»   » ಜಿತೇಂದ್ರ ಸಿನಿಮಾ ಮಾಡಬಾರದಿತ್ತು - ಕುಮಾರ ಸ್ವಾಮಿ

ಜಿತೇಂದ್ರ ಸಿನಿಮಾ ಮಾಡಬಾರದಿತ್ತು - ಕುಮಾರ ಸ್ವಾಮಿ

Subscribe to Filmibeat Kannada

*ಸತ್ಯನಾರಾಯಣ

ಸಿನಿಮಾ ನಿರ್ಮಾಣದ ಹಿಂದಿನ ಉದ್ದೇಶಗಳ ಬಗ್ಗೆ ತುರ್ತಾಗಿ ಒಂದು ಸೆಮಿನಾರ್‌ ನಡೆಯಬೇಕಾಗಿದೆ. ಕಲಾಸೇವೆ, ಮಾಧ್ಯಮದ ಮೇಲಿನ ಪ್ರೀತಿ, ಹಣ ಗಳಿಕೆ - ಇವಿಷ್ಟೇ ಸಿನಿಮಾ ನಿರ್ಮಾಣದ ಹಿಂದಿನ ಆಶಯಗಳು ಎಂದುಕೊಂಡವರಿಗೆ ಜಿತೇಂದ್ರ ಚಿತ್ರ ಆಘಾತವನ್ನುಂಟು ಮಾಡಿದೆ. ಈ ಚಿತ್ರದ ಉದ್ದೇಶ ಜನಪ್ರಿಯ ನಾಯಕ ನಟನೊಬ್ಬನನ್ನು ತೆಗಳುವುದು. ಇದು ಮೇಲ್ನೋಟಕ್ಕೆ ಸಾಬೀತಾಗುವ ಅಂಶ. ಇದರ ಹಿಂದೆ ಇನ್ನೊಂದು ಒಳಗುಟ್ಟಿದೆ ಅನ್ನೋದು ಜಿತೇಂದ್ರ ಚಿತ್ರದ ಸಂತೋಷ ಕೂಟದಲ್ಲಿ ಬಯಲಾಗಿದೆ.

ನಿರ್ಮಾಪಕ ಕುಮಾರ ಸ್ವಾಮಿ, ನಿರ್ದೇಶಕ ವಿಶ್ವನಾಥ್‌ ಮತ್ತು ನಾಯಕ ಜಗ್ಗೇಶ್‌ ಅವರೇ ಪರೋಕ್ಷವಾಗಿ ಒಪ್ಪಿಕೊಂಡಂತೆ ಜಿತೇಂದ್ರ ಚಿತ್ರ ತಯಾರಾಗಿರುವುದು ರಾಜಕೀಯ ಲಾಭಕ್ಕಾಗಿ. ಈ ಚಿತ್ರ ಸೆಟ್ಟೇರುವ ಮುನ್ನ ಜಗ್ಗೇಶ್‌ ಮತ್ತು ಕುಮಾರಸ್ವಾಮಿ ಅವರ ನಡುವಿನ ಸಂಬಂಧ ಚೆನ್ನಾಗಿರಲಿಲ್ಲ . ಇಬ್ಬರೂ ಒಂದೇ ಜಾತಿಗೆ ಸೇರಿದವರಾದರೂ ಬೇರೆ ಬೇರೆ ಪಕ್ಷಗಳ್ನು ಅಪ್ಪಿಕೊಂಡವರು. ಅದೂ ಸಾಲದು ಎಂಬಂತೆ ಜಗ್ಗೇಶ್‌ ಕಳೆದ ಚುನಾವಣೆಯಲ್ಲಿ ಕುಮಾರ ಸ್ವಾಮಿ ವಿರುದ್ಧ ಮತ್ತು ಡಿ.ಕೆ. ಶಿವಕುಮಾರ್‌ ಪರ ಸಾತನೂರಿನಲ್ಲಿ ಪ್ರಚಾರ ಮಾಡಿದ್ದರು. ಅನಂತರ ಜಗ್ಗೇಶ್‌ ಈ ಬಗ್ಗೆ ಪಶ್ಚಾತ್ತಾಪ ಪಡುತ್ತಿದ್ದಾರೆ ಅನ್ನುವ ವರದಿ ಕುಮಾರ ಸ್ವಾಮಿ ಅವರ ಕಿವಿಗೆ ಬಿದ್ದಿರಬೇಕು ಅಥವಾ ಮೂರನೇ ವ್ಯಕ್ತಿಯಾಬ್ಬರು ರಾಜಿ ರಾಯಭಾರಕ್ಕೆ ಪ್ರಯತ್ನ ಪಟ್ಟಿರಬೇಕು. ಕುಮಾರ ಸ್ವಾಮಿ ಕಡೆಯಿಂದ ಆಫರ್‌ ಬಂದಾಕ್ಷಣ ಜಗ್ಗೇಶ್‌ ಎಷ್ಟು ಥ್ರಿಲ್‌ ಆಗಿದ್ದರೆಂದರೆ ಚಿತ್ರದ ಕತೆ ಕೇಳದೇ ಒಪ್ಪಿಕೊಂಡರು.

ಈಗ ಚಿತ್ರ ತೆರೆ ಕಂಡಿದೆ. ವಿಭಿನ್ನ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಸ್ವಾಮಿ ಆತ್ಮೀಯರ ಪ್ರಕಾರ ಜಗ್ಗೇಶ್‌ ಅವರು ಸ್ವಾಮಿ ಖರ್ಚಲ್ಲಿ ಉಪೇಂದ್ರನನ್ನು ತೆಗಳುವ ತಮ್ಮ ತೆವಲು ತೀರಿಸಿಕೊಂಡಿದ್ದಾರೆ. ಜಗ್ಗೇಶ್‌ ಅಭಿಮಾನಿಗಳ ಪ್ರಕಾರ ಚಿತ್ರದುದ್ದಕ್ಕೂ ಜಗ್ಗೇಶ್‌ ಪಾತ್ರಕ್ಕೆ ಒದೆಯುವ ಮೂಲಕ ಸ್ವಾಮಿ ತಮ್ಮ ಹಳೇ ಸೇಡು ತೀರಿಸಿಕೊಂಡಿದ್ದಾರೆ. ಮೊನ್ನೆ ಸಂತೋಷಕೂಟದಲ್ಲಂತೂ ಇಬ್ಬರೂ ಈ ಚಿತ್ರ ಮಾಡಿದ್ದು ಘೋರ ಅಪರಾಧ ಎಂದು ಒಪ್ಪಿಕೊಂಡರು. ಈ ಮೂಲಕ ನವ ನಿರ್ದೇಶಕ ವಿಶ್ವನಾಥ್‌ ಅವರನ್ನು ಶಿಲುಬೆಗೇರಿಸಿದರು.

ನಮ್ಮ ಬ್ಯಾನರ್‌ನ ಘನತೆಗೆ ಧಕ್ಕೆಯಾಗಿದೆ

ನಾನು ಈ ಚಿತ್ರ ಮಾಡಬಾರದಾಗಿತ್ತು. ಚಿತ್ರದ ಮೊದಲ ಕಾಪಿ ನೋಡಿದಾಕ್ಷಣ ನನಗೆ ಅನಿಸಿತು, ಇದು ನಮ್ಮ ಬ್ಯಾನರ್‌ನಲ್ಲಿ ನಿರ್ಮಾಣವಾಗುವಂಥಾ ಚಿತ್ರವಲ್ಲ . ಮಿಕ್ಕವರ ವಿಚಾರ ಬಿಟ್ಟುಬಿಡಿ. ನಮ್ಮ ಮನೆಯವರಿಗೇ ಚಿತ್ರ ಇಷ್ಟವಾಗಲಿಲ್ಲ.

ಚಿತ್ರ ಬಿಡುಗಡೆಯಾಗಿ ಎರಡನೇ ದಿನಕ್ಕೆ ಅದರ ನಿರ್ಮಾಪಕನೇ ಇಂಥಾದ್ದೊಂದು ಪ್ರತಿಕ್ರಿಯೆ ನೀಡಿದರೆ ಯಾರಾದರೂ ದಂಗಾಗಲೇ ಬೇಕು. ಆದರೆ ಜಿತೇಂದ್ರ ಚಿತ್ರದ ನಿರ್ಮಾಪಕ ಕುಮಾರ ಸ್ವಾಮಿಯವರು ತಮ್ಮ ಚಿತ್ರದ ನಾಯಕ ಪಾತ್ರದ ಥರಾನೇ ಓಪನ್‌ ಆಗಿ ಮಾತನಾಡುತ್ತಿದ್ದರು, ಮನಸ್ಸು ಮತ್ತು ನಾಲಿಗೆ ನಡುವಿರುವ ಫಿಲ್ಟರ್‌ ತೆಗೆದಿಟ್ಟಿದ್ದರು.

ಚಿತ್ರ ನಿರ್ಮಾಣಕ್ಕೆ ಮುಂಚೆ ನನಗೆ ಈ ಕತೆ ಕೇಳಿದಾಗ ಇಷ್ಟವಾಗಿದ್ದು ನಿಜ. ಯಾಕೆಂದರೆ ಉಪೇಂದ್ರ ಚಿತ್ರದಿಂದ ಸಮಾಜದ ಮೇಲಾಗಿರುವ ದುಷ್ಪರಿಣಾಮಗಳನ್ನು ನಾನು ಕಣ್ಣಾರೆ ಕಂಡಿದ್ದೆ. ಆದರೆ ಚಿತ್ರದಲ್ಲಿ ಈ ಅಂಶಗಳಾವುದೂ ಬಂದೇ ಇಲ್ಲ. ಚಿತ್ರದುದ್ದಕ್ಕೂ ಡೈಲಾಗ್‌ ಮೂಲಕ ಉಪೇಂದ್ರರನ್ನು ಟೀಕಿಸಲಾಗಿದೆ. ನಾನು ನಿರ್ಮಾಪಕನಾಗಿದ್ದರಿಂದ ಚಿತ್ರವನ್ನು ಬಿಡುಗಡೆ ಮಾಡೋದಕ್ಕೆ ಸಾಧ್ಯವಾಯ್ತು. ಬೇರೆಯವರಾಗಿದ್ದರೆ ಇನ್ನೇನೋ ಗಲಾಟೆ ಆಗಿರೋದು.

ಈಗಲೂ ಗಲಾಟೆ ಆಗಿದೆ. ಉಪೇಂದ್ರ ಅಭಿಮಾನಿಗಳು ಥಿಯೇಟರಿಗೆ ಬಂದು ಧಿಕ್ಕಾರ ಹಾಕುತ್ತಿದ್ದಾರಂತೆ. ಹಾಗಿದ್ದೂ ಚಿತ್ರದ ಕಲೆಕ್ಷನ್‌ಗೆ ಏನೂ ತೊಂದರೆಯಾಗಿಲ್ಲ.

ಉಪೇಂದ್ರ ನೋಡಿದ್ದೆ ಜಿತೇಂದ್ರ ತಯಾರಾದ ಮೇಲೆ !

ನಾನು ಕಲೆಕ್ಷನ್‌ ಬಗ್ಗೆ ಯೋಚಿಸ್ತಾ ಇಲ್ಲ. ಇಂಥಾ ಚಿತ್ರ ಮಾಡೋದರಿಂದ ನಮ್ಮ ಬ್ಯಾನರಿನ ಘನತೆಗೆ ಏಟಾಗಿದೆ ಅನ್ನುವ ಬೇಜಾರು ನನ್ನದು. ನಾನು ಈ ಮೊದಲು ಉಪೇಂದ್ರ ಚಿತ್ರ ನೋಡಿರಲಿಲ್ಲ. ನಮ್‌ ಚಿತ್ರ ರೆಡಿಯಾದ ಮೇಲೆ ಆ ಚಿತ್ರದ ಕ್ಯಾಸೆಟ್‌ ತರಿಸಿ ನೋಡಿದೆ. ಉಪೇಂದ್ರರ ಬಗ್ಗೆ ಏನೇ ತಕರಾರಿದ್ದರೂ ತಾಂತ್ರಿಕವಾಗಿ ಅದೊಂದು ಉತ್ತಮ ಚಿತ್ರ. ಅಂಥಾ ಟೇಕಿಂಗ್ಸ್‌ ಆಗಲಿ, ತಾಂತ್ರಿಕ ಶ್ರೀಮಂತಿಕೆಯಾಗಲಿ ಜಿತೇಂದ್ರ ಚಿತ್ರದಲ್ಲಿಲ್ಲ .

ಕುಮಾರಸ್ವಾಮಿ ನಿರ್ಭಾವುಕರಾಗಿ ತಮ್ಮ ಕೂಸಿನ ಕತ್ತನ್ನು ತಾವೇ ಹಿಸುಕುವ ಕೆಲಸ ಮಾಡುತ್ತಿದ್ದರು. ವಾಸ್ತವದಲ್ಲಿ ಅದು ಜಿತೇಂದ್ರ ಚಿತ್ರದ ಸಂತೋಷಕೂಟ. ಆದರೆ ಸ್ವಾಮಿಯವರು ಸಂತೋಷದಲ್ಲಿರಲಿಲ್ಲ. ಬದಲಾಗಿ ಜಿತೇಂದ್ರ ಚಿತ್ರದ ಬಗ್ಗೆ ತಾವೇನೂ ಮಾತಾಡುವುದಕ್ಕಿಲ್ಲ. ಅದನ್ನು ನಿರ್ದೇಶಕರು ಮಾಡುತ್ತಾರೆ ಎಂದರು. ಜಿತೇಂದ್ರ ಚಿತ್ರ ಮಾಡಿದ ಪಾಪವನ್ನು ಕಳೆದುಕೊಳ್ಳುವುದಕ್ಕಾಗಿ ತುರ್ತಾಗಿ ವ್ಯಾಸರಾಯ ಬಲ್ಲಾಳರ ಹೆಜ್ಜೆ ಚಿತ್ರವನ್ನು ಒಪ್ಪಿಕೊಂಡಿದ್ದೇನೆ ಎಂದರು.

ಉಪೇಂದ್ರನ ತಾಂತ್ರಿಕ ಶ್ರೀಮಂತಿಕೆ ನಮ್ಮಲ್ಲಿಲ್ಲ

ಪಾರ್ಟಿಗೆ ತಡವಾಗಿ ಬಂದ ನಿರ್ದೇಶಕ ವಿಶ್ವನಾಥ್‌ ಯುದ್ಧ ಸನ್ನದ್ಧರಾಗಿದ್ದರು. ಅವರ ಮೇಲೆ ಪ್ರಶ್ನೆಗಳ ಸುರಿಮಳೆ. ಇದು ಸಿನಿಮಾ ಅಲ್ಲ . ನಾಟಕ ಅಂಥ ಒಬ್ಬರು, ನಿಮ್ಮ ವೈಯಕ್ತಿಕ ಅಭಿಪ್ರಾಯವನ್ನು ಇನ್ನೊಬ್ಬರ ಖರ್ಚಿನಲ್ಲಿ ಹೇಳಿದ್ದು ತಪ್ಪು ಅಂತ ಇನ್ನೊಬ್ಬರು. ಉಪೇಂದ್ರ ತಮ್‌ ಅನಿಸಿಕೆಯನ್ನು ಹೇಳುವುದಕ್ಕೆ ಮಾಧ್ಯಮವನ್ನು ಬಳಸಿಕೊಂಡಿದ್ದಾರೆ. ಅದೇ ಥರ ಮಾಧ್ಯಮದ ಮೂಲಕವೇ ನಾನು ಅವರಿಗೆ ಉತ್ತರ ನೀಡಿದ್ದೇನೆ. ಜನ ಒಪ್ಪಿಕೊಂಡಿದ್ದಾರೆ ಅಂದರು ವಿಶ್ವನಾಥ್‌. ತಾಂತ್ರಿಕ ಶ್ರೀಮಂತಿಕೆ ತಮ್ಮ ಉದ್ದೇಶವಾಗಿರಲಿಲ್ಲ . ಮಾತಿನ ಮೂಲಕವೇ ಕತೆ ಹೇಳುವುದೇ ತಮ್ಮ ತಂತ್ರ ಎಂದು ಒಪ್ಪಿಕೊಂಡರು. ನೂರೆಂಟು ಸಮರ್ಥನೆಗಳ ಬಳಿಕ ಕೊನೆಗೆ ಇವರು ಹೇಳಿದ್ದು ಇಷ್ಟು .

ನಾನು ಈ ರಂಗಕ್ಕೆ ಬಂದು 20 ವರ್ಷದ ಮೇಲಾಯಿತು. ನನಗೊಂದು ಬ್ರೇಕ್‌ ಬೇಕಾಗಿತ್ತು . ಅದಕ್ಕೇ ಈ ವಿವಾದಾತ್ಮಕ ವಸ್ತುವನ್ನು ಆರಿಸಿಕೊಂಡೆ. ಈ ಚಿತ್ರ ಗೆದ್ದರೆ ನಾನೂ ಗೆದ್ದಂತೆ. ಉಪೇಂದ್ರರನ್ನು ಎದುರು ಹಾಕಿಕೊಂಡು ನನಗೇನಾಗಬೇಕು ಹೇಳಿ ... ನಾವಿಬ್ಬರೂ ಇದೇ ರಂಗದಲ್ಲಿ ಇರುವವರು ನಾಳೆ ಮುಖಮುಖ ನೋಡಲೇಬೇಕು.

ಪಾರ್ಟಿ ಮುಗಿಸಿ ಹೊರಡುತ್ತಿದ್ದ ಅತಿಥಿಗಳಿಗೆ ದಾರಿಯಲ್ಲೇ ಭೇಟಿಯಾದ ಜಗ್ಗೇಶ್‌ ಮೂರು ಸಾರಿ ಉಪೇಂದ್ರರಿಗೆ ಹಿಡಿ ಶಾಪ ಹಾಕಿದರು. ಆದರೂ ತಾವು ಈ ಚಿತ್ರ ಮಾಡಬಾರದಾಗಿತ್ತು. ಅಭಿಮಾನಿಗಳು ಬೇಜಾರು ಮಾಡಿಕೊಂಡಿದ್ದಾರೆ ಎಂದು ತಾವೂ ಬೇಜಾರು ಮಾಡಿಕೊಂಡರು.

ವಾರ್ತಾಸಂಚಯ
ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada