For Quick Alerts
  ALLOW NOTIFICATIONS  
  For Daily Alerts

  ಬಾಡಿಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ?-ನಾಗೇಂದ್ರ ಪತ್ನಿಯ ಅಳಲು

  By Staff
  |

  ಈಗ ನಾನು ಸಂಸಾರ ನಡೆಸಲು ಭಿಕ್ಷಾ ಪಾತ್ರೆ ಹಿಡಿಯಬೇಕಾದ ಪರಿಸ್ಥಿತಿ. 14 ವರ್ಷದ ನನ್ನ ಮಗ ಎಸ್‌ಎಸ್‌ಎಲ್‌ಸಿಯನ್ನು ಡಿಸ್‌ಕಂಟಿನ್ಯೂ ಮಾಡಿದ್ದಾನೆ. ನಮ್ಮೆಜಮಾನ್ರು ಆಸ್ಪತ್ರೆಯಲ್ಲಿ ಇದ್ದ 45 ದಿನಗಳಲ್ಲಿ ಅರ್ಧ ಸತ್ತಿದ್ದೆ. ಅವರು ಸತ್ತ ನಂತರ ಪೂರ್ತಿ ಸತ್ತಿದ್ದೇನೆ. ರಾಜನ್‌ ನಮ್ಮ ಮೇಲೆ ಮಾಡಿರುವ ದೌರ್ಜನ್ಯ ಅಷ್ಟಿಷ್ಟಲ್ಲ...

  ಇದು ಸಂಗೀತ ನಿರ್ದೇಶಕ ನಾಗೇಂದ್ರ ಅವರ ಎರಡನೇ ಹೆಂಡತಿ ವಿಜಯಲಕ್ಷ್ಮಿ ಅಳಲು. ರಾಜನ್‌- ನಾಗೇಂದ್ರ ಸಂಗೀತ ನಿರ್ದೇಶಕರ ಜೋಡಿ ಮನೆಮಾತು. ಆದರೆ, ಇವರ ನಡುವಿನ ಕಂದಕ ಚಂಬಲ್‌ ಕಣಿವೆಯಷ್ಟು. ಕಣ್ಮುಚ್ಚಿದ ನಾಗೇಂದ್ರ ಅವರ ಹೆಂಡತಿ ಮಗನ ಕಷ್ಟಗಳು ಹಾಸಿ ಹೊದ್ದುಕೊಳ್ಳುವಷ್ಟು.

  ಮಾರ್ಚ್‌ 12ರಂದು ನಡೆದ ನಾಗೇಂದ್ರ ನೆನಪಿನ ಸಂಗೀತ ಸಂಜೆಯಂದು ಅದುಮಿಟ್ಟ ಭಾವನೆಗಳನ್ನೆಲ್ಲಾ ವಿಜಯಲಕ್ಷ್ಮಿ ಒಮ್ಮೆಲೆ ಸ್ಫೋಟಿಸಿದ್ದು ಹೀಗೆ...

  ನನ್ನ ಅಪ್ಪ ಪೊಲೀಸು. ನಾಗೇಂದ್ರ ಅವರನ್ನು ಮೆಚ್ಚಿ, ಮದುವೆಯಾದಾಗ ನನಗೆ ಹದಿನಾರೇ ವರ್ಷ. ಪ್ರತಿಭಾವಂತ ಗಂಡ ಎಂಬ ಹೆಮ್ಮೆ ನನ್ನದು. ಆದರೆ ಯಾರೊಡನೆಯೂ ಒಡನಾಟ ಇರಲಿಲ್ಲ. ನಾನಾಯಿತು, ಮನೆಯಾಯಿತು. ಪಾರ್ಟಿ, ಕ್ಲಬ್ಬು ಇವೆಲ್ಲವುಗಳಿಂದ ದೂರ. ನನ್ನ ಗಂಡ ಕೂಡ ಅಷ್ಟೆ, ತಾವಾಯಿತು ತಮ್ಮ ಕೆಲಸವಾಯಿತು. ಆ ಕಾಲದಲ್ಲಿ ನಮ್ಮ ನೆರವಿಗೆ ಬಂದವರು ಹನುಮಂತಾಚಾರ್‌.

  ನಾವು ಬೆಂಗಳೂರಿಗೆ ಬಂದಾಗ, ತುತ್ತು ಅನ್ನ ಹಾಕೋಕೂ ರಾಜನ್‌ ಹಿಂದೆ ಮುಂದೆ ನೋಡಿದರು. ಆಗ ಮದ್ರಾಸಿನಲ್ಲಿದ್ದ ನಮ್ಮೆಜಮಾನ್ರು ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಟೈಪಿಸ್ಟ್‌ ಆಗಿದ್ದ ಸೋದರ ರಾಜನ್‌ರನ್ನು ಕರೆಸಿಕೊಂಡರು. ರಾಜನ್‌ಗೆ ಸಂಗೀತದ ಗಂಧ- ಗಾಳಿ ಗೊತ್ತಿರಲಿಲ್ಲ. ಆದರೆ ಆಮೇಲೆ ಮಾಡಿದ್ದು- ಅನ್ನ ಇಟ್ಟವರ ಮನೆಗೇ ಕನ್ನ ಹಾಕುವ ಕೆಲಸ. ನಾವು ಊಟ ಮಾಡುತ್ತಿರುವಾಗ ನಾವು ವಾಸವಿದ್ದ ಮನೆಯ ಛಾವಣಿಯಿಂದ ಸಿಮೆಂಟ್‌ ಉದುರುತ್ತಿತ್ತು. ನನ್ನ ಗಂಡ ಹಾಸಿಗೆ ಹಿಡಿದಾಗ, ರಾಜನ್‌ ಕ್ಯಾರೇ ಅನ್ನಲಿಲ್ಲ. ಸಾಲದ್ದಕ್ಕೆ ಬಂದ ನೆರವನ್ನೂ ಗುಳುಂ ಮಾಡಿದರು.

  ನಮ್ಮೆಜಮಾನ್ರು ಆಸ್ಪತ್ರೆಯಲ್ಲಿ ಒದ್ದಾಡೋವಾಗ ಗೀತಪ್ರಿಯ ಸಹಾಯ ಮಾಡಿದರು. ರಾಮಣ್ಣ ಎಂಬುವರ ಸಹಾಯದಿಂದ ಸರ್ಕಾರದ ನೆರವಿನ ಹಣ ಬಂತು. ಅದರ ಉಸ್ತುವಾರಿಯೂ ರಾಜನ್‌ ಕೈಗೇ ಹೋಯಿತು. ಯಜಮಾನ್ರು ಹೋಗಿಬಿಟ್ರು. ಅಂತ್ಯಕ್ರಿಯೆ ಮುಗಿದ ನಂತರ, ನಮ್ಮ ಬಳಿ ಬದುಕಲು ಚಿಕ್ಕಾಸೂ ಉಳಿಯಲಿಲ್ಲ. ರಾಜನ್‌ ಒಬ್ಬ ಅವಕಾಶವಾದಿ. ಎರಡು ಕನಸು ಚಿತ್ರದ ನೆನಪಿಗೆಂದು ನಮ್ಮೆಜಮಾನರಿಗೆ ಕೊಟ್ಟಿದ್ದ ಉಂಗುರ, ನನ್ನ ಒಡವೆ ಎಲ್ಲವನ್ನೂ ಹೊತ್ತುಕೊಂಡು ಹೋಗಿದ್ದಾರೆ....

  ಮಾತು ಇನ್ನೂ ಇತ್ತು. ಅಷ್ಟರಲ್ಲಿ ವಿಜಯಲಕ್ಷ್ಮಿ ಅವರ ಕಣ್ತುಂಬಿಬಂತು. ಸೆರಗಿನ ಚುಂಗು ಕಣ್ಣಿಗೆ ಹತ್ತಿರಾಯಿತು !

  ಈ ವಿಷಯವನ್ನು ನಮ್ಮತನಕ ಮುಟ್ಟಿಸಿದ್ದು ಚಿತ್ರಲೋಕ.ಕಾಂನ ಕೆ.ಎಂ.ವೀರೇಶ್‌. ನಾಗೇಂದ್ರ ಪತ್ನಿಗೆ ನೆರವು ನೀಡಬಯಸುವವರು ವೀರೇಶ್‌ ಅವರನ್ನು ಸಂಪರ್ಕಿಸಿ.
  ಇನ್ನಷ್ಟು ಚಿತ್ರಗಳು- ಚಿತ್ರಲೋಕ.ಕಾಂನಲ್ಲಿ.

  Do you wish to help Nagendras family? Any clarifications?

  ಯಾವ ಕಾಂಬಿನೇಷನ್‌ ಸರಿ..
  ನಾಗೇಂದ್ರ ಅವರಿಗೆ ಇಂಥಾ ಪರಿಸ್ಥಿತಿ ಯಾಕೆ ಬಂತು?
  ನಾಗೇಂದ್ರ ಯಾಕೆ ಸತ್ತರು, ಹೇಗೆ ಸತ್ತರು?
  ರಾಜನ್‌ - ನಾಗೇಂದ್ರ ಸಂಗೀತ ಜೋಡಿಯ ನಾಗೇಂದ್ರ ನಿಧನ

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X