»   » ದೇಸಾಯಿ ಮತ್ತು ರೆಹಮಾನ್‌ ಎಂಬ ಡೆಡ್‌ಲೈನ್‌ ವೀರರು !

ದೇಸಾಯಿ ಮತ್ತು ರೆಹಮಾನ್‌ ಎಂಬ ಡೆಡ್‌ಲೈನ್‌ ವೀರರು !

Posted By:
Subscribe to Filmibeat Kannada

*ವಿಶಾಖ ಎನ್‌.

ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ .ಆರ್‌.ರೆಹಮಾನ್‌ ಹಾಗೂ ಸ್ಯಾಂಡಲ್‌ವುಡ್‌ನ ಯಶಸ್ವಿ ನಿರ್ದೇಶಕ ಸುನಿಲ್‌ ಕುಮಾರ್‌ ದೇಸಾಯಿಗೆ ಇರುವ ಸಾಮ್ಯತೆ ಏನು? ಒಂದು- ಇಬ್ಬರೂ ಆ್ಯಂಟಿ ಡೆಡ್‌ಲೈನ್‌ ಶೂರರು. ಎರಡು- ಇಬ್ಬರೂ ಜಯಲಕ್ಷ್ಮಿಯನ್ನು ಒಲಿಸಿಕೊಂಡವರು. ಎರಡನೆಯ ಸಾಮ್ಯತೆ ಇಬ್ಬರಿಗೂ ಟ್ರಂಪ್‌ಕಾರ್ಡ್‌ ಆದರೆ, ಮೊದಲನೆಯದು ಸಿನಿ ಉದ್ದಿಮೆ ಹಾಗೂ ಈ ಇಬ್ಬರ ಭವಿತವ್ಯಕ್ಕೆ ಕೊಡಲಿ !

ಹೌದು, ರೆಹಮಾನ್‌ಗೆ ದೊರೆಯುತ್ತಿರುವ ದಕ್ಷಿಣ ಭಾರತದ ಸಿನಿಮಾಗಳ ಸಂಖ್ಯೆ ಈಚೀಚೆಗೆ ತೀರಾ ಕಡಿಮೆಯಾಗಿದೆ. ಮೊನ್ನೆ ಕನ್ನಡ ಚಿತ್ರ ನಿರ್ಮಾಪಕ ಶಿಲ್ಪ ಶ್ರೀನಿವಾಸ್‌ ಹತಾಶೆಯಿಂದ ಹುಚ್ಚುಚ್ಚಾಗಿ ಆಡಿ, ಪ್ರೇಮಾರನ್ನು ಅಳಿಸಿ, ಚಿತ್ರೋದ್ಯಮದ ಕೆಂಗಣ್ಣಿಗೆ ಗುರಿಯಾದ ನಂತರ ದೇಸಾಯಿ ಅವರನ್ನು ನಿರ್ದೇಶಕರನ್ನಾಗಿ ಪಡೆಯಲು ನಿರ್ಮಾಪಕರು ಮೊದಲಿನಷ್ಟು ಉತ್ಸುಕರಾಗಿಲ್ಲ. ಎರಡಕ್ಕೂ ಕಾರಣ, ಡೆಡ್‌ಲೈನ್‌ಗೆ ರೆಹಮಾನ್‌ ಹಾಗೂ ದೇಸಾಯಿ ಬೆನ್ನು ತೋರುವುದು. ಹಾಗಂತ ಇವರು ರಿಟೈರ್ಡ್‌ ಆಗುವ ಸಮಯ ಹತ್ತಿರಾಯಿತು ಎಂದೇನಲ್ಲ. ಈ ಇಬ್ಬರೂ ಶ್ರದ್ಧಾವಂತರೂ, ಸೃಜನಶೀಲರೂ ಆದ್ದರಿಂದ ರೇಟಿನಲ್ಲಿ ಮಾತ್ರ ರಾಜಿಯಿಲ್ಲ.


ರೆಹಮಾನಾ? ಸಾಕಪ್ಪಾ ಸಾಕು !

ಹಾಗೆ ನೋಡಿದರೆ ರೇಟಿನ ವಿಷಯದಲ್ಲಿ ರೆಹಮಾನ್‌ಗೂ ದೇಸಾಯಿಗೂ ಅಜಗಜಾಂತರ. ಸಂಗೀತದಿಂದಲೇ ಒಂದು ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲಬಹುದು ಎಂಬ ಬಲವಾದ ನಂಬಿಕೆಯುಳ್ಳ ನಿರ್ಮಾಪಕರು ಮಾತ್ರ ರೆಹಮಾನ್‌ ಮುಂದೆ ಥೈಲಿ ಹಿಡಿದು ನಿಲ್ಲುತ್ತಾರೆ. ಈಚೆಗೆ ತೆರೆಕಂಡ ಬಾಲಚಂದರ್‌ ನಿರ್ದೇಶನದ 100ನೇ ಚಿತ್ರ ‘ಪಾರ್ತಾಲೇ ಪರವಶಂ’(ತಮಿಳು)ಗೂ ಸಂಗೀತ ಕೊಟ್ಟಿದ್ದು ಇದೇ ರೆಹಮಾನ್‌. ಆದರೆ ಚಿತ್ರ ಸಂಗೀತದ ಕೆಸೆಟ್ಟುಗಳು ನಿರೀಕ್ಷಿತ ಮಟ್ಟದಲ್ಲಿ ಬಿಕರಿಯಾಗಲಿಲ್ಲ. ಆ ಮೂಲಕ ದಕ್ಷಿಣ ಭಾರತದ ಸಿನಿಮಾಗಳಿಗೆ ರೆಹಮಾನ್‌ಗೆ ಬುಲಾವು ಇಳಿಮುಖವಾಗಿದೆ.

ರಾಷ್ಟ್ರೀಯ ಪ್ರಶಸ್ತಿಯನ್ನೂ ತಂದುಕೊಟ್ಟು, ಬಾಲಿವುಡ್‌ನಲ್ಲಿ ರೆಹಮಾನ್‌ನನ್ನು ಲೈಮ್‌ಲೈಟ್‌ಗೆ ತಂದ ರೋಜಾ ಚಿತ್ರದ ನಂತರ ಈತ ಹಾಕಿದ ಟ್ಯೂನ್‌ಗಳೆಲ್ಲಾ ಹಿಟ್‌. ಕೆಸೆಟ್ಟಿನಲ್ಲಿ ಒಂದು ಹಾಡು ಹಸನಾಗಿದ್ದರೆ ಸಾಕು, 25 ಲಕ್ಷ ಕೆಸೆಟ್ಟುಗಳ ಬಿಕರಿ ಗ್ಯಾರಂಟಿ. ರೆಹಮಾನ್‌ ಸಂಗೀತ ಸಂಯೋಜನೆಯ ಒಂದೊಂದು ಕೆಸೆಟ್‌ ಬಿಕರಿಯೂ ಜೋರಾದಂತೆ ಈತನ ಸಂಭಾವನೆ ಎರಡು ಮೂರು ಸಾಧಾರಣ ಚಿತ್ರಗಳ ಬಜೆಟ್ಟಿಗೆ ಸಮನಾಯಿತು. ಬಾಂಬೆ ಚಿತ್ರದ ಕೆಸೆಟ್ಟುಗಳಂತೂ ಗೋಬಿ ಮಂಚೂರಿಯಂತೆ ಬಿಕರಿಯಾದವು. ಮಾರಾಟವಾದ ಕೆಸೆಟ್ಟುಗಳ ಸಂಖ್ಯೆ ಬರೋಬ್ಬರಿ 50 ಲಕ್ಷ !

ಲಗಾನ್‌ ಕೆಸೆಟ್ಟು ಹಕ್ಕಿಗೆ 3 ಕೋಟಿ : ಆದರೀಗ ಕೆಸೆಟ್‌ ಕಂಪನಿಗಳಿಗೆ ರೆಹಮಾನ್‌ ಗಿಟ್ಟುತ್ತಿಲ್ಲ. ಬಾಲಿವುಡ್‌ ಓಣಿಗಳಲ್ಲಿ ವ್ಯವಹರಿಸುವವರು ಹೇಳುವಂತೆ ಶತಮಾನದ ಅದ್ಭುತ ಚಿತ್ರಗಳಲ್ಲೊಂದಾದ ಲಗಾನ್‌ ಆಡಿಯೋ ಕೆಸೆಟ್ಟಿನ ಹಕ್ಕನ್ನು ಸೋನಿ 3 ಕೋಟಿ ರುಪಾಯಿಗೆ ಖರೀದಿಸಿತ್ತು. ಆದರೆ ಭರಿಸಿರುವ ಮೊತ್ತವನ್ನು ತುಂಬಿಕೊಳ್ಳಲು ಇನ್ನೂ ಅದಕ್ಕೆ ಆಗಿಲ್ಲ. ಪ್ರಾಯಶಃ ಆಗುವುದೂ ಇಲ್ಲ. ಹಾಗೆ ನೋಡಿದರೆ, ಲಗಾನ್‌ ಆಡಿಯೋ ಕೆಸೆಟ್ಟಿನ ಬಿಕರಿ ಸಪ್ಪೆಯಾಗೇನೂ ಇರಲಿಲ್ಲ. ಆದರೆ, ಹಕ್ಕನ್ನು ಕೊಂಡುಕೊಂಡ ಮೊತ್ತ ಭಾರಿಯಾಗಿತ್ತು.

ರೆಹಮಾನ್‌ ಲೇಬಲ್ಲಿಗೇ ಕೋಟಿ ಕಟ್ಟಲು ಕೆಸೆಟ್‌ ಕಂಪನಿಗಳೇನೋ ರೆಡಿ. ಆದರೆ ಈತ ಸಂಗೀತ ಸಂಯೋಜಿಸುವ ಸಿನಿಮಾದ ವಿತರಣೆ ಹಕ್ಕು ಖರೀದಿಸಲು ಹಂಚಿಕೆದಾರರು ಹಿಂದೇಟು ಹಾಕತೊಡಗಿದ್ದಾರಂತೆ. ಕಾರಣ, ರೆಹಮಾನ್‌ ಸಂಗೀತದ ಚಿತ್ರಗಳು ಡಬ್ಬ ತುಂಬಲು ಅಂದುಕೊಳ್ಳುವುದಕ್ಕಿಂತ ಕನಿಷ್ಠ ಮೂರು ತಿಂಗಳು ತಡವಾಗುತ್ತದೆ. ಯಾಕೆಂದರೆ, 1.ರೆಹಮಾನ್‌ ಪೂರಾ ಬ್ಯುಸಿ. 2.ಫೈನ್‌ಟ್ಯೂನ್‌ ಮಾಡುವುದರಲ್ಲಿ ನಿಸ್ಸೀಮನಾದರೂ, ಕೆಲಸಕ್ಕೆ ಡೆಡ್‌ಲೈನ್‌ ಹಾಕಿಕೊಳ್ಳುವುದಿಲ್ಲ.

ಶಿಲ್ಪ ಶ್ರೀನಿವಾಸ್‌ಗೆ ಕೋಪ ತರಿಸಿದ್ದು ದೇಸಾಯಿಯಾ?

ನಮ್ಮ ದೇಸಾಯಿಯವರ ವಿಷಯದಲ್ಲೂ ರೆಹಮಾನ್‌ ಚಾಳಿಯೇ ಇಣುಕುತ್ತದೆ. ಪರ್ವ ಚಿತ್ರವನ್ನು ನಿರ್ಮಾಪಕ ಶಿಲ್ಪ ಶ್ರೀನಿವಾಸ್‌ಗೆ ಹೇಳಿದ್ದ ಕಾಲಾವಧಿಯಲ್ಲಿ ಮುಗಿಸಿಕೊಡಲು ದೇಸಾಯಿ ಅಕ್ಷರಶಃ ವಿಫಲರಾಗಿದ್ದಾರೆ. ಅಂದುಕೊಂಡಷ್ಟು ಪಕ್ಕಾ ಆಗಿ ದೃಶ್ಯಗಳು ಮೂಡದಿದ್ದಲ್ಲಿ ಪ್ಯಾಕ್‌ಅಪ್‌ ಹೇಳಿಬಿಡುವ ಜಾಯಮಾನ ದೇಸಾಯಿಯವರದು. ಒಂದೊಂದು ಪ್ಯಾಕಪ್‌ಗೂ ಖಾಲಿಯಾಗತೊಡಗುತ್ತದೆ ನಿರ್ಮಾಪಕನ ಪಾಕೆಟ್‌. ದೇಸಾಯಿ ಅವರನ್ನು ತೃಪ್ತಿಪಡಿಸಲಾಗಲಿಲ್ಲವೆಂದು ಸ್ಫೂರ್ತಿಗೆ ರಮೇಶ್‌ ಅವರನ್ನು ಭೇಟಿಯಾಗಿ ಬರುತ್ತಾರೆ ವಿಷ್ಣುವರ್ಧನ್‌. ದೇಸಾಯಿ ದಕ್ಷತೆಗೆ ವಿಷ್ಣು ಬೆಂಬಲ. ಆದರೆ, ಯಾರ್ಯಾರಿಗೋ ಕಾಲ್ಷೀಟ್‌ಗಳನ್ನು ಕೊಟ್ಟ ಪ್ರೇಮಾಗೆ ಅಡಿಕೆ ಕತ್ತರಿ ನಡುವೆ ಸಿಕ್ಕ ಅನುಭವ.

ಇಂಥಾ ಹಿನ್ನೆಲೆಯಲ್ಲಿ ನಿರ್ಮಾಪಕ ಯಾರ ಮೇಲೆ ಎರಗುವುದು. ನಿರ್ದೇಶಕನನ್ನು ಎದುರು ಹಾಕಿಕೊಂಡರೆ ಸಿನಿಮಾಗೇ ಆಪತ್ತು. ಜನಪ್ರಿಯ ನಾಯಕ ವಿಷ್ಣು ಮೇಲೆ ಸಿಟ್ಟಾಗಲಾದೀತೆ; ಅಭಿಮಾನಿಗಳೇ ಮುನಿದು ಎರಗಿದಾರು? ಮುನಿದ ಮನಸ್ಸು ಕ್ರುದ್ಧತೆಯನ್ನು ಕಕ್ಕುವುದಾದರೂ ಯಾರ ಮೇಲೆ? ಇನ್ನೊಬ್ಬ ನಿರ್ಮಾಪಕನ ಕಾಲ್ಷೀಟಿಗೆ ಸಿಕ್ಕಿಕೊಂಡು ಅನಿವಾರ್ಯತೆಗೆ ಕಟ್ಟುಬಿದ್ದು ಕೈಕೊಟ್ಟ ನಟಿಯ ಮೇಲೆ. ಶಿಲ್ಪ ಶ್ರೀನಿವಾಸ್‌ ಮಾಡಿದ್ದೂ ಅದೇ. ಇದರಿಂದ ಸ್ಯಾಂಡಲ್‌ವುಡ್‌ಗೆ ಅಂಟಿದ ಕಪ್ಪು ಚುಕ್ಕೆ ಚಿಕ್ಕದೇನೂ ಅಲ್ಲ.

ರೆಹಮಾನ್‌ ಹಾಗೂ ದೇಸಾಯಿ, ಇಬ್ಬರೂ ಚಿತ್ರೋದ್ಯಮದ ಹಿತ ದೃಷ್ಟಿಯಿಂದ ಹಾಗೂ ನಿರ್ಮಾಪಕರ ಬೊಕ್ಕಸ ಬರಿದಾಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಡೆಡ್‌ಲೈನ್‌ಗೆ ಎದೆಗೊಟ್ಟು ಕೆಲಸ ಮಾಡುವುದು ಒಳಿತು. ಏನಂತೀರಿ?

Post Your Views

ವಾರ್ತಾ ಸಂಚಯ
ನಟಿ ಪ್ರೇಮಾ ಮನೆಯಲ್ಲಿ ದಾಂದಲೆ : ಶ್ರೀನಿವಾಸ್‌ಗೆ 25,000 ದಂಡ
ನನ್ನ ಕಷ್ಟ ಯಾರು ಅರ್ಥ ಮಾಡಿಕೊಳ್ಳುತ್ತಾರೆ, ಹೇಳಿ ? -ಶಿಲ್ಪ ಶ್ರೀನಿವಾಸ್‌

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada