ಸಲ್ಮಾನ್ ಖಾನ್ ಅನ್ನು ಮೀರಿಸಿದ ಪ್ರಭಾಸ್, ಭಾರತದಲ್ಲಿ ನಂಬರ್ 1
'ಬಾಹುಬಲಿ' ನಂತರ ಪ್ರಭಾಸ್ ರೇಂಜ್ ಬದಲಾಗಿ ಹೋಗಿದೆ. 'ಬಾಹುಬಲಿ'ಗೆ ಮುನ್ನ ತೆಲುಗು ಚಿತ್ರರಂಗದ ಸ್ಟಾರ್ ಆಗಿದ್ದವರು, ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆದರು, ಈಗಂತೂ ಅವರು ಪ್ಯಾನ್ ವರ್ಲ್ಡ್ ಸ್ಟಾರ್.
ಪ್ರಭಾಸ್ ಮೇಲೆ ನೂರಾರು ಕೋಟಿ ಬಂಡವಾಳ ಹೂಡಲು ನಿರ್ಮಾಪಕರು ಸಾಲು ನಿಂತಿದ್ದಾರೆ. ಈಗಾಗಲೇ ನೂರಾರು ಕೋಟಿ ಬಂಡವಾಳವನ್ನು ಪ್ರಭಾಸ್ ಮೇಲೆ ಹೂಡಲಾಗಿದೆ.
ಪ್ರಭಾಸ್ ರೇಂಜ್ ಈಗ ಬಹುದೊಡ್ಡ ಮಟ್ಟಕ್ಕೆ ಏರಿಬಿಟ್ಟಿದೆ. ಬಾಲಿವುಡ್ ಸ್ಟಾರ್ ನಟರನ್ನೂ ಸಹ ಪ್ರಭಾಸ್ ಹಿಂದೆ ತಳ್ಳಿ ಬಿಟ್ಟಿದ್ದಾರೆ. ಪ್ರಭಾಸ್ ಈಗ ಭಾರತದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆವ ನಟ. ಈ ಮುಂಚೆ ಸಲ್ಮಾನ್ ಖಾನ್ ಅತಿ ಹೆಚ್ಚು ಸಂಭಾವನೆ ಪಡೆವ ನಟ ಎನಿಸಿಕೊಂಡಿದ್ದರು. ಆದರೆ ಈಗ ಈ ದಾಖಲೆ ಪ್ರಭಾಸ್ ಹೆಸರಿಗೆ ಸೇರ್ಪಡೆಯಾಗಿದೆ.
ಪ್ರಭಾಸ್ ಪ್ರಸ್ತುತ ಹಿಂದಿ ಸಿನಿಮಾ 'ಆದಿಪುರುಷ್'ನಲ್ಲಿ ನಟಿಸುತ್ತಿದ್ದು, ಈ ಸಿನಿಮಾ ಭಾರತದ ಈವರೆಗಿನ ಅತಿ ಹೆಚ್ಚು ಬಜೆಟ್‌ನ ಸಿನಿಮಾ ಆಗಿದೆ. ಈ ಸಿನಿಮಾಕ್ಕಾಗಿ ಭಾರಿ ದೊಡ್ಡ ಮೊತ್ತವನ್ನು ಪ್ರಭಾಸ್ ಸಂಭಾವನೆಯಾಗಿ ಪಡೆದುಕೊಳ್ಳುತ್ತಿದ್ದಾರೆ. ಬಾಲಿವುಡ್‌ನ ಖಾನ್‌ಗಳು, ಅಕ್ಷಯ್ ಕುಮಾರ್, ಕಪೂರ್‌ಗಳು ಸಹ ಈವರೆಗೆ ಪಡೆಯದಷ್ಟು ಸಂಭಾವನೆಯನ್ನು ಪ್ರಭಾಸ್ 'ಆದಿಪುರುಷ್' ಸಿನಿಮಾಕ್ಕಾಗಿ ಪಡೆಯುತ್ತಿದ್ದಾರೆ.

ಭಾರಿ ಮೊತ್ತದ ಸಂಭಾವನೆ ಪಡೆದ ಪ್ರಭಾಸ್
'ಆದಿಪುರುಷ್' ಸಿನಿಮಾಕ್ಕಾಗಿ ಬರೋಬ್ಬರಿ 150 ಕೋಟಿ ರೂಪಾಯಿ ಸಂಭಾವನೆಯನ್ನು ಪ್ರಭಾಸ್ ಪಡೆದುಕೊಳ್ಳುತ್ತಿದ್ದಾರೆ. ಪ್ರಭಾಸ್ ಈವರೆಗೆ ಪಡೆದಿರುವ ಸಂಭಾವನೆಯಲ್ಲಿ ಇದೇ ಅತಿ ಹೆಚ್ಚು ಅಷ್ಟೇ ಅಲ್ಲದೆ ಭಾರತದ ಯಾವೊಬ್ಬ ನಟನೂ ಇಷ್ಟು ಸಂಭಾವನೆ ಪಡೆದಿಲ್ಲ. ಪ್ರಭಾಸ್ ಸಂಭಾವನೆ ವಿಷಯವನ್ನು ಬಾಲಿವುಡ್‌ನ ಟ್ರೇಡ್ ಅನಾಲಿಸ್ಟ್ ಒಬ್ಬರು ಸಂದರ್ಶನವೊಂದರಲ್ಲಿ ಬಾಯಿ ಬಿಟ್ಟಿದ್ದಾರೆ.

ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್
'ಆದಿಪುರುಷ್' ಸಿನಿಮಾ ಹಿಂದಿ ಸೇರಿದಂತೆ ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದ್ದು, ರಾಮಾಯಣದ ಕತೆ ಹೊಂದಿರುವ ಈ ಸಿನಿಮಾದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದು, ಕೃತಿ ಸೆನನ್ ಸೀತಾಮಾತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹನುಮಂತನ ಪಾತ್ರದಲ್ಲಿ ದೇವದತ್ತ ನಾಗೆ, ಲಕ್ಷ್ಮಣನ ಪಾತ್ರದಲ್ಲಿ ಸನ್ನಿ ಸಿಂಗ್ ನಟಿಸುತ್ತಿದ್ದಾರೆ. ಸಿನಿಮಾವನ್ನು ಓಂ ರಾವತ್ ನಿರ್ದೇಶನ ಮಾಡುತ್ತಿದ್ದು, ಸಿನಿಮಾಕ್ಕೆ ಟಿ ಸೀರೀಸ್ ಮಾಲೀಕ ಭೂಷಣ್ ಕುಮಾರ್ ಬಂಡವಾಳ ಹೂಡಿದ್ದಾರೆ.

100 ಕೋಟಿ ಸಂಭಾವನೆ ಪಡೆವ ಸಲ್ಮಾನ್ ಖಾನ್
ಸಲ್ಮಾನ್ ಖಾನ್ ಸಿನಿಮಾವೊಂದಕ್ಕೆ 100 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. 'ರಾಧೆ' ಸಿನಿಮಾಕ್ಕೆ ಸಲ್ಮಾನ್ ಖಾನ್ 100 ಕೋಟಿ ಸಂಭಾವನೆ ಪಡೆದಿದ್ದಾಗಿ ಸುದ್ದಿಯಾಗಿತ್ತು. ನಂತರ ಬಿಡುಗಡೆ ಆದ 'ಅಂತಿಮ್' ಸಿನಿಮಾಕ್ಕೂ ಸಲ್ಮಾನ್ ಖಾನ್ 100 ಕೋಟಿ ಪಡೆದಿದ್ದರು. ಆದರೆ ಆ ಸಿನಿಮಾ ಅಷ್ಟೊಳ್ಳೆ ಕಲೆಕ್ಷನ್ ಮಾಡಲಿಲ್ಲ. 'ಅಂತಿಮ್' ಸಿನಿಮಾ ವಿಫಲವಾದ ನಂತರ, ಸಲ್ಮಾನ್ ಖಾನ್ ಸಂಭಾವನೆ ಕಡಿಮೆ ಮಾಡಿಕೊಳ್ಳಬೇಕು ಎಂಬ ವಾದಗಳು ಬಾಲಿವುಡ್‌ನಲ್ಲಿ ಕೇಳಿ ಬಂದಿತ್ತು.

ಪ್ರಭಾಸ್ ಮುಂದಿನ ಸಿನಿಮಾಗಳು
ಇನ್ನು ಪ್ರಭಾಸ್, 'ಆದಿಪುರುಷ್' ಸಿನಿಮಾಕ್ಕೆ ಮಾತ್ರವೇ ಅಲ್ಲದೆ ತಮ್ಮ ಮುಂದಿನ ಸಿನಿಮಾ 'ಸ್ಪಿರಿಟ್'ಗೂ ಭಾರಿ ದೊಡ್ಡ ಸಂಭಾವನೆ ಪಡೆಯುತ್ತಿದ್ದಾರೆ. ಈ ಸಿನಿಮಾಕ್ಕೂ ಸಹ 100 ಕೋಟಿಗೂ ಹೆಚ್ಚಿನ ಮೊತ್ತವನ್ನು ಸಂಭಾವನೆ ರೂಪದಲ್ಲಿ ಪ್ರಭಾಸ್ ಪಡೆಯುತ್ತಿದ್ದಾರೆ. 'ಸ್ಪಿರಿಟ್' ಸಿನಿಮಾಕ್ಕೂ ಮುನ್ನ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಜೊತೆಗೆ ಹೊಸ ಸಿನಿಮಾದಲ್ಲಿ ಪ್ರಭಾಸ್ ನಟಿಸುತ್ತಿದ್ದು, ಪೌರಾಣಿಕ ಕತೆಯುಳ್ಳ ಈ ಸಿನಿಮಾಕ್ಕೂ ಪ್ರಭಾಸ್ ದುಬಾರಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಪ್ರಭಾಸ್ ನಟನೆಯ 'ರಾಧೆ-ಶ್ಯಾಮ್' ಸಿನಿಮಾ ಜನವರಿ 14 ರಂದು ಬಿಡುಗಡೆ ಆಗಲಿದೆ. ಅದರ ಬಳಿಕ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











