For Quick Alerts
  ALLOW NOTIFICATIONS  
  For Daily Alerts

  ಇಲ್ಲದ ಕತೆಯ ಹುಡುಕುತ್ತಾ...

  By Staff
  |

  *ಸತ್ಯನಾರಾಯಣ

  ಕನ್ನಡದಲ್ಲಿ ಕತೆಗಳೇ ಇಲ್ಲ

  ಈ ಬಾರಿ ಗುಟುರು ಹಾಕುವ ಸರದಿ ಒಬ್ಬ ನಿರ್ದೇಶಕರದ್ದು. ಮನೇಲಿ ಕರೆಂಟೇ ಇಲ್ಲ ಅನ್ನುವಷ್ಟು ಸಲೀಸಾಗಿ ಓಂ ಪ್ರಕಾಶ್‌ ಎಂಬ ಪ್ರತಿಭೆ ಹೇಳಿಬಿಟ್ಟಿದೆ. ಅದೂ ಸಾಲದು ಎಂಬಂತೆ ‘ಕತೆಗಾರರಿದ್ದರೆ ಈಗಲೇ ಕರೆ ತನ್ನಿ. ರಾತ್ರಿ ಹರಿಯುವುದರೊಳಗೆ ಅವರು ಕೇಳಿದ್ದರ ಡಬ್ಬಲ್‌ ಸಂಭಾವನೆ ಕೊಡಿಸುತ್ತೇನೆ’ ಎನ್ನುವ ಸವಾಲು ಹಾಕಿದ್ದಾರೆ ಓಂ.

  ಅದಕ್ಕೇ ಕಾಯುತ್ತಿದ್ದವರಂತೆ ಕನ್ನಡಪರ ಹೋರಾಟಗಾರರು ಓಂಪ್ರಕಾಶ್‌ ವಿರುದ್ಧ ಎರಡು ಪುಟಗಳ ಬುಲೆಟಿನ್‌ ಪ್ರಕಟಿಸಿದ್ದಾರೆ. ಬುಲೆಟಿನ್‌ನಲ್ಲಿ ಅವರಿಗೆ ತಿಕ್ಕಲ , ರೀಮೇಕು ಪ್ರಿಯ, ತೆರೆಯ ಮೇಲೆ ಹುಡುಗಿಯರ ಅಂಗಾಂಗಗಳನ್ನೇ ಚೆಲ್ಲುವ ವಿಕೃತ ಇತ್ಯಾದಿ ಬಿರುದುಗಳನ್ನು ದಯಪಾಲಿಸಲಾಗಿದೆ. ಈ ಲೇಖಕ ಸಂಘ ಜನ್ಮ ತಾಳಿದ್ದು ಯಾವಾಗ ಅನ್ನುವುದರ ಬಗ್ಗೆಯೂ ತುರ್ತಾಗಿ ಸಂಶೋಧನೆ ನಡೆಯಬೇಕಾಗಿದೆ.


  ಅಂಥಾ ಅಪ್ಪನಿಗೆ ಇಂಥಾ ಮಗ..

  ಕನ್ನಡದಲ್ಲಿ ಕತೆಗಳೇ ಇಲ್ಲ ಅಂದವರಲ್ಲಿ ಓಂಪ್ರಕಾಶ್‌ ಮೊದಲಿಗರೂ ಅಲ್ಲ, ಕೊನೆಯವರೂ ಅಲ್ಲ. ಈ ಹಿಂದೆ ಹತ್ತಾರು ನಿರ್ಮಾಪಕರು ಸುದ್ದಿಗೋಷ್ಠಿಯಲ್ಲಿ ಮಾತಾಡೋದಕ್ಕೆ ವಿಷಯದ ಕೊರತೆಯಿದ್ದಾಗ ‘ಕನ್ನಡದಲ್ಲಿ ಕತೆಗಳೂ ಇಲ್ಲ, ಕತೆಗಾರರೂ ಇಲ್ಲ ’ ಎಂದು ಆಕಳಿಸಿದ್ದುಂಟು. ಆವಾಗ ಇಂಥಾ ಪರಿಯ ಪ್ರತಿಭಟನೆ ಕಂಡುಬಂದಿರಲಿಲ್ಲ. ಓಂಪ್ರಕಾಶ್‌ ಒಬ್ಬ ನಿರ್ದೇಶಕರಾಗಿ ಇಂಥಾ ಮಾತು ಹೇಳಬಾರದಾಗಿತ್ತು ಅನ್ನೋ ಕಾರಣಕ್ಕೋ ಅಥಾವ ಇಂಥಾ ಕಾಮೆಂಟ್‌ ಮಾಡೋದಕ್ಕೆ ಅವರಿಗಿನ್ನೂ ಪ್ರಾಯ ಬಲಿತಿಲ್ಲ ಅನ್ನೋ ಕಾರಣಕ್ಕೋ ಕತಾಪ್ರಿಯರು ಸಿಡಿದೆದಿದ್ದಾರೆ. ವಿಪರ್ಯಾಸವೆಂದರೆ ಓಂಪ್ರಕಾಶ್‌ ಅವರ ತಂದೆ ಎನ್‌.ಎಸ್‌. ರಾವ್‌ ಸಾಹಿತಿಯಾಗಿಯೇ ಬದುಕು ತೇದವರು. ಅಂಥಾ ಅಪ್ಪನಿಗೆ ಇಂಥಾ ಮಗ . ರಾಮ ರಾಮಾ...

  ಅಷ್ಟಕ್ಕೂ ‘ಇಲ್ಲ ’ ಅನ್ನುವ ಕಾಯಿಲೆ ಕನ್ನಡ ಚಿತ್ರರಂಗಕ್ಕೆ ದೈವದತ್ತವಾಗಿ ಬಂದಿದೆ. ಕನ್ನಡದಲ್ಲಿ ಒಳ್ಳೇ ನಿರ್ದೇಶಕರೇ ಇಲ್ಲ ಅನ್ನುತ್ತಾರೆ ನಿರ್ಮಾಪಕರು. ಒಳ್ಳೇ ಚಿತ್ರ ಮಾಡೋಣ ಎಂದರೆ ಕನ್ನಡದಲ್ಲಿ ಕಲಾವಿದರೇ ಇಲ್ಲ ಅನ್ನುತ್ತಾರೆ ನಿರ್ದೇಶಕರು. ‘ಒಳ್ಳೇ ಕತೆ ಕೊಡಿ ಅನ್ನುವ ನಿರ್ಮಾಪಕನೇ ಇಲ್ಲಿಲ್ಲ, ತಮಿಳು ತೆಲುಗಿನ ಕ್ಯಾಸೆಟ್‌ ನೋಡಿ ಕತೆ ಬರೀರಿ ಅಂತಾರೆ’ ಅನ್ನುವುದು ಸಾಹಿತಿಗಳ ಕೊರಗು. ಹೀಗೇ ಆರೋಪಗಳ ವರ್ಷ ನಡೀತಾನೇ ಇದೆ.

  ಜ್ಞಾನಪೀಠಿಗಳು ಕಥೆ ಕೊಡುತ್ತಾರಾ?

  ಈ ಮಧ್ಯೆ ಕನ್ನಡದ ಕಾದಂಬರಿಗಳ ಬಗ್ಗೆ ವಿಪರೀತ ಪೊಸೆಸಿವ್‌ನೆಸ್‌ ಬೆಳೆಸಿಕೊಂಡಿರುವ ರಾಜೇಂದ್ರಸಿಂಗ್‌ ಬಾಬು ಒಂದು ವಿಚಿತ್ರ ಆಫರ್‌ ನೀಡಿದ್ದಾರೆ. ಕನ್ನಡದಲ್ಲಿ ಕತೆಗಳೇ ಇಲ್ಲ ಅನ್ನುವ ನಿರ್ದೇಶಕರಿಗೆ ಅವರ ಸ್ವಂತ ಖರ್ಚಲ್ಲಿ ಸಾವಿರ ಪುಸ್ತಕಗಳನ್ನು ಕೊಡಿಸುತ್ತೇನೆ ಅಂದಿದ್ದಾರೆ. ಬಾಬು ಇತ್ತೀಚೆಗೆ ಕಾದಂಬರಿ ಆಧಾರಿತ ಚಿತ್ರ ಮಾಡಿಲ್ಲ ಅನ್ನೋದು ಬೇರೆ ಮಾತು. ಬಾಬು ಆಗಾಗ ಹೇಳುವ ಇನ್ನೊಂದು ಮಾತೆಂದರೆ, ‘ಕನ್ನಡದಲ್ಲಿ ಆರು ಜ್ಞಾನಪೀಠ ಪುರಸ್ಕಾರ ವಿಜೇತ ಸಾಹಿತಿಗಳಿದ್ದಾರೆ’. ಈ ಜ್ಞಾನಪೀಠರು ತಮ್ಮ ಕೃತಿಗಳನ್ನು ಸಿನಿಮಾ ಮಾಡುವುದಕ್ಕೆ ಅನುಮತಿ ಕೊಡುತ್ತಾರೋ ಅನ್ನುವುದು ಮಿಲಿಯನ್‌ ಡಾಲರ್‌ ಪ್ರಶ್ನೆ. ಈ ಹಿಂದೆ ಭೈರಪ್ಪ, ಶಿವರಾಮ ಕಾರಂತ, ತರಾಸು ಮೊದಲಾದ ಖ್ಯಾತನಾಮರು ತಮ್ಮ ಕಾದಂಬರಿಗಳು ಸಿನಿಮಾ ಆದಾಗ ಸಿಡಿಮಿಡಿಗೊಂಡಿದ್ದುಂಟು.ಇನ್ನೊಂದೆಡೆ ಭೈರಪ್ಪನವರ ಪರ್ವವನ್ನೇ ಆಗಲಿ, ಅನಂತಮೂರ್ತಿಯವರ ದಿವ್ಯ ಕಾದಂಬರಿಯನ್ನೇ ಆಗಲಿ ಸಿನಿಮಾ ಮಾಡುವುದಕ್ಕೆ ಸಾಧ್ಯ ಆಗುತ್ತಾ ಅನ್ನುವ ಪ್ರಶ್ನೆಯೂ ಇದ್ದೇ ಇದೆ. ತೇಜಸ್ವಿಯಂಥಾ ಸ್ಟಾರ್‌ ಲೇಖಕರ ಕಾದಂಬರಿಯ ಹಕ್ಕು ಕೇಳಿದರೆ ಅವರು ಲಕ್ಷದ ಮೇಲೆ ರಾಯಲ್ಟಿ ಡಿಮ್ಯಾಂಡ್‌ ಮಾಡುತ್ತಾರೆ.

  ಆದರೂ ಕನ್ನಡದಲ್ಲಿ ಕತೆಗಳೇ ಇಲ್ಲ ಅನ್ನುವುದು ತಪ್ಪು ಸ್ವಾಮಿ. ಯಾಕೆಂದರೆ ಪುಟ್ಟಣ್ಣ ಕಣಗಾಲ್‌ ಕಾದಂಬರಿಗಳನ್ನೇ ನೆಚ್ಚಿಕೊಂಡು ಹೆಸರು ಮಾಡಿಲ್ಲವೇ ? ಉಷಾನವರತ್ನರಾಮ್‌ ಅವರಂಥ ಸಾಹಿತಿಗಳು ಸಿನಿಮಾಕ್ಕೆಂದೇ ಕಾದಂಬರಿಗಳನ್ನು ಬರೆಯಲಿಲ್ಲವೇ ? ಕೋಡ್ಲು ರಾಮಕೃಷ್ಣರಂಥಾ ನಿರ್ದೇಶಕರು ಕನ್ನಡದ ಕಾದಂಬರಿಗಳನ್ನು ಸಿನಿಮಾ ಮಾಡಿ ಕುಲಗೆಡಿಸಿಲ್ಲವೇ ? ನೋಡುವ ಕಣ್ಣು ಬೇಕು ಅನ್ನುತ್ತದೆ ಲೇಖಕ ಬಳಗ. ಅಷ್ಟು ವ್ಯವಧಾನ ಯಾರಿಗಿದೆ?

  ಒಳ್ಳೆ ಕಥೆ ಬರ್ತಾನೇ ಇಲ್ಲ - ಸಂಪಾದಕರ ದೂರು

  ಕನ್ನಡದಲ್ಲಿ ಕತೆಗಳೇ ಇಲ್ಲ ಅನ್ನುವ ಮಾತನ್ನು ಸಿನಿಮಾ ಮಂದಿಯಷ್ಟೇ ಅಲ್ಲ, ಮ್ಯಾಗಜಿನ್‌ ಸಂಪಾದಕರೂ ಹೇಳುತ್ತಿದ್ದಾರೆ. ಆದರೆ ಟೋನ್‌ನಲ್ಲಿ ಮಾತ್ರ ವ್ಯತ್ಯಾಸ ಇದೆ. ಒಳ್ಳೇ ಕತೆಗಳೇ ಬರ್ತಾ ಇಲ್ಲ ಮಾರಾಯ್ರೇ ಅನ್ನುತ್ತಾರೆ ಸಂಪಾದಕ. ಆ ಕಾರಣಕ್ಕೇ ಇತ್ತಿತ್ತಲಾಗಿ ಭಾನುವಾರದ ಪುರವಣಿಗಳಲ್ಲಿ ಮಲಯಾಳೀ ಅಥವಾ ಬಂಗಾಲಿ ಕತೆಗಳ ಅನುವಾದಗಳೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಆದರೆ ಕತೆಗಳೇ ಬರ್ತಾ ಇಲ್ಲ ಅನ್ನೋ ಮಾತು ವರ್ತಮಾನಕ್ಕೆ ಸಂಬಂಧಿಸಿದ್ದು ಮತ್ತು ಅದರಲ್ಲಿ ವಿಷಾದ ಎದ್ದು ಕಾಣುತ್ತದೆ. ಓಂಪ್ರಕಾಶ್‌ಅವರಂಥ ಪ್ರಭೃತಿಗಳು ಕತೆಗಳೇ ಇಲ್ಲ ಅನ್ನುವಾಗ ಅವರಲ್ಲಿ ಭೂತ ವರ್ತಮಾನಗಳೆರಡೂ ಮಿಳಿತವಾಗಿರುತ್ತದೆ ಮತ್ತು ಅದು ವಿಷಾದವಲ್ಲ, ಆರೋಪ.

  ಈಗ ನೀವೇ ಹೇಳಿ. ಕನ್ನಡದಲ್ಲಿ ನಿಜಕ್ಕೂ ಕತೆಗಳೇ ಇಲ್ಲವಾ ಅಥವಾ ಸಿನಿಮಾ ಆಗೋದಕ್ಕೆ ಲಾಯಕ್ಕಾದ ಕತೆಗಳು ಇಲ್ಲವಾ ? ಇದ್ದರೆ ಅದು ಎಲ್ಲಿದೆ. ಮಧ್ಯರಾತ್ರಿ ಹೊತ್ತಲ್ಲಿ ಓಂಪ್ರಕಾಶ್‌ನ್ನು ಎಬ್ಬಿಸಿ ಕತೆ ಹೇಳಬೇಕಾಗಿಲ್ಲ. ಆದರೆ ಅಜ್ಞಾನಿಗಳ ಕಣ್ಣು ತೆರೆಸುವಂಥಾ ಕತೆಯಾದರೆ ಸಾಕು.

  ನೀವೇನು ಹೇಳುತ್ತೀರಿ, ಕನ್ನಡದಲ್ಲಿ ಉತ್ತಮ ಕಥೆಗಾರರಿಲ್ಲವೇ ?

  ಮುಖಪುಟ / ಸ್ಯಾಂಡಲ್‌ವುಡ್‌


  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X