'ರಾಧೆ ಶ್ಯಾಮ್' ಬಗ್ಗೆ ಅಪಸ್ವರ: ಪ್ರಭಾಸ್ ಚಿತ್ರ ರಿಲೀಸ್ ಅನುಮಾನ!
ಚಿತ್ರರಂಗದಲ್ಲಿ ದೊಡ್ಡ ಚಿತ್ರಗಳು ರಿಲೀಸ್‌ಗೆ ರೆಡಿ ಆಗಿವೆ. 2021ರಲ್ಲಿ ಬಿಗ್ ಚಿತ್ರಗಳ ಹಬ್ಬ ನಡೆಯಲಿದೆ. ಸಾಲು ಸಾಲಾಗಿ ಚಿತ್ರಗಳು ತೆರೆಗೆ ಬರಲಿವೆ. ಆದರೆ ಇದಕ್ಕೆ ಅಡ್ಡಗಾಲು ಹಾಕಲು ಕೊರೊನಾ, ಓಮಿಕ್ರಾನ್ ಪಣ ತೊಟ್ಟಂತಿದೆ. ಸದ್ಯ ಓಮಿಕ್ರಾನ್ ಭಯ ಚಿತ್ರ ಮಂದಿಯನ್ನು ಆವರಿಸಿದೆ.
ಮುಂದಿನ ವರ್ಷ 2022ರ ಆರಂಭದಿಂದಲೇ ಸಾಲು ಸಾಲು ಚಿತ್ರಗಳು ರಿಲೀಸ್ ಆಗಲು ಸಜ್ಜಾಗಿವೆ. ಇನ್ನು ಈ ಹಿಂದೆ ಕೊರೊನಾ ಕಾರಣದಿಂದ ಸಾಕಷ್ಟು ಚಿತ್ರಗಳು ರಿಲೀಸ್‌ಗೆ ರೆಡಿ ಇದ್ದರೂ ಕೂಡ ಚಿತ್ರವನ್ನು ರಿಲೀಸ್ ಮಾಡಲು ಆಗಲಿಲ್ಲ. ಹಾಗಾಗಿ ಈಗ ಬ್ಯಾಕ್ ಟು ಬ್ಯಾಕ್ ಚಿತ್ರಗಳು. ರಿಲೀಸ್ ಆಗುತ್ತಿವೆ. ಅದರಲ್ಲಿ ವರ್ಷದ ಆರಂಭದಲ್ಲಿ ತೆರೆಗಪ್ಪಳಿಸಲು 'ಆರ್‌ಆರ್‌ಆರ್' ಮತ್ತು 'ರಾಧೆ ಶ್ಯಾಮ್' ಚಿತ್ರಗಳು ರೆಡಿಯಾಗಿವೆ.
ಆದರೆ ಮತ್ತೆ ಚಿತ್ರಗಳು ಪೋಸ್ಟ್ ಪೋನ್ ಆಗುವ ಅಪಸ್ವರ ಕೇಳಿ ಬರುತ್ತಿದೆ. ಹಾಗಾಗಿ ಮತ್ತೆ ಸಿನಿಮಾ ಮಂದಿಯಲ್ಲಿ ಆತಂಕ ಮೂಡಿದೆ. ಓಮಿಕ್ರಾನ್ ವೈರಾಣುವಿನ ಕಾಟ ಹೆಚ್ಚಾದರೆ ಚಿತ್ರಗಳ ರಿಲೀಸ್ ಮುಂದೂಡಬೇಕಾಗುತ್ತದೆ. ಯಾಕೆಂದರೆ ಚಿತ್ರ ರಿಲೀಸ್ ಮಾಡುವುದರ ಜೊತೆಗೆ ಗಳಿಕೆ ಮಾಡುವುದು ಕೂಡ ಚಿತ್ರಕ್ಕೆ ಅಷ್ಟೇ ಮುಖ್ಯ ಆಗಿರುತ್ತದೆ.

'ರಾಧೆ ಶ್ಯಾಮ್' ಪೋಸ್ಟ್ ಪೋನ್ ಬಗ್ಗೆ ಚಿತ್ರ ತಂಡ ಚಿಂತನೆ!
ಭಾರತೀಯ ಚಿತ್ರರಂಗದಲ್ಲಿ ಜನವರಿ 2021ರಲ್ಲಿ ತೆರೆಗೆ ಬರುತ್ತಿರುವ ಎರಡು ದೊಡ್ಡ ಚಿತ್ರಗಳು ಅಂದರೆ ಅದು 'RRR' ಮತ್ತು 'ರಾಧೆ ಶ್ಯಾಮ್'. ಈ ಚಿತ್ರಗಳ ರಿಲೀಸ್ ದಿನಾಂಕ ಫಿಕ್ಸ್ ಆಗಿದೆ. ಆರ್‌ಆರ್ಆರ್ ಜನವರಿ 7ರಂದು ರಿಲೀಸ್ ದಿನಾಂಕ ನಿಗದಿ ಮಾಡಿಕೊಂಡಿದೆ. ಇನ್ನು 'ರಾಧೆ ಶ್ಯಾಮ್' ಜನವರಿ 14ಕ್ಕೆ ತೆರೆಗೆ ಬರಲು ಸಜ್ಜಾಗಿದೆ. ಆದರೆ ಪ್ರಭಾಸ್ ಅಭಿನಯದ ರಾಧೆ ಚಿತ್ರ ಪೋಸ್ಟ್ ಪೋನ್ ಆಗಲಿದೆ ಎನ್ನುವ ಗುಸು ಗುಸು ಕೇಳಿ ಬರುತ್ತಿದೆ.

ಜನವರಿ 14ಕ್ಕೆ ಪ್ರಭಾಸ್ ಚಿತ್ರ ರಿಲೀಸ್ ಅನುಮಾನ!
ಸದ್ಯ ಟಾಲಿವುಡ್‌ನಲ್ಲಿ ಈ ಸುದ್ದಿ ಜೋರಾಗಿದೆ. ರಾಧೆ ಶ್ಯಾಮ್ ಚಿತ್ರ ಪೋಸ್ಟ್ ಪೋನ್ ಆಗಲಿದೆ ಎನ್ನಲಾಗುತ್ತಿದೆ. ಚಿತ್ರ ತಂಡ ಕೂಡ ಈ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಂಡಿದೆಯಂತೆ. ಅದಕ್ಕೆ ಕಾರಣ ಓಮಿಕ್ರಾನ್ ವೈರಾಣು ಅಲ್ಲದೆ ಬೇರೇನು ಅಲ್ಲ. ಓಮಿಕ್ರಾನ್ ದಿನೇ ದಿನೇ ತನ್ನ ಬಾಹುವನ್ನು ಇದಕ್ಕೆ ಚಾಚುತ್ತಿದೆ. ಇದರಿಂದ ಈಗಾಗಲೇ ಹಲವೆಡೆ ರಾತ್ರಿ ಕರ್ಫ್ಯೂ ಜಾರಿ ಆಗಿದೆ. ಹಾಗಾಗಿ ಇದೇ ಪರಿಸ್ಥಿತಿ ಮುಂದುವರೆದರೆ ಪ್ರಭಾಸ್ ಅಭಿನಯದ 'ರಾಧೆಶ್ಯಾಮ್' ಚಿತ್ರದ ರಿಲೀಸನ್ನು ಚಿತ್ರ ತಂಡ ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಲಿದೆ.

2 ವರ್ಷದ ಬಳಿಕ ಬರುತ್ತಿರುವ ಪ್ರಭಾಸ್ ಚಿತ್ರ 'ರಾಧೆ ಶ್ಯಾಮ್'!
'ರಾಧೆ ಶ್ಯಾಮ್' ಚಿತ್ರ ಪ್ರಭಾಸ್‌ಗೆ ಬಹಳ ಮುಖ್ಯವಾದ ಸಿನಿಮಾ. ಯಾಕೆಂದರೆ 'ಬಾಹುಬಲಿ'ಗಾಗಿ ವರ್ಷಗಳನ್ನು ಮುಡಿಪಿಟ್ಟ ಪ್ರಭಾಸ್, 'ಬಾಹು ಬಲಿ' ಬಂದ ಎರಡು ವರ್ಷಗಳ ಬಳಿಕ ಸಾಹೋ ಚಿತ್ರವನ್ನು ರಿಲೀಸ್ ಮಾಡಿದ್ದಾರೆ. ಅದಾದ ಬಳಿಕ ಪ್ರಭಾಸ್ ವರ್ಷಕ್ಕೆ ಒಂದು ಸಿನಿಮಾ ಆದರು ತೆರೆಗೆ ತರಬೇಕು ಎಂದು ಕೊಂಡಿದ್ದರಂತೆ, ಹಾಗಾಗಿ ಸಾಲು ಸಾಲು ಚಿತ್ರಗಳನ್ನು ಅವರು ಒಪ್ಪಿಕೊಂಡು, ಚಿತ್ರೀಕರಣ ಆರಂಭಿಸಿದ್ದರು. ಆದರೆ ಈಗ ಎರಡು ವರ್ಷದ ಬಳಿಕ ತೆರೆಗೆ ಬರ್ತಿರುವ 'ರಾಧೆ ಶ್ಯಾಮ್' ಚಿತ್ರ ಕೂಡ ಅಂದು ಕೊಂಡ ಸಮಯಕ್ಕೆ ತೆರೆಗೆ ಬರುವುದು ಬಹುತೇಕ ಅನುಮಾನ ಆಗಿದೆ.

ಮಹಾರಾಷ್ಟ್ರ, ಕರ್ನಾಟಕದಲ್ಲಿ ಕರ್ಫ್ಯೂ ಜಾರಿ!
ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣಕ್ಕೆ ಮಹಾರಾಷ್ಟ್ರ ಸರ್ಕಾರ ಚಿತ್ರಮಂದಿರಗಳಲ್ಲಿ 50% ಆಕ್ಯೂಪೆನ್ಸಿ ನಿಯಮ ಜಾರಿ ಮಾಡಿದೆ. ಅಲ್ಲದೆ ಅಲ್ಲಿ ನೈಟ್ ಕರ್ಫ್ಯೂ ಕೂಡ ಜಾರಿಯಾಗಿದೆ. ಜೊತೆಗೆ ದಿನಕ್ಕೆ 3 ಶೋಗಳನ್ನು ಪ್ರದರ್ಶಿಸಲು ಮಾತ್ರ ಅವಕಾಶ ನೀಡಲಾಗಿದೆ. ಈ ನಿಯಮಗಳು ಓಮಿಕ್ರಾನ್ ಪ್ರಕರಣಗಳು ಕಡಿಮೆ ಅಗುವ ತನಕ ಜಾರಿಯಲ್ಲಿ ಇರುತ್ತವೆ. ಒಂದು ವೇಳೆ ಪ್ರಕರಣಗಳು ಹೆಚ್ಚಾದರೆ ನಿಯಮಗಳು ಮತ್ತಷ್ಟು ಕಠಿಣಗೊಳ್ಳಲಿವೆ. ಕರ್ನಾಟಕದಲ್ಲೂ ಕೂಡ ಜನವರಿ 7ನೇ ತಾರೀಕಿನ ವರೆಗೂ ನೈಟ್ ಕರ್ಫ್ಯೂ ಜಾರಿಯಾಗಿದೆ. ಇದು ಚಿತ್ರ ತಂಡಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಹಾಗಾಗಿ ಈ ಗೊಂದಲದಲ್ಲಿ ಚಿತ್ರ ರಿಲೀಸ್ ಮಾಡುವುದಕ್ಕಿಂತ ಪೋಸ್ಟ್ ಪೋನ್ ಮಾಡುವುದು ಉತ್ತಮ ಎನ್ನುವ ಚರ್ಚೆ ನಡೆಯುತ್ತಿದೆ. ಆದರೆ ಈ ಚಿತ್ರ ಒಮ್ಮೆ ಪೋಸ್ಟ್ ಪೋನ್ ಆದರೆ, ಸಾಲು ಸಾಲು ಚಿತ್ರಗಳು ರಿಲೀಸ್ ದಿನಾಂಕವನ್ನು ಪ್ರಕಟ ಮಾಡಿರುವುದರಿಂದ, ಮುಂದೆ ರಿಲೀಸ್ ದಿನಾಂಕವನ್ನು ಹೊಂದಿಸಿಕೊಳ್ಳಲು ಕಷ್ಟಕರ ಆಗಬಹುದು.


Click it and Unblock the Notifications











