»   » ಹೃತಿಕ್‌ ಹೆಸರಿನ ಒರಿಸ್ಸಾ ಗಲಾಟೆಯ ಹಿಂದೆ ದಾವೂದ್‌ ಕೈವಾಡ?

ಹೃತಿಕ್‌ ಹೆಸರಿನ ಒರಿಸ್ಸಾ ಗಲಾಟೆಯ ಹಿಂದೆ ದಾವೂದ್‌ ಕೈವಾಡ?

Subscribe to Filmibeat Kannada

ಕೋಲ್‌ಕಟ : ಸುಮಾರು ಎರಡೂವರೆ ಲಕ್ಷ ಸದಸ್ಯರಿರುವ ಅಖಿಲ ಭಾರತ ನೇಪಾಳೀ ಭಾಷಾ ಸಮಿತಿ, ಹಿಮಾಲಯ ಸಾಮ್ರಾಜ್ಯ ನೇಪಾಳವನ್ನು ಅವಮಾನಿಸಿರುವ ಬಾಲಿವುಡ್‌ ಹಾರ್ಟ್‌ಥ್ರೋಬ್‌ ಹೃತಿಕ್‌ ರೋಷನ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಶುಕ್ರವಾರ ನಿರ್ಧರಿಸಿದೆ.

ಪ್ರಸ್ತುತ ಸ್ಥಳೀಯ ಹೈಕೋರ್ಟಿಗೆ ರಜೆ ಇದ್ದು, ಬರುವ ಮಂಗಳವಾರ, ಜನವರಿ 2ರಂದು ಅದು ಬಾಗಿಲು ತೆರೆಯುವುದನ್ನೇ ಸಮಿತಿ ಕಾಯುತ್ತಿದೆ. ಹೃತಿಕ್‌, ಜನಪ್ರಿಯತೆಯ ಉತ್ತುಂಗಕ್ಕೇರಿದ ನಟನೇ ಇರಬಹುದು. ಹಾಗಂತ ನಮ್ಮ ಭಾವನೆಗಳನ್ನು ಕೆಣಕುವುದು ಎಳ್ಳಷ್ಟೂ ಸರಿಯಲ್ಲ. ಇನ್ನು ಮುಂದೆ ಯಾವ ನೇಪಾಳಿಯೂ ಆತನ ಚಿತ್ರ ನೋಡುವುದಿಲ್ಲ ಎಂದು ಸಮಿತಿಯ ಮುಖ್ಯಸ್ಥ ಭಂಡಾರಿ ಹೇಳಿದ್ದಾರೆ.

ದಾವೂದ್‌ ಕೈವಾಡ ಶಂಕೆ : ನೇಪಾಳದಲ್ಲಿ ಎಡಪಂಥೀಯ ವಿದ್ಯಾರ್ಥಿಗಳಲ್ಲಿ ಕ್ರುದ್ಧತೆ ಹರಡಿರುವುದು ಬಾಲಿವುಡ್‌ ಬಾದಷಾಹ ದಾವೂದ್‌ ಇಬ್ರಾಹಿಂ, ಹೃತಿಕ್‌ಗೆ ಪ್ರತಿಸ್ಪರ್ಧಿಯಾದ ಬಾಲಿವುಡ್‌ನ ಒಬ್ಬ ನಟ ಹಾಗೂ ಕೆಲ ರಾಜಕಾರಣಿಗಳು ಎಂಬ ಪುಕಾರುಗಳು ಕಠ್ಮಂಡು ಹಾಗೂ ಸುತ್ತಮುತ್ತ ತೇಲಾಡುತ್ತಿವೆ. ಐಎಸ್‌ಐ ಉಗ್ರಗಾಮಿಗಳ ಪಾತ್ರವೂ ಈ ಘಟನೆಯಲ್ಲಿದೆ ಎನ್ನಲಾಗುತ್ತಿದೆ. ಆದರೆ ಈ ಬಗೆಗೆ ಪೊಲೀಸರಾಗಲೀ, ಮುಖ್ಯಮಂತ್ರಿ ಕೊಯಿರಾಲ ಆಗಲೀ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ.

ಹೃತಿಕ್‌ ನೆರವಿಗೆ ಮೊನಿಷಾ ಕೊಯಿರಾಲ : ಹನಿಮೂನ್‌ ಮಾಡಲೆಂದು ಆಸ್ಟ್ರೇಲಿಯಾಗೆ ಹೋಗಿರುವ ಹೃತಿಕ್‌ ಸ್ಥಿತಿ ಅಕ್ಷರಶಃ ಕದ್ದಿಂಗಳು. ಸದ್ಯಕ್ಕೆ ಈತನ ಹಾಗೂ ತನ್ನ ತಂದೆ ಕೊಯಿರಾಲ ನೆರವಿಗೆ ಬಂದಿರುವುದು ಬಾಲಿವುಡ್‌ ನಟಿ ಮೊನಿಷಾ ಕೊಯಿರಾಲ. ಆಸ್ಟ್ರೇಲಿಯಾದಲ್ಲಿರುವ ಹೃತಿಕ್‌ಗೆ ಸಂದೇಶ ಕಳುಹಿಸಿ, ಇಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ವಿವರಿಸಿ, ಆತನಿಂದ 2 ಪುಟಗಳ ಸ್ಪಷ್ಟೀಕರಣ ಪಡೆದು, ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವುದೇ ಮೊನಿಷಾ.

ಸ್ಟಾರ್‌ ಟಿವಿ ಸ್ಪಷ್ಟನೆ : ತನ್ನ ‘ರೆಂಡೆವೂ ವಿತ್‌ ಸಿಮಿ ಗರ್‌ವಾಲ್‌’ ಕಾರ್ಯಕ್ರಮದಲ್ಲಿ ಹೃತಿಕ್‌ ಆಗಲೀ, ಸಿಮಿ ಅವರಾಗಲೀ ನೇಪಾಳ ವಿರೋಧಿ ಹೇಳಿಕೆಗಳನ್ನು ಕೊಟ್ಟಿಲ್ಲ ಎಂದು ಸ್ಟಾರ್‌ ಟಿವಿ ಹೇಳಿಕೆ ಕೊಟ್ಟಿದೆ. ಹೃತಿಕ್‌ ರೋಷನ್‌ ಕೂಡ ಇದನ್ನು ಸಮರ್ಥಿಸಿಕೊಂಡಿದ್ದಾರೆ. ಪ್ರಸ್ತುತ ಕಠ್ಮಂಡುವಿನಲ್ಲಿ ಪರಿಸ್ಥಿತಿ ತಹಬಂದಿಗೆ ಬಂದಿದ್ದು, ಹೃತಿಕ್‌ ಚಿತ್ರವೂ ಸೇರಿದಂತೆ ಎಲ್ಲಾ ಚಿತ್ರಗಳು ತೆರೆ ಮೇಲಿವೆ. ಆದರೆ ಈ ಪ್ರಕರಣದ ಮಗ್ಗಲುಗಳ ಹುಡುಕಾಟದ ನಡುವೆ ಕೇಳಿ ಬರುತ್ತಿರುವ ಪುಕಾರುಗಳು ಎಲ್ಲರ ಗಮನ ಸೆಳೆಯುತ್ತಿವೆ.

(ಸುದ್ದಿ ಸಂಸ್ಥೆಗಳು)

ವಾರ್ತಾ ಸಂಚಯ
ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada