»   » ನಗ್ಮಾ ಕೋರ್ಟಿಗೆ ಹೋಗ್ತಾರಂತೆ

ನಗ್ಮಾ ಕೋರ್ಟಿಗೆ ಹೋಗ್ತಾರಂತೆ

Subscribe to Filmibeat Kannada

ನಗ್ಮಾಗೆ ನಿದ್ದೆಯೇ ಹತ್ತುತ್ತಿಲ್ಲವಂತೆ. ಆಕೆಯ ನಿದ್ದೆ ಕೆಡಿಸುತ್ತಿರುವುದು ಬಂಗಾಳದ ಹುಲಿ ಗಂಗೂಲಿ. ತಡೀರಿ, ಇವರಿಬ್ಬರ ಅಫೇರಿನ ಪುಕಾರು ದಿಟವೆಂದು ನಗ್ಮಾ ಒಪ್ಪಿಕೊಂಡರು ಅಂದ್ಕೋಬೇಡಿ. ಈಕೆ ಕಣ್ಣಿಗೆ ಬೀಳುತ್ತಿರೋದೆಲ್ಲಾ ನಗ್ಮಾ- ಗಂಗೂಲಿ ನ್ಯೂಸ್‌ಗಳೇ. ಕಿವಿಗೆ ಕೇಳಬಾರದ್ದೆಲ್ಲಾ ಕೇಳುತ್ತಿದೆಯಂತೆ. ಮೊನ್ನೆ ಇಂಥಾದ್ದೇ ತಮ್ಮ-ಗಂಗೂಲಿಯ ಕ್ಯಾರಿಕೇಚರ್‌ ಇರುವ ಹೋರ್ಡಿಂಗನ್ನು ಪ್ರದರ್ಶನಕ್ಕಿಟ್ಟಿದ್ದನ್ನ ಚೆನ್ನೈನಲ್ಲಿ ನೋಡಿರುವ ನಗ್ಮಾ, ಅದರ ಕರ್ತೃವಿನ ವಿರುದ್ಧ ಕೋರ್ಟಿಗೆ ಹೋಗಲು ನಿರ್ಧರಿಸಿದ್ದಾರೆ.

ಚೆನ್ನೈನಲ್ಲಿ ‘ಮುಷ್ತಾಕ್‌’ (Mushtalk) ಎಂಬ ಹೋರ್ಡಿಂಗ್‌ ಕಲಾ ಗ್ಯಾಲರಿಯಾಂದರ ಮುಂದೆ ಪ್ರದರ್ಶನಕ್ಕಿತ್ತು. ಪ್ರತಿ ವಾರ ಸುದ್ದಿಯ ಜಾಡಲ್ಲಿ ಅಣಕು, ವ್ಯಂಗ್ಯ ಬಿಂಬಿಸುವ ಹೋರ್ಡಿಂಗನ್ನು ಇಲ್ಲಿನ ಅಂಗಡಿ ಮಾಲೀಕನೊಬ್ಬ ಪ್ರದರ್ಶನಕ್ಕೆ ಇಡುತ್ತಾರೆ. ಹೋರ್ಡಿಂಗಿನ ಈ ವಾರದ ಬಿಸಿಬಿಸಿ ಚಿತ್ರ ಗಂಗೂಲಿ ಹಾಗೂ ನಗ್ಮಾ ಚಿತ್ರ ಒಳಗೊಂಡಿತ್ತು. ನಗ್ಮಾಗೆ ಕೋಪ ಬಂದದ್ದು ಚಿತ್ರ ನೋಡಿ ಅಲ್ಲ, ಅದರ ಮೇಲೆ ಬರೆದಿದ್ದ ಬರೆಹ ನೋಡಿ. ‘ಸ್ಲೀಪ್‌ ಈಸ್‌ ಗಾನ್‌ ಯಮ್ಮಾ, ವೇರ್‌ ಈಸ್‌ ನಗ್ಮಾ ?’ ಅಂತ ತಮಿಳು ಭಾಷೆಯಲ್ಲಿ ಬರೆಯಲಾಗಿತ್ತು. ‘ತೂಕಂ ಪೋಚುೖಡಿ ಯಮ್ಮಾ ...’ ಅನ್ನುವ ಫೇಮಸ್‌ ತಮಿಳು ಚಿತ್ರಗೀತೆಯಿಂದ ಸ್ಫೂರ್ತಿ ಪಡೆದ ಸಾಲು ಇದು. ಆ ಹಾಡಲ್ಲಿ ಸೆಕ್ಸ್‌ ಬಾಂಬ್‌ ಸಿಲ್ಕ್‌ ಸ್ಮಿತಾ ಕುಣಿದಿದ್ದರು.

ಹೀಗಿರುವಾಗ ನಗ್ಮಾ ಸುಮ್ಮನಿರುವರೆ ? ಲಾಯರನ್ನು ಕರೆಸಿ, ಅಂಗಡಿಯವನಿಗೆ ತಕ್ಕ ಶಾಸ್ತಿ ಮಾಡಿಸುವುದಾಗಿ ಹೇಳಿದ್ದಾರೆ. ಅಂಗಡಿಯವ ಎಲ್ಲಿ ನೋಟೀಸು ಬಂದು, ಕೋರ್ಟಿನ ಕಟಕಟೆ ಹತ್ತಬೇಕಾಗುತ್ತದೋ ಅಂತ ಈಗಲೂ ಆತಂಕ ಹೊತ್ತು ಮುದುರಿ ಹೋಗಿದ್ದಾನೆ.

ಈ ನಡುವೆ ಮಾಜಿ ಕ್ರಿಕೆಟಿಗ ಕ್ರಿಸ್‌ ಶ್ರೀಕಾಂತ್‌ ಗುಜರಾತ್‌ ಸಂತ್ರಸ್ತರಿಗೆ ಹಣ ಎತ್ತಲು ಒಂದು ಭೋಜನ ಕೂಟ ಏರ್ಪಾಟು ಮಾಡಿದ್ದರಂತೆ. ಜ್ಯೋತಿಕಾ, ಪ್ರಶಾಂತ್‌, ಗೌತಮಿ ಮೊದಲಾದ ಸಿನಿ ತಾರೆಗಳಿಂದ ತುಂಬಿದ್ದ ಕೂಟದಲ್ಲಿ ಕ್ರಿಕೆಟ್‌ ತಾರೆಯಾಬ್ಬ ಜ್ಯೋತಿಕಾ ಬಳಿ ಹೋಗಿ- ‘ನಿಮ್ಮ ಅಕ್ಕ ನಗ್ಮಾ ಎಲ್ಲಿ ?’ ಅಂದಾಗ, ಮುದುರಿ ಹೋದ ಜ್ಯೋತಿಕಾ ಏನೋ ಆದವರಂತೆ ಸಣ್ಣಗೆ ನಕ್ಕು, ‘ಮುಂಬೈಯಲ್ಲಿದ್ದಾಳೆ’ ಅಂದರಂತೆ.

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada