20 ದಿನಕ್ಕೆ 45 ಕೋಟಿ ರೂ. ಸಂಭಾವನೆ ಎಂದಿದ್ದ ಪವನ್ ಈಗ ಜೇಬಿಗಿಳಿಸ್ತಿರೋದು 100 ಕೋಟಿ ರೂ.!
ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಸೌತ್ ಸಿನಿದುನಿಯಾದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರೋ ಪವನ್, ಜನಸೇನಾ ಪಕ್ಷ ಕಟ್ಟಿ ರಾಜಕೀಯರಂಗದಲ್ಲೂ ಸಕ್ರಿಯರಾಗಿದ್ದಾರೆ. ಮುಂದಿನ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಜನಸೇನಾನಿ ಪಕ್ಷ ಸಂಘಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಜೊತೆ ಜೊತೆಗೆ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. 4 ಸಿನಿಮಾಗಳು ಪವನ್ ಕೈಯಲ್ಲಿವೆ.
ಚುನಾವಣೆ ಹತ್ತಿರವಾಗಿ ಪವನ್ ಕಲ್ಯಾಣ್ ಸಂಪೂರ್ಣವಾಗಿ ರಾಜಕೀಯರಂಗದಲ್ಲಿ ಬ್ಯುಸಿಯಾದರೆ ಮತ್ತೆ ಸಿನಿಮಾಗಳಲ್ಲಿ ನಟಿಸೋದು ಕಷ್ಟ. ಹಾಗಾಗಿ ಚುನಾವಣೆಗೂ ಮುನ್ನ ಎಷ್ಟು ಸಾಧ್ಯವಾಗುತ್ತೋ ಅಷ್ಟು ಸಿನಿಮಾಗಳಲ್ಲಿ ನಟಿಸೋಕೆ ಮನಸ್ಸು ಮಾಡಿದ್ದಾರೆ. ಅದೇ ಕಾರಣಕ್ಕೆ ನಿರ್ಮಾಪಕರು ಕೂಡ ಪವರ್ ಸ್ಟಾರ್ ಕೇಳಿದ್ದಷ್ಟು ಸಂಭಾವನೆ ಕೊಡೋಕೆ ಸಿದ್ಧರಾಗಿದ್ದಾರೆ. ಇದೀಗ ಮತ್ತೊಮ್ಮೆ ಪವನ್ ಕಲ್ಯಾಣ್ ಸಂಭಾವನೆ ವಿಚಾರ ಭಾರೀ ಸದ್ದು ಮಾಡ್ತಿದೆ. ಇತ್ತೀಚೆಗೆ ತಮ್ಮ ಸಂಭಾವನೆ ಬಗ್ಗೆ ಜನಸೇನಾನಿ ಬಹಿರಂಗವಾಗಿ ಮಾತನಾಡಿದ್ದರು.

ಸಾಮಾನ್ಯವಾಗಿ ಸ್ಟಾರ್ ನಟರು ಹತ್ತಾರು ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿರುತ್ತದೆ. ಕೆಲವರ ಸಂಭಾವನೆ 100 ಕೋಟಿ ರೂ. ಗಡಿ ದಾಟಿದೆ. ಇದೀಗ ಪವನ್ ಕಲ್ಯಾಣ್ ಕೂಡ 100 ಕೋಟಿ ರೂ. ಸಂಭಾವನೆ ಕ್ಲಬ್ ಸೇರಿಕೊಂಡಿದ್ದಾರೆ ಎನ್ನಲಾಗ್ತಿದೆ. ಟಾಲಿವುಡ್‌ನಲ್ಲಿ ಈಗ ಇದೇ ಸುದ್ದಿ ಭಾರೀ ಸದ್ದು ಮಾಡ್ತಿದೆ. 'ಬ್ರೋ' ಚಿತ್ರಕ್ಕಾಗಿ ಕೇವಲ 20 ದಿನಕ್ಕೆ 45 ಕೋಟಿ ರೂ. ಸಂಭಾವನೆ ಪಡೆದಿದ್ದ ಪವರ್ ಸ್ಟಾರ್ 100 ಕೋಟಿ ರೂ. ಚಾರ್ಜ್ ಮಾಡಿರೋದು ನಿಜವೇ ಎನ್ನುವ ಚರ್ಚೆ ನಡೀತಿದೆ.
ಜನಸೇನಾನಿಗೆ ಸಿನಿಮಾ ಯಾಕೆ?
ರಾಜಕೀಯರಂಗದಲ್ಲಿ ಬ್ಯುಸಿಯಾಗಿರುವ ಪವನ್ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಮಾಡಿದ್ದರು. ಇದನ್ನು ನೋಡಿ ಪವರ್ ಸ್ಟಾರ್ ಚಿತ್ರರಂಗಕ್ಕೆ ಗುಡ್‌ಬೈ ಹೇಳ್ತಾರೆ ಎನ್ನುವ ಗುಸುಗುಸು ಶುರುವಾಗಿತ್ತು. ಇನ್ನು ರಾಜಕೀಯ ನಾಯಕನಿಗೆ ಸಿನಿಮಾಗಳು ಯಾಕೆ ಬೇಕು? ಸಿನಿಮಾಗಳಲ್ಲಿ ನಟಿಸುವವನು ಜನರ ಸೇವೆ ಮಾಡ್ತಾನಾ? ಎನ್ನುವ ಪ್ರಶ್ನೆಯನ್ನು ಕೂಡ ಕೆಲ ರಾಜಕೀಯ ನಾಯಕರು ಎತ್ತಿದ್ದರು. ನೀವು ಕೂಡ ಬೇರೆ ಬೇರೆ ವ್ಯಾಪಾರ ವ್ಯವಹಾರ ಮಾಡಿಕೊಂಡು ರಾಜಕೀಯದಲ್ಲಿದ್ದೀರಾ? ನಾನು ಯಾಕೆ ಸಿನಿಮಾಗಳಲ್ಲಿ ನಟಿಸಬಾರದು? ಪಕ್ಷ ಸಂಘಟನೆಗೆ ಹಣ ಬೇಕು, ಅದಕ್ಕಾಗಿ ಸಿನಿಮಾಗಳಲ್ಲಿ ನಟಿಸ್ತೀನಿ ಎಂದು ಪವನ್ ತಿರುಗೇಟು ನೀಡಿದ್ದರು.

'OG' ಚಿತ್ರಕ್ಕಾಗಿ 100 ಕೋಟಿ ರೂ.?
ಬಾಹುಬಲಿ ನಂತರ ಪ್ರಭಾಸ್ ನಟನೆಯ 'ಸಾಹೋ' ಚಿತ್ರಕ್ಕೆ ಸುಜಿತ್ ಆಕ್ಷನ್ ಕಟ್ ಹೇಳಿದ್ದರು. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಊಹಿಸಿದ ಮಟ್ಟಕ್ಕೆ ಸದ್ದು ಮಾಡಲಿಲ್ಲ. ಆದರೆ ಸುಜಿತ್ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಸುಜಿತ್ ನಿರ್ದೇಶನದ 'OG' ಚಿತ್ರದಲ್ಲಿ ಪವನ್ ಕಲ್ಯಾಣ್ ನಟಿಸ್ತಿದ್ದಾರೆ. ಈ ಚಿತ್ರಕ್ಕಾಗಿ ಪವರ್ ಸ್ಟಾರ್ ಬರೋಬ್ಬರಿ 100 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ. ಇದೇ ವಿಚಾರ ಈಗ ಟಾಲಿವುಡ್‌ನಲ್ಲಿ ಭಾರೀ ಸದ್ದು ಮಾಡ್ತಿದೆ. ಆಕ್ಷನ್ ಎಂಟರ್‌ಟೈನರ್ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ.
'ಬ್ರೋ' ಚಿತ್ರಕ್ಕಾಗಿ 45 ಕೋಟಿ ರೂ.
ತಮಿಳಿನ 'ವಿನೋದಯ ಸಿತಂ' ತೆಲುಗು ರೀಮೆಕ್‌ನಲ್ಲಿ ಪವನ್ ಕಲ್ಯಾಣ್ ನಟಿಸಿದ್ದಾರೆ. ಈ ಚಿತ್ರಕ್ಕಾಗಿ ಕೇವಲ 22 ದಿನ ಕಾಲ್‌ಶೀಟ್ ಕೊಟ್ಟಿದ್ದರು. ಅದಕ್ಕಾಗಿ ದಿನಕ್ಕೆ 2 ಕೋಟಿ ರೂ. ಲೆಕ್ಕದಲ್ಲಿ ಒಟ್ಟು 45 ಕೋಟಿ ರೂ. ತೆಗೆದುಕೊಂಡಿರೋದಾಗಿ ಪವನ್ ಹೇಳಿದ್ದರು. ಆದರೆ ಎಲ್ಲಾ ಚಿತ್ರಕ್ಕೂ ಇಷ್ಟೇ ಕೊಡುತ್ತಾರೆ ಎಂದು ನಾನು ಹೇಳಲ್ಲ ಎಂದು ಸಹ ಸ್ಪಷ್ಟನೆ ನೀಡಿದ್ದರು. ಆದರೆ 'OG' ಚಿತ್ರದಲ್ಲಿ ಪವನ್ ಹೀರೊ ಆಗಿರುವುದರಿಂಧ ಹೆಚ್ಚು ಡೇಟ್ಸ್ ನೀಡಿದ್ದಾರೆ. 'RRR' ಸಿನಿಮಾ ನಿರ್ಮಿಸಿದ್ದ ಡಿವಿವಿ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಈ ಚಿತ್ರಕ್ಕೂ ಬಂಡವಾಳ ಹೂಡುತ್ತಿದೆ.

100 ಕೋಟಿ ರೂ. ಸಂಭಾವನೆ ನಟರು
ಈಗಾಗಲೇ ರಜನಿಕಾಂತ್, ಪ್ರಭಾಸ್, ಶಾರುಕ್ ಖಾನ್, ದಳಪತಿ ವಿಜಯ್, ಅಲ್ಲು ಅರ್ಜುನ್, ಸಲ್ಮಾನ್ ಖಾನ್ ಚಿತ್ರವೊಂದಕ್ಕೆ 100 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ. ಇದೀಗ ಪವನ್ ಕಲ್ಯಾಣ್ ಸಹ 100 ಕೋಟಿ ಸಂಭಾವನೆ ಕ್ಲಬ್ ಸೇರಿಕೊಂಡಿದ್ದಾರೆ. 'ವಕೀಲ್ ಸಾಬ್' ಹಾಗೂ 'ಭೀಮ್ಲಾ ನಾಯಕ್' ಸಿನಿಮಾಗಳ ಸಕ್ಸಸ್ ನೋಡಿ ನಿರ್ಮಾಪಕರು ಇಷ್ಟು ಸಂಭಾವನೆ ಕೊಡಲು ಮುಂದಾಗಿರುವ ಸಾಧ್ಯತೆಯಿದೆ.


Click it and Unblock the Notifications











