ಸಿಂಗಂ ರಿಟರ್ನ್ಸ್ ವಿರುದ್ಧ ಹಿಂದೂ ಸಂಘಟನೆಗಳು ಕಿಡಿ
ಅಜಯ್ ದೇವಗನ್ ಅವರ ಹಿಟ್ ಚಿತ್ರ ಸಿಂಗಂ ನ ಎರಡನೇ ಭಾಗ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರದ ಟ್ರೇಲರ್ ನೋಡಿ ಅಭಿಮಾನಿಗಳು ಸಿಂಹ ಘರ್ಜನೆ ಮಾಡಿದರೆ, ಹಿಂದೂಪರ ಸಂಘಟನೆಗಳಿಗೆ ಕೆಂಡಕಾರಿವೆ.
ಸ್ವಾತಂತ್ರೋತ್ಸವದಂದು ಬಿಡುಗಡೆಗೆ ಸಿದ್ಧವಾಗಿರುವ ರೋಹಿತ್ ಶೆಟ್ಟಿ ನಿರ್ದೇಶನದ 'ಸಿಂಗಂ ರಿಟರ್ನ್ಸ್' ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿದೆ. ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂಥ ದೃಶ್ಯಗಳಿರುವ ಈ ಚಿತ್ರವನ್ನು ನಿಷೇಧಿಸಬೇಕೆಂದು ಹಿಂದೂ ಜಾಗೃತಿ ಸಮಿತಿ (ಎಚ್‌ಜೆಎಸ್) ಸೆನ್ಸಾರ್ ಮಂಡಳಿಯನ್ನು ಆಗ್ರಹಿಸಿದೆ.
ಸಿಂಗಂ ರಿಟರ್ನ್ಸ್ ಚಿತ್ರದಲ್ಲಿ ಹಿಂದೂ ಸಂತರನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಎಚ್‌ಜೆಎಸ್ ಸೆನ್ಸಾರ್ ಮಂಡಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ. ಅಂತರ್ಜಾಲದಲ್ಲಿ ಪ್ರಸಾರವಾಗುತ್ತಿರುವ ಸಿಂಗಂ-2 ಚಿತ್ರದ ಟ್ರೇಲರ್ ನಲ್ಲಿ 'ಹಿಂದೂ ಸಂತ'ನನ್ನು ಖಳನಾಯಕನಂತೆ ತೋರಿಸಲಾಗಿದೆಯೆಂದು ಎಚ್‌ಜೆಎಸ್‌ನ ರಾಷ್ಟ್ರೀಯ ಕಾರ್ಯದರ್ಶಿ ರಮೇಶ್ ಶಿಂಧೆ ತಿಳಿಸಿದ್ದಾರೆ.

'ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿರುವ ಅಜಯ್‌ದೇವಗನ್ ಹಿಂದೂ ಸಂತನಿಗೆ ಥಳಿಸುವುದಾಗಿ ಬೆದರಿಸುವ ದೃಶ್ಯವನ್ನು ಟ್ರೈಲರ್‌ನಲ್ಲಿ ತೋರಿಸಲಾಗಿದೆ. ಇನ್ನೊಂದು ದೃಶ್ಯದಲ್ಲಿ ಆತ ಸಮವಸ್ತ್ರಧರಿಸಿ ಮಸೀದಿಯಲ್ಲಿ ಪ್ರಾರ್ಥಿಸುವುದನ್ನು ಹಾಗೂ ಮುಸ್ಲಿಂ ಧರ್ಮಗುರುವಿಗೆ ಸಲ್ಯೂಟ್ ಹಾಕುವುದನ್ನೂ ತೋರಿಸಲಾಗಿದೆ. ಇವೆಲ್ಲವೂ ಹಿಂದೂ ಧರ್ಮದ ಬಗ್ಗೆ ತಪ್ಪು ಭಾವನೆಯನ್ನು ಮೂಡಿಸುತ್ತದೆ' ಎಂದು ಶಿಂಧೆ ಹೇಳಿದ್ದಾರೆ.
ಒಂದು ವೇಳೆ ಚಿತ್ರದ ನಿರ್ಮಾಪಕರು, ಹಿಂದೂ ಸಂತನನ್ನು ಕೆಟ್ಟದಾಗಿ ಬಿಂಬಿಸುವ ದೃಶ್ಯಗಳಿಗೆ ಕತ್ತರಿ ಹಾಕದೆ ಇದ್ದಲ್ಲಿ, ಹಿಂದೂ ಜನಜಾಗೃತಿ ಸಮಿತಿಯು ದೇಶಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹೈದರಾಬಾದ್ ಹಾಗೂ ಮುಂಬೈಯಲ್ಲದೆ ಗೋವಾದಲ್ಲೂ ಚಿತ್ರೀಕರಿಸಲ್ಪಟ್ಟಿರುವ ಸಿಂಗಂ ರಿಟರ್ನ್ಸ್ ಚಿತ್ರದಲ್ಲಿ ಅಜಯ್ ದೇವಗನ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕರೀನಾ ಕಪೂರ್ ನಾಯಕಿಯಾಗಿದ್ದು, ಪ್ರೇಕ್ಷಕರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದೆನಿಸಿದೆ.


Click it and Unblock the Notifications











