ಪ್ರಭಾಸ್ ಜೊತೆ ಸೇರಲಿದ್ದಾರೆ ಬಾಲಿವುಡ್ ಸೂಪರ್ ಹೀರೋ
ಪ್ರಭಾಸ್, ಭಾರತ ಸಿನಿಮಾದ ಸ್ಟಾರ್ ಆಗಿ ಬಹುಕಾಲವಾಯಿತು. ಬಾಹುಬಲಿ ನಂತರ ಅವರನ್ನು ಹಲವು ಬಾಲಿವುಡ್ ಸಿನಿಮಾಗಳು ಹುಡುಕಿ ಬಂದವು. ಈಗಾಗಲೇ ಒಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ಸಹ.
ಓಂ ರಾವತ್ ನಿರ್ದೇಶನದ 'ಆದಿಪುರುಷ್' ಸಿನಿಮಾದಲ್ಲಿ ನಟಿಸುತ್ತಿರುವ ಪ್ರಭಾಸ್ ಅನ್ನು ಬಾಲಿವುಡ್‌ನ ಆಕ್ಷನ್ ನಿರ್ದೇಶಕರೊಬ್ಬರು ಸಂಪರ್ಕಿಸಿ ಕತೆ ಹೇಳಿದ್ದಾರೆ. ಕತೆ ಪ್ರಭಾಸ್‌ಗೆ ಒಪ್ಪಿಗೆಯೂ ಆಗಿದ್ದು, ಮುಂದಿನ ವರ್ಷ ಸಿನಿಮಾ ಆರಂಭವಾಗಲಿದೆ ಎನ್ನಲಾಗುತ್ತಿದೆ.
ಹೊಸ ವಿಷಯವೆಂದರೆ ಪ್ರಭಾಸ್ ಅವರ ಈ ಬಾಲಿವುಡ್ ಆಕ್ಷನ್ ಸಿನಿಮಾದಲ್ಲಿ ಬಾಲಿವುಡ್‌ನ ಸೂಪರ್ ಸ್ಟಾರ್ ಒಬ್ಬರು ಜೊತೆಯಾಗಲಿದ್ದಾರೆ.
ಹೌದು, ಪ್ರಭಾಸ್ ಗಾಗಿ, ಬಾಲಿವುಡ್‌ನ ಆಕ್ಷನ್ ಡೈರೆಕ್ಟರ್ ಎಂದೇ ಖ್ಯಾತರಾಗಿರುವ ಸಿದ್ಧಾರ್ಥ್ ಆನಂದ್ ಕತೆಯೊಂದನ್ನು ಹೆಣೆದಿದ್ದು, ಇದೇ ಸಿನಿಮಾದಲ್ಲಿ ಹೃತಿಕ್ ರೋಷನ್ ಸಹ ನಟಿಸಲಿದ್ದಾರೆ. ಹಿಂದಿ ಹಾಗೂ ತೆಲುಗು ಎರಡೂ ಭಾಷೆಯಲ್ಲಿ ಈ ಸಿನಿಮಾ ಏಕಕಾಲಕ್ಕೆ ನಿರ್ಮಾಣವಾಗುವ ಸಾಧ್ಯತೆ ಇದೆ.

'ವಾರ್' ಸಿನಿಮಾ ನಿರ್ದೇಶಿಸಿದ್ದ ಸಿದ್ಧಾರ್ಥ್
ಸಿದ್ಧಾರ್ಥ್ ಆನಂದ್ ಅವರ 'ವಾರ್' ಸಿನಿಮಾದಲ್ಲಿ ಹೃತಿಕ್ ನಟಿಸಿದ್ದರು. ಅದೇ ಸಿನಿಮಾದಲ್ಲಿ ಟೈಗರ್ ಶ್ರಾಫ್ ಸಹ ನಟಿಸಿದ್ದರು. ಅದಕ್ಕೂ ಮುನ್ನ ಸಿದ್ಧಾರ್ಥ್ ನಿರ್ದೇಶನದ 'ಬ್ಯಾಂಗ್ ಬ್ಯಾಂಗ್' ಸಿನಿಮಾದಲ್ಲಿಯೂ ಹೃತಿಕ್ ನಟಿಸಿದ್ದರು. ಇದೀಗ ಪ್ರಭಾಸ್ ಹಾಗೂ ಹೃತಿಕ್, ಇಬ್ಬರು ಪವರ್‌ಫುಲ್ ನಾಯಕರನ್ನು ತೆರೆಯ ಮೇಲೆ ತರುವ ಪ್ರಯತ್ನದಲ್ಲಿದ್ದಾರೆ ಸಿದ್ಧಾರ್ಥ್.

ಶಾರುಖ್ ಖಾನ್ ಸಿನಿಮಾ ನಿರ್ದೇಶನದಲ್ಲಿ ನಿರತ ಸಿದ್ಧಾರ್ಥ್
ನಿರ್ದೇಶಕ ಸಿದ್ಧಾರ್ಥ್, ಪ್ರಸ್ತುತ ಶಾರುಖ್ ನಟಿಸುತ್ತಿರುವ 'ಪಠಾಣ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅದರ ನಂತರ ಹೃತಿಕ್-ದೀಪಿಕಾ ಪಡುಕೋಣೆ ನಟನೆಯ 'ಫೈಟರ್' ಸಿನಿಮಾ ನಿರ್ದೇಶಿಸಲಿದ್ದಾರೆ. ಅದಾದ ನಂತರವೇ ಪ್ರಭಾಸ್-ಹೃತಿಕ್ ಸಿನಿಮಾ ಸೆಟ್ಟೇರಲಿದೆ. ಈ ಸಿನಿಮಾ ಯಶ್ ರಾಜ್ ಬ್ಯಾನರ್‌ನಿಂದ ನಿರ್ಮಾಣಗೊಳ್ಳಲಿದೆ.

2021 ರಲ್ಲಿ ಪ್ರಭಾಸ್ ಫುಲ್ ಬ್ಯುಸಿ
ಪ್ರಭಾಸ್ ಸಹ 'ಆದಿಪುರುಷ್' ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗಳ ಬಳಿಕ ನಾಗ್ ಅಶ್ವಿನ್ ನಿರ್ದೇಶಿಸಲಿರುವ ಇನ್ನೂ ಹೆಸರಿಡ ಸಿನಿಮಾದಲ್ಲಿ ನಟಿಸಬೇಕಿದೆ. ಇದೇ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಹಾಗೂ ಅಮಿತಾಬ್ ಬಚ್ಚನ್ ಅವರುಗಳು ನಟಿಸಲಿದ್ದಾರೆ. ಅದಾದ ಬಳಿಕವೇ ಸಿದ್ಧಾರ್ಥ್ ಸಿನಿಮಾದಲ್ಲಿ ನಟಿಸಲು ಪ್ರಭಾಸ್‌ಗೆ ಸಮಯ ದೊರಕಲಿದೆ.

ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಹೃತಿಕ್
ಇನ್ನು ಹೃತಿಕ್ ರೋಷನ್ ಅವರು 'ಕ್ರಿಶ್ 4' ಹಾಗೂ 'ಫೈಟರ್' ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಎರಡೂ ಸಿನಿಮಾದ ಚಿತ್ರೀಕರಣ ಇನ್ನೂ ಪ್ರಾರಂಭವಾಗಿಲ್ಲ. ಈ ನಡುವೆ ತಮಿಳಿನ 'ವಿಕ್ರಂ-ವೇದ' ಸಿನಿಮಾದ ರೀಮೇಕ್‌ನಲ್ಲಿ ಸಹ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ಸಹ ಇರಲಿದ್ದಾರೆ. ಹಾಲಿವುಡ್ ಸಿನಿಮಾ ಒಂದರಿಂದಲೂ ಹೃತಿಕ್‌ಗೆ ಬುಲಾವ್ ಬಂದಿದೆ ಎಂಬ ಸುದ್ದಿಯಿದೆ.


Click it and Unblock the Notifications











