Toxic; ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಚಿತ್ರಕ್ಕೆ ಖಡಕ್ ವಿಲನ್ ಸಿಕ್ಕೇಬಿಟ್ನಾ?
ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಘೋಷಣೆಯಾದ ದಿನದಿಂದಲೂ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಇದೀಗ ಸಿನಿಮಾ ಚಿತ್ರೀಕರಣ ಶುರುವಾಗಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಚಿತ್ರದ ಸ್ಟಾರ್‌ಕಾಸ್ಟ್ ಬಗ್ಗೆ ಕೂಡ ಭಾರೀ ಚರ್ಚೆ ನಡೀತಿದೆ.
ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ 'ಟಾಕ್ಸಿಕ್' ಸಿನಿಮಾ ನಿರ್ಮಿಸುತ್ತಿದ್ದಾರೆ. ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ ಹಾಕಿರುವ ಸೆಟ್‌ನಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ಈಗಾಗಲೇ ಸೆಟ್‌ನ ಕೆಲ ಫೋಟೊ, ವೀಡಿಯೋಗಳು ಲೀಕ್ ಆಗಿ ಸದ್ದು ಮಾಡ್ತಿದೆ. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ಅವರ ಪತಿ ರಾಜೀವ್ ರವಿ ಛಾಯಾಗ್ರಾಹಕರಾಗಿ ಆಯ್ಕೆ ಆಗಿದ್ದಾರೆ.

ಅಂದಾಜು 150 ಕೋಟಿ ರೂ. ಬಜೆಟ್‌ನಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗಲಿದೆ. ದೇಶ ವಿದೇಶದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಲಾಗುತ್ತಿದೆ. ಇನ್ನು ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಾರೆ ಎನ್ನುವುದು ಇನ್ನು ರಹಸ್ಯವಾಗಿಯೇ ಉಳಿದಿದೆ. ಕರೀನಾ ಕಪೂರ್, ನಯನತಾರಾ, ಕೈರಾ ಅದ್ವಾನಿ, ಹುಮಾ ಖುರೇಶಿ ಸೇರಿದಂತೆ ಹಲವರ ಹೆಸರುಗಳು ಕೇಳಿಬಂತು. ಆದರೆ ಚಿತ್ರತಂಡ ಮಾತ್ರ ಈ ಬಗ್ಗೆ ಪ್ರತಿಕ್ರಿಯಿಸಲಿಲ್ಲ.
ಸದ್ಯ ಸಿನಿಮಾ ಚಿತ್ರೀಕರಣ ಶುರುವಾಗಿರುವುದರಿಂದ ಕಲಾವಿದರ ಬಗ್ಗೆ ಮಾಹಿತಿ ಹೊರಬೀಳಲೇಬೇಕಿದೆ. ಇನ್ನು ಹಾಲಿವುಡ್‌ನ ಸ್ಟೀವನ್ ಗ್ರಿಫಿನ್ 'ಟಾಕ್ಸಿಕ್' ಚಿತ್ರದ 2ನೇ ಯೂನಿಟ್ ಡೈರೆಕ್ಟರ್ ಆಗಿ ತಂಡ ಸೇರಿದ್ದಾರೆ. 'ದಿ ಬ್ಯಾಟ್‌ಮನ್', 'ಮ್ಯಾಡ್ ಮ್ಯಾಕ್ಸ್: ಫ್ಯೂರಿ ರೋಡ್' ಸೇರಿದಂತೆ ಒಂದಷ್ಟು ಹಾಲಿವುಡ್ ಚಿತ್ರಗಳಿಗೆ ಇವರು ಕೆಲಸ ಮಾಡಿದ್ದಾರೆ.

ಬಹಳ ಹಿಂದೆಯೇ ಹಾಲಿವುಡ್ ಸ್ಟಂಟ್ ಡೈರೆಕ್ಟರ್ ಜೆ. ಜೆ ಪೆರ್ರಿ ಜೊತೆ ಯಶ್ ಕಾಣಿಸಿಕೊಂಡಿದ್ದ ಫೋಟೊ ವೈರಲ್ ಆಗಿತ್ತು. ಅಂದೇ ಆತ 'ಟಾಕ್ಸಿಕ್' ಚಿತ್ರದಲ್ಲಿ ಕೆಲಸ ಮಾಡುತ್ತಾನೆ ಎನ್ನುವ ಮಾತುಗಳು ಕೇಳಿಬಂದಿತ್ತು. ಸ್ಟೀವನ್ ಗ್ರಿಫಿನ್ ಎಂಟ್ರಿ ಆಗಿರುವುದು ನೋಡುತ್ತಿದ್ದರೆ ಜೆ. ಜೆ ಪೆರ್ರಿ ಬರೋದು ಬಹುತೇಖ ಪಕ್ಕಾ ಆಗಿದೆ. ಇದೀಗ ಚಿತ್ರದ ವಿಲನ್ ಬಗ್ಗೆ ಗುಸುಗುಸು ಶುರುವಾಗಿದೆ.
ಆಕ್ಷನ್ ಸಿನಿಮಾ ಅಂದಮೇಲೆ ವಿಲನ್ ಇರಲೇಬೇಕು. ಆತ ಹೀರೊಗಿಂತ ಖಡಕ್ ಆಗಿ ಇರಬೇಕು. ಅದ್ಭುತವಾಗಿ ನಟಿಸಬೇಕು. ಆಗ ಮಾತ್ರ ಹೀರೊಗೆ ಆರ್ಭಟಕ್ಕೆ ಹೆಚ್ಚು ಅವಕಾಶ ಸಿಗುತ್ತದೆ. ಸದ್ಯ ಬ್ರಿಟೀಷ್ ನಟ ಡ್ಯಾರೆಲ್ ಡಿಸಿಲ್ವಾ 'ಟಾಕ್ಸಿಕ್' ಚಿತ್ರದ ವಿಲನ್ ಆಗಿ ನಟಿಸುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ. ಈ ಸುದ್ದಿ ಕೇಳಿ ರಾಕಿಂಗ್ ಸ್ಟಾರ್ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ. ಈತ 'ವ್ರಾತ್ ಆಫ್ ಮ್ಯಾನ್ ', 'ಇನ್ಫಾರ್ಮರ್' ಮತ್ತು 'ವ್ಯಾನ್ ಡೆರ್ ವಾಲ್ಕ್' ರೀತಿಯ ಸಿನಿಮಾಗಳಲ್ಲಿ ನಟಿಸಿದ್ದಾನೆ.
ರಂಗಭೂಮಿ ನಟ ಕೂಡ ಆಗಿರುವ ಡ್ಯಾರೆಲ್ ಡಿಸಿಲ್ವಾ ತನ್ನ ಖಡಕ್ ಲುಕ್‌ನಿಂದಲೇ ಗಮನ ಸೆಳೆಯುತ್ತಾರೆ. ರಾಕಿಂಗ್ ಸ್ಟಾರ್ ಎದುರು ನಿಜಕ್ಕೂ ಖಡಕ್ ವಿಲನ್ ಆಗಿ ಕಾಣುತ್ತಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ 'ಟಾಕ್ಸಿಕ್' ಚಿತ್ರದಲ್ಲಿ ಡ್ಯಾರೆಲ್ ಡಿಸಿಲ್ವಾ ನಟಿಸುವ ಬಗ್ಗೆ ಖಚಿತ ಮಾಹಿತಿ ಇನ್ನು ಲಭ್ಯವಾಗಿಲ್ಲ.
ಬಹಳ ದೊಡ್ಡಮಟ್ಟದಲ್ಲಿ ಯಶ್ 'ಟಾಕ್ಸಿಕ್' ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ. ಅದ್ಧೂರಿ ಮೇಕಿಂಗ್, ಗ್ರಾಫಿಕ್ಸ್ ವರ್ಕ್, ಭಾರೀ ಪ್ರಮೋಷನ್ ಹಾಗೂ ರಿಲೀಸ್‌ಗೆ ಚಿತ್ರತಂಡ ಮುಂದಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಮಾತ್ರವಲ್ಲದೇ ವಿದೇಶಿ ಭಾಷೆಗಳಿಗೂ ಸಿನಿಮಾ ಡಬ್ ಮಾಡುವ ಪ್ರಯತ್ನ ನಡೀತಿದೆ. ಮುಂದಿನ ವರ್ಷ ಏಪ್ರಿಲ್ 10ಕ್ಕೆ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











