ಪ್ರೇಮ್-ಧ್ರುವ ಸರ್ಜಾ ಕಾಂಬಿನೇಷನ್ ಚಿತ್ರದಲ್ಲಿ ಮೋಹನ್ ಲಾಲ್? ಕುತೂಹಲ ಕೆರಳಿಸಿದ ಫೋಟೊ
ಪೊಗರು ಚಿತ್ರದ ಬಳಿಕ ಧ್ರುವ ಸರ್ಜಾ ಅಭಿನಯದ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ಪೊಗರು ಮೂಲಕ ಹೇಳಿಕೊಳ್ಳುವಂಥ ಯಶಸ್ಸು ಕಾಣದ ಧ್ರುವ ಸರ್ಜಾ ಮುಂದಿನ ಚಿತ್ರಗಳಿಗಾಗಿ ಎಪಿ ಅರ್ಜುನ್ ಹಾಗೂ ಜೋಗಿ ಪ್ರೇಮ್ ಅವರ ಜೊತೆ ಕೈ ಜೋಡಿಸಿದ್ದಾರೆ. ಎರಡೂ ಚಿತ್ರಗಳ ಚಿತ್ರೀಕರಣ ಆರಂಭವಾಗಿದ್ದು ಎಪಿ ಅರ್ಜುನ್ ನಿರ್ದೇಶನದ ಚಿತ್ರಕ್ಕೆ ಮಾರ್ಟಿನ್ ಎಂದು ಶೀರ್ಷಿಕೆ ಇಡಲಾಗಿದ್ದು, ಪ್ರೇಮ್ ನಿರ್ದೇಶನದ ಚಿತ್ರಕ್ಕೆ ಇನ್ನೂ ಸಹ ಶೀರ್ಷಿಕೆಯನ್ನು ಇಡಲಾಗಿಲ್ಲ.
ಸದ್ಯ ಚಿತ್ರದ ನಿರ್ದೇಶಕ ಪ್ರೇಮ್ ಕೂಡ ಇದೇ ಕೆಲಸದಲ್ಲಿ ನಿರತರಾಗಿದ್ದು, ಕಳೆದೆರಡು ವಾರಗಳಿಂದ ತಮ್ಮ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ಚಿತ್ರದ ಟೈಟಲ್ ಟೀಸರ್ ಕೆಲಸಗಳಲ್ಲಿ ನಿರತರಾಗಿದ್ದಾರೆ. ಈಗಾಗಲೇ ಚಿತ್ರದ ಟೈಟಲ್ ಟೀಸರ್ ಅನ್ನು ಇದೇ ತಿಂಗಳ 20ರಂದು ಸಂಜೆ 5 ಗಂಟೆಗೆ ಒರಾಯನ್ ಮಾಲ್‌ನಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ.
ಇದಾದ ಬೆನ್ನಲ್ಲೇ ಇದೀಗ ನಿರ್ದೇಶಕ ಜೋಗಿ ಪ್ರೇಮ್ ಮಲಯಾಳಂನ ಮೇರುನಟ ಮೋಹನ್ ಲಾಲ್ ಅವರನ್ನು ಭೇಟಿ ಮಾಡಿರುವುದು ಕುತೂಹಲವನ್ನು ಕೆರಳಿಸಿದೆ. ಹೌದು, ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಖಾತೆಗಳಲ್ಲಿ ಮೋಹನ್ ಲಾಲ್ ಅವರನ್ನು ಭೇಟಿಯಾದ ಚಿತ್ರವನ್ನು ಹಂಚಿಕೊಂಡಿರುವ ಜೋಗಿ ಪ್ರೇಮ್ ಮೋಹನ್ ಲಾಲ್ ಅವರ ಸರಳತೆಗೆ ಮನಸೋತು ಬರವಣಿಗೆ ಮೂಲಕ ಹೊಗಳಿದ್ದಾರೆ. ನಿಮ್ಮ ಬೆಂಬಲ ನಾವು ಮತ್ತಷ್ಟು ಬೆಳವಣಿಗೆ ಹೊಂದಲು ಸಹಕಾರಿಯಾಗಿದೆ ಎಂದು ಮೋಹನ್ ಲಾಲ್ ಅವರನ್ನು ಹೊಗಳಿ ಪ್ರೇಮ್ ಬರೆದುಕೊಂಡಿದ್ದಾರೆ.

ಕುತೂಹಲ ಕೆರಳಿಸಿದ ಫೋಟೊ
ಹೀಗೆ ಜೋಗಿ ಪ್ರೇಮ್ ಹಂಚಿಕೊಂಡಿರುವ ಫೋಟೊ ನೋಡಿದ ನೆಟ್ಟಿಗರ ತಲೆಯಲ್ಲಿ ಕುತೂಹಲ ಕೆರಳಿದೆ. ಇದ್ದಕ್ಕಿದ್ದಂತೆ ಜೋಗಿ ಪ್ರೇಮ್ ಮೋಹನ್ ಲಾಲ್ ಅವರನ್ನು ಭೇಟಿಯಾಗಿರುವುದಾದರೂ ಏಕೆ, ಮೋಹನ್ ಲಾಲ್ ಪ್ರೇಮ್ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್ ಚಿತ್ರದಲ್ಲಿ ಅತಿಥಿ ಪಾತ್ರವನ್ನೇನಾದರೂ ನಿರ್ವಹಿಸಲಿದ್ದಾರಾ ಎಂಬ ಚರ್ಚೆಗಳು ಆರಂಭವಾಗಿವೆ.

ಟೈಟಲ್ ಟೀಸರ್ ಕಾರ್ಯಕ್ರಮಕ್ಕೆ ಅತಿಥಿ ಇರಬಹುದಾ?
ಮೋಹನ್ ಲಾಲ್ ಪ್ರೇಮ್ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಬಹುದು ಎಂಬ ಊಹೆಗಳು ಹೆಚ್ಚಾಗಿವೆ. ಹೀಗೆ ಈ ಕಾರ್ಯಕ್ರಮಕ್ಕೆ ಆಹ್ವಾನಿಸುವುದಕ್ಕಾಗಿಯೇ ಪ್ರೇಮ್ ಮೋಹನ್ ಲಾಲ್ ಅವರನ್ನು ಭೇಟಿಯಾಗಿರಬಹುದು ಎಂಬ ಅಭಿಪ್ರಾಯಗಳು ಸದ್ಯ ಹೆಚ್ಚಾಗಿ ಹರಿದಾಡುತ್ತಿವೆ. ಅಷ್ಟೇ ಅಲ್ಲದೆ ಮೋಹನ್ ಲಾಲ್ ಅವರ ಬಗ್ಗೆ ಬರೆದುಕೊಂಡಿರುವ ಪ್ರೇಮ್ ಅಂತಿಮವಾಗಿ ಟೈಟಲ್ ಟೀಸರ್ ಬಿಡುಗಡೆ ದಿನಾಂಕ, ಸಮಯ ಮತ್ತು ಸ್ಥಳವನ್ನು ಉಲ್ಲೇಖಿಸಿರುವುದು ಈ ಊಹೆ ಹೆಚ್ಚಾಗುವಂತೆ ಮಾಡಿದೆ.

ಎಲ್ಲಾ ಭಾಷೆಗೂ ಧ್ರುವ ಸರ್ಜಾ ಧ್ವನಿ
ಇನ್ನು ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ಚಿತ್ರದ ಟೈಟಲ್ ಟೀಸರ್ ಎಲ್ಲಾ ಭಾಷೆಗಳಲ್ಲಿಯೂ ಧ್ರುವ ಸರ್ಜಾ ಧ್ವನಿಯಲ್ಲೇ ಇರಲಿದೆ. ಈ ವಿಷಯವನ್ನು ಸ್ವತಃ ಜೋಗಿ ಪ್ರೇಮ್ ಅವರೇ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಳ್ಳುವುದರ ಮೂಲಕ ತಿಳಿಸಿದ್ದರು.


Click it and Unblock the Notifications











