ಜನುಮದಾತ ನಾಗಾಭರಣ ವಿರುದ್ಧ ಕೌರವ ಪಾಟೀಲರ ಯುದ್ಧ
ನಾಗಾಭರಣ ವಿಷ ಕಕ್ಕುತ್ತಿದ್ದಾರೆ!
ಹಾಗಂತ ಸ್ವತಃ ಬಿ.ಸಿ.ಪಾಟೀಲರೇ ಹೇಳಿಕೊಂಡಿದ್ದಾರೆ. ನಾಗಾಭರಣ ನನ್ನ ಮೇಲೆ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆ. ಈ ದ್ವೇಷಕ್ಕೆ ‘ಕೌರವ’ ಬಲಿಯಾಗಿದ್ದಾನೆ ಎಂದು ತಮ್ಮ ಮಂಗಳವಾರ(ಜ.08) ಸೂರ್ಯ ಐಪಿಎಸ್ ಚಿತ್ರೀಕರಣದ ಸೆಟ್‌ನಲ್ಲಿ ಪಾಟೀಲರು ದೂರಿದರು.
ಸದಭಿರುಚಿಯ ಕನ್ನಡ ಚಿತ್ರಗಳಿಗೆ ರಾಜ್ಯ ಸರ್ಕಾರ ನೀಡುವ ಸಹಾಯಧನವನ್ನು, ಸಹಾಯಧನ ಸಲಹಾ ಸಮಿತಿ ಅಧ್ಯಕ್ಷರಾದ ನಾಗಾಭರಣ ವೈಯಕ್ತಿಕ ಕಾರಣಗಳಿಂದ ಕೌರವ ಚಿತ್ರಕ್ಕೆ ನಿರಾಕರಿಸಿದ್ದಾರೆ. ಈ ಅನ್ಯಾಯದ ವಿರುದ್ಧ ಕೋರ್ಟ್ ಕಟ್ಟೆ ಹತ್ತುವುದಾಗಿ ಪಾಟೀಲ್ ಹೇಳಿದರು.
ಸಪ್ನಾ ಥಿಯೇಟರ್‌ನಲ್ಲಿ ಶಿವಪ್ಪ ನಾಯಕ ಸಿನಿಮಾ ಪ್ರದರ್ಶನಕ್ಕೆ ಸಂಬಂಧಿಸಿದಂತೆ ತಮ್ಮ ಹಾಗೂ ನಾಗಾಭರಣ ನಡುವೆ ತಿಕ್ಕಾಟ ನಡೆದಿತ್ತು . ಆ ಅವಮಾನದ ಸೇಡನ್ನು ನಾಗಾಭರಣ ಈಗ ತೀರಿಸಿಕೊಳ್ಳುತ್ತಿದ್ದಾರೆ ಎಂದು ಪಾಟೀಲ್ ಆಪಾದಿಸಿದರು.
ನಾಗಾಭರಣ ಮೇಲೆ ಪಾಟೀಲ್ ದಾಳಿಯ ಇತರೆ ಮುಖ್ಯಾಂಶಗಳು ಇಂತಿವೆ:
- ಕೌರವ ಚಿತ್ರ ತಮಿಳಿನ ಕಡಲೋರ ಕವಿತೆಗಳ್ ಎನ್ನು ವ ತಮಿಳು ಚಿತ್ರದ ರಿಮೇಕ್ ಎಂದು ನಾಗಾಭರಣ ಶಂಕಿಸಿದ್ದಾರೆ. ಎರಡೂ ಚಿತ್ರಗಳಲ್ಲಿ ಶಿಕ್ಷಕಿ ಹಾಗೂ ಒರಟು ವ್ಯಕ್ತಿತ್ವದ ನಾಯಕನ ಪಾತ್ರಗಳು ಬರುತ್ತವೆ. ಇಬ್ಬರೂ ಪ್ರೇಮಿಗಳು. ಇಷ್ಟು ಮಾತ್ರಕ್ಕೆ ಕೌರವ ಚಿತ್ರವನ್ನು ರಿಮೇಕ್ ಎನ್ನಲು ಪಾತ್ರವಿಲ್ಲ .
- ಕೌರವ ಸ್ವಮೇಕ್ ಎನ್ನುವುದನ್ನು ಸಾಬೀತುಪಡಿಸಲು ನಾನು ಸಿದ್ಧನಿದ್ದೇನೆ. ಕೌರವ ಚಿತ್ರಕ್ಕಾಗಿರುವ ಅನ್ಯಾಯವನ್ನು ಸರಿ ಪಡಿಸುವಂತೆ ವಾರ್ತಾ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದ್ದೇನೆ. ನ್ಯಾಯ ದೊರಕದಿದ್ದಲ್ಲಿ ನ್ಯಾಯಾಲಯದ ಕಟ್ಟೆಯೇರುತ್ತೇನೆ.
- ನಾಗಾಭರಣ ತಮ್ಮ ಜನುಮದಾತ ಚಿತ್ರಕ್ಕೆ ತಾವೇ ಸಹಾಯಧನ ಕೊಟ್ಟುಕೊಂಡಿದ್ದಾರೆ. ಆದರೆ, ಜನುಮದಾತ ಚಿತ್ರ ಇಂಗ್ಲೀಷ್ ಚಿತ್ರವೊಂದರ ನಕಲು. ಹಿಂದಿಯ ಫೂಲ್ ಔರ್ ಕಾಂಟೆ ಚಿತ್ರದ ಕಥೆಯನ್ನು ಕೂಡ ಜನುಮದಾತ ಹೋಲುತ್ತದೆ. ಈ ಚಿತ್ರ ರಿಮೇಕ್ ಅಲ್ಲ ಎನ್ನುವುದನ್ನು ನಾಗಾಭರಣ ಸಾಬೀತು ಪಡಿಸುತ್ತಾರೆಯೇ?
- ಕಡಲೋರ ಕವಿತೆಗಳ್ ಚಿತ್ರದ ಕೆಸೆಟ್ಟನ್ನು ಪರಿಶೀಲನೆಗೆ ಕಳಿಸುವಂತೆ ನಾಗಾಭರಣ ತಮ್ಮ ಸ್ವಂತ ಲೆಟರ್‌ಹೆಡ್‌ನಲ್ಲಿ ಪತ್ರ ಬರೆದಿದ್ದರು. ಕೆಸೆಟ್ಟನ್ನು ಬಾಡಿಗೆ ಪಡೆದು ಕಳಿಸಿಕೊಟ್ಟಿದ್ದೇನೆ. ಕೆಸೆಟ್ ಬಾಡಿಗೆ ಕಳಿಸಿಕೊಡುವಂತೆಯೂ ನಾಗಾಭರಣರಿಗೆ ತಿಳಿಸಿದ್ದೇವೆ. ಆದರೆ, ಉತ್ತರವಾಗಲೀ, ಬಾಡಿಗೆಯಾಗಲೀ ಈವರೆಗೂ ಬಂದಿಲ್ಲ .
Post Your Views
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications











