ಭಾರಿ ಮೊತ್ತಕ್ಕೆ 'ಕೆಜಿಎಫ್ 2', 'ಸಲಾರ್' ಹಕ್ಕು ಖರೀದಿಸಿದ ವಿದೇಶಿ ಸಂಸ್ಥೆ
ಹೊಂಬಾಳೆ ಫಿಲಮ್ಸ್ ಸಂಸ್ಥೆಯ ಬಹುನಿರೀಕ್ಷಿತ ಸಿನಿಮಾ 'ಕೆಜಿಎಫ್ 2' ಕೆಲವೇ ದಿನಗಳಲ್ಲಿ ತೆರೆಗೆ ಅಪ್ಪಳಿಸಲಿದೆ. ಅದರ ಬೆನ್ನಲ್ಲೆ ಇದೇ ಸಂಸ್ಥೆಯ ಮತ್ತೊಂದು ಬಿಗ್ ಬಜೆಟ್ ಸಿನಿಮಾ 'ಸಲಾರ್' ಸಹ ತೆರೆಗೆ ಬರಲಿದೆ.
Recommended Video

ಎರಡೂ ಸಿನಿಮಾಗಳಿಗೆ ಭರ್ಜರಿ ಬೇಡಿಕೆ ಇದ್ದು 'ಕೆಜಿಎಫ್ 2' ಸಿನಿಮಾದ ಬಹುತೇಕ ವಿತರಣೆ ಹಕ್ಕು ಮಾರಾಟವಾಗಿದೆ. ಇದೀಗ ವಿದೇಶಿ ಸಂಸ್ಥೆಯೊಂದು ಭಾರಿ ಮೊತ್ತ ನೀಡಿ 'ಕೆಜಿಎಫ್ 2' ಹಾಗೂ 'ಸಲಾರ್' ಸಿನಿಮಾಗಳು ವಿದೇಶಿ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ.
ದುಬೈ ಮೂಲದ ಪಾರ್ಸ್ ಫಿಲಂ ಕೊ ಎಲ್‌ಎಲ್‌ಸಿ ಹೆಸರಿನ ಸಂಸ್ಥೆಯು 'ಕೆಜಿಎಫ್ 2' ಹಾಗೂ 'ಸಲಾರ್' ಸಿನಿಮಾದ ವಿದೇಶಿ ವಿತರಣೆ ಹಕ್ಕನ್ನು ಒಟ್ಟಿಗೆ ಖರೀದಿಸಿದೆ. ಈ ಎರಡು ಸಿನಿಮಾಗಳ ಓವರ್‌ಸೀಸ್ ಬಿಡುಗಡೆ ಹಕ್ಕು ಖರೀದಿಸಲು ಭಾರಿ ಮೊತ್ತವನ್ನು ನಿರ್ಮಾಣ ಸಂಸ್ಥೆಗೆ ನೀಡಿದೆ ಪರಾಸ್.

ಭಾರಿ ಮೊತ್ತಕ್ಕೆ ಹಕ್ಕು ಖರೀದಿಸಿದ ಸಂಸ್ಥೆ
'ಸಲಾರ್' ಹಾಗೂ 'ಕೆಜಿಎಫ್ 2' ಸಿನಿಮಾಗಳನ್ನು ವಿದೇಶಗಳಲ್ಲಿ ಬಿಡುಗಡೆ ಮಾಡುವ ಹಕ್ಕಿಗೆ ಪಾರ್ಸ್ ಫಿಲಂ ಕೊ ಎಲ್‌ಎಲ್‌ಸಿ ಸಂಸ್ಥೆ ಬರೋಬ್ಬರಿ 100 ಕೋಟಿ ರುಪಾಯಿಗಳನ್ನು ನೀಡಿದೆ. ಯಶ್ ಹಾಗೂ ಪ್ರಭಾಸ್ ಇಬ್ಬರಿಗೂ ವಿದೇಶದಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ. 'ಬಾಹುಬಲಿ' ಮೂಲಕ ಪ್ರಭಾಸ್, 'ಕೆಜಿಎಫ್' ಮೂಲಕ ಯಶ್ ವಿದೇಶಗಳಲ್ಲಿಯೂ ದೊಡ್ಡ ಮಟ್ಟದ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಹಾಗಾಗಿ ಅವರ ಸಿನಿಮಾಗಳಿಗೆ ದೊಡ್ಡ ಮಟ್ಟದ ಬೇಡಿಕೆ ವಿದೇಶಗಳಲ್ಲಿ ಇದೆ.

'ಕೆಜಿಎಫ್ 2' ವಿತರಣೆ ಹಕ್ಕು ಹಂಚಿಕೆ ಆಗಿದೆ
ಇನ್ನು 'ಕೆಜಿಎಫ್ 2' ಸಿನಿಮಾವನ್ನು ರಾಜ್ಯದಲ್ಲಿ ಹೊಂಬಾಳೆ ಫಿಲಮ್ಸ್ ವಿತರಣೆ ಮಾಡುತ್ತಿದೆ. ಪರಭಾಷೆಗಳಲ್ಲಿ ಬೇರೆ ಬೇರೆ ವಿತರಣೆ ಸಂಸ್ಥೆಗಳು ವಿತರಣೆ ಹಕ್ಕು ಖರೀದಿಸಿವೆ. 'ಕೆಜಿಎಫ್ 2' ತಮಿಳು ಅವತರಣಿಕೆಯನ್ನು ಡ್ರೀಮ್ ವಾರಿಯರ್ ಸಂಸ್ಥೆ, ಮಲಯಾಳಂ ಅವತರಣಿಕೆಯನ್ನು ನಟ ಪೃಥ್ವಿರಾಜ್‌ರ ನಿರ್ಮಾಣ ಸಂಸ್ಥೆ ಖರೀದಿಸಿದೆ. ಹಿಂದಿಯಲ್ಲಿ ರವೀನಾ ಟಂಡನ್ ಪತಿ 'ಕೆಜಿಎಫ್ 2' ಅನ್ನು ವಿತರಣೆ ಮಾಡಲಿದ್ದಾರೆ. ತೆಲುಗು ಹಾಗೂ ಕನ್ನಡದಲ್ಲಿ ಹೊಂಬಾಳೆ ಫಿಲಮ್ಸ್‌ನವರೇ ವಿತರಣೆ ಮಾಡಲಿದ್ದಾರೆ ಎನ್ನಲಾಗಿದೆ.

ಏಪ್ರಿಲ್ 14 ಕ್ಕೆ ಬಿಡುಗಡೆ ಆಗಲಿದೆ ಸಿನಿಮಾ
'ಕೆಜಿಎಫ್ 2' ಸಿನಿಮಾವು ಏಪ್ರಿಲ್ 14 ರಂದು ಬಿಡುಗಡೆ ಆಗಲಿದ್ದು ಸಿನಿಮಾದ ಪ್ರಚಾರ ಕಾರ್ಯ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ. ಸಿನಿಮಾದ ಟ್ರೇಲರ್ ಅನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹೊಂಬಾಳೆ ಫಿಲಮ್ಸ್ ಕೆಲ ದಿನಗಳ ಹಿಂದಷ್ಟೆ ಪ್ರಕಟಿಸಿದೆ. 'ಕೆಜಿಎಫ್ 2' ನಲ್ಲಿ ಯಶ್ ಜೊತೆ ಬಾಲಿವುಡ್‌ನ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ತೆಲುಗಿನ ರಾವ್ ರಮೇಶ್ ಇನ್ನೂ ಹಲವು ನಟರು ಸೇರಿಕೊಂಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಬ್ಲಾಕ್ ಬಸ್ಟರ್ ಆಗುವ ಎಲ್ಲ ಸಾಧ್ಯತೆಗಳು ದಟ್ಟವಾಗಿದೆ.

'ಸಲಾರ್' ಮೇಲೆ ಭಾರಿ ನಿರೀಕ್ಷೆ
ಇನ್ನು ಪ್ರಭಾಸ್ ನಟನೆಯ 'ಸಲಾರ್' ಸಿನಿಮಾವನ್ನು ಸಹ ಹೊಂಬಾಳೆ ಫಿಲಮ್ಸ್‌ನವರೇ ನಿರ್ಮಾಣ ಮಾಡಿದ್ದು ಆ ಸಿನಿಮಾವನ್ನು ಸಹ ಪ್ರಶಾಂತ್ ನೀಲ್ ಅವರೇ ನಿರ್ದೇಶನದ ಮಾಡಿದ್ದಾರೆ. ಸಿನಿಮಾದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದರೆ, ವಿಲನ್ ಆಗಿ ನಟಿಸಿರುವುದು ಕನ್ನಡದ ಮಧು ಗುರುಸ್ವಾಮಿ. ಸಿನಿಮಾದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಕೆಲವು ಭಾಗಗಳ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕಾರ್ಯವಷ್ಟೆ ಬಾಕಿ ಇದೆ. ಪ್ರಭಾಸ್ ನಟಿಸುತ್ತಿರುವ 'ಆದಿಪುರುಷ್' ಸಿನಿಮಾದ ಬಿಡುಗಡೆ ಬಳಿಕ 'ಸಲಾರ್' ಬಿಡುಗಡೆ ಆಗುವ ಸಾಧ್ಯತೆ ಇದೆ.


Click it and Unblock the Notifications











