»   » ಮತದಾನವೊ ದುರ್ದಾನವೊ - ಎಸ್‌.ಎಲ್‌.ಭೈರಪ್ಪ

ಮತದಾನವೊ ದುರ್ದಾನವೊ - ಎಸ್‌.ಎಲ್‌.ಭೈರಪ್ಪ

Subscribe to Filmibeat Kannada

*ಸತ್ಯವ್ರತ ಹೊಸಬೆಟ್ಟು

ಭೈರಪ್ಪ ಬೇಜಾರಾಗಿದ್ದಾರೆ. ಅದನ್ನು ಆಪ್ತೇಷ್ಟರ ಬಳಿ ಹೇಳಿಕೊಂಡು ಅಲವತ್ತುಕೊಳ್ಳುತ್ತಿದ್ದಾರೆ. ಹತ್ತಿರದವರೊಬ್ಬರ ಹೇಳುವಂತೆ, ಇನ್ನು ಈ ಸಿನಿಮಾ ಮಂದಿಯ ಸಹವಾಸವೇ ಸಾಕು ಎಂದು ದುರ್ದಾನವನ್ನೂ ಕೈಗೊಂಡಿದ್ದಾರೆ.

ಕಳೆದ ವಾರ ಮತದಾನ ಸಿನಿಮಾದ ಕ್ಯಾಸೆಟ್‌ ಬಿಡುಗಡೆ ಸಮಾರಂಭದಲ್ಲಿ - ನಿರ್ದೇಶಕ ಸೀತಾರಾಂ, ಸಂಗೀತ ನಿರ್ದೇಶಕ ಅಶ್ವಥ್‌- ಮನೋಹರ್‌ ಜೋಡಿ, ಕಲಾತ್ಮಕ ಸಿನಿಮಾಗಳಿಗೆ ಉದ್ರಿಯಾಗಿ ಸಲಹೆ ನೀಡುವುದನ್ನು ಪಾರ್ಟ್‌ ಟೈಂ ಹವ್ಯಾಸವನ್ನಾಗಿಸಿಕೊಂಡಿರುವ ಸರ್ಕಾರಿ ಅಧಿಕಾರಿ ಐ.ಎಂ. ವಿಠ್ಠಲಮೂರ್ತಿ ಮುಂತಾಗಿ ಮತದಾನ ನಿರ್ಮಾಣದಲ್ಲಿ ಯಾವುದೋ ವಿಧದಲ್ಲಿ ಭಾಗಿಯಾದವರೆಲ್ಲರೂ ಮತದಾನವನ್ನು ಜಗತ್ತಿನ ಅತ್ಯುತ್ತಮ ಸಿನಿಮಾಗಳಲ್ಲಿ ಒಂದೆಂದು ಹೊಗಳಿದ್ದರು. ಅದೆಲ್ಲವನ್ನು ನಂಬಿ ಭೈರಪ್ಪ ಖುಷಿಯಾಗಿದ್ದರಂತೆ. ಅದೀಗ ನಿರಾಕರಣವಾಗಿದೆ. ಅರ್ಥಾತ್‌ ಕಾದಂಬರಿಕಾರರಿಗೆ ತೀವ್ರ ನಿರಾಶೆಯಾಗಿದೆ.

ನಾನು ಅಂದುಕೊಂಡಂತೆ ಸಿನಿಮಾ ಮೂಡಿಬಂದಿಲ್ಲ . ನಾಯಕನ (ಅನಂತನಾಗ್‌) ಪಾತ್ರಕ್ಕೆ ನ್ಯಾಯ ಸಂದಾಯವಾಗಿಲ್ಲ . ಅವಿನಾಶ್‌ ನಿರ್ವಹಿಸಿರುವ ಪಾತ್ರವಂತೂ ಅಟ್ಟರ್‌ ಫ್ಲಾಫ್‌ ಎಂದು ಸಾಲು ಹುಳುಕುಗಳನ್ನು ಕಾದಂಬರಿಕಾರರು ಸಿನಿಮಾದಿಂದ ಹೆಕ್ಕಿದ್ದಾರೆ. ಕಾದಂಬರಿ ಹಕ್ಕುಗಳನ್ನು ಪಡೆಯುವ ಮುನ್ನ ಕಾದಂಬರಿಗೆ ನ್ಯಾಯ ಸಲ್ಲಿಸುತ್ತೇನೆಂದು ಭರವಸೆ ಕೊಟ್ಟಿದ್ದ ನಾಟಕದ ಟಚ್‌ ಇರುವ ನಿರ್ದೇಶಕ ಸೀತಾರಾಂ ತಮ್ಮ ಮಾತು ಉಳಿಸಿಕೊಂಡಿಲ್ಲವೆನ್ನುವ ಕೊರಗಿನಲ್ಲಿದ್ದಾರೆ. ಈ ಕೊರಗಿನೊಂದಿಗೆ ತಮ್ಮ ಕಾದಂಬರಿಗೆ ನ್ಯಾಯ ದಕ್ಕಿಲ್ಲವೆಂದು ಈ ಮುನ್ನ ದೂರಿದ್ದ ಕಾದಂಬರಿಕಾರರ ಸಾಲಿಗೆ ಭೈರಪ್ಪ ಎಂಟ್ರಿ ಪಡೆದಂತಾಯಿತು.

ತ.ರಾ.ಸುಬ್ಬರಾವ್‌ ಅವರ ಮೂರು ಕಾದಂಬರಿಗಳನ್ನಾಧರಿಸಿ ಪುಟ್ಟಣ್ಣ ಕಣಗಾಲ್‌ ನಾಗರಹಾವು ಸಿನಿಮಾ ನಿರ್ಮಿಸಿದಾಗ, ಸಿನಿಮಾ ನೋಡಿದ ತರಾಸು ಇದು ನಾಗರಹಾವಲ್ಲ , ಕೇರೆ ಹಾವು ಎಂದು ಜರೆದಿದ್ದರು. ಅದೀಗ ಇತಿಹಾಸ. ಅಂದಹಾಗೆ, ಮತದಾನ ನೋಡಿದಾಗ ಭೈರಪ್ಪನವರ ತಕ್ಷಣದ ಪ್ರತಿಕ್ರಿಯೆ ಏನಿದ್ದೀತು? ಇದು ಮತದಾನವಲ್ಲ , ದುರ್ದಾನ ಎಂದು ಸಿಡಿದರೆ ? ಇರಬಹುದು. ಭೈರಪ್ಪನವರು ಸಂಪ್ರದಾಯನಿಷ್ಠರು.

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada