ಅಲ್ಲು ಅರ್ಜುನ್‌ಗೆ ಶ್ರದ್ಧಾ ಕಪೂರ್ ನಾಯಕಿ? ಸಾಹೋ ನಂತರ ದಕ್ಷಿಣಕ್ಕೆ ಮರಳಿದ ಬಾಲಿವುಡ್ 'ಸ್ತ್ರೀ'
ಹೇಳಿ ಕೇಳಿ ಇದು ಬಣ್ಣದ ಲೋಕ. ಇಲ್ಲಿ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತವೆ. ಹೀಗೆ ಹರಿದಾಡುವ ಸುದ್ದಿಗಳಲ್ಲಿ ಕೆಲವು ಸತ್ಯ ಆಗಿದ್ದರೆ ಇನ್ನು ಕೆಲವು ಮಿಥ್ಯ ಆಗಿರುತ್ತವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿಗಳಿಗೆ ಬರ ಇಲ್ಲ. ಇನ್ನೂ ಇಂದು ಸಿನಿಮಾ ಕೇವಲ ಆ ಭಾಷೆ ಈ ಭಾಷೆ ಎಂದು ಒಂದು ಭಾಷೆಗೆ ಸೀಮಿತವಾಗಿಲ್ಲ.
ಬದಲಿಗೆ ಉತ್ತರ ಮತ್ತು ದಕ್ಷಿಣದಲ್ಲಿ ಪ್ಯಾನ್ ಇಂಡಿಯಾ ಅಲೆ ಎದ್ದಿದೆ. ಇಲ್ಲಿಯವರು ಅಲ್ಲಿ ಹೋಗುತ್ತಿದ್ದಾರೆ. ಅಲ್ಲಿಯವರು ಇಲ್ಲಿ ಬಂದು ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಬಾಲಿವುಡ್‌ನ ಗ್ಲ್ಯಾಮರ್ ಮತ್ತು ದಕ್ಷಿಣ ಭಾರತದ ಮೇಕಿಂಗ್ ಶೈಲಿ ಒಂದಾದ ಪರಿಣಾಮ ಹಲವು ಪವಾಡಗಳು ನಡೆಯುತ್ತಿವೆ. ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಸದ್ಯ ಅಲ್ಲು ಅರ್ಜುನ್‌ಗೆ ಶ್ರದ್ಧಾ ಕಪೂರ್ ನಾಯಕಿಯಾಗಲಿದ್ದಾರೆ ಎನ್ನುವ ಸುದ್ದಿಯೊಂದು ಸದ್ಯ ಗುಲ್ಲಾಗಿದೆ.

ಹೌದು, ಮೊನ್ನೆ ಮೊನ್ನೆಯಷ್ಟೇ ಸಂಕ್ರಾಂತಿ ಹಬ್ಬದ ಪ್ರಯುಕ್ತ ಅಲ್ಲು ಅರ್ಜುನ್ ಅವರ 23ನೇ ಚಿತ್ರದ ಘೋಷಣೆಯಾಗಿತ್ತು. ''ಮಾನಗರಂ''.. ''ಕೈದಿ''.. ''ವಿಕ್ರಂ''.. ''ಕೂಲಿ'' ಚಿತ್ರಗಳ ಮೂಲಕ ಜನ ಮನ ಗೆದ್ದ ಲೋಕೇಶ್ ಕನಗರಾಜ್ ನಿರ್ದೇಶನದ ಚಿತ್ರ ಇದು. ''ಪುಷ್ಪಾ'' ಚಿತ್ರಕ್ಕೆ ಬಂಡವಾಳ ಹೂಡಿದ್ದ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಈ ಜೋಡಿಯ ಚಿತ್ರಕ್ಕೆ ಹಣ ಹೂಡುತ್ತಿದೆ.
ಈ ವರ್ಷವೇ ಚಿತ್ರದ ಚಿತ್ರೀಕರಣ ಆರಂಭ ಮಾಡುವುದಾಗಿ ಚಿತ್ರತಂಡ ಹೇಳಿದ್ದು ಸದ್ಯ ಇದೇ ಚಿತ್ರಕ್ಕೆ ಶ್ರದ್ದಾ ಕಪೂರ್ ನಾಯಕಿಯಾಗಲಿದ್ದಾರೆ ಎನ್ನುವ ಮಾತು ಹೈದರಾಬಾದ್‌ದಿಂದ ಮುಂಬೈವರೆಗೆ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ''ಮಿಲಾಗ್ರೋ ಮೂವೀಸ್'' ವರದಿಯನ್ನು ಮಾಡಿದ್ದು ''ಸಾಹೋ'' ನಂತರ ಶ್ರದ್ಧಾ ಕಪೂರ್ ದಕ್ಷಿಣದತ್ತ ಮತ್ತೊಮ್ಮೆ ಬರುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಈಗಾಗಲೇ ಶ್ರದ್ಧಾ ಕಪೂರ್ ಜೊತೆ ಮಾತುಕತೆ ಕೂಡ ನಡೆದಿದೆ ಎಂದು ಕೂಡ ಹೇಳಲಾಗಿದೆ.
ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಲೋಕೇಶ್ ಕನಕರಾಜ್ ಸಿನಿಮಾ ಅಂದರೆ ಅಲ್ಲಿ ನಾಯಕಿ ಕೇವಲ ಗ್ಲ್ಯಾಮರ್ ಗೊಂಬೆಯಾಗಿರಲ್ಲ. ಅಭಿನಯಕ್ಕೂ ಇವರ ಚಿತ್ರಗಳಲ್ಲಿ ಪ್ರಾಮುಖ್ಯತೆ ಇರುತ್ತೆ. ಶ್ರದ್ದಾ ಕಪೂರ್ ಒಳ್ಳೆಯ ಪರ್ಫಾಮರ್ ಬೇರೆ. ಈ ಹಿನ್ನೆಲೆ ಈ ಸುದ್ದಿಯಿಂದ ಚಿತ್ರದ ಮೇಲಿನ ನಿರೀಕ್ಷೆಗಳು ಸಹಜವಾಗಿಯೇ ಹೆಚ್ಚಾಗಿವೆ.
ಅಂದ್ಹಾಗೇ ಶ್ರದ್ಧಾ ಕಪೂರ್ ಈ ಹಿಂದೆ ''ಪುಷ್ಪ 2'' ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ಕಾಣಿಸಿಕೊಳ್ಳಬೇಕಿತ್ತು. ಶ್ರೀಲೀಲಾ ಹೆಜ್ಜೆ ಹಾಕಿದ 'ಕಿಸಕ್' ಹಾಡಿಗೆ ಹೆಜ್ಜೆ ಹಾಕಬೇಕಿತ್ತು. ಆದರೆ. ಸಂಭಾವನೆ ಮತ್ತು ಇತರೆ ಕಾರಣಗಳಿಂದಾಗಿ ಶ್ರದ್ಧಾ ಕಪೂರ್ ಹಿಂದೆ ಸರಿದಿದ್ದರು.

ಇದಲ್ಲದೇ ಆಗಷ್ಟೇ ಇವರ ''ಸ್ತ್ರೀ 2'' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಅತ್ಯದ್ಭುತವಾದ ಗೆಲುವು ಸಿಕ್ಕ ನಂತರ ಐಟಂ ಹಾಡಿಗೆ ಕುಣಿಯುವುದು ಬೇಡ ಎಂದು ಬಾಲಿವುಡ್‌ನಲ್ಲಿ ಹಲವರು ನೀಡಿದ ಸಲಹೆ ಮೇರೆಗೆ ಕೂಡ ಶ್ರದ್ಧಾ ಪುಷ್ಪಾ ಅಡ್ಡೆಗೆ ಬರಲು ಒಪ್ಪಲಿಲ್ಲ ಎನ್ನುವ ಮಾತು ಇದೆ.
ಇನ್ನೂ ಹೆಸರಿಡದ ಈ ಚಿತ್ರಕ್ಕೆ ಲೋಕೇಶ್ ಕನಗರಾಜ್ ಅವರ ನೆಚ್ಚಿನ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ಸಂಗೀತ ನಿರ್ದೇಶನ ಇರಲಿದೆ. ಜೂನ್ ಅಥವಾ ಜುಲೈನಲ್ಲಿ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆ ಇದೆ. ಈಗಾಗಲೇ ಅಲ್ಲು ಅರ್ಜುನ್ ತಮಿಳಿನ ಮತ್ತೊಬ್ಬ ಖ್ಯಾತ ನಿರ್ದೇಶಕ ಆಟ್ಲೀ ಜೊತೆ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
ಒಟ್ನಲ್ಲಿ ಸದ್ಯ ಲೋಕೇಶ್ ಕನಗರಾಜ್ ಮತ್ತು ಅಲ್ಲು ಅರ್ಜುನ್ ಕಾಂಬಿನೇಷನ್‌ನ ಚಿತ್ರಕ್ಕೆ ಶ್ರದ್ಧಾ ಕಪೂರ್ ನಾಯಕಿ ಎನ್ನುವ ಸುದ್ದಿ ಸದ್ಯ ಎಲ್ಲೆಡೆ ಹಬ್ಬಿದೆ. ನಿಜಕ್ಕೂ ಅಲ್ಲು ಅರ್ಜುನ್‌ಗೆ ಶ್ರದ್ದಾ ನಾಯಕಿಯಾಗ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ. ಚಿತ್ರತಂಡ ಈ ಕುರಿತು ಶೀಘ್ರದಲ್ಲಿಯೇ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಕೂಡ ಇದೆ.


Click it and Unblock the Notifications











