'ಸಲಾರ್' ಕ್ಲೈಮ್ಯಾಕ್ಸ್‌ಗೆ ಪ್ರಶಾಂತ್ ನೀಲ್ ಭರ್ಜರಿ ಯೋಜನೆ!
ಯಾವುದೇ ಸಿನಿಮಾ ದೊಡ್ಡ ಹಿಟ್ ಆದರೆ ಆ ಸಿನಿಮಾದ ನಾಯಕನ ನಟ ಹಾಗೂ ನಿರ್ದೇಶಕನ ಮೇಲೆ ಒತ್ತಡ ನೂರು ಪಟ್ಟು ಹೆಚ್ಚಾಗುತ್ತದೆ. 'ಕೆಜಿಎಫ್ 2' ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ ಮೇಲೆ ನಿರೀಕ್ಷೆಗಳ ಭಾರ ಹೆಚ್ಚಾಗಿದೆ.
'ಕೆಜಿಎಫ್ 2' ಅಂಥಹಾ ಐತಿಹಾಸಿಕ ಹಿಟ್ ಸಿನಿಮಾ ನೀಡಿರುವ ಪ್ರಶಾಂತ್ ನೀಲ್ ಮೇಲೆ ಈಗ ದೊಡ್ಡ ನಿರೀಕ್ಷೆಗಳನ್ನು ಇರಿಸಲಾಗಿದೆ. ಅವರ ಮುಂದಿನ 'ಸಲಾರ್' ಮೇಲೆ ಅಭಿಮಾನಿಗಳು ಕಾತರತೆಯ ಕಣ್ಣಿಟ್ಟಿದ್ದಾರೆ.
ಜಾಣ ನಿರ್ದೇಶಕ ಆಗಿರುವ ಪ್ರಶಾಂತ್ ನೀಲ್‌ಗೂ ಇದರ ಅರಿವಿದೆ. ಹಾಗಾಗಿ 'ಕೆಜಿಎಫ್ 2' ಮಾದರಿಯಲ್ಲಿಯೇ ಭಾರಿ ಕ್ಯಾನ್ವಾಸ್‌ನಲ್ಲಿ 'ಸಲಾರ್' ಅನ್ನು ಹೊರತರಲಿದ್ದಾರೆ ಪ್ರಶಾಂತ್ ನೀಲ್. 'ಸಲಾರ್' ಸಿನಿಮಾದಲ್ಲಿ ಸಾಕಷ್ಟು ವಿಶೇಷಗಳನ್ನು ಒಟ್ಟಿಗೆ ನೀಡಲಿದ್ದಾರೆ ಪ್ರಶಾಂತ್ ನೀಲ್. ಅದರಲ್ಲೂ ಕ್ಲೈಮ್ಯಾಕ್ಸ್ ಅಂತೂ ಭಾರತೀಯ ಚಿತ್ರರಂಗದಲ್ಲಿಯೇ ಭಿನ್ನ ಹಾಗೂ ಪವರ್‌ಫುಲ್ ಆಗಿರುವಂತೆ ಪ್ಲಾನ್ ಮಾಡಿದ್ದಾರೆ.

ದೊಡ್ಡ ಯೋಜನೆ ಸಿದ್ಧವಾಗಿದೆ
ನಟ ಪ್ರಭಾಸ್‌ಗೆ ದೇಶದಾದ್ಯಂತ ಬಹುದೊಡ್ಡ ಅಭಿಮಾನಿ ವರ್ಗವಿದೆ. 'ಬಾಹುಬಲಿ 2' ಬಳಿಕ ಪ್ರಭಾಸ್ ನಟಿಸಿ ಬಿಡುಗಡೆ ಆಗಿರುವ ಎರಡೂ ಸಿನಿಮಾಗಳು ಫ್ಲಾಪ್ ಎನಿಸಿಕೊಂಡಿವೆ. ಹಾಗಾಗಿ ಪ್ರಭಾಸ್ ಮೇಲೂ ದೊಡ್ಡ ಮಟ್ಟದ ಒತ್ತಡ ಇದೆ. ಈಗ 'ಕೆಜಿಎಫ್ 2' ಅಂಥಹಾ ಐತಿಹಾಸಿಕ ಹಿಟ್ ನೀಡಿಡುವ ಪ್ರಶಾಂತ್ ನೀಲ್ ಮೇಲೂ ದೊಡ್ಡ ನಿರೀಕ್ಷೆ ಇದೆ. ಹಾಗಾಗಿ ದೊಡ್ಡ ಮಟ್ಟದಲ್ಲಿಯೇ 'ಸಲಾರ್' ಅನ್ನು ತೆರೆಗೆ ತರಲು ಯೋಜನೆ ಸಿದ್ದವಾಗಿದೆ.

'ಸಲಾರ್' ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ
'ಸಲಾರ್' ಸಿನಿಮಾದಲ್ಲಿ ಹಲವು ವಿಶೇಷತೆಗಳು ಇರಲಿವೆ. ಆದರೆ ಸಿನಿಮಾದ ಕ್ಲೈಮ್ಯಾಕ್ಸ್ ಇಡೀಯ ಸಿನಿಮಾದ ಕಳಶವಾಗಿರಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಸಿನಿಮಾದ ಕ್ಲೈಮ್ಯಾಕ್ಸ್ ಅನ್ನು ಭೂಮಿ ಮೇಲಲ್ಲ ಬದಲಿಗೆ ಸಮುದ್ರದ ಮಧ್ಯೆ ಪ್ಲಾನ್ ಮಾಡಿದ್ದಾರಂತೆ ಪ್ರಶಾಂತ್ ನೀಲ್. ಸಮುದ್ರದ ಮಧ್ಯೆ ಅದ್ಭುತ ಕ್ಲೈಮ್ಯಾಕ್ಸ್ ದೃಶ್ಯವನ್ನು ಸೆರೆ ಹಿಡಿಯಲು ಪ್ರಶಾಂತ್ ನೀಲ್ ಈಗಾಗಲೇ ನೀಲನಕ್ಷೆ ತಯಾರಿಸಿಕೊಂಡಿದ್ದಾರೆ.

ಕ್ಲೈಮ್ಯಾಕ್ಸ್ ದೃಶ್ಯಕ್ಕೆಂದೇ ಹಲವು ಕೋಟಿ
ಬೋಟ್ ಚೇಸ್, ಹಲವು ಬ್ಲಾಸ್ಟ್‌ಗಳು, ರೋಪ್ ಸಾಹಸಗಳು ಸಮುದ್ರದ ಮಧ್ಯೆ ನಡೆಯಲಿವೆ. ಈ ಅದ್ಭುತ ಸಾಹಸ ದೃಶ್ಯದ ಚಿತ್ರೀಕರಣಕ್ಕೆಂದು ಹಲವು ವಿದೇಶಿ ಸಾಹಸ ಕಲಾವಿದರನ್ನು, ತಂತ್ರಜ್ಞರನ್ನು ಕರೆಸಿಕೊಳ್ಳಲಾಗುತ್ತಿದೆ. ಕ್ಲೈಮ್ಯಾಕ್ಸ್ ದೃಶ್ಯಕ್ಕೆಂದೇ ಹಲವು ಕೋಟಿಗಳನ್ನು ನಿರ್ಮಾಣ ಸಂಸ್ಥೆ ಹೊಂಬಾಳೆ ಖರ್ಚು ಮಾಡಲಿದೆ. ಸಿನಿಮಾದ ಬಜೆಟ್ ಸುಮಾರು 200 ಕೋಟಿ ದಾಟಲಿದೆ ಎಂಬ ಮಾತುಗಳು ತೆಲುಗು ಸಿನಿಮಾ ಅಂಗಳದಲ್ಲಿ ಕೇಳಿ ಬರುತ್ತಿದೆ.

ಭಿನ್ನ ಮಾದರಿಯ ಕ್ಯಾಮೆರಾ ಬಳಕೆ
ಇನ್ನು 'ಸಲಾರ್' ಸಿನಿಮಾಕ್ಕೆ ಭಿನ್ನ ರೀತಿಯ ಕ್ಯಾಮೆರಾವನ್ನು ಪ್ರಶಾಂತ್ ನೀಲ್ ಬಳಸುತ್ತಿದ್ದಾರೆ. ಬ್ಯಾಕ್‌ಗ್ರೌಂಡ್ ಕಪ್ಪು ಬಣ್ಣದಲ್ಲಿ ಇರುವಂತೆ ಎಫೆಕ್ಟ್ ನೀಡುವ (ಡಾರ್ಕ್ ಸೆಂಟ್ರಿಕ್ ಥೀಮ್) ಕ್ಯಾಮೆರಾವನ್ನು 'ಸಲಾರ್' ಸಿನಿಮಾಕ್ಕಾಗಿ ಬಳಸಲಾಗುತ್ತಿದೆ. ಈ ತಂತ್ರಜ್ಞಾನ ಬಳಸುತ್ತಿರುವ ಮೊದಲ ಭಾರತೀಯ ಸಿನಿಮಾ 'ಸಲಾರ್' ಎಂಬ ಹೆಗ್ಗಳಿಕೆ ಈ ಸಿನಿಮಾದ್ದು. ಹಾಲಿವುಡ್‌ನ ಸೂಪರ್ ಹಿಟ್ ಸಿನಿಮಾಗಳಾದ 'ಟೆನೆಟ್', 'ಮೇಟ್ರಿಕ್ಸ್', 'ಬ್ಯಾಟ್‌ಮ್ಯಾನ್' ಸಿನಿಮಾಗಳಲ್ಲಿ ಈ ರೀತಿಯ ಕ್ಯಾಮೆರಾಗಳನ್ನು ಬಳಸಲಾಗಿದೆ.


Click it and Unblock the Notifications











