ್ಲಿ ವಿಕ್ರಂ ಜೊತೆ ಮಿಂಚಿದ್ದರು. ಸದ್ಯ 'ತೆಲುಸು ಕದಾ' ಎನ್ನುವ ತೆಲುಗು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. 'KGF' ಸರಣಿಗಾಗಿ ಮೂರ್ನಾಲ್ಕು ವರ್ಷ ಆಕೆ ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ.
'KGF' ಮೊದಲ ಭಾಗದಲ್ಲಿ ಆಕೆಯ ಪಾತ್ರ ಚಿಕ್ಕದ್ದಿತ್ತು. 2ನೇ ಭಾಗದಲ್ಲಿ ರೀನಾ ಆಗಿ ನಟಿಸಿ ಮೋಡಿ ಮಾಡಿದ್ದರು. ಕಿಚ್ಚ47 ಚಿತ್ರದಲ್ಲಿ ಆಕೆ ನಟಿಸುತ್ತಾರೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದರು. ಇನ್ನು ಚೇರನ್ ನಿರ್ದೇಶಿಸಿ ನಟಿಸಿದ್ದ 'ಆಟೋಗ್ರಾಫ್' ಚಿತ್ರವನ್ನು ಸುದೀಪ್ ಕನ್ನಡಕ್ಕೆ ತಂದಿದ್ದರು. ನಟಿಸಿ, ನಿರ್ದೇಶಿಸಿ ಗೆದ್ದಿದ್ದರು. ಅದೇ ಕಾರಣಕ್ಕೆ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಅಂದಾಗ ಸಹಜವಾಗಿಯೇ ಕುತೂಹಲ ಮೂಡಿದೆ.
ಸುದೀಪ್- ಚೇರನ್ ಸಿನಿಮಾ ಯಾವಾಗ ಶುರುವಾಗಬಹುದು ಎನ್ನುವ ಬಗ್ಗೆ ಖಚಿತ ಮಾಹಿತಿಯಿಲ್ಲ. ಬಹಳ ದಿನಗಳ ಹಿಂದೆ ಅನೂಪ್ ಭಂಡಾರಿ 'ಬಿಲ್ಲ ರಂಗ ಬಾಷ' ಸಿನಿಮಾ ಘೋಷಿಸಿದ್ದರು. ಟೈಟಲ್‌ನಿಂದಲೇ ಸಿನಿಮಾ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಆ ಚಿತ್ರಕ್ಕೂ ಮುನ್ನ ಈ ಜೋಡಿ 'ವಿಕ್ರಾಂತ್ ರೋಣ' ಸಿನಿಮಾ ಗೆದ್ದಿದೆ. ಇದೀಗ ಮತ್ತೆ ಈ ಕಾಂಬಿನೇಷನ್ ಜೊತೆಯಾಗುತ್ತಿರುವುದು ಅಭಿಮಾನಿಗಳ ಗಮನ ಸೆಳೆದಿದೆ.


Click it and Unblock the Notifications











