Salaar: ಈ ವರ್ಷ ಡೈನೋಸಾರ್ ಬರಲ್ಲ.. ಬರಲ್ಲ.. ಬರಲ್ಲ.. 'ಸಲಾರ್' ರಿಲೀಸ್ ಮತ್ಯಾವಾಗ?
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಮುಂದಿನ ವಾರವೇ 'ಸಲಾರ್' ಸಿನಿಮಾ ರಿಲೀಸ್ ಆಗಬೇಕಿತ್ತು. ಇಷ್ಟೊತ್ತಿಗೆ ಟ್ರೈಲರ್, ಸಾಂಗ್ಸ್ ಬಂದು ಮತ್ತಷ್ಟು ಹೈಪ್ ಕ್ರಿಯೇಟ್ ಆಗಬೇಕಿತ್ತು. ಚಿತ್ರತಂಡ ದೇಶದ ಮೂಲೆ ಮೂಲೆಗೆ ಹೋಗಿ ಸಿನಿಮಾ ಪ್ರಮೋಷನ್ ಮಾಡ್ತಾ ಇರಬೇಕಿತ್ತು. ಆದರೆ ಪ್ರಶಾಂತ್ ನೀಲ್ ನಿರ್ಧಾರದಿಂದ ಎಲ್ಲಾ ಉಲ್ಟಾ ಪಲ್ಟಾ ಆಗಿದೆ.
ಸೆಪ್ಟೆಂಬರ್ 28ಕ್ಕೆ ಸಿನಿಮಾ ರಿಲೀಸ್ ಮಾಡೋದಾಗಿ ಕಳೆದ ವರ್ಷವೇ ಹೊಂಬಾಳೆ ಸಂಸ್ಥೆ ಘೋಷಿಸಿತ್ತು. ಅಭಿಮಾನಿಗಳು ಅಷ್ಟು ತಡವಾಗುತ್ತಾ ಎಂದು ತಲೆ ಕೆಡಿಸಿಕೊಂಡಿದ್ದರು. ವಿಪರ್ಯಾಸ ಏನಪ್ಪಾ ಅಂದರೆ ಅಷ್ಟು ದಿನದಿಂದ ಕಾಯ್ತಾ ಬಂದರೂ ಹೇಳಿದ್ದ ಡೇಟ್‌ಗೆ ಸಿನಿಮಾ ರಿಲೀಸ್ ಆಗ್ತಿಲ್ಲ. ಇತ್ತೀಚೆಗೆ ಚಿತ್ರತಂಡ ರಿಲೀಸ್ ಡೇಟ್ ಮುಂದೂಡಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿತ್ತು. ಆದರೆ ಹೊಸ ರಿಲೀಸ್ ಡೇಟ್ ಘೋಷಿಸಲಿಲ್ಲ.

'ಸಲಾರ್' ಗ್ರಾಫಿಕ್ಸ್ ಇಷ್ಟವಾಗದ ಕಾರಣ ಪ್ರಶಾಂತ್ ನೀಲ್ ರೀ ವರ್ಕ್ ಮಾಡೋಕೆ ಹೇಳಿದ್ದಾರೆ. 2 ತಿಂಗಳು ಸಮಯಾವಕಾಶ ಬೇಕಂತೆ ಎನ್ನುವ ಗುಸುಗುಸು ಟಾಲಿವುಡ್ ಅಂಗಳದಲ್ಲಿ ಹೇಳಿಬರ್ತಿದೆ. ನವೆಂಬರ್‌ನಲ್ಲಿ ಸಿನಿಮಾ ರಿಲೀಸ್ ಗ್ಯಾರೆಂಟಿ? ಕ್ರಿಸ್‌ಮಸ್ ವೀಕೆಂಡ್ ಟಾರ್ಗೆಟ್ ಮಾಡಿ ತೆರೆಗೆ ತರ್ತಾರೆ? ಸಂಕ್ರಾಂತಿಗೆ ಸಿನಿಮಾ ಬರೋದು ಪಕ್ಕಾ, ಹೀಗೆ ಸಾಕಷ್ಟು ಚರ್ಚೆ ನಡೀತಿದೆ. ಆದರೆ ಸದ್ಯ ಟಾಲಿವುಡ್‌ನಲ್ಲಿ ವೈರಲ್ ಆಗುತ್ತಿರುವ ನ್ಯೂಸ್ ಪ್ರಕಾರ ಯಾವುದೇ ಕಾರಣಕ್ಕೂ ಈ ವರ್ಷ 'ಸಲಾರ್' ಬರಲ್ಲ ಎನ್ನಲಾಗ್ತಿದೆ.
ಇತ್ತೀಚೆಗೆ ಪ್ರಶಾಂತ್ ನೀಲ್ ಸಾಕಷ್ಟು ರೀಶೂಟ್ ಮಾಡಬೇಕು ಎಂದುಕೊಂಡಿದ್ದಾರೆ, ಪ್ರಭಾಸ್ ಜಾತಕದ ಪ್ರಕಾರ ಈ ವರ್ಷ ಅವರ ಟೈಂ ಸರಿಯಿಲ್ಲ, ಹಾಗಾಗಿ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗುತ್ತದೆ ಎನ್ನಲಾಗಿತ್ತು. ಅದೇ ವಿಚಾರ ಈಗ ಭಾರೀ ಸದ್ದು ಮಾಡಲು ಆರಂಭಿಸಿದೆ. ಪ್ರಭಾಸ್ ಸದ್ಯ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದಾರೆ. ಚಿಕಿತ್ಸೆ ಮುಗಿದು ವಿಶ್ರಾಂತಿ ಪಡೆದು ಸುಧಾರಿಸಿಕೊಂಡ ಬಳಿಕ ಉಳಿದ ಪ್ಯಾಚ್‌ವರ್ಕ್ ಶೂಟಿಂಗ್ ನಡೆಯಲಿದೆ. ಅಷ್ಟರಲ್ಲಿ ಗ್ರಾಫಿಕ್ಸ್ ಹೊಸ ವರ್ಷನ್ ಸಿದ್ಧವಾಗುತ್ತದೆ. ಆ ಬಳಿಕ ಸಿನಿಮಾ ರಿಲೀಸ್ ಎನ್ನುವ ಮಾತುಗಳು ಕೇಳಿಬರ್ತಿದೆ.
ಮುಂದಿನ ವಾರವೇ ಹೊಂಬಾಳೆ ಸಂಸ್ಥೆ 'ಸಲಾರ್' ಚಿತ್ರದ ಹೊಸ ರಿಲೀಸ್ ಡೇಟ್ ಘೋಷಣೆ ಮಾಡುತ್ತದೆ ಎನ್ನಲಾಗುತ್ತದೆ. ಮುಂದಿನ ವರ್ಷ ಸಮ್ಮರ್‌ನಲ್ಲಿ ಪ್ರಭಾಸ್ 'ಸಲಾರ್' ಆಗಿ ಪ್ರೇಕ್ಷಕರ ಮುಂದೆ ಬರ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. 'ಸಲಾರ್' ರಿಲೀಸ್ ಡೇಟ್ ಘೋಷಣೆ ಆದರೆ ಆ ಸಮಯಕ್ಕೆ ಬೇರೆ ಸಿನಿಮಾಗಳು ಥಿಯೇಟರ್‌ಗೆ ಬರಲು ಹೆದರುವಂತಾಗುತ್ತದೆ. ಪದೇ ಪದೆ ರಿಲೀಸ್ ಡೇಟ್ ಬದಲಿಸುವುದು ಬೇಡ. ಈ ಬಾರಿ ಎಲ್ಲಾ ಕನ್ಫರ್ಮ್ ಮಾಡ್ಕೊಂಡು ಹೊಸ ಡೇಟ್ ಘೋಷಣೆ ಮಾಡಬೇಕು ಎಂದು ತಂಡ ತೀರ್ಮಾನಿಸಿದೆಯಂತೆ.
ಮಾರ್ಚ್ 22ಕ್ಕೆ 'ಸಲಾರ್' ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ. ಆದರೆ ಪ್ರಶಾಂತ್ ನೀಲ್ ಎಲ್ಲವನ್ನು ಫೈನಲ್ ಮಾಡುವವರೆಗೆ ಏನು ಹೇಳಲು ಸಾಧ್ಯವಿಲ್ಲ. 2 ತಿಂಗಳ ಹಿಂದೆ ಬಂದಿದ್ದ 'ಸಲಾರ್' ಟೀಸರ್ ಸೂಪರ್ ಹಿಟ್ ಆಗಿತ್ತು. ಆಗಸ್ಟ್ ಕೊನೆ ವಾರದಲ್ಲಿ ಟ್ರೈಲರ್ ರಿಲೀಸ್ ಮಾಡೋದಾಗಿ ಚಿತ್ರತಂಡ ಹೇಳಿತ್ತು. ಆದರೆ ಸೆಪ್ಟೆಂಬರ್ ಮುಗಿಯುತ್ತಾ ಬಂದರೂ ಟ್ರೈಲರ್ ಬರಲೇಯಿಲ್ಲ. ಇದೆಲ್ಲದರ ನಡುವೆ ಸಿನಿಮಾ ರಿಲೀಸ್ ಮುಂದೂಡಿದ್ದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ 'ಸಲಾರ್' ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಸಹ ಪ್ರಮುಖ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಶ್ರುತಿ ಹಾಸನ್, ಜಗಪತಿ ಬಾಬು ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿದೆ. 'KGF' ಸರಣಿಗೆ ಕೆಲಸ ಮಾಡಿದ ತಂಡವೇ ಈ ಸಿನಿಮಾ ಕಟ್ಟಿಕೊಡ್ತಿದೆ. ಭುವನ್ ಗೌಡ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ. 2 ಭಾಗಗಳಾಗಿ 'ಸಲಾರ್' ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











