»   » ಕಲೆಯ ಕೊಲೆ : ರಾಜ್ಯ ಸರ್ಕಾರಕ್ಕೆ ಅಶೋಕ್‌ ಪಾಟೀಲ್‌ ಹಿಡಿ‘ಶಾಪ’

ಕಲೆಯ ಕೊಲೆ : ರಾಜ್ಯ ಸರ್ಕಾರಕ್ಕೆ ಅಶೋಕ್‌ ಪಾಟೀಲ್‌ ಹಿಡಿ‘ಶಾಪ’

Subscribe to Filmibeat Kannada

ಪೊಲೀಸ್‌ ಅಧಿಕಾರಿಯಾಗಿದ್ದ ಬಿ.ಸಿ. ಪಾಟೀಲ್‌ ಚಿತ್ರರಂಗಕ್ಕೆ ಕಾಲಿಟ್ಟರು. ಹತ್ತಾರು ಚಿತ್ರಗಳಲ್ಲಿ ನಾಯಕರೂ ಆದರು. ಲಂಕೇಶ ಚಿತ್ರದ ಮೂಲಕ, ನಟ- ನಿರ್ಮಾಪಕ - ನಿರ್ದೇಶಕ ಎಂಬ ಪಟ್ಟವನ್ನು ಹೊತ್ತುಕೊಂಡರು. ಈ ಮಧ್ಯೆ ರಾಜ್ಯ ಸರಕಾರ ಸರ್ಕಾರಿ ನೌಕರರು ಚಲನಚಿತ್ರಗಳಲ್ಲಿ ನಟಿಸಬಾರದು ಎಂಬು ಫರ್ಮಾನ್‌ ಹೊರಡಿಸಿತು. ಈ ಆದೇಶ ಐ.ಎ.ಎಸ್‌ ಅಧಿಕಾರಿ ಕಂ ಚಿತ್ರನಟ ಶಿವರಾಮ್‌ ಅವರಿಗಿಂತಲೂ ಹೆಚ್ಚು ಕಾಡಿದ್ದು ಬಿ.ಸಿ. ಪಾಟೀಲರನ್ನೇ.

ಅಂತೂ ಏನೇನೋ ಆಗಿ, ಡಿಜಿಪಿ ಸಿ. ದಿನಕರ್‌ ಅವರ ಆಡಳಿತ ವೈಖರಿಗೆ ಗುರಿಯಾದ ಪಾಟೀಲ್‌ ಈಗ ಸಸ್ಪೆಂಡ್‌ ಆಗಿದ್ದಾರೆ. ಪಾಟೀಲ್‌ಗೆ ಚಿತ್ರ ಮಾಡಲು ದುಡ್ಡು ಎಲ್ಲಿಂದ ಬಂತು? ಎಂಬ ತನಿಖೆಯೂ ನಡೆಯುತ್ತಿದೆ. ದಳವಾಯಿ, ಚನ್ನಪ್ಪ ಚನ್ನೆಗೌಡ, ಲಂಕೇಶ, ನಿರ್ಬಂಧ, ನಿಷ್ಕರ್ಷ, ಪ್ರೇಮಾಚಾರಿ ಚಿತ್ರಗಳ ಮೂಲಕ ಗುರುತಿಸಿಕೊಂಡ ಬಿ.ಸಿ. ಪಾಟೀಲರಿಗೆ ಶಾಪ ತಟ್ಟಿದೆ. ಅವರ ಮುಂದಿನ ಚಿತ್ರ ಮಾರ್ಚ್‌ 30ರಂದು ಬಿಡುಗಡೆ ಆಗುತ್ತಿದೆ. ಆ ಚಿತ್ರದ ಹೆಸರು ಏನು ಗೊತ್ತೆ ? ಶಾಪ.....ಪಾಟೀಲರಿಗೆ ಚಿತ್ರದ ಹೆಸರೇ ಶಾಪವಾಗಿ ಕಾಡುತ್ತಿದೆ.

ಬಿ.ಸಿ. ಪಾಟೀಲರ ತಮ್ಮ ಅಶೋಕ್‌ ಪಾಟೀಲರು ಪತ್ರಿಕೆಗಳಿಗೆ ಈ- ಮೇಲ್‌ ಮೂಲಕ ಬರೆದಿರುವ ಪತ್ರದ ಪೂರ್ಣ ಪಾಠ ಇಲ್ಲಿದೆ:

ಡಿಯರ್‌ ಪ್ರೆಸ್‌ , ನನ್ನ ಈ ಕಿರು ಬರಹ ಓದಲು ಬಿಡುವು ಮಾಡಿಕೊಂಡಿದ್ದಕ್ಕೆ ನಿಮಗೆ ಧನ್ಯವಾದಗಳು. ನನ್ನ ಸಹೋದರ ಬಿ.ಸಿ. ಪಾಟೀಲ್‌ ಅವರು ಚಲನಚಿತ್ರದಲ್ಲಿ ನಟಿಸಿದರೆಂಬ ಕಾರಣಕ್ಕಾಗಿ ಅವರ ವಿರುದ್ಧ ತನಿಖೆ - ವಿಚಾರಣೆ ಕೈಗೊಂಡಿರುವ ಬಗ್ಗೆ ಕೇಳಿ ನನಗೆ ಷಾಕ್‌ ಆಯಿತು.

ಚಲನ ಚಿತ್ರಗಳಲ್ಲಿ ನಟಿಸುವುದು ಅಪರಾಧವೆ? ನಿಮಗೆ ತಿಳಿದಿರುವಂತೆ ನಟನೆಯ ಅವಧಿಯಲ್ಲಿ ಬಿ.ಸಿ. ಪಾಟೀಲ್‌ ಯಾವುದೇ ಸೌಲಭ್ಯಗಳನ್ನಾಗಲೀ, ಸಂಬಳವನ್ನಾಗಲೀ ಪೊಲೀಸ್‌ ಇಲಾಖೆಯಿಂದ ಪಡೆದಿಲ್ಲ. ಆದರೆ, ಅನೇಕ ಸಂಸತ್‌ಸದಸ್ಯರು, ಶಾಸಕರು ಸರಕಾರದಿಂದ ಸಂಬಳ ಪಡೆಯುತ್ತಲೇ ಚಲನಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರನ್ನೆಲ್ಲಾ ಬಿಟ್ಟು ಕಾನೂನು ಕಾಪಾಡುವ ಹಾಗೂ ಕಲಾ ಸೇವೆ ಮಾಡುವವರ ವಿರುದ್ಧ ಏಕೀ ತನಿಖೆ ?

ಕಲೆಯು ನಮ್ಮ ಸಂಸ್ಕೃತಿಯ ಬುನಾದಿ. ಸಂಸ್ಕೃತಿಯು ನಾಗರೀಕತೆಯ ಸೋಪಾನ. ಸಂಸ್ಕೃತಿಯನ್ನು ಹತ್ತಿಕ್ಕುವ ಸರಕಾರದ ಯಾವುದೇ ಕ್ರಮ ದೀರ್ಘಾವಧಿಯಲ್ಲಿ ಸಾಮಾಜಿಕ ಬೆಳವಣಿಗೆಗೆ ಕಂಟಕವಾಗುತ್ತದೆ. ಇನ್ನು ಮಾಧ್ಯಮದ ಪ್ರಹಾರಗಳೂ ಅಷ್ಟೇ... ಕೆಲ-ವು ವಾರಪತ್ರಿಕೆಗಳು ಬ್ಯಾಕ್‌ಮೇಲ್‌ ಮಾಡುತ್ತವೆ, ತಮ್ಮ ವರದಿಗಾರರಿಗೆ ಹಣಕೊಡದವರ-ನ್ನು ವ್ಯವಸ್ಥಿತವಾಗಿ ತೇಜೋವಧೆ ಮಾಡುತ್ತ-ವೆ.

ದುರ್ದೈವದ ಸಂಗತಿ ಎಂದರೆ, ಈ ಪತ್ರಿಕೆಗಳು ಸರಕಾರವನ್ನು ಇಂತಹ ಕ್ರಮಗಳಿಗೆ ಪ್ರಚೋದಿಸುತ್ತಿರುವುದೇ ಅಲ್ಲದೆ, ಕನ್ನಡ ಚಲನಚಿತ್ರೋದ್ಯಮವನ್ನು ಕೊಲೆ ಮಾಡುವ ಪ್ರಯತ್ನವನ್ನೂ ಮಾಡುತ್ತಿವೆ ಎಂದು ನನಗೆ ಅನ್ನಿಸುತ್ತದೆ. ಅಲ್ಲರೀ, ಕಲಾಸೇವೆ ಮಾಡುವುದು ಅಪರಾಧವೇ? ಸರಕಾರದ ಒಬ್ಬ ನೌಕರ ಕಲಾಸೇವೆಯಲ್ಲಿ ಇಷ್ಟರ ಮಟ್ಟಿಗೆ ತೊಡಗಿಕೊಂಡಿದ್ದಾನಲ್ಲ ಎಂದು ಹೆಮ್ಮೆ ಪಡದೆ, ಚಿತ್ರರಂಗದೊಂದಿಗೆ ಸಂಬಂಧ ಹೊಂದಿರುವ ಪಟ್ಟಭದ್ರ ಹಿತಾಸಕ್ತಿಗಳನ್ನು ತೃಪ್ತಿ ಪಡಿಸಲು ಸರಕಾರ ಬಿ.ಸಿ. ಪಾಟೀಲ್‌ರನ್ನು ಶಿಕ್ಷಿಸುತ್ತಿದೆ.

..ದುಷ್ಟ ರಕ್ಷಕ, ಶಿಷ್ಟ ಭಕ್ಷಕ ! ಇದು ಕರ್ನಾಟಕ ಸರಕಾರದ ಇವತ್ತಿನ ಪಾಲಿಸಿ !

ಇಂತಿ ನಿಮ್ಮ ವಿಧೇಯ

ಅಶೋಕ್‌ ಪಾಟೀಲ್‌
ಯು ಎಸ್‌

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada