»   » ನಟಿ ಪ್ರೇಮಾ ಮನೆಗೆ ನುಗ್ಗಿ ಹಲ್ಲೆ :ನಿರ್ಮಾಪಕ ಶಿಲ್ಪ ಶ್ರೀನಿವಾಸ್‌ ಬಂಧನ

ನಟಿ ಪ್ರೇಮಾ ಮನೆಗೆ ನುಗ್ಗಿ ಹಲ್ಲೆ :ನಿರ್ಮಾಪಕ ಶಿಲ್ಪ ಶ್ರೀನಿವಾಸ್‌ ಬಂಧನ

Subscribe to Filmibeat Kannada

*ಎಸ್ಕೆ. ಶಾಮಸುಂದರ

ಬೆಂಗಳೂರು : ಕನ್ನಡ ಚಲನಚಿತ್ರ ನಟಿ ಪ್ರೇಮಾ ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ‘ಪರ್ವ’ ಚಿತ್ರ ನಿರ್ಮಾಪಕ ಶಿಲ್ಪ ಶ್ರೀನಿವಾಸ್‌ ಈಗ ಜೆ.ಪಿ. ನಗರ ಪೊಲೀಸರ ಅತಿಥಿಯಾಗಿದ್ದಾರೆ. ಕರೆದಾಗ ಶೂಟಿಂಗ್‌ಗೆ ಬರ್ತಾಯಿಲ್ಲ ದ ಈ ನಟಿಯನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದು ಹಠತೊಟ್ಟು ಗೂಳಿಯಂತೆ ವರ್ತಿಸಿದ್ದೇ ಬಂಧನಕ್ಕೆ ಕಾರಣ ಎನ್ನುತ್ತಿದ್ದಾರೆ ಪೋಲೀಸರು.

ಘಟನೆಯ ಹಿನ್ನೆಲೆ: ನಟಿ ಪ್ರೇಮಾ ಶಿಲ್ಪ ಶ್ರೀನಿವಾಸ್‌ ನಿರ್ಮಿಸುತ್ತಿರುವ ದೇಸಾಯಿ ನಿರ್ದೇಶನದ ಪರ್ವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಾಸ್ತವವಾಗಿ ಪ್ರೇಮಾ ಕೊಟ್ಟಿದ್ದ ಡೇಟ್‌ ಮುಗಿದರೂ, ಚಿತ್ರೀಕರಣ ಮುಗಿದಿಲ್ಲ. ಈ ಹಿನ್ನೆಲೆಯಲ್ಲಿ ಪ್ರೇಮಾ ಇನ್ನೂ 25 ದಿನಗಳ ಹೆಚ್ಚುವರಿ ಕಾಲ್‌ಷೀಟ್‌ ಕೊಟ್ಟಿದ್ದಾರೆ.


ಆದರೆ, ಕೊಬ್ಬರಿ ಮಂಜು ನಿರ್ಮಾಣದ ಜಮೀನ್ದಾರ್ರು ಮತ್ತು ಸಾ.ರಾ. ಗೋವಿಂದು ನಿರ್ಮಿಸುತ್ತಿರುವ ಮುತ್ತು ಚಿತ್ರಗಳಲ್ಲಿ ನಟಿಸುತ್ತಿರುವ ಪ್ರೇಮಾ ಅವರಿಗೆ ಶ್ರೀನಿವಾಸ್‌ ಕೇಳುವ ಡೇಟ್‌ನಲ್ಲಿ ಚಿತ್ರೀಕರಣಕ್ಕೆ ಬರಲಾಗುತ್ತಿಲ್ಲ . ಇದರಿಂದ ಕುಪಿತರಾದ ಶ್ರೀನಿವಾಸ್‌ ಭಾನುವಾರ ರಾತ್ರಿ ಪ್ರೇಮಾ ಮನೆಗೆ ಫೋನ್‌ ಮಾಡಿ, ಅವರ ತಂದೆ ಚಂಗಪ್ಪ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿದರು.

ಸಾ.ರಾ. ಗೋವಿಂದು ಅವರನ್ನು ಪ್ರಾರ್ಥಿಸಿ, ಅಲ್ಲಿ ಚಿತ್ರೀಕರಣ ನಿಲ್ಲಿಸಿ, ತಮ್ಮ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವಂತೆ ತಾಖೀತು ಮಾಡಿದ್ದಾರೆ. ಇದರಿಂದ ಗಾಬರಿಗೊಂಡ ಪ್ರೇಮಾರ ತಂದೆ, ಸಾ.ರಾ. ಗೋವಿಂದು ಅವರಿಗೆ ಫೋನ್‌ ಮಾಡಿ, ಪರಿಪರಿಯಾಗಿ ಬೇಡಿಕೊಂಡರು.

ಗೋವಿಂದು ಇವರ ಮನವಿಗೆ ಒಪ್ಪಲು ಸುತರಾಂ ಸಿದ್ಧರಿರಲಿಲ್ಲ. ಬೇಕಾದ್ರೆ, ಶ್ರೀನಿವಾಸೇ ನನ್ನನ್ನು ಕೇಳಲಿ, ನೀವೇಕೆ ಕೇಳ್ತೀರಿ ಎಂದು ಫೋನ್‌ ಕುಕ್ಕಿದರು. ವಿಧಿ ಇಲ್ಲದೆ ಪ್ರೇಮಾರ ತಂದೆ, ಕೊಬ್ಬರಿ ಮಂಜ ಅವರ ಮೊರೆ ಹೊಕ್ಕರು. ನಿನ್ನೆ ಭಾನುವಾರ. ಕೆ.ಸಿ.ಎನ್‌. ಚಂದ್ರಶೇಖರ್‌ ದಕ್ಷಿಣ ಭಾರತ ಚಲನಚಿತ್ರ ಮಂಡಳಿ ಅಧ್ಯಕ್ಷ ಸ್ಥಾನ ಅಲಂಕರಿಸುವ ಸಮಾರಂಭದಲ್ಲಿ ಪಾಲ್ಗೊಳ್ಳಲು ಕನ್ನಡ ಚಿತ್ರರಂಗ ದಂಡುಕಟ್ಟಿಕೊಂಡು ಹೋಗಿತ್ತು. ಅಲ್ಲಿ ಸುದ್ದಿ ತಿಳಿದ ಚಿತ್ರ ಕರ್ಮಿಗಳು ಗಲಿಬಿಲಿಗೊಂಡರು.

ಪ್ರೇಮಾರಿಗೆ ಧೈರ್ಯ ಹೇಳಲು ಸೋಮವಾರ ಬೆಳಗ್ಗೆ ಇಡೀ ತಂಡ ಚೆನ್ನೈನಿಂದ ನೇರವಾಗಿ ಬಸ್‌ನಲ್ಲಿ ಪ್ರೇಮಾ ಅವರ ಮನೆಗೇ ಬಂದಿಳಿಯಿತು. ಅಷ್ಟು ಹೊತ್ತಿಗೆ ಕಾರಿನಲ್ಲಿ ಅಲ್ಲಿಗೆ ಬಂದ ಶಿಲ್ಪ ಶ್ರೀನಿವಾಸ್‌, ಮನೆ ಮುಂದೆ ನಿಂತಿದ್ದ ಕೆನೆಟಿಕ್‌ ಹೋಂಡಾಕ್ಕೆ ಡಿಕ್ಕಿ ಹೊಡೆದದ್ದಲ್ಲದೆ, ಪ್ರೇಮಾ ಅವರ ಮನೆಯ ಕಾಂಪೌಂಡ್‌ಗೂ ಗುದ್ದಿ ಘಾಸಿ ಮಾಡಿದರು.

ಸಾಲದೆಂಬಂತೆ, ಯಾರ ಮಾತನ್ನೂ ಲೆಕ್ಕಿಸದೆ, ಒಳನುಗ್ಗಿ, ಪ್ರೇಮಾ ಮುಖಕ್ಕೆ ಆ್ಯಸಿಡ್‌ ಹಾಕುವುದಾಗಿ ಬೆದರಿಕೆ ಹಾಕಿದರು. ವಿಷಯ ತಿಳಿದ ಜೆ.ಪಿ. ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ, ಶಿಲ್ಪ ಶ್ರೀನಿವಾಸ್‌ರನ್ನು ಬಂಧಿಸಿದರು. ಇದಿಷ್ಟೂ ಪ್ರಥಮ ಮಾಹಿತಿ ಅರ್ಥಾತ್‌ ಎಫ್‌ಐಆರ್‌. ವಿವರ ನಿರೀಕ್ಷಿಸಲಾಗುತ್ತಿದೆ.

ಈ ಶಿಲ್ಪ ಶ್ರೀನಿವಾಸ್‌ ಯಾರು ?

ಇವರು, ಉಪ್ರೇಂದ್ರ ಚಿತ್ರದ ನಿರ್ಮಾಪಕ. ಆ ಚಿತ್ರದ ಚಿತ್ರೀಕರಣ ಕಾಲದಲ್ಲೂ, ಉಪೇಂದ್ರ ಡೇಟ್ಸ್‌ಗೆ ತಕರಾರಾಗಿ, ಉಪೇಂದ್ರರಿಗೆ ಹೊಡೆಯಲು ಮುಂದಾಗಿದ್ದ ಶ್ರೀನಿವಾಸ್‌ ಮೇಲೆ ಶೇಷಾದ್ರಿ ಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ ಮೇಲೆ ರಾಜೀ ಆಯಿತು. ಅದು ಬೇರೆ ವಿಷಯ.

ವಾರ್ತಾ ಸಂಚಯ
ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada