»   » ನಿಧಾನ ರಾಗದ ನಿರ್ದೇಶಕ ಓಂ ಪ್ರಕಾಶ್‌

ನಿಧಾನ ರಾಗದ ನಿರ್ದೇಶಕ ಓಂ ಪ್ರಕಾಶ್‌

Subscribe to Filmibeat Kannada

*ಸತ್ಯನಾರಾಯಣ

ಓಂ ಪ್ರಕಾಶ್‌ ಮೇಲೆ ಇಡೀ ಚಿತ್ರೋದ್ಯಮವೇ ಗೂಬೆ ಕೂರಿಸ್ತಾ ಇದೆಯಂತೆ. ಹಾಗಂತ ಅವರು ಬಲವಾಗಿ ನಂಬಿದ್ದಾರೆ. ಇಲ್ಲದೇ ಇದ್ದಲ್ಲಿ ಸುಮ್ಮ ಸುಮ್ಮನೇ ಅವರನ್ನು ನಿಧಾನ ನಿರ್ದೇಶಕ, ರೀಲು ತಿನ್ನುವ ನಿರ್ದೇಶಕ ಅಂತ ಯಾಕೆ ಕರೀಬೇಕು ಹೇಳಿ. ಉದಾಹರಣೆಗೆ ವಂದೇ ಮಾತರಂ. ಎರಡೂವರೆ ಕೋಟಿಯಲ್ಲಿ ನಿರ್ಮಾಣವಾದ ಈ ಚಿತ್ರ ಬಿಡುಗಡೆಯಾದ ಮೂರನೇ ದಿನಕ್ಕೆ ಬಿದ್ದು ಹೋಗಿದೆ. ಅದಕ್ಕೆ ಕಾರಣರಾರು ? ಇನ್ನಾರು ಓಂ ಪ್ರಕಾಶ್‌, ಯಾಕೆಂದರೆ ಅವಸರವಸರದಲ್ಲಿ ಚಿತ್ರ ಮುಗಿಸಿದರು. ಬಜೆಟ್‌ ಡಬ್ಬಲ್‌ ಆಯ್ತು. ಕ್ವಾಲಿಟಿ ಕೆಟ್ಟು ಹೋಯ್ತು.

ಇಂಥಾ ಪುಕಾರುಗಳನ್ನು ಓಂಪ್ರಕಾಶ್‌ ಎಡಗೈನಲ್ಲಿ ತಳ್ಳಿ ಬಿಡುತ್ತಾರೆ. ನಿರ್ಮಾಪಕನಾದವನು ನಿರ್ದೇಶಕನಿಗೆ ಸ್ವಾತಂತ್ರ್ಯ ಕೊಡದಿದ್ದಾಗ ಸಿನಿಮಾ ಅಂದುಕೊಂಡಂತೆ ಮೂಡಿ ಬರೊಲ್ಲ. ಅದರರ್ಥ ನಿರ್ಮಾಪಕಿ ಜಯಶ್ರೀದೇವಿ ಅವರು ಓಂ ಪ್ರಕಾಶ್‌ ಕೈಗಳನ್ನು ಕಟ್ಟಿ ಹಾಕಿದ್ದರು ಎಂದೇ ಆಗುತ್ತದೆ. ಹಾಗಂದಾಕ್ಷಣ ಓಂ ಪ್ರಕಾಶ್‌ ಹುಷಾರಾಗುತ್ತಾರೆ. ಪಾಪ, ದೇವಿ ಅವರಿಗೂ ಏನೋ ಸಮಸ್ಯೆ ಇತ್ತು. ಅವರದ್ದೇನೂ ತಪ್ಪಲ್ಲ ಬಿಡಿ ಎನ್ನುತ್ತಾರೆ.

ಓಂ ಪ್ರಕಾಶ್‌ ಅವರ ಮೇಲಿರುವ ಇನ್ನೊಂದು ಕಂಪ್ಲೇಂಟ್‌ ಅಂದ್ರೆ ಅವರ ನಿರ್ದೇಶನದ ಎಲ್ಲಾ ಚಿತ್ರಗಳ ಶೂಟಿಂಗ್‌ನಲ್ಲಿ ಏನಾದರೊಂದು ಅನಾಹುತ ಆಗಿಯೇ ಆಗುತ್ತದೆ. ಲಾಕಪ್‌ಡೆತ್‌ ನಿಂದ ಹಿಡಿದು ಸಿಂಹದ ಮರಿ, ಎಕೆ-47 ಹಾಗೂ ಇದೀಗ ಹುಚ್ಚ. ಒಂದು ಅಪಘಾತ, ಇಲ್ಲದೇ ಇದ್ದರೆ ಜೀವ ಬಲಿ. ಸಿಂಹದ ಮರಿ ಶೂಟಿಂಗ್‌ ರಾಜಸ್ಥಾನದ ಮರಳುಗಾಡಿನಲ್ಲಿ ನಡೀತಾ ಇದ್ದಾಗ ಒಬ್ಬ ಸ್ಟಿಲ್‌ ಫೋಟೋಗ್ರಾಫರ್‌ ಸಾವನ್ನಪ್ಪಿದ. ಹುಚ್ಚ ಶೂಟಿಂಗ್‌ ಚೆನ್ನ ಪಟ್ಟಣದಲ್ಲಿ ನಡೆಯುವ ಹೊತ್ತಿಗೆ ಕ್ಯಾಮರಾ ಸಹಾಯಕ ಜೇನ್ನೊಣ ಕಚ್ಚಿ ಸತ್ತು ಹೋದ. ಇದೆಲ್ಲಾ ವಿಧಿಯಾಟ , ಬಲ್ಲವರು ಯಾರು ಎನ್ನುವಂತೆ ಓಂಪ್ರಕಾಶ್‌ ಕೈ ಚೆಲ್ಲುತ್ತಾರೆ. ಆದರೆ ಅವರಿಗೆ ಜೇನ್ನೊಣದ ಭಯವಿಲ್ಲ . ಅವರ ಸ್ನೇಹಿತರ ಗ್ಯಾಂಗ್‌ನಲ್ಲಿ ಎಲ್ಲರೂ ಅಷ್ಟೇ, ಹಾವು ಕಚ್ಚಿದರೂ ಕಲ್ಲಿನಂತಿರುತ್ತಾರಂತೆ.

ಹುಚ್ಚ ಚಿತ್ರದ ಮೂಲಕ ರಿಮೇಕ್‌ ಗ್ಯಾಂಗನ್ನು ಪ್ರವೇಶಿಸಿರುವ ಓಂಪ್ರಕಾಶ್‌ ತಮ್ಮ ಎಳೆಯುವ ಕಲೆಯನ್ನು ಪ್ರದರ್ಶಿಸುತ್ತಾರೋ ಎಂಬ ಭಯ ನಿರ್ಮಾಪಕ ರೆಹಮಾನ್‌ ಅವರಿಗೆ. ಅದಕ್ಕಾಗಿ 42 ದಿನಗಳಲ್ಲಿ ಶೂಟಿಂಗ್‌ಮುಗಿಸಬೇಕು ಎಂದು ಕಟ್ಟಪ್ಪಣೆ ಮಾಡಿದ್ದಾರೆ. ಜೇನ್ನೊಣದ ಹಾವಳಿಯಿಂದಾಗಿ ಈಗಾಗಲೇ ಒಂದು ದಿನ ವೇಸ್ಟ್‌ ಆಗಿದೆ. ಜೊತೆಗೆ ಚಿತ್ರದ ಕಲಾವಿದರು ಹೊಸಬರು ಎಂದು ಓಂಪ್ರಕಾಶ್‌ ರಾಗ ಎಳಿತಾ ಇದ್ದಾರೆ. ಚಿತ್ರ ಅಪ್ಪಿ ತಪ್ಪಿ ವಿಳಂಬವಾದರೆ ಅದೇ ನೆಪವಾದರೂ ಅಚ್ಚರಿಯಿಲ್ಲ.

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada