»   » ನೇಪಾಳ : ಹೃತಿಕ್‌ ವಿರೋಧೀ ಹಿಂಸಾತ್ಮಕಮೆರವಣಿಗೆಯಲ್ಲಿ 2 ಸಾವು

ನೇಪಾಳ : ಹೃತಿಕ್‌ ವಿರೋಧೀ ಹಿಂಸಾತ್ಮಕಮೆರವಣಿಗೆಯಲ್ಲಿ 2 ಸಾವು

Subscribe to Filmibeat Kannada

ಕಠ್ಮಂಡು : ಬಾಲಿವುಡ್‌ನ ಉದಯೋನ್ಮುಖ ತಾರೆ ಹೃತಿಕ್‌ ರೋಷನ್‌ ಖಾಸಗಿ ಚಾನೆಲೊಂದರಲ್ಲಿ ಆಡಿದ್ದಾರೆ ಎನ್ನಲಾದ ನೇಪಾಳ ವಿರೋಧಿ ಮಾತುಗಳಿಂದ ಕ್ರುದ್ಧರಾದ ಸ್ಥಳೀಯ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದ್ದು, ಅದನ್ನು ಹತ್ತಿಕ್ಕಲು ಗುಂಡು ದಾಳಿ ನಡೆಸಿದ ಪೊಲೀಸರ ಆಕ್ರಮಣಕ್ಕೆ ಇಬ್ಬರು ಬಲಿಯಾಗಿದ್ದಾರೆ.

ಹೃತಿಕ್‌ ಅಭಿನಯದ ಚಲನಚಿತ್ರವೊಂದನ್ನು ಪ್ರದರ್ಶಿಸುತ್ತಿದ್ದ ಸ್ಥಳೀಯ ಚಿತ್ರಮಂದಿರವೊಂದರ ಮೇಲೆ ವಿದ್ಯಾರ್ಥಿಗಳು ದಾಳಿ ಮಾಡಿದಾಗ, ಈ ಘಟನೆ ಸಂಭವಿಸಿದೆ ಎಂದು ರಾಜ್ಯ ಗೃಹ ಸಚಿವಾಲಯ ಮತ್ತು ಸ್ಥಳೀಯ ರೇಡಿಯೋ ವರದಿ ಮಾಡಿವೆ. ಈ ನಡುವೆ ನೇಪಾಳದಲ್ಲಿ ಹೃತಿಕ್‌ ಚಿತ್ರಗಳ ಪ್ರದರ್ಶನಕ್ಕೆ ಅಲ್ಲಿನ ಸರ್ಕಾರ ನಿಷೇಧ ಹೇರಿದೆ.

ಮಂಗಳವಾರ ಮುಂಜಾನೆ ಚಿತ್ರಮಂದಿರದ ಮುಂದೆ ಜಮಾಯಿಸಿದ ವಿದ್ಯಾರ್ಥಿಗಳು ಹೃತಿಕ್‌ ವಿರುದ್ಧ ಘೋಷಣೆ ಕೂಗುತ್ತಾ , ಚಿತ್ರಮಂದಿರಕ್ಕೆ ಬೆಂಕಿ ಹಚ್ಚಿದರು. ಉದ್ರಿಕ್ತ ಗುಂಪಿನ ಕಾವನ್ನು ತಣ್ಣಗಾಗಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು. ಹೀಗಾದಾಗ ಪೊಲೀಸರು ಸೇರಿದಂತೆ 30 ಮಂದಿ ಗಾಯಗೊಂಡರು.

ಇದು ಇಷ್ಟಕ್ಕೇ ನಿಲ್ಲದೆ ಉದ್ಯಮಿಗಳ, ಅಂಗಡಿ- ಮುಂಗಟ್ಟುಗಳ ಮೇಲೂ ವಿದ್ಯಾರ್ಥಿಗಳ ಇನ್ನೊಂದು ಗುಂಪು ದಾಳಿ ನಡೆಸಿತು. ನಂತರ ಪೊಲೀಸರ ತೀವ್ರ ತೆರನಾದ ಚಟುವಟಿಕೆಯಿಂದ ಗಲಭೆ ಹತ್ತಿಕ್ಕಲು ಸಾಧ್ಯವಾಯಿತು.

ಡಿಸೆಂಬರ್‌ ಮಾಹೆಯ ಮೊದಲ ವಾರ ಸ್ಟಾರ್‌ ಟಿವಿಯಲ್ಲಿ ಪ್ರಸಾರವಾದ ಸಂದರ್ಶನವೊಂದರಲ್ಲಿ ಹೃತಿಕ್‌, ತಾನು ‘ನೇಪಾಳ ಹಾಗೂ ನೇಪಾಳೀಯರನ್ನು ವಿರೋಧಿಸುತ್ತೇನೆ’ ಎಂದು ಹೇಳಿದ್ದರು ಎಂದು ವಿದ್ಯಾರ್ಥಿಗಳು ಸುದ್ದಿ ಸಂಸ್ಥೆಗಳಿಗೆ ತಿಸಿದ್ದಾರೆ. ಹಾಗಂದಿಲ್ಲ ಅನ್ನುವುದು ಹೃತಿಕ್‌ ಹಾಗೂ ಸ್ಟಾರ್‌ ಟಿವಿ ಪ್ರತಿಕ್ರಿಯೆ.

‘ನಾನು ಹಾಗೆ ಹೇಳಿಲ್ಲ ’ : ನಾನು ಯಾವುದೇ ಟಿವಿ ಚಾನೆಲ್‌ಗಳಿಗೆ ಸಂದರ್ಶನ ನೀಡಿಲ್ಲ. ನನ್ನ ಕೆರಿಯರ್‌ಗೆ ಮಸಿ ಬಳಿಯುವ ಕೆಲವು ದುಷ್ಕರ್ಮಿಗಳ ಯತ್ನವಿದು. ನಾನು ಭಾರತವನ್ನು ಪ್ರೀತಿಸುವಂತೆಯೇ ನೇಪಾಳವನ್ನೂ ಪ್ರೀತಿಸುತ್ತೇನೆ. ನೇಪಾಳೀಯರ ಬಗೆಗೆ ನನಗೆ ಅಪಾರ ಗೌರವವಿದೆ. ದಯವಿಟ್ಟು ಇಂತಹ ವರದಿಗಳಿಗೆ ಕಿವಿಕೊಡಬೇಡಿ ಎಂದು ಹೃತಿಕ್‌ ನೇಪಾಳೀಯರಲ್ಲಿ ಮನವಿ ಮಾಡಿದ್ದಾರೆ.

(ಸುದ್ದಿ ಸಂಸ್ಥೆಗಳ ವರದಿ)

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada