»   » ಪಾಟೀಲ್‌- ಮಹೇಂದರ್‌ ಬೆಸುಗೆ ಬಿಟ್ಟ ಕತೆ

ಪಾಟೀಲ್‌- ಮಹೇಂದರ್‌ ಬೆಸುಗೆ ಬಿಟ್ಟ ಕತೆ

Posted By:
Subscribe to Filmibeat Kannada

ಮಹೇಂದರ್‌ ನಿರ್ದೇಶನದಲ್ಲಿ ಬಿ.ಸಿ.ಪಾಟೀಲ್‌ ‘ಕೌರವ’ನಾದರು. ಚಿತ್ರ ಸೂಪರ್‌ ಹಿಟ್‌. ಅನಂತರ ಅದೇ ಮಹೇಂದರ್‌ ನಿರ್ದೇಶನದಲ್ಲಿ ‘ಪ್ರೇಮಾಚಾರಿ’ಯಾದರು. ಚಿತ್ರ ಸೂಪರ್‌ ಫ್ಲಾಪ್‌. ಅದರ ಬೆನ್ನಿಗೇ ಇನ್ನೆರಡು ಚಿತ್ರಗಳಿಗೆ ಪಾಟೀಲ್‌ ಸ್ಕೆಚ್‌ ಹಾಕಿದರು, ಒಂದು ‘ಲಂಕೇಶ’, ಇನ್ನೊಂದು ‘ಜೋಗುಳ’. ಇವೆರಡು ಕತೆಯ ಕ್ರೆಡಿಟ್‌ ಬಿ.ಎ.ಮಧು ಅವರದು. ಅವೆರಡನ್ನೂ ಮಹೇಂದರ್‌ ನಿರ್ದೇಶಿಸಬೇಕಾಗಿತ್ತು. ಈ ಮಧ್ಯೆ ಪಾಟೀಲ್‌ ‘ದಳವಾಯಿ’ಯಾದರು. ಮಹೇಂದರ್‌ ಅವರನ್ನು ಬಿಟ್ಟು ಇನ್ನೊಬ್ಬ ನಿರ್ಮಾಪಕ ಸ್ವಾಗತ್‌ ಬಾಬು ಬಳಿ ಸಾಗಿದರು. ಅವರಿಗೆ ‘ಜೋಗುಳ’ದ ಕತೆ ಹೇಳಿದರು. ಅಲ್ಲಿಂದ ಮಹೇಂದರ್‌ ನೆರಳು ಕಂಡರೆ ಸಾಕು ಪಾಟೀಲ್‌ ಗುರ್‌ ಅನ್ನತೊಡಗಿದರು. ಆ ಸಿಟ್ಟಿಗೆ ಲಂಕೇಶ ಚಿತ್ರಕ್ಕೆ ತಾವೇ ನಿರ್ದೇಶಕರಾದರು. ಆಗ ಅವರು ಮಹೇಂದರ್‌ ಮೇಲೆ ಮಾಡಿದ ಆರೋಪಗಳ ಸಾರಾಂಶ ಹೀಗಿದೆ....

ಪ್ರೇಮಾಚಾರಿ ಸೋಲುವುದಕ್ಕೆ ಮಹೇಂದರ್‌ ಅವರೇ ಕಾರಣ ಮತ್ತು ಜೋಗುಳ ಕತೆಯನ್ನು ಅವರು ಕದ್ದು ಮಾರಾಟ ಮಾಡಿದ್ದಾರೆ. ಮಹೇಂದರ್‌ ನಂಬಿಕೆಗೆ ಅನರ್ಹ.

ಆಗ ಸುಮ್ಮನಿದ್ದ ಮಹೇಂದರ್‌ ಇತ್ತೀಚೆಗೆ ‘ಗಟ್ಟಿಮೇಳ’ ಚಿತ್ರೀಕರಣದ ಸಂದರ್ಭದಲ್ಲಿ ಪಾಟೀಲ್‌ಗೆ ತಿರುಗೇಟು ನೀಡಿದ್ದು ಹೀಗೆ ....

ಪಾಟೀಲ್‌ ಬಗ್ಗೆ ಹೇಳುವುದಕ್ಕೆ ನನ್ನಲ್ಲಿ ನೂರು ವಿಷಯಗಳಿವೆ. ಅವರ ಥರ ಅವನ್ನೆಲ್ಲಾ ಪಬ್ಲಿಕ್‌ ಮಾಡೋದಕ್ಕೆ ನಾನು ಹೋಗೋದಿಲ್ಲ. ಅವುಗಳ ಬಗ್ಗೆ ಯೋಚಿಸುವುದಕ್ಕೂ ಹೇಸಿಗೆಯಾಗುತ್ತದೆ. ‘ಜೋಗುಳ’ ಮತ್ತು ‘ಲಂಕೇಶ’ ಇವೆರಡೂ ಚಿತ್ರಗಳ ಕತೆಯಲ್ಲಿ ನನ್ನ ಪಾಲಿದೆ. ನನ್ನ ಕಾನ್ಸೆಪ್ಟಿನ ಲೆವೆಲ್‌ಗೆ ಪಾಟೀಲ್‌ ಆ ಚಿತ್ರಗಳನ್ನು ನಿರ್ದೇಶಿಸುವುದಕ್ಕೆ ಸಾಧ್ಯವಿಲ್ಲ. ಅವರು ನನ್ನ ಕತೆ ಕದಿಯಬಹುದು, ಮಿದುಳನ್ನಲ್ಲ. ಹಾಗಂತ ಕತೆ ಚೌರ್ಯದ ಬಗ್ಗೆ ನಾನು ಸುಮ್ಮನಿರೋದಿಲ್ಲ.

ಇದೀಗ ಬಂದ ಸುದ್ದಿಯ ಪ್ರಕಾರ ‘ಜೋಗುಳ’ ಕತೆಯನ್ನಾಧರಿಸಿ ಮಹೇಂದರ್‌ ನಿರ್ದೇಶಿಸಬೇಕಿದ್ದ ‘ಮಾರಿಗುಡಿ’ ಚಿತ್ರ ತತ್ಕಾಲಕ್ಕೆ ರದ್ದಾಗಿದೆ. ಹಾಗಾಗಿ ಮಹೇಂದರ್‌ ಈಗ ಆರಾಮಾಗಿ ಪಾಟೀಲ್‌ ಮೇಲೆ ಮಾತಿನ ಹಲ್ಲೆ ನಡೆಸಬಹುದು. ಇನ್ನೊಂದೆಡೆ ‘ಜೋಗುಳ’ದ ಕತೆ ಹಕ್ಕು ಪಡೆಯುವ ಸಲುವಾಗಿ ಪಾಟೀಲರ ‘ಲಂಕೇಶ’ ಚಿತ್ರದ ಹಂಚಿಕೆ ಮಾಡುವ ಆಶ್ವಾಸನೆ ಕೊಟ್ಟಿದ್ದ ನಿರ್ಮಾಪಕ ಸ್ವಾಗತ್‌ ಬಾಬು ಹಿಂದೆ ಸರಿದಿದ್ದಾರೆ. ಹಾಗಾಗಿ ಪಾಟೀಲ್‌ ಕೂಡ ಬಾಬು ಮೇಲೆ ಬೈಗಳ ಮಳೆ ಸುರಿಸಬಹುದು.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada