ರಮ್ಯಾ ಪ್ರತಿಕ್ರಿಯೆಗೆ ಡೋಂಟ್ ಕೇರ್; ರಾಗಿಣಿ
"ನಮ್ಮನ್ನು ಯಾರೋ ಕೆಳಗೆ ತಳ್ಳಬೇಕೆಂದು ಪ್ರಯತ್ನಿಸುತ್ತಿದ್ದಾರೆ ಎಂದರೆ ಅದರರ್ಥ ಅವರಿಗಿಂತ ನಾವು ಮೇಲೆ ಇದ್ದೇವೆ ಎಂಬುದೇ ಆಗಿದೆ. ಅದಕ್ಕೆಲ್ಲಾ ನಾನು ಕೇರ್ ಮಾಡೋದಿಲ್ಲ. ನನಗೆ ಮಾಡಲು ಬೇಕಾದಷ್ಟು ಕೆಲಸವಿದೆ. ಯಾರ ವಿಷಯಕ್ಕೂ ತಲೆಕೆಡಸಿಕೊಳ್ಳುವಷ್ಟು ಪರುಸೊತ್ತು ನನಗಿಲ್ಲ" ಎಂದು ರಮ್ಯಾ ಪ್ರತಿಕ್ರಿಯೆಗೆ ರಾಗಿಣಿ ತಿರುಗೇಟು ನೀಡಿದ್ದಾರೆ. ಹೀಗೆ ರಮ್ಯಾ-ರಾಗಿಣಿ ಮಾತುಗಳ ಸಮರ, ಸಾಮಾಜಿಕ ಸಂಪರ್ಕ ತಾಣಗಳಲ್ಲಿ ಮುಂದುವರಿದಿದೆ.
ಹಿಂದೊಂದು ಕಾಲದಲ್ಲಿ ರಮ್ಯಾ, ರಕ್ಷಿತಾ ಹಾಗೂ ರಾಧಿಕಾ ಮಧ್ಯೆ 'ನಂ ಒನ್' ಸ್ಥಾನಕ್ಕಾಗಿ ಪಕ್ಕಾ ಪೈಪೋಟಿ ಇತ್ತು. ಆಗ ರಮ್ಯಾ ಮತ್ತು ರಕ್ಷಿತಾ ಪರಸ್ಪರ ಕೋಳಿ ಜಗಳದಲ್ಲಿ ತೊಡಗಿಕೊಂಡಿದ್ದರೆ ರಾಧಿಕಾ ಮಾತ್ರ ಯಾರ ತಂಟೆಗೂ ಹೋಗದೇ ಸುಮ್ಮನೆ ತಮ್ಮ ಪಾಡಿಗೆ ತಾವಿದ್ದರು. ನಂತರ ರಾಧಿಕಾ ಮತ್ತು ರಕ್ಷಿತಾ ಮದುವೆಯಾಗಿ ಬಣ್ಣದ ಲೋಕದಿಂದ ದೂರವಾದ ಮೇಲೆ ರಮ್ಯಾ 'ಊರಿಗೊಬ್ಳೇ ಪದ್ಮಾವತಿ' ಆಗಿ ಮೆರೆಯುತ್ತಿದ್ದರು. ಇದು ತೀರಾ ಇತ್ತೀಚಿನವರೆಗೂ ಹಾಗೇ ಇತ್ತು.
ಆದರೆ ಈಗ ಪರಿಸ್ಥಿತಿ ಮೊದಲಿನಂತಿಲ್ಲ. ರಮ್ಯಾರ 'ನಂ ಒನ್ ಸ್ಥಾನ'ಕ್ಕೆ ಭಾರೀ ಪೈಪೋಟಿ ನೀಡಲು ರಾಧಿಕಾ ಪಂಡಿತ್ ಹಾಗೂ ರಾಗಿಣಿ ದ್ವಿವೇದಿ ಬಂದಿದ್ದಾರೆ. ರಾಧಿಕಾ ಪಂಡಿತ್ ಮೊದಲಿದ್ದ ರಾಧಿಕಾ ತರಹವೇ ತಮ್ಮ ಪಾಡಿಗೆ ತಾವಿದ್ದರೆ ರಾಗಿಣಿ ಮಾತ್ರ ರಮ್ಯಾರ ಜೊತೆ ಕಾಲು ಕೆರೆದುಕೊಂಡು ಜಗಳಕ್ಕೆ ನಿಂತಿದ್ದಾರೆ. ಇವರಿಬ್ಬರ ಜಗಳಕ್ಕೆ ಸಮಾಜಿಕ ತಾಣಗಳು ವೇದಿಕೆಯಾಗಿವೆ.
ಸದ್ಯ ಪ್ರಾರಂಭವಾಗಿರುವ ಈ ನಟಿಯರಿಬ್ಬರ ಜಗಳ ಅದೆಲ್ಲಿಗೆ ಹೋಗಿ ನಿಲ್ಲುತ್ತೋ ಬಲ್ಲವರು ಯಾರು? ಬಾಲಿವುಡ್ ಜಗತ್ತಿನಲ್ಲಿ ನಟಿಯರ ಕೋಳಿಜಗಳ ದಿನಬೆಳಗಾದರೆ ಕಾಮನ್. ಆದರೆ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಅದು ಆಗಾಗ ಮಾತ್ರ ಸಂಭವಿಸುವ ಸುನಾಮಿ. ಒಟ್ಟಿನಲ್ಲಿ ರಮ್ಯಾ ಮತ್ತು ರಾಗಿಣಿ ಅಭಿಮಾನಿಗಳಿಗೆ ಹಾಗೂ ಸಿನಿಪ್ರೇಕ್ಷಕರಿಗೆ ಚರ್ಚೆಗೆ ಇದೊಂದು ಲೇಟೇಸ್ಟ್ ನ್ಯೂಸ್ ಸಿಕ್ಕಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











