ನಿರ್ಮಾಪಕರಿಗೆ ತಲೆ ನೋವು ತರಿಸಿದೆ 'ಪುಷ್ಪ' ಸಿನಿಮಾದ ಬಜೆಟ್
ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ. ಸ್ಟಾರ್ ನಿರ್ದೇಶಕ ಸುಕುಮಾರ್ ಹಾಗೂ ಅಲ್ಲು ಅರ್ಜುನ್ ಮತ್ತೆ ಒಂದಾಗುತ್ತಿದ್ದಾರೆ ಎಂದು ಸುದ್ದಿ ಹೊರಬಿದ್ದಾಗಲೇ ಸಿನಿಮಾದ ಬಗ್ಗೆ ನಿರೀಕ್ಷೆಗಳು ಗರಿಗೆದರಿದ್ದವು, ಅವು ಈಗ ಇನ್ನಷ್ಟು ಹೆಚ್ಚಾಗಿವೆ.
ರಕ್ತ ಚಂದನ ಕಳ್ಳಸಾಗಣೆ ಕುರಿತ ಕತೆ ಹೊಂದಿರುವ ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದ ಮೊದಲನೇ ಭಾಗ ಡಿಸೆಂಬರ್ 17 ರಂದು ತೆರೆ ಕಾಣಲಿದೆ. ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಇನ್ನಷ್ಟೆ ಶುರುವಾಗಬೇಕಿದೆ.
ಸಿನಿಮಾವನ್ನು ಮೈತ್ರಿ ಮೂವೀಸ್ ನಿರ್ಮಾಣ ಮಾಡುತ್ತಿದೆ. ಆದರೆ ಸಿನಿಮಾದ ಬಜೆಟ್ ಹಲವು ಕಾರಣಗಳಿಗಾಗಿ ಏರುತ್ತಲೇ ಸಾಗಿದ್ದು ಇದು ನಿರ್ಮಾಪಕರಿಗೆ ತಲೆ ನೋವು ತರಿಸಿದೆ.

ಸಿನಿಮಾ ಆರಂಭಗೊಂಡಾಗ ಇದ್ದ ಬಜೆಟ್‌ಗೂ ಮೀರಿ ಹಲವು ಕೋಟಿಗಳು ಸಿನಿಮಾಕ್ಕಾಗಿ ಖರ್ಚಾಗುತ್ತಿದೆ. ಸಿನಿಮಾ ಘೋಷಣೆಯಾದಾಗ ಸಿನಿಮಾದ ಎರಡನೇ ಭಾಗ ಮಾಡುವ ಯೋಚನೆ ಇರಲಿಲ್ಲ. ಆದರೆ ಲಾಕ್‌ಡೌನ್ ಸಮಯದಲ್ಲಿ ಕತೆ ಹೆಣೆದ ಸುಕುಮಾರ್ ಎರಡನೇ ಭಾಗವನ್ನೂ ಮಾಡುವ ಘೋಷಣೆ ಮಾಡಿದರು. ನಿರ್ಮಾಪಕರೂ ಅದಕ್ಕೆ ಒಪ್ಪಿಗೆ ಸೂಚಿಸಿದರು.
ಸಿನಿಮಾದ ಚಿತ್ರೀಕರಣಕ್ಕೆ ಆಗಾಗ್ಗೆ ಉಂಟಾದ ತೊಡಕು, ಕೊರೊನಾ ಹಾಗೂ ಇತರೆ ಕಾರಣಗಳಿಂದ ಸಿನಿಮಾದ ಬಜೆಟ್ ಏರಿಕೆಯಾಗಿದೆ. 170 ಕೋಟಿ ಬಜೆಟ್ ಅನ್ನು ಸಿನಿಮಾಕ್ಕಾಗಿ ಮೀಸಲಿರಿಸಲಾಗಿತ್ತು. ಆದರೆ ಅದರ ಮೇಲೆ ಈಗಾಗಲೇ 40 ಕೋಟಿ ಖರ್ಚು ಮಾಡಲಾಗಿದ್ದು, ಸಿನಿಮಾಕ್ಕೆ ಇನ್ನಷ್ಟು ಖರ್ಚು ಬಾಕಿ ಇದೆ.
ಬಜೆಟ್ ಏರಿಕೆಯಾಗಲು ಸಿನಿಮಾ ಚಿತ್ರೀಕರಣಕ್ಕೆ ಉಂಟಾದ ತೊಡಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಆರಂಭದಲ್ಲಿ ಕೊರೊನಾ ಕಾರಣಕ್ಕೆ ಚಿತ್ರೀಕರಣ ವಿಳಂಬವಾಯಿತು. ಆ ನಂತರ ಅರಣ್ಯದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಿ ಚಿತ್ರತಂಡ ಕೆಲಸ ಮಾಡಬೇಕಾಗಿ ಬಂತು ಹಾಗಾಗಿ ನಿಗದಿತ ಸಮಯಕ್ಕಿಂತಲೂ ನಿಧಾನವಾಗಿ ಚಿತ್ರೀಕರಣ ನಡೆಯಿತು. ಇದರ ನಡುವೆ ಚಿತ್ರತಂಡಕ್ಕೆ ಡೆಂಗ್ಯೂ ಸಮಸ್ಯೆ ಸಹ ಕಾಡಿತು. ಅರಣ್ಯದಲ್ಲಿ ಚಿತ್ರೀಕರಣ ಮಾಡುವ ವೇಳೆ ನಿರ್ದೇಶಕ ಸುಕುಮಾರ್ ಸೇರಿದಂತೆ ಹಲವರಿಗೆ ಡೆಂಗ್ಯೂ ಉಂಟಾಯಿತು. ಹೀಗಾಗಿ ಸುಮಾರು ಒಂದು ತಿಂಗಳ ಕಾಲ ಚಿತ್ರೀಕರಣ ನಿಂತು ಹೋಗಿತ್ತು.
ಚಿತ್ರೀಕರಣದ ಆರಂಭದಲ್ಲಿ ಈ ಸಿನಿಮಾವನ್ನು ಮಧ್ಯಮ ಬಜೆಟ್‌ನ ಸಿನಿಮಾ ಅನ್ನಾಗಿ ಮಾಡುವ ಇರಾದೆ ನಿರ್ದೇಶಕ, ನಿರ್ಮಾಪಕ ಇಬ್ಬರಿಗೂ ಇತ್ತು. ಆದರೆ ಕತೆಯ ಗುಣಮಟ್ಟ ಗಮನಿಸಿ ಸಿನಿಮಾವನ್ನು ದೊಡ್ಡ ಬಜೆಟ್‌ನ ಸಿನಿಮಾ ಮಾಡಬೇಕೆಂದು ಅಲ್ಲು ಅರ್ಜುನ್ ಸಲಹೆ ನೀಡಿದ್ದರಿಂದ ಸಿನಿಮಾದ ದೃಶ್ಯ ಸಂಯೋಜನೆ ಸೇರಿದಂತೆ ಹಲವು ವಿಭಾಗಗಳಲ್ಲಿ ಬದಲಾವಣೆ ಮಾಡಿ ದೊಡ್ಡ ಸ್ಕೇಲ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಲಾಯ್ತು.
'ಪುಷ್ಪ' ಸಿನಿಮಾವನ್ನು ಡಿಸೆಂಬರ್ 25 ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಇದೀಗ ನಿರ್ಮಾಪಕರು ದಿನಾಂಕ ಬದಲಿಸಿದ್ದು ಸಿನಿಮಾವನ್ನು ಡಿಸೆಂಬರ್ 17 ಕ್ಕೆ ತೆರೆಗೆ ತರಲು ನಿಶ್ಚಯಿಸಲಾಗಿದೆ. ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆಗೆ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ನಟ ಡಾಲಿ ಧನಂಜಯ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮಲಯಾಳಂನ ಫಹಾದ್ ಫಾಸಿಲ್ ಮುಖ್ಯ ವಿಲನ್ ಪಾತ್ರದಲ್ಲಿದ್ದಾರೆ ಜೊತೆಗೆ ಜಗಪತಿ ಬಾಬು, ಸುನಿಲ್ ಇನ್ನೂ ಕೆಲವು ಪ್ರತಿಭಾವಂತ ನಟರು ನಟಿಸಿದ್ದಾರೆ.
ಸಿನಿಮಾದ ಮೂರು ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು ಮೂರೂ ಹಾಡುಗಳು ಸೂಪರ್ ಹಿಟ್ ಆಗಿವೆ. ಸಿನಿಮಾಕ್ಕೆ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಸಿನಿಮಾವು ಡಿಸೆಂಬರ್ 17 ರಂದು ತೆಲುಗು, ಕನ್ನಡ, ಹಿಂದಿ, ತಮಿಳು, ಮಲಾಯಳಂ ಭಾಷೆಗಳಲ್ಲಿ ಏಕಕಾಲದಲ್ಲಿ ತೆರೆಗೆ ಬರಲಿದೆ. ಡಿಸೆಂಬರ್ 25 ರಂದು ರಣ್ವೀರ್ ಸಿಂಗ್ ನಟನೆಯ '83' ಸಿನಿಮಾ ತೆರೆಗೆ ಬರುತ್ತಿದ್ದು, ಎರಡೂ ಸಿನಿಮಾ ಮಧ್ಯೆ ಪೈಪೋಟಿ ಬೀಳಬಾರದೆಂದು ಈ ನಿರ್ಧಾರ ಮಾಡಲಾಗಿದೆ ಎನ್ನಲಾಗುತ್ತಿದೆ.


Click it and Unblock the Notifications











