ತಮನ್ನಾ, ಸ್ಯಾಮ್, ಜಾಕ್, ಊರ್ವಶಿ ಅಲ್ಲ.. ಐಟಂ ಸಾಂಗ್‌ಗೆ 'ಸಲಾರ್' ಪ್ರಭಾಸ್ ಪಕ್ಕ ಕುಣಿತ್ತಿದ್ದಾಳೆ ಈ ಸುಂದ್ರಿ
ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಬಿಡುಗಡೆ ದಿನಾಂಕ ಹತ್ತಿರವಾಗ್ತಿದೆ. ಕೊನೆ ಕ್ಷಣದಲ್ಲಿ ಚಿತ್ರದ ಐಟಂ ಸಾಂಗ್ ಚಿತ್ರೀಕರಣ ನಡೀತಿದೆ. ಮೊಣಕಾಲು ಶಸ್ತ್ರ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಿದ್ದ ಪ್ರಭಾಸ್ ತಾಯ್ನಾಡಿಗೆ ವಾಪಸ್ ಆಗಿದ್ದಾರೆ. ಬಂದ ಕೂಡಲೇ ಸಿನಿಮಾ ಸಾಂಗ್ ಶೂಟಿಂಗ್‌ನಲ್ಲಿ ಭಾಗಿ ಆಗಿದ್ದಾರೆ ಎನ್ನುವ ಚರ್ಚೆ ನಡೀತಿದೆ.
ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸದ್ದಿಲ್ಲದೇ 'ಸಲಾರ್' ಐಟಂ ಸಾಂಗ್ ಚಿತ್ರೀಕರಣ ನಡೀತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡ್ತಿದೆ. ಸಿನಿಮಾ ಬಿಡುಗಡೆ ಕೆಲವೇ ದಿನಗಳು ಬಾಕಿಯಿದೆ. ಈ ಹಿಂದೆ 'KGF'-1 ಚಿತ್ರದ ಐಟಂ ಸಾಂಗ್ ಶೂಟಿಂಗ್ ಕೊನೆಯಲ್ಲಿ ಮಾಡಲಾಗಿತ್ತು. ಇದೀಗ 'ಸಲಾರ್' ವಿಚಾರದಲ್ಲೂ ಅದೇ ನಡೀತಿದೆ.

ಕಮರ್ಷಿಯಲ್ ಸಿನಿಮಾಗಳಿಗೆ ಸ್ಪೆಷಲ್ ಸಾಂಗ್ ಇರಲೇಬೇಕು ಎನ್ನುವ ಅಲಿಖಿತ ನಿಯಮವೊಂದಿದೆ. ಅದರಲ್ಲೂ ತೆಲುಗು ಸಿನಿಮಾಗಳಲ್ಲಿ ಐಟಂ ಸಾಂಗ್‌ಗೆ ಸ್ಪೆಷಲ್ ಕ್ರೇಜ್ ಇದೆ. ಬಹಳ ದಿನಗಳಿಂದ ಪ್ರಭಾಸ್ ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು. 'ಸಲಾರ್' ಶೂಟಿಂಗ್ ವೇಳೆ ನೋವು ಹೆಚ್ಚಾಗಿತ್ತು. ಹಾಗಾಗಿ ಸಾಂಗ್ ಶೂಟಿಂಗ್ ತಡವಾಗಿತ್ತು. ನೋವಿನಿಂದ ಐಟಂ ಸಾಂಗ್ ಚಿತ್ರೀಕರಣದಲ್ಲಿ ಭಾಗಿ ಆಗಲು ಸಾಧ್ಯವಾಗಲಿಲ್ಲ.
ಪ್ರಭಾಸ್ ವಿದೇಶಕ್ಕೆ ಹೋಗಿ ಶಸ್ತ್ರ ಚಿಕಿತ್ಸೆ ಮಾಡಿಕೊಂಡು ಬಂದು ಸಾಂಗ್ ಚಿತ್ರೀಕರಣದಲ್ಲಿ ಭಾಗಿ ಆಗಲು ನಿರ್ಧರಿಸಿದರು. ಅದೇ ಕಾರಣಕ್ಕೆ ಸಿನಿಮಾ ರಿಲೀಸ್ ಡೇಟ್ 3 ತಿಂಗಳು ಮುಂದೂಡಲಾಯಿತು ಎನ್ನುವ ಗುಸುಗುಸು ಕೇಳಿಬಂದಿತ್ತು. ಇದೀಗ ಪ್ರಭಾಸ್ ಇಟಲಿಯಿಂದ ಹೈದರಾಬಾದ್‌ಗೆ ಬಂದಿದ್ದಾರೆ. ಪ್ರಭಾಸ್ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದ ಫೋಟೊಗಳು ವೈರಲ್ ಆಗಿತ್ತು.
'ಸಲಾರ್' ಚಿತ್ರದ ಐಟಂ ಸಾಂಗ್‌ನಲ್ಲಿ ಸಿಮ್ರನ್ ಕೌರ್ ರಾಂದವ ಹೆಜ್ಜೆ ಹಾಕುತ್ತಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಮುಂಬೈ ಬೆಡಗಿ ಸಿಮ್ರನ್ ತೆಲುಗು, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೂಪರ್ ಹಿಟ್ 'ಗದರ್-2' ಚಿತ್ರದಲ್ಲೂ ಆಕೆ ಮಿಂಚಿದ್ದರು. ಇದೀಗ ಪ್ರಭಾಸ್ ಪಕ್ಕ ಬಿಂದಾಸ್ ಆಗಿ ಹೆಜ್ಜೆ ಹಾಕುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.

'KGF' ಚಿತ್ರದಲ್ಲಿ ಸೂಪರ್ ಹಿಟ್ 'ಜೋಕೆ ನಾನು ಬಳ್ಳಿಯ ಮಿಂಚು' ಹಾಡನ್ನು ರೀಮಿಕ್ಸ್ ಮಾಡಿ ಬಳಸಿಕೊಳ್ಳಲಾಗಿತ್ತು. ತಮನ್ನಾ ಬಿಂದಾಸ್ ಆಗಿ ಕುಣಿದಿದ್ದರು. ಹಿಂದಿ ವರ್ಷನ್‌ನಲ್ಲಿ ಮೌಲಿ ರಾಯ್ ಕಾಣಿಸಿಕೊಂಡಿದ್ದರು. ಇನ್ನು ಐಟಂ ಸಾಂಗ್ ಎಂದಾಕ್ಷಣ ತಮನ್ನಾ, ಊರ್ವಶಿ ರೌಟೇಲಾ, ಸಮಂತಾ, ಜಾಕ್ವೆಲಿನ್ ಫರ್ನಾಂಡಿಸ್, ನೋರಾ ಫತೇಹಿ ಹೆಸರುಗಳು ಕೇಳಿ ಬರುತ್ತದೆ. ಅವರನ್ನೆಲ್ಲಾ ಬಿಟ್ಟು ಸಿಮ್ರನ್ ಕೌರ್ ಆಯ್ಕೆ ಆಗಿರುವುದು ಅಚ್ಚರಿ ಮೂಡಿಸಿದೆ.
'ಸಲಾರ್' ಚಿತ್ರಕ್ಕೆ ರವಿ ಬಸ್ರೂರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಈ ಬಾರಿ ತೆಲುಗಿನ ಯಾವುದಾದರೂ ಸೂಪರ್ ಹಿಟ್ ಗೀತೆಯನ್ನು ರೀಮಿಕ್ಸ್ ಮಾಡಿದ್ದಾರಾ? ಅಥವಾ ಹೊಸ ಸಾಂಗ್ ಕಂಪೋಸ್ ಮಾಡಿದ್ದಾರಾ ಕಾದು ನೋಡಬೇಕಿದೆ. ಭುವನ್ ಗೌಡ ಛಾಯಾಗ್ರಹಣವಿದೆ. ಇನ್ನು ಡಿಸೆಂಬರ್ 1ಕ್ಕೆ 'ಸಲಾರ್' ಜಬರ್ದಸ್ತ್ ಟ್ರೈಲರ್ ರಿಲೀಸ್ ಆಗುತ್ತದೆ ಎನ್ನಲಾಗ್ತಿದೆ. ಡಿಸೆಂಬರ್ 22ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಎರಡು ಭಾಗಗಳಾಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.
ಇನ್ನು 'ಸಲಾರ್' ಮಲಯಾಳಂ ವಿತರಣೆ ಹಕ್ಕು ಪೃಥ್ವಿರಾಜ್ ಸುಕುಮಾರ್ ಪಡೆದುಕೊಂಡಿದ್ದಾರೆ. ಹಿಂದಿ ವರ್ಷನ್ ಎಎ ಫಿಲ್ಮ್ಸ್ ಪಾಲಾಗಿದೆ. ಚಿತ್ರದಲ್ಲಿ ಜಗಪತಿ ಬಾಬು, ಪೃಥ್ವಿರಾಜ್, ಈಶ್ವರಿ ರಾವ್ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಇದೆ. ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡದ 'ಉಗ್ರಂ' ರೀಮೆಕ್ 'ಸಲಾರ್' ಎನ್ನುವ ಊಹಾಪೋಹ ಕೂಡ ಇದೆ. ಟ್ರೈಲರ್ ರಿಲೀಸ್ ಮಾಡಿ ಎಲ್ಲಾ ಪ್ರಶ್ನೆಗಳಿಗೆ ಚಿತ್ರತಂಡ ಸ್ಪಷ್ಟನೆ ನೀಡಲಿದೆ.


Click it and Unblock the Notifications










