ಪ್ರಣೀತಾ ಜೊತೆ ರೊಮಾನ್ಸ್ ಪ್ರಾರಂಭಿಸಿದ ಪ್ರಜ್ವಲ್
ನಟ ಪ್ರಜ್ವಲ್ ದೇವರಾಜ್ ಮತ್ತೊಂದು ಸಿನಿಮಾಗೆ ಸಹಿ ಮಾಡಿದ್ದಾರೆ. ಹೆಸರು 'ಅಂಗಾರಕ'. ನಟಿ ಪ್ರಣೀತಾ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಜೊತೆ ನಟಿಸಲಿದ್ದಾರೆ. ಇತ್ತೀಚಿಗೆ ಪ್ರಜ್ವಲ್ ಹಾಗೂ ಪ್ರಣೀತಾ ಇಬ್ಬರೂ (ಪ್ರತ್ಯೇಕವಾಗಿ )ಹೆಚ್ಚುಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಮೊದಲಬಾರಿಗೆ ಈ ಇಬ್ಬರೂ ಜೊತೆಯಾಗಿ ನಟಿಸಲಿದ್ದಾರೆ.
ಕನ್ನಡ ಚಿತ್ರ 'ಸಿಕ್ಸರ್' ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ಪ್ರಜ್ವಲ್ ದೇವರಾಜ್, ಒಂದಾದಮೇಲೆ ಇನ್ನೊಂದರಂತೆ ಬಹಳಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಗೆಲುವು-ಸೋಲುಗಳನ್ನು ಕಂಡಿದ್ದಾರೆ. ಹರಿಪ್ರಿಯಾ, ಐಂದ್ರಿತಾ ರೇ, ರಾಧಿಕಾ ಪಂಡಿತ್ ಮೊದಲಾದವರ ಜೊತೆ ನಟಿಸಿರುವ ಪ್ರಜ್ವಲ್, ಇದೀಗ ಸೀನಿಯರ್ ನಟಿ ರಮ್ಯಾ ಜೋಡಿಯಾಗಿ 'ದಿಲ್ ಕಾ ರಾಜಾ' ಚಿತ್ರದಲ್ಲಿ ರೊಮಾನ್ಸ್ ಮಾಡುತ್ತಿದ್ದಾರೆ.
'ಗಲಾಟೆ' ಚಿತ್ರದ ನಂತರ ಇದೀಗ 'ದಿಲ್ ಕಾ ರಾಜಾ' ಚಿತ್ರದಲ್ಲಿ ರಮ್ಯಾ ಜೋಡಿಯಾಗಿ ಚಿತ್ರೀಕರಣದಲ್ಲಿ ಬಿಜಿಯಾಗಿರುವ ಪ್ರಜ್ವಲ್, ಇತ್ತೀಚಿಗಷ್ಟೇ 'ಜಿದ್ದಿ' ಎಂಬ ಹೊಸ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಇದರ ಬೆನ್ನಲ್ಲೇ 'ಅಂಗಾರಕ' ಎಂಬ ಹೊಸ ಚಿತ್ರ ಕೂಡ ಪ್ರಜ್ವಲ್ ಕೈಸೇರಿದೆ. ಇತ್ತೀಚಿಗೆ ಬಿಡುಗಡೆಯಾಗಿರುವ ಪ್ರಜ್ವಲ್ ನಟನೆಯ ಸಿನಿಮಾಗಳಲ್ಲಿಕೆಲವು ಸೋಲು ಕಂಡರೂ ಅವರಿಗೆ ಬೇಡಿಕೆಯಾಗಲೀ ಜನಪ್ರಿಯತೆಯಾಗಲೀ ಎಳ್ಳಷ್ಟೂ ಕಡಿಮೆಯಾಗಿಲ್ಲ.
ಪ್ರಜ್ವಲ್ ಜೋಡಿಯಾಗಿ 'ಅಂಗಾರಕ' ಚಿತ್ರಕ್ಕೆ ನಾಯಕಿಯಾಗಿ ಸಹಿ ಮಾಡಿರುವುದನ್ನು ಪ್ರಣೀತಾ ಖಚಿತಪಡಿಸಿದ್ದಾರೆ. "ಹೌದು, ನಾನು 'ಅಂಗಾರಕ' ಚಿತ್ರಕ್ಕೆ ಸಹಿ ಮಾಡಿದ್ದೇನೆ. ಚಿತ್ರದ ಕಥೆ ತುಂಬಾ ಚೆನ್ನಾಗಿದೆ. ಈ ಕಾರಣದಿಂದ ನಾನು 'ಅಂಗಾರಕ' ಚಿತ್ರವನ್ನು ಒಪ್ಪಿಕೊಂಡಿದ್ದೇನೆ. ರೊಮಾನ್ಸ್, ಆಕ್ಷನ್ ಮತ್ತು ಕಾಮಿಡಿ ಸಂಗಮವಾಗಿರುವ ಈ ಚಿತ್ರದಲ್ಲಿ ನಾನು ನಿರ್ವಹಿಸಲಿರುವ ಪಾತ್ರವೂ ಚೆನ್ನಾಗಿದೆ" ಎಂದಿದ್ದಾರೆ ಸದ್ಯ ಅಮೆರಿಕಾದಲ್ಲಿರುವ ನಟಿ ಪ್ರಣೀತಾ.
ಪ್ರಜ್ವಲ್ ಹಾಗೂ ಪ್ರಣೀತಾ ಜೋಡಿಯ ಈ 'ಅಂಗಾರಕ' ಚಿತ್ರವನ್ನು 'ಬಾಲಮುರುಗನ್' ಎಂಬವರು ನಿರ್ದೇಶಿಸಲಿದ್ದಾರೆ. ಅವರೇ ಚಿತ್ರದ ನಿರ್ಮಾಪಕರೂ ಕೂಡ. ಇದೇ ತಿಂಗಳು ಪ್ರಾರಂಭವಾಗಬೇಕಿದ್ದ ಚಿತ್ರೀಕರಣ, ಪ್ರಣೀತಾ ಅಮೆರಿಕಾ ಪ್ರವಾಸದಲ್ಲಿರುವುದರಿಂದ ಹಾಗೂ ಪ್ರಜ್ವಲ್ ಕೂಡ ಕೆಲವು ಚಿತ್ರಗಳ ಚಿತ್ರೀಕರಣ ಮುಗಿಸಬೇಕಾಗಿರುವುದರಿಂದ ಡಿಸೆಂಬರ್ ನಂತರ ಪ್ರಾರಂಭವಾಗಲಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











