»   » ನಾಗೇಂದ್ರ ಯಾಕೆ ಸತ್ತರು, ಹೇಗೆ ಸತ್ತರು?

ನಾಗೇಂದ್ರ ಯಾಕೆ ಸತ್ತರು, ಹೇಗೆ ಸತ್ತರು?

Subscribe to Filmibeat Kannada

* ಕರಣಿಕ

ಬೆಂಗಳೂರು : ಬಹಳ ಕಾಲದಿಂದ ಖಾಯಿಲೆಯಿಂದ ನರಳುತ್ತಿದ್ದ ಸಂಗೀತ ನಿರ್ದೇಶಕ ನಾಗೇಂದ್ರ ತೀರಿಕೊಂಡು ವಾರವಾಗಿದೆ. ಹೆಸರಾಂತ ಸಂಗೀತ ನಿರ್ದೇಶಕ ಜೋಡಿ ರಾಜನ್‌-ನಾಗೇಂದ್ರ ಖ್ಯಾತಿಯ ರಾಜನ್‌, ತಮ್ಮ ನಾಗೇಂದ್ರ ಅವರಿಗೆ ಅನ್ಯಾಯ ಮಾಡಿದ್ದಾರೆ ಎಂಬಂತೆ ಮಾಧ್ಯಮಗಳಲ್ಲಿ ಒಂದ ಅನೇಕ ಆರೋಪ, ಮಾತುಗಳಿಗೆ ರಾಜನ್‌ ದೀರ್ಘ ವಿವರಣೆಯಂತೆ ನೊಂದು ಮಾತನಾಡಿದ್ದಾರೆ.

ನಾಗೇಂದ್ರ ಬದುಕಿದ್ದಾಗ ಈ ಜೋಡಿಯ ನಡುವಿನ ಭಿನ್ನಾಭಿಪ್ರಾಯಗಳು ಬಯಲಿಗೆ ಬಂದಿರಲಿಲ್ಲ. ಇಬ್ಬರ ನಡುವೆ ಭಿನ್ನಾಭಿಪ್ರಾಯಗಳೇ ಇರಲಿಲ್ಲ ಎಂದೇನೂ ಹೇಳಿಲ್ಲದ ರಾಜನ್‌, ಸಂಗೀತ ನಿರ್ದೇಶಕರಾಗಿ ತಮ್ಮಿಬ್ಬರ ನಡುವೆ ಸಣ್ಣ-ಪುಟ್ಟ ಅಭಿಪ್ರಾಯ ಭೇದಗಳಿದ್ದವು ಆದರೆ ಕೌಟುಂಬಿಕ ಸಂಬಂಧಕ್ಕೆ ಅವೆಂದೂ ದಕ್ಕೆ ತಂದಿರಲಿಲ್ಲ. ನಾಗೇಂದ್ರ ಎರಡನೇ ಮದುವೆಯಾಗುವವರೆಗೆ ಎಲ್ಲವೂ ಸರಿಯಿತ್ತು. ನಂತರ ಅವರ ಮೇಲೆ ಬಿದ್ದ ನಿರಂತರ ಮಾನಸಿಕ ಒತ್ತಡ ಖಾಯಿಲೆ ಹೆಚ್ಚಾಗಲು ಕಾರಣವಾಯಿತು. ಇಷ್ಟಲ್ಲದೆ ತಮ್ಮ ಖಾಯಿಲೆಯನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ನಾಗೇಂದ್ರ ಎಂದೂ ಪ್ರಯತ್ನಿಸಲಿಲ್ಲ. ಸಕ್ಕರೆ ಖಾಯಿಲೆ, ಬಿಪಿ ಇದ್ದರೂ ಉಪ್ಪು, ಸಿಹಿಯನ್ನು ತಿನ್ನುತ್ತಲೇ ಇದ್ದರು.

ಹಾಡುವ ಹಂಬಲ : ಗಾಯಕನಾಗಿ ಹೆಸರು ಮಾಡಬೇಕೆಂಬ ಅವರ ಹಂಬಲದಿಂದ ಆರ್ಕೆಸ್ಟ್ರಾ ತಂಡದ ಜೊತೆ ನಿರಂತರ ತಿರುಗಾಡುತ್ತಿದ್ದ ಅವರು ಹೊತ್ತು-ಹೊತ್ತಿಗೆ ಊಟ- ತಿಂಡಿ ಮಾಡುತ್ತಲೇ ಇರಲಿಲ್ಲ. ಈ ಮಧ್ಯೆ ಮದ್ರಾಸಿನಲ್ಲಿದ್ದಾಗ ಹೊಟ್ಟೆಯಲ್ಲಿ ಆಗಿದ್ದ ಕ್ಯಾನ್ಸರ್‌ಗೆ ಒಮ್ಮೆ ಶಸ್ತ್ರಚಿಕಿತ್ಸೆ ಮಾಡಿಸಲಾಗಿತ್ತು.

ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬಂದ 25 ಸಾವಿರ ಹಣ ಅಟೌಂಟ್‌ ಪೇ ಆಗಿರುವುದರಿಂದ ನಾಗೇಂದ್ರ ಅವರ ಅಕೌಂಟ್‌ಗೆ ಹಣ ಜಮಾ ಆಗುತ್ತದೆ ಹೀಗಿರುವಾಗ ಆ ಹಣವನ್ನು ನಾನು ನಾಗೇಂದ್ರ ಅವರಿಗೆ ಕೊಡಲಿಲ್ಲ ಎಂದು ನಾಗೇಂದ್ರ ಅವರ ಪತ್ನಿ ಮಾಡಿರುವ ಆರೋಪ ಸರಿಯೇ ಎಂದು ರಾಜನ್‌ ಪ್ರಶ್ನಿಸಿದ್ದಾರೆ.

ಮೊದಲಿನಿಂದಲೂ ಹಾಡುಗಳಿಗೆ ತಾನೇ ಸ್ವರ ಸಂಯೋಜನೆ ಮಾಡುತ್ತಿದ್ದೆ. ನಾಗೇಂದ್ರ ನೊಟೇಷನ್‌ಗಳನ್ನು ಮಾತ್ರ ಬರೆದು ವಾದ್ಯಗೋಷ್ಠಿಯವರಿಗೆ ನೀಡುತ್ತಿದ್ದರು, ನಂತರ ಫೈನಲ್‌ ಟಚ್‌ ಕೊಡುತ್ತಿದ್ದುದು ತಾವೇ. ಇದು ಎಲ್ಲ ಹಿರಿಯ ನಿರ್ದೇಶಕರಿಗೂ ಗೊತ್ತು. ಅವರೆಲ್ಲರೂ ತನ್ನ ಜೊತೆಗೇ ಮಾತುಕತೆ ನಡೆಸುತ್ತಿದ್ದರು. ಈ ಬಗ್ಗೆ ಸಿದ್ದಲಿಂಗಯ್ಯ, ಭಾರ್ಗವ ಯಾರನ್ನೇ ಕೇಳಿ ಎಂದು ವಿವರಿಸಿರುವ ರಾಜನ್‌, ಹಣಕಾಸಿನ ವಿಷಯದಲ್ಲಿ ತಾವು ಎಂದೂ ದಾರಿ ತಪ್ಪಿಲ್ಲ ಎಂದಿದ್ದಾರೆ. ಆತನದು ಮೂವರು ಇದ್ದ ಸಂಸಾರ, ತಮ್ಮದು ಆರು ಜನರ ಕುಟುಂಬ ಹಾಗಾಗಿ ಮನೆಯ ಅಗತ್ಯಗಳಿಗನುಗುಣವಾಗಿ ಹಣವನ್ನು ಹಂಚಿಕೊಳ್ಳುತ್ತಿದ್ದೆವು ಎಂದು ಹೇಳಿದ್ದಾರೆ.

ಶಸ್ತ್ರಚಿಕಿತ್ಸೆ : ನಾಗೇಂದ್ರ ಅವರು ತೀರಿಕೊಳ್ಳುವ ಮುಂಚೆ ಹರ್ನಿಯಾ ತೊಂದರೆಯಿಂದ ಬಳಲುತ್ತಿದ್ದರು. ನಾಗೇಂದ್ರ ಅವರ ಎರಡನೇ ಹೆಂಡತಿಯ ಕಡೆಯವರ ಆತಿಯಾಸೆ ಪೂರೈಸಲು ಹೋಗಿ ಕೈಲಿದ್ದ ಕಾಸೆಲ್ಲಾ ಕರಿಗಿ ಹೋಯಿತು. ಮಾನಸಿಕವಾಗಿ ಕುಸಿಯುತ್ತಾ ಹೋದರು. ಆರೋಗ್ಯ ಸಂಪೂರ್ಣ ಹದಗೆಟ್ಟಿತು. ನಮ್ಮಿಬ್ಬರ ಮನೆಗಳಿಗೆ ಕೇವಲ ಅಂತರವಿದ್ದರೂ ಒಂದು ಮಾತು ತಿಳಿಸದೆ ಹೋಗಿದ್ದಾರೆ. ಸರಳ ಶಸ್ತ್ರಚಿಕಿತ್ಸೆಯ ನಂತರ ಸ್ಪೆಷಲ್‌ ವಾರ್ಡ್‌ ಕಾಲಿ ಇಲ್ಲದಿದ್ದುದರಿಂದ ಜನರಲ್‌ ವಾರ್ಡಿನಲ್ಲಿ ಹಾಕಿದ್ದಾರೆ.

ಅಕ್ಟೋಬರ್‌ 27ರ ರಾತ್ರಿ ನಾಗೇಂದ್ರ ಅವರ ಪತ್ನಿ ಅಸ್ಪತ್ರೆಯಲ್ಲಿ ಇರಲಿಲ್ಲ. 28ರಂದು ಬಂದ್‌ನಿಂದ ಆಸ್ಪತ್ರೆಗೆ ಹೋಗಲಾಗಲಿಲ್ಲ. 29ರಂದು ಸ್ಥಿತಿ ಗಂಭೀರವಾದಾಗ ನಿಮ್ಮಾನ್ಸ್‌ಗೆ ಕರೆದುಕೊಂಡು ಹೋದೆ. ಅಲ್ಲಿ ಬೇಗ ಚಿಕಿತ್ಸೆ ನೀಡಲಿಲ್ಲ. ಬೇರೆಡೆ ಕರೆದುಕೊಂಡು ಹೋಗಿ ಅಂತಲೂ ಹೇಳಲಿಲ್ಲ ಹಾಗಾಗಿ ಆತ ತೀರಿಕೊಂಡ.

ರಾಜ್ಯ ಪ್ರಶಸ್ತಿ ಬಂದಾಗ ಸಿಕ್ಕಿದ ಸೈಟಿಗೆ ಸಂಬಂಧಿಸಿದ ಆರೋಪಕ್ಕೂ ರಾಜನ್‌ ವಿವರಣೆ ನೀಡಿದ್ದಾರೆ. ಅಲೆದೂ ಅಲೆದೂ ಸಾಕಾದ ನಂತರ ಬಿಡಿಎ ನವರು ಇಬ್ಬರಿಗೂ ಸೇರಿ ಒಂದೇ ಸೈಟು ಕೊಡುವುದಾಗಿ ಹೇಳಿದಾಗ ಅದನ್ನು ಕೊಂಡುಕೊಳ್ಳಲು ತನ್ನ ಬಳಿ ಹಣವಿಲ್ಲ ಎಂದು ನಾಗೇಂದ್ರ ತಿಳಿಸಿದ ಮೇಲೆ, ಸಾಲ ಮಾಡಿ ನಾನೇ ಕೊಂಡುಕೊಂಡೆ ಎಂದಿದ್ದಾರೆ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada