ಗುಟ್ಟಾಗಿ ಗೆಳೆಯನ ಜೊತೆ ವಿದೇಶದಲ್ಲಿ ಹಸೆಮಣೆ ಏರಲಿದ್ದಾರೆ 'ಕೆಜಿಎಫ್' ಬೆಡಗಿ
ಇದು ಮದುವೆಗಳ ಕಾಲ, ಬಾಲಿವುಡ್, ಸ್ಯಾಂಡಲ್‌ವುಡ್‌ಗಳಲ್ಲಿ ಹಲವರು ತಾರೆಯರು ವಿವಾಹವಾಗುತ್ತಿದ್ದಾರೆ. ಬಾಲಿವುಡ್‌ನಲ್ಲಿ ಅಂತೂ ಕತ್ರಿನಾ-ವಿಕ್ಕಿ ಕೌಶಲ್, ರಣ್ಬೀರ್ ಕಪೂರ್-ಆಲಿಯಾ ಭಟ್ ವಿವಾಹ ಭಾರಿ ಸದ್ದು ಮಾಡುತ್ತಿದೆ. ಈ ನಡುವೆ ಬಾಲಿವುಡ್‌ನ ಮತ್ತೊಬ್ಬ ನಟಿಯ ವಿವಾಹದ ಸುದ್ದಿಯೂ ಹರಿದಾಡುತ್ತಿದೆ.
'ಕೆಜಿಎಫ್' ಹಿಂದಿ ಅವತರಣಿಕೆಯಲ್ಲಿ ಯಶ್ ಜೊತೆ ಕುಣಿದಿದ್ದ ಮೌನಿ ರಾಯ್ ವಿವಾಹದ ಬಗ್ಗೆ ಗುಲ್ಲು ಬಾಲಿವುಡ್ ಗಲ್ಲಿಗಳಲ್ಲಿ ಹರಿದಾಡುತ್ತಿದೆ.
36 ವರ್ಷ ವಯಸ್ಸಿನ ಮೌನಿ ರಾಯ್ ಹೆಸರು ಈ ಹಿಂದೆ ಕೆಲವು ನಟರೊಟ್ಟಿಗೆ ಕೇಳಿ ಬಂದಿತ್ತು. ಆದರೆ ವಿವಾಹವಾಗಲು ಮೌನಿ ರಾಯ್ ಆಯ್ಕೆ ಮಾಡಿಕೊಂಡಿರುವುದು ನಟರನ್ನಲ್ಲ ಬದಲಿಗೆ ಉದ್ಯಮಿಯನ್ನು. ವಿದೇಶಿ ಉದ್ಯಮಿಯೊಬ್ಬರ ಜೊತೆಗೆ ಮುಂದಿನ ತಿಂಗಳು ಹಸೆಮಣೆ ಏರುತ್ತಾರಂತೆ ಈ ಸಪೂರ ಸುಂದರಿ.

ಮೌನಿ ರಾಯ್ ಸಾಧ್ಯವಾದಷ್ಟು ತಮ್ಮ ಖಾಸಗಿ ಬದುಕಿನ ಮಾಹಿತಿಗಳನ್ನು ಮಾಧ್ಯಮಗಳಿಂದ ಮುಚ್ಚಿಡುತ್ತಾರೆ. ಆದರೂ 'ಬಾಲಿವುಡ್ ಪಾಪಾರಾಟ್ಜಿಗಳು' ಮಾಹಿತಿ ಹೆಕ್ಕಿ ತೆಗೆದಿವೆ. ಮೌನಿ ರಾಯ್‌ಗೆ ದುಬೈನಲ್ಲಿ ಬಾಯ್‌ಫ್ರೆಂಡ್ ಒಬ್ಬನಿದ್ದು ಆತನೊಟ್ಟಿಗೆ ಮೌನಿ ಮುಂದಿನ ವರ್ಷ ಮದುವೆ ಆಗಲಿದ್ದಾರಂತೆ.
ಭಾರತ ಮೂಲದ ಆದರೆ ಪ್ರಸ್ತುತ ದುಬೈನಲ್ಲಿ ನೆಲೆಸಿರುವ ಸೂರಜ್ ನಂಬಿಯಾರ್ ಎಂಬುವರೊಟ್ಟಿಗೆ ಮೌನಿ ರಾಯ್ ಕೆಲ ವರ್ಷಗಳಿಂದ ಪ್ರೀತಿಯಲ್ಲಿದ್ದು, ಈ ಜೋಡಿ ಮುಂದಿನ ತಿಂಗಳು ಅಂದರೆ ಜನವರಿ 27 ರಂದು ದುಬೈನಲ್ಲಿಯೇ ಭಾರತೀಯ ಸಂಪ್ರದಾಯದ ಪ್ರಕಾರ ವಿವಾಹವಾಗಲಿದೆಯಂತೆ.
ಇದೇ ವರ್ಷದ ಆರಂಭದಲ್ಲಿ ಸೂರಜ್ ಪೋಷಕರು ಹಾಗೂ ಮೌನಿ ರಾಯ್ ಪೋಷಕರು ನಟಿ ಮಂದಿರಾ ಬೇಡಿ ಅವರ ನಿವಾಸದಲ್ಲಿ ಭೇಟಿಯಾಗಿ ಪರಸ್ಪರ ಮಾತುಕತೆ ನಡೆಸಿದ್ದಾರೆ. ವಿವಾಹಕ್ಕೆ ಒಪ್ಪಿಗೆಯನ್ನೂ ನೀಡಿದ್ದಾರೆ. ವಿವಾಹದ ರೂಪು ರೇಷೆಗಳ ಬಗ್ಗೆ ಒಂದು ಹಂತದ ಚರ್ಚೆಯೂ ಮುಗಿದಿದೆ.
ಮೌನಿ ರಾಯ್ ಹಾಗೂ ಸೂರಜ್ ಜೊತೆಯಾಗಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಆದರೆ ಅವರ ಗೆಳೆಯರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕೆಲವು ಚಿತ್ರಗಳಲ್ಲಿ ಇಬ್ಬರೂ ಇದ್ದಾರೆ. ಇದರ ಹೊರತಾಗಿ ಮೌನಿ ರಾಯ್ ಒಮ್ಮೆಯಷ್ಟೆ ಸೂರಜ್ ಜೊತೆಗಿನ ಚಿತ್ರ ಹಂಚಿಕೊಂಡಿದ್ದರು. ತಮ್ಮ ಮುದ್ದಿನ ನಾಯಿ ಹಾಗೂ ಸೂರಜ್ ಅವರೊಟ್ಟಿಗೆ ಇರುವ ಚಿತ್ರ ಹಂಚಿಕೊಂಡಿದ್ದ ಮೌನಿ, 'ಎರಡೂ ನನ್ನವೇ, ಐ ಲವ್ ಯೂ' ಎಂದು ಬರೆದುಕೊಂಡಿದ್ದರು.
ಮೌನಿ ರಾಯ್ ಪ್ರಸ್ತುತ ದುಬೈನಲ್ಲಿಯೇ ಇದ್ದಾರೆ. ದುಬೈನಲ್ಲಿ ಆಟೋ ಎಕ್ಸ್‌ಪೋನಲ್ಲಿ ಭಾಗಿಯಾಗಿದ್ದಾರೆ. ಎಕ್ಸ್‌ಪೋನಲ್ಲಿ ವಿಶ್ವಪ್ರಸಿದ್ಧ ಫುಟ್‌ಬಾಲ್ ಆಟಗಾರ ಡೇವಿಡ್ ಬೆಕಮ್ ಅವರನ್ನು ಭೇಟಿಯಾಗಿ ಅವರೊಟ್ಟಿಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಮೌನಿ ರಾಯ್.
ಮೌನಿ ರಾಯ್ ಕೊನೆಯದಾಗಿ 2020ರಲ್ಲಿ ಬಿಡುಗಡೆ ಆಗಿದ್ದ 'ಲಂಡನ್ ಕಾನ್ಫಿಡೆನ್ಶಿಯಲ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅದರ ಹೊರತಾಗಿ ಮೌನಿ ಹೆಚ್ಚಾಗಿ ಡ್ಯಾನ್ಸ್ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











