ಮೌಳಿ, ನಾನಿ, ರಾಣಾ; ಅಬ್ಬಬ್ಬಾ 'ಕಲ್ಕಿ' ಜೊತೆ ಯಾರೆಲ್ಲಾ ಅತಿಥಿ ಪಾತ್ರಗಳಲ್ಲಿ ಮಿಂಚುತ್ತಾರೆ?
ಪ್ರಭಾಸ್ 'ಕಲ್ಕಿ 2898 AD' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಮಧ್ಯರಾತ್ರಿಯಿಂದಲೇ ಹಲವೆಡೆ ಸಿನಿಮಾ ಪ್ರದರ್ಶನ ಆರಂಭವಾಗಲಿದೆ. ಕರ್ನಾಟಕದಲ್ಲಿ ನಾಳೆ(ಜೂನ್ 27) ಬೆಳಗ್ಗೆ 5 ಗಂಟೆಯಿಂದ ತೆರೆಮೇಲೆ 'ಕಲ್ಕಿ' ಪ್ರಭಾಸ್ ದರ್ಶನವಾಗಲಿದೆ. ನಾಗ್ ಅಶ್ವಿನ್ ನಿರ್ದೇಶನದ ಸೈನ್ಸ್ ಫಿಕ್ಷನ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.
ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ 'ಕಲ್ಕಿ 2898 AD' ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಪ್ರಭಾಸ್ ಜೊತೆಗೆ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ದಿಶಾ ಪಟಾನಿ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಅಂದಾಜು 500 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ.

ನಿರ್ದೇಶಕರು 'ಕಲ್ಕಿ 2898 AD' ಕಥೆಯ ಬಗ್ಗೆ ಈಗಾಗಲೇ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆದರೂ ಕೂಡ ಚಿತ್ರದಲ್ಲಿ ಸಾಕಷ್ಟು ಸರ್‌ಪ್ರೈಸ್ ಎಲಿಮೆಂಟ್ಸ್ ಇರಲಿದೆ. ಅದೆಲ್ಲಾ ಬೆಳ್ಳಿತೆರೆ ಮೇಲೆ ಬಯಲಾಗಲಿದೆ. ಇನ್ನು ಚಿತ್ರದಲ್ಲಿ ಸ್ಟಾರ್ ನಟ-ನಟಿಯರು, ನಿರ್ದೇಶಕರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ ಎನ್ನಲಾಗ್ತಿದೆ. ಕುರುಕ್ಷೇತ್ರ ಯುದ್ಧದ ಸನ್ನಿವೇಶಗಳು ಚಿತ್ರದಲ್ಲಿದೆ. ಸ್ಟಾರ್ ಕಲಾವಿದರು ಮಹಾಭಾರತದ ವೀರರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.
ನಿರ್ದೇಶಕರಾದ ಎಸ್. ಎಸ್ ರಾಜಮೌಳಿ ಹಾಗೂ ರಾಮ್‌ಗೋಪಾಲ್ ವರ್ಮಾ ಸಹ ಸಣ್ಣ ಸಣ್ಣ ಝಲಕ್‌ನಲ್ಲಿ ಬಂದು ಹೋಗ್ತಾರೆ ಎನ್ನಲಾಗ್ತಿದೆ. ಚಿತ್ರದಲ್ಲಿ ಅರ್ಜುನನ ಪಾತ್ರದಲ್ಲಿ ವಿಜಯ್ ದೇವರಕೊಂಡ ನಟಿಸಿದ್ದಾರೆ ಎನ್ನಲಾಗ್ತಿದೆ. ಈ ಹಿಂದೆ ನಾಗ್ ಅಶ್ವಿನ್ ನಿರ್ದೇಶನದ 2 ಸಿನಿಮಾಗಳಲ್ಲಿ ರೌಡಿ ಬಾಯ್ ನಟಿಸಿದ್ದರು. ಮೃಣಾಲ್ ಠಾಕೂರ್, ದುಲ್ಕರ್ ಸಲ್ಮಾನ್ ಸಹ ಸಣ್ಣ ಸಣ್ಣ ಪಾತ್ರಗಳಲ್ಲಿ ಮಿಂಚಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ.
ಚಿತ್ರದಲ್ಲಿ ಅಶ್ವತ್ಥಾಮನ ಪಾತ್ರದಲ್ಲಿ ಅಮಿತಾಬ್ ಬಚ್ಚನ್ ನಟಿಸಿದ್ದಾರೆ. ಇನ್ನು ಅಭಿಮನ್ಯು ಆಗಿ ನಾನಿ, ದುರ್ಯೋಧನನಾಗಿ ರಾಣಾ ದಗ್ಗುಬಾಟಿ, ಮತ್ತೊಂದು ಪಾತ್ರದಲ್ಲಿ ಜ್ಯೂ. ಎನ್‌ಟಿಆರ್ ಕೂಡ ಮಿಂಚಿದ್ದಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಇದು ಎಷ್ಟು ನಿಜ ಎನ್ನುವುದು ಸಿನಿಮಾ ತೆರೆಗೆ ಬಂದಮೇಲೆ ಗೊತ್ತಾಗಲಿದೆ. ಇನ್ನು ಚಿತ್ರದಲ್ಲಿ 'ಕಲ್ಕಿ' ಯಾರು ಎನ್ನುವುದು ಕೂಡ ರಿವೀಲ್ ಆಗಿಲ್ಲ. ಭೈರವ ಎನ್ನುವ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದಾರೆ. ಇನ್ನು ಕೃಷ್ಣನಾಗಿ ಯಾರು ಕಾಣಿಸಿಕೊಳ್ಳುತ್ತಾರೆ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.

'ಕಲ್ಕಿ 2898 AD' ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಅಭಿಮಾನಿಗಳು ಟಿಕೆಟ್ ಖರೀದಿಸಲು ಮುಗಿಬಿದ್ದಿದ್ದಾರೆ. ಮೊದಲ ದಿನವೇ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ. ಪ್ರಭಾಸ್ ನಟನೆಯ ಇತ್ತೀಚಿನ ಸಿನಿಮಾಗಳೆಲ್ಲಾ ಟಾಕ್ ಏನೇ ಇದ್ದರೂ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡುತ್ತಿವೆ. 'ಆದಿಪುರುಷ್' ಫಸ್ಟ್ ವೀಕೆಂಟ್ ಕಲೆಕ್ಷನ್ ಕೂಡ ಭರ್ಜರಿಯಾಗಿತ್ತು.
ಕಳೆದೆರಡು ತಿಂಗಳಿಂದ ಐಪಿಎಲ್, ಎಲೆಕ್ಷನ್ ಕಾರಣಕ್ಕೆ ದೊಡ್ಡ ಸಿನಿಮಾಗಳು ತೆರೆಗೆ ಬಂದಿರಲಿಲ್ಲ. ಬಹಳ ದಿನಗಳ ಬಳಿಕ ಬರುತ್ತಿರುವ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ ಇದು. ಕನ್ನಡಕ್ಕೂ ಡಬ್ ಆಗಿ ಸಿನಿಮಾ ರಿಲೀಸ್ ಆಗುತ್ತಿದೆ. ದೇಶ ವಿದೇಶಗಳಲ್ಲಿ ದೊಡ್ಡಮಟ್ಟಕ್ಕೆ ಚಿತ್ರವನ್ನು ಪ್ರೇಕ್ಷಕರ ಮುಂದೆ ಕೊಂಡೊಯ್ಯುವ ಕೆಲಸ ನಡೆಯುತ್ತಿದೆ. ಶಂಬಲ, ಕಾಶಿ ಹಾಗೂ ಕಾಂಪ್ಲೆಕ್ಸ್ ಎನ್ನುವ 3 ಲೋಕಗಳಲ್ಲಿ ಚಿತ್ರದ ಕಥೆ ಸಾಗಲಿದೆ. ತ್ರಿಡಿ, ಐಮ್ಯಾಕ್ಸ್ ವರ್ಷನ್‌ಗಳಲ್ಲಿ ಕೂಡ ಸಿನಿಮಾ ಬಿಡುಗಡೆ ಆಗುತ್ತಿದೆ.


Click it and Unblock the Notifications











