ಬೆಂಗಳೂರಿಗೆ ಬರ್ತಾರಾ ಪ್ರಭಾಸ್? ಹೊಂಬಾಳೆ ಮಾಸ್ಟರ್ ಪ್ಲ್ಯಾನ್ ಹೇಗಿದೆ ಗೊತ್ತಾ?
ಬಾಹುಬಲಿ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಅದಕ್ಕೂ ಮುನ್ನ ರಿಲೀಸ್ ಆಗಲಿರುವ ಟ್ರೈಲರ್ ನೋಡೊಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪ್ರಭಾಸ್- ಪ್ರಶಾಂತ್ ನೀಲ್ ಕಾಂಬಿನೇಷನ್ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರೋದು ಸುಳ್ಳಲ್ಲ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರ್ತಿದೆ.
ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 'ಸಲಾರ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸಲಿದೆ. ದೇಶ ವಿದೇಶಗಳಲ್ಲಿ ಗ್ರ್ಯಾಂಡ್ ರಿಲೀಸ್ ಪ್ಲ್ಯಾನ್ ನಡೀತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸೆಪ್ಟೆಂಬರ್ 28ಕ್ಕೆ ಸಿನಿಮಾ ತೆರೆಗಪ್ಪಳಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಗುತ್ತಿದೆ. ಲೇಟ್ ಆದರೂ ಲೇಟೆಸ್ಟ್ ಆಗಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ.

ಕನ್ನಡ ಚಿತ್ರ ನಿರ್ಮಾಣ ಸಂಸ್ಥೆ, ಕನ್ನಡ ತಂತ್ರಜ್ಞರು, ಕಲಾವಿದರು ಕೂಡ 'ಸಲಾರ್' ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಕನ್ನಡ ವರ್ಷನ್‌ನಲ್ಲಿ ಪ್ರಭಾಸ್ ಪಾತ್ರಕ್ಕೆ ವಸಿಷ್ಠ ಸಿಂಹ ಡಬ್ಬಿಂಗ್ ಮಾಡಿದ್ಧಾರೆ. ಕರ್ನಾಟಕದಲ್ಲಿ ಹೊಂಬಾಳೆ ಸಂಸ್ಥೆಯೇ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡಲು ಮುಂದಾಗಿದೆ. ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ನಾರ್ತ್ ಇಂಡಿಯಾ ಹಾಗೂ ಓವರ್‌ಸೀಸ್ ಡಿಸ್ಟ್ರಿಬ್ಯೂಷನ್ ರೈಟ್ಸ್ ಮಾರಾಟವಾಗಿದೆ.
'KGF' ಸರಣಿ ಬಳಿಕ ಪ್ರಶಾಂತ್ ನೀಲ್ ಕಟ್ಟಿಕೊಡುತ್ತಿರುವ ಮತ್ತೊಂದು ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಇದು. ಬರೀ ಪೋಸ್ಟರ್ ಹಾಗೂ ಟೀಸರ್‌ನಿಂದಲೇ ಸಿನಿಮಾ ಇನ್ನಿಲ್ಲದ ಹೈಪ್ ಕ್ರಿಯೇಟ್ ಮಾಡಿದೆ. ರವಿ ಬಸ್ರೂರು ಮ್ಯೂಸಿಕ್, ಭುವನ್ ಗೌಡ ಛಾಯಾಗ್ರಹಣ, ಶಿವಕುಮಾರ್ ಆರ್ಟ್ ವರ್ಕ್, ಅನ್ಬುರವ್ ಆಕ್ಷನ್ ಚಿತ್ರಕ್ಕಿದೆ.
ಪ್ರಭಾಸ್ ಜೋಡಿಯಾಗಿ ಶ್ರುತಿ ಹಾಸನ್ ನಟಿಸಿದ್ದಾರೆ. ಇನ್ನುಳಿದಂತೆ ಜಗಪತಿ ಬಾಬು, ಈಶ್ವರಿ ರಾವ್, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಇತ್ತೀಚೆಗೆ ಪ್ರಭಾಸ್ ವಿದೇಶ ಪ್ರವಾಸ ಮುಗಿಸಿ ಬಂದಿದ್ದಾರೆ. ಮೊಣಕಾಲು ಶಸ್ತ್ರಚಿಕಿತ್ಸೆಗಾಗಿ ಯಂಗ್ ರೆಬಲ್ ಸ್ಟಾರ್ ಇಟಲಿಗೆ ಹೋಗಿದ್ದರು ಎನ್ನಲಾಗ್ತಿದೆ. ನಿಧಾನವಾಗಿ 'ಸಲಾರ್' ಪ್ರಮೋಷನ್ ಶುರುವಾಗುತ್ತಿದೆ. ಈಗಾಗಲೇ ಚಿತ್ರದ ಸ್ಟ್ಯಾಂಡಿಗಳು, ಬ್ಯಾನರ್‌ಗಳು ಮಾಲ್‌ಗಳಲ್ಲಿ ರಾರಾಜಿಸುತ್ತಿದೆ.

ಡಿಸೆಂಬರ್ 1ರ ಸಂಜೆ 7 ಗಂಟೆ 18 ನಿಮಿಷಕ್ಕೆ 'ಸಲಾರ್' ಟ್ರೈಲರ್ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಬೆಂಗಳೂರಿನಲ್ಲೇ ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೆಯುತ್ತದೆ ಎನ್ನುವ ಚರ್ಚೆ ಶುರುವಾಗಿದೆ. ಈ ಹಿಂದೆ ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ 'KGF-2' ಟ್ರೈಲರ್ ಲಾಂಚ್ ಈವೆಂಟ್ ನಡೆದಿತ್ತು. ಅದೇ ಮಾದರಿಯಲ್ಲಿ 'ಸಲಾರ್' ಈವೆಂಟ್ ಪ್ಲ್ಯಾನ್ ಮಾಡ್ತಿದ್ದಾರೆ ಎನ್ನಲಾಗ್ತಿದೆ.
ಟ್ರೈಲರ್ ರಿಲೀಸ್ ಕಾರ್ಯಕ್ರಮಕ್ಕಾಗಿ ಪ್ರಭಾಸ್ ಬೆಂಗಳೂರಿಗೆ ಬರುವ ಸಾಧ್ಯತೆಯಿದೆ. ಅವರೊಟ್ಟಿಗೆ ಚಿತ್ರದಲ್ಲಿ ಕೆಲಸ ಮಾಡಿರುವ ಸಾಕಷ್ಟು ಜನ ಈ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಾರೆ ಎನ್ನಲಾಗ್ತಿದೆ. ವಿಶೇಷ ಅತಿಥಿಯಾಗಿ ರಾಕಿಂಗ್ ಸ್ಟಾರ್ ಯಶ್ ಪಾಲ್ಗೊಳ್ಳುತ್ತಾರೆ ಎನ್ನುವ ಊಹಾಪೋಹ ಕೂಡ ಇದೆ. 'ಸಲಾರ್' ಸಿನಿಮಾ ಘೋಷಣೆ ಆದಾಗಲೇ ಇದು ಇಂಡಿಯನ್ ಸಿನಿಮಾ ಎಂದು ಹೊಂಬಾಳೆ ಹೇಳಿತ್ತು. ಹೊಂಬಾಳೆ ಹಾಗೂ ಪ್ರಶಾಂತ್ ನೀಲ್ ಬೇರೆ ಭಾಷೆಯಲ್ಲಿ ಸಿನಿಮಾ ಮಾಡುತ್ತಿರುವುದಕ್ಕೆ ಟೀಕೆಗಳು ವ್ಯಕ್ತವಾಗಿತ್ತು. ಆ ಟೀಕೆಗಳನ್ನು ಮರೆಸುವಂತೆ 'ಸಲಾರ್' ಪ್ರಮೋಷನ್, ರಿಲೀಸ್ ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನುವ ಚರ್ಚೆ ನಡೀತಿದೆ.
ಡಿಸೆಂಬರ್ 22ಕ್ಕೆ 'ಸಲಾರ್' ಸಿನಿಮಾ ತೆರೆಗೆ ಬರಲಿದೆ. ಅದಕ್ಕಿಂತ ಒಂದು ದಿನ ಮುನ್ನ ಶಾರುಖ್ ಖಾನ್ ನಟನೆಯ 'ಡಂಕಿ' ರಿಲೀಸ್ ಆಗಲಿದೆ. ಹಾಗಾಗಿ ಎರಡೂ ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡುವ ಸಾಧ್ಯತೆ ದಟ್ಟವಾಗಿದೆ. ಕ್ರಿಸ್‌ಮಸ್ ಸಂಭ್ರಮದಲ್ಲೇ ಹಾಲಿವುಡ್‌ನ 'ಅಕ್ವಾಮನ್' ಒಟ್ಟು 10 ಸಿನಿಮಾಗಳು ತೆರೆಗೆ ಸಿದ್ಧವಾಗಿದೆ.


Click it and Unblock the Notifications










