»   » ಹಾಡು ವಿರೋಧಿಯ ಎದೆಯಲ್ಲಿ ಗಾನಮುದ್ರಿಕೆ

ಹಾಡು ವಿರೋಧಿಯ ಎದೆಯಲ್ಲಿ ಗಾನಮುದ್ರಿಕೆ

Posted By:
Subscribe to Filmibeat Kannada

*ಸತ್ಯನಾರಾಯಣ

ಮತದಾನ ನಿರ್ದೇಶಕ ಟಿ.ಎನ್‌. ಸೀತಾರಾಮ್‌ ಹಾಡುವಿರೋಧಿ ಸಂಘಕ್ಕೆ ಸೇರಿದವರು. ಹಾಗೆ ನೋಡಿದರೆ ಹೊಸ ಅಲೆಯ ಚಿತ್ರಗಳ ವಕ್ತಾರರೆಲ್ಲರೂ ಹಾಡು ಬೇಡ ಅನ್ನುವವರೇ. ಇಂದಿಗೂ ಗಿರೀಶ್‌ ಕಾಸರವಳ್ಳಿ ತಮ್ಮ ಚಿತ್ರಗಳಲ್ಲಿ ಗೀತೆಗಳನ್ನು ಬಳಸುವುದಿಲ್ಲ. ಆದರೆ ಕೆಲವು ವರ್ಷದ ಹಿಂದೆ ಅವರೇ ಭಾರತೀಯ ಚಿತ್ರಗಳಿಗೆ ಹಾಡು ಅವಿಭಾಜ್ಯ ಅಂಗ ಅಂದಿದ್ದುಂಟು. ಹಾಡು ಅಂದರೆ ವಾಸ್ತವಕ್ಕೆ ದೂರವಾದದ್ದು ಅನ್ನುವ ನಿರ್ದೇಶಕರೇ ಕಮರ್ಷಿಯಲ್‌ ಕಾರಣಕ್ಕೆ ತಮ್ಮ ಚಿತ್ರಗಳನ್ನು ಗೀತಮಯವಾಗಿಸಿದ ಉದಾಹರಣೆಗಳಿಗೆ ಕೊರತೆಯಿಲ್ಲ. ಈಗ ಸೀತಾರಾಮ್‌ ಕೂಡ ಅದೇ ಬಣಕ್ಕೆ ಸೇರ್ಪಡೆಯಾಗಿದ್ದಾರೆಯೇ ? ರಾಜಕಾರಣಿಯೂ ಆಗಿರುವುದರಿಂದ ಈ ಪಕ್ಷಾಂತರಕ್ಕೆ ತಾರ್ಕಿಕ ಕಾರಣಗಳನ್ನೂ ಅವರು ಕೊಡಬಲ್ಲರು.

ಮೊನ್ನೆ ಅಶೋಕದಲ್ಲಿ ನಡೆದ ಮತದಾನ ಚಿತ್ರದ ಕ್ಯಾಸೆಟ್‌ ಬಿಡುಗಡೆ ಸಮಾರಂಭದಲ್ಲಿ ಸೀತಾರಾಮ್‌ ಹೇಳಿದ್ದು ಇಷ್ಟು- ನಾನು ಹಾಡು ವಿರೋಧಿ. ಅದಕ್ಕೆ ಕಾರಣ ಬಾಲ್ಯದಲ್ಲಿ ಸಂಗೀತ ಕಲಿಯೋದಕ್ಕೆ ಹೋಗಿ ಸೋತು ಹೋಗಿದ್ದು. ಆದರೆ ಕಲಾತ್ಮಕ ಚಿತ್ರಗಳನ್ನು ಜನ ನೋಡದೇ ಇರೋದಕ್ಕೆ ಕಾರಣ ಅದರಲ್ಲಿ ಹಾಡುಗಳು ಇಲ್ಲದೇ ಇರೋದು ಅನ್ನುವ ಸಂಗತಿ ಗೊತ್ತಾಯಿತು. ಹಾಡು ಪ್ರೇಕ್ಷಕನಿಗೆ ರಿಲೀಫ್‌ ಕೊಡುತ್ತೆ ಅನ್ನೋದೂ ಗೊತ್ತಾಯಿತು. ಹಾಗಾಗಿ ಮತದಾನಕ್ಕೆ ಹಾಡು ಸೇರ್ಪಡೆಯಾಯಿತು. ರೆಕಾರ್ಡಿಂಗ್‌ ಸಂದರ್ಭದಲ್ಲಿ ಹಾಡು ಕೇಳ್ತಾ ಕೇಳ್ತಾ ನನಗೇ ಇಷ್ಟ ಆಗೋದಕ್ಕೆ ಶುರುವಾಯಿತು. ಆಮೇಲೆ ನೂರು ಸಾರಿ ಈ ಹಾಡುಗಳನ್ನು ಕೇಳಿದ್ದೇನೆ. ಹಾಡಿನ ಚಿತ್ರೀಕರಣವನ್ನೂ ನಾನೇ ಮಾಡಿದ್ದೇನೆ.

ಮತದಾನಕ್ಕೆ ಸಂಗೀತ ನೀಡಿದವರು ಅಶ್ವತ್ಥ್‌ - ಮನೋಹರ್‌ ಜೋಡಿ. ಮತದಾನ ಕಾದಂಬರಿಯನ್ನು ಓದಿದ್ದ ಅಶ್ವತ್ಥ್‌ ಅವರಿಗೂ ಈ ಚಿತ್ರಕ್ಕೆ ಹಾಡೇ ಅಗತ್ಯ ಇಲ್ಲ ಅನಿಸಿತಂತೆ. ಕೊನೆಗೆ ಭಯಂಕರ ಚರ್ಚೆಯ ನಂತರ ಹಾಡುಗಳಿಗೆ ಪ್ಲೇಸ್‌ಮೆಂಟ್‌ ನಿರ್ಧಾರ ಆಯ್ತು . ಈಗ ನೋಡಿದರೆ ಇಡೀ ಚಿತ್ರದ ಕತೆಯೇ ಹಾಡಿನ ಮೂಲಕ ಸಾಗ್ತಾ ಇದೆ ಅಂತ ಅನಿಸ್ತಾ ಇದೆ ಅನ್ನುತ್ತಾರೆ ಅಶ್ವತ್ಥ್‌. ತಮಾಷೆಯೆಂದರೆ ರಾಷ್ಟ್ರಪ್ರಶಸ್ತಿಗಾಗಿ ಕಳಿಸಿರುವ ಮತದಾನದ ಪ್ರಿಂಟ್‌ನಲ್ಲಿ ಎಲ್ಲಾ ಹಾಡುಗಳನ್ನು ಕಿತ್ತು ಹಾಕಲಾಗಿದೆ.

ಮತದಾನ ಸಮಾರಂಭದ ವೈಶಿಷ್ಟ್ಯ ಅಂದರೆ ಇಡೀ ಚಿತ್ರ ತಂಡವೇ ಮೊದಲೇ ರಿಹರ್ಸಲ್‌ ಮಾಡಿದ ಥರ ಚಿತ್ರದ ಮೇಲೆ ಹೊಗಳಿಕೆಯ ಮಳೆಗರೆದ್ದು. ಈ ಚಿತ್ರ ಗೆದ್ದೇ ಗೆಲ್ಲುತ್ತೆ ಎಂದು ಸೀತಾರಾಮ್‌ ಎದೆ ತಟ್ಟಿಕೊಂಡರೆ ಚಿತ್ರ ತಂಡದ ಪ್ರತಿಯಾಬ್ಬರೂ ಮಲ್ಲಿಗೆ ಮಾಲೆಯ ಒಂದೊಂದು ಹೂಗಳು ಎಂದರು ಫಿಲಂ ಚೇಂಬರ್‌ ಅಧ್ಯಕ್ಷ ಚಂದ್ರು. ಕಪ್ಪಗಿರೋ ತಮ್ಮನ್ನೂ ಮಲ್ಲಿಗೆ ಎಂದು ಕರೆದದ್ದಕ್ಕೆ ದಲಿತ ಕವಿ ಸಿದ್ದಲಿಂಗಯ್ಯ ಸಂತೋಷಪಟ್ಟರು.

ಇವೆಲ್ಲದರ ಜೊತೆಗೆ ಕಲಾತ್ಮಕ ಚಿತ್ರಗಳಿಗೆ ಕಮರ್ಷಿಯಲ್‌ ನಟ ನಟಿಯರು ರಿಯಾಯಿತಿ ತೋರಿಸಬೇಕು ಎಂಬ ಅಭಿಪ್ರಾಯವೂ ಚಂದ್ರು ಅವರಿಂದ ಬಂತು. ಮಲೆಯಾಳಂನಲ್ಲಿ ಮಮ್ಮೂಟ್ಟಿಯಂಥ ಕಮರ್ಷಿಯಲ್‌ ನಟರು ಅಡೂರು ಗೋಪಾಲಕೃಷ್ಣನ್‌ ಅಂಥವರ ಕಲಾತ್ಮಕ ಚಿತ್ರಗಳಲ್ಲಿ ಸಂಭಾವನೆಯ ಹಂಗಿಲ್ಲದೇ ನಟಿಸಿದ್ದುಂಟು. ತಾರಾ ಪ್ರಕಾರ ಕನ್ನಡದ ಕಲಾವಿದರು. ಈ ಸಂಪ್ರದಾಯವನ್ನು ಆರಂಭದಿಂದಲೇ ಎಲ್ಲಾ ಚಿತ್ರಗಳಿಗೂ ಅನುಸರಿಸಿಕೊಂಡು ಬಂದಿದ್ದಾರೆ. ಇನ್ನೂ ಹೆಚ್ಚಿನ ರಿಯಾಯಿತಿ ಕೊಡೋದಕ್ಕೆ ಹೇಗೆ ಸಾಧ್ಯ ಅನ್ನೋದು ಅವರ ಪ್ರಶ್ನೆ.

ಕೇಂದ್ರ ಪಾತ್ರವಾದ ಅನಂತನಾಗ್‌ ಹೊರತಾಗಿ ಚಿತ್ರತಂಡದವರೆಲ್ಲರೂ ಸಮಾರಂಭದಲ್ಲಿ ಹಾಜರಿದ್ದರು. ಮದುಮಗ ಅವಿನಾಶ್‌, ನಿತ್ಯ ದುಃಖತಪ್ತ ಸುಂದರರಾಜ್‌, ಅತ್ಯುತ್ಸಾಹಿ ಅಶ್ವತ್ಥ್‌, ಮುಜುಗರದ ಪ್ರಾಣಿ ಮನೋಹರ್‌ ಅವರು ಅನಂತರ ನಡೆದ ಸಂತೋಷ ಕೂಟದಲ್ಲಿ ಅತಿಥಿಗಳನ್ನು ರಂಜಿಸಿದರು.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada