ಮತ್ತೆ ಒಂದಾಗುತ್ತಿದ್ದಾರೆ ಪ್ರಭಾಸ್-ರಾಜಮೌಳಿ: 'ಬಾಹುಬಲಿ'ಯನ್ನು ಮೀರಿಸುವ ಸಿನಿಮಾ?
ದಕ್ಷಿಣ ಭಾರತ ಚಿತ್ರರಂಗಕ್ಕೆ 'ಬಾಹುಬಲಿ' ತೆರೆದಿಟ್ಟ ಅವಕಾಶಗಳು ದೊಡ್ಡವು. ದೊಡ್ಡ ಮಟ್ಟದ ವಿಶ್ವ ಮಾರುಕಟ್ಟೆಯನ್ನು 'ಬಾಹುಬಲಿ' ಸಿನಿಮಾ ತೆರೆದಿಟ್ಟಿತು. ಈ ಅಲ್ಟ್ರಾ ಮೆಗಾಹಿಟ್ ಸಿನಿಮಾ ಕೊಟ್ಟ ರಾಜಮೌಳಿ ಹಾಗೂ ಪ್ರಭಾಸ್ ಇದೀಗ ಮತ್ತೆ ಒಂದಾಗುತ್ತಿದ್ದಾರೆ.
ಪ್ರಭಾಸ್ ಪ್ರಸ್ತುತ ತಮ್ಮ ಹೊಸ ಸಿನಿಮಾ 'ರಾಧೆ-ಶ್ಯಾಮ್' ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಸಿನಿಮಾದ ಟ್ರೇಲರ್ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ಸಿನಿಮಾವು ಮಾರ್ಚ್ 11 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಪ್ರಭಾಸ್ ಪ್ರಸ್ತುತ ನಿರತರಾಗಿದ್ದಾರೆ.
'ನೀವು ರಾಜಮೌಳಿಯೊಟ್ಟಿಗೆ ಮತ್ತೆ ಯಾವಾಗ ಸಿನಿಮಾ ಮಾಡುತ್ತೀರಿ?' ಎಂಬ ಪ್ರಶ್ನೆ ಪ್ರಭಾಸ್‌ಗೆ ಎದುರಾಗಿದೆ. ಈ ಪ್ರಶ್ನೆಗೆ ಉತ್ತರಿಸಿರುವ ಪ್ರಭಾಸ್, ''ನನಗೆ ರಾಜಮೌಳಿ ಜೊತೆ ಕೆಲಸ ಮಾಡುವುದು ಇಷ್ಟ'' ಎಂದು ಹೇಳಿದ್ದಾರೆ. ಅದು ಮಾತ್ರವೇ ಅಲ್ಲದೆ, ''ಸನಿಹದಲ್ಲಿಯೇ ರಾಜಮೌಳಿ ಜೊತೆ ಮತ್ತೆ ಕೆಲಸ ಮಾಡಲಿದ್ದೇನೆ'' ಎಂದಿದ್ದಾರೆ.

ಕೆಲವು ತೆಲುಗು ಮಾಧ್ಯಮಗಳು ವರದಿ ಮಾಡಿರುವಂತೆ, ಮಹೇಶ್ ಬಾಬು ಜೊತೆಗಿನ ಸಿನಿಮಾ ಮುಗಿಸಿದ ಬಳಿಕ ರಾಜಮೌಳಿ, ಪ್ರಭಾಸ್‌ಗಾಗಿ ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದಾರಂತೆ. ಈ ಬಗ್ಗೆ ಮಾತುಕತೆ ಈಗಾಗಲೇ ಚಾಲ್ತಿಯಲ್ಲಿದೆ ಎನ್ನಲಾಗುತ್ತಿದೆ.
ಪ್ರಭಾಸ್ ಪ್ರಸ್ತುತ ಬಹಳ ಬ್ಯುಸಿಯಾಗಿದ್ದಾರೆ. ಅವರ 'ರಾಧೆ-ಶ್ಯಾಮ್' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಭಾರತದ ಅತಿ ದೊಡ್ಡ ಬಜೆಟ್ ಸಿನಿಮಾ ಆದ 'ಆದಿಪುರುಷ್' ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಇದರ ಜೊತೆಗೆ ಇನ್ನೂ ಹೆಸರಿಡದ ಹೊಸ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.
ಇನ್ನು ರಾಜಮೌಳಿ ಸಹ ಸಖತ್ ಬ್ಯುಸಿಯಾಗಿದ್ದಾರೆ. ಪ್ರಸ್ತುತ 'RRR' ಸಿನಿಮಾ ಬಿಡುಗಡೆಗೆ ತಯಾರಾಗಿರುವ ಅವರು ಇದರ ಬಳಿಕ ಮಹೇಶ್ ಬಾಬು ಅವರೊಟ್ಟಿಗೆ ಹೊಸ ಸಿನಿಮಾ ಮಾಡಲಿದ್ದಾರೆ. ಅದರ ಬಳಿಕ ಸಲ್ಮಾನ್ ಖಾನ್‌ಗೆ ಸಿನಿಮಾ ಒಂದನ್ನು ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆ ಸಿನಿಮಾ ಬಳಿಕವಷ್ಟೆ ಪ್ರಭಾಸ್ ಜೊತೆ ರಾಜಮೌಳಿ ಸಿನಿಮಾ ಮಾಡಲು ಸಾಧ್ಯ.


Click it and Unblock the Notifications











