ಬಿಗ್ ಮಲ್ಟಿಸ್ಟಾರರ್ ಸಿನಿಮಾದಲ್ಲಿ ರಜನಿಕಾಂತ್ ಜೊತೆ ರಶ್ಮಿಕಾ ಮಂದಣ್ಣ ನಟನೆ?
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕ್ರೇಜ್ ಈಗ ಬಾಲಿವುಡ್‌ನಲ್ಲೂ ಜೋರಾಗಿದೆ. 'ಪುಷ್ಪ'-2 ಬ್ಲಾಕ್‌ಬಸ್ಟರ್ ಹಿಟ್ ಬಳಿಕ 'ಛಾವ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದೊಂದು ಐತಿಹಾಸಿಕ ಕಥಾಹಂದರದ ಸಿನಿಮಾ. ಸಾಂಬಾಜಿ ಮಹಾರಾಜನ ಮಡದಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ.
ಫೆಬ್ರವರಿ 14ಕ್ಕೆ 'ಛಾವ' ಸಿನಿಮಾ ತೆರೆಗೆ ಬರ್ತಿದೆ. ಈಗಾಗಲೇ ಸಲ್ಮಾನ್ ಖಾನ್ ಜೊತೆ 'ಸಿಕಂದರ್' ಚಿತ್ರದಲ್ಲಿ ರಶ್ಮಿಕಾ ಬಣ್ಣ ಹಚ್ಚಿದ್ದಾರೆ. ತೆಲುಗಿನ 'ದಿ ಗರ್ಲ್ ಫ್ರೆಂಡ್' ಹಾಗೂ ತಮಿಳಿನ 'ಕುಬೇರ' ಚಿತ್ರಗಳು ಕೈಯಲ್ಲಿವೆ. ಇನ್ನು 'ತಮಾ' ಎಂಬ ಮತ್ತೊಂದು ಹಿಂದಿ ಚಿತ್ರಕ್ಕೂ ಕಿರಿಕ್ ಬೆಡಗಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇತ್ತೀವೆಗೆ ಜಿಮ್‌ನಲ್ಲಿ ಬಿದ್ದು ರಶ್ಮಿಕಾ ಗಾಯಗೊಂಡಿದ್ದಾರೆ. ಹಾಗಾಗಿ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿಲ್ಲ.

ಕಾಲಿಗೆ ಪೆಟ್ಟಾಗಿದ್ದರೂ 'ಛಾವ' ಚಿತ್ರದ ಪ್ರಚಾರದಲ್ಲಿ ರಶ್ಮಿಕಾ ಮಂದಣ್ಣ ಭಾಗಿ ಆಗುತ್ತಿತ್ತು. ಐತಿಹಾಸಿಕ ಪಾತ್ರದಲ್ಲಿ ನಟಿಸುತ್ತಿರುವುದಕ್ಕೆ ಬಹಳ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಚಿತ್ರರಂಗದಿಂದ ದೂರಾದರೂ ಪರವಾಗಿಲ್ಲ ಎಂದಿದ್ದಾರೆ. ಇದೆಲ್ಲದರ ನಡುವೆ ರಜನಿಕಾಂತ್ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.
ತಮಿಳು ನಿರ್ದೇಶಕ ಅಟ್ಲಿ ಈಗಾಗಲೇ ಬಾಲಿವುಡ್ ಪ್ರವೇಶಿಸಿ ಗೆದ್ದಿದ್ದಾರೆ. ಶಾರುಖ್ ಖಾನ್ ನಟನೆಯ 'ಜವಾನ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿತ್ತು. ಬಳಿಕ ಯಾವುದೇ ಸಿನಿಮಾ ಅಟ್ಲಿ ಕೈಗೆತ್ತಿಕೊಳ್ಳಲಿಲ್ಲ. ಆದರೆ ರಜನಿಕಾಂತ್ ಹಾಗೂ ಸಲ್ಮಾನ್ ಖಾನ್ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡಲು ಚರ್ಚಿಸುತ್ತಿದ್ದಾರೆ. ಈ ವಿಚಾರವನ್ನು ಸ್ವತಃ ಹಂಚಿಕೊಂಡಿದ್ದಾರೆ.

ಚಿತ್ರವೊಂದಕ್ಕಾಗಿ ರಜನಿಕಾಂತ್ ಜೊತೆ ಚರ್ಚೆ ನಡೆಸುತ್ತಿರುವುದು ನಿಜ. ಆದರೆ ಕತೆ ಫೈನಲ್ ಆಗಿಲ್ಲ ಎಂದು ಹೇಳಿದ್ದಾರೆ. ಇನ್ನು ಅದೇ ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸುತ್ತಾರೆ. ಇನ್ನು ಸಲ್ಲುಗೆ ನಾಯಕಿಯಾಗಿ ರಶ್ಮಿಕಾ ಕಾಣಿಸಿಕೊಳ್ಳುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಭಾರೀ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತದೆ ಎನ್ನುವ ಚರ್ಚೆ ನಡೀತಿದೆ. ಈಗಾಗಲೇ 'ಸಿಕಂದರ್' ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ರಶ್ಮಿಕಾ ಬಣ್ಣ ಹಚ್ಚಿದ್ದಾರೆ. ಹಾಗಾಗಿ ಮತ್ತೆ ಆ ಅವಕಾಶ ಸಿಕ್ಕರೂ ಅಚ್ಚರಿಪಡಬೇಕಿಲ್ಲ.
ಸದ್ಯ ರಜನಿಕಾಂತ್ 'ಕೂಲಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಬ್ಯಾಂಕಾಕ್‌ನಲ್ಲಿ ಒಂದು ಶೆಡ್ಯೂಲ್ ಮುಗಿಸಿ ಬಂದಿದ್ದಾರೆ. ಬಳಿಕ ನೆಲ್ಸನ್ ನಿರ್ದೇಶನದ 'ಜೈಲರ್- 2' ಚಿತ್ರದಲ್ಲಿ ನಟಿಸಲಿದ್ದಾರೆ. ಆ ಬಳಿಕ ಯಾವ ಸಿನಿಮಾ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಸಾಕಷ್ಟು ಜನ ಕಥೆ ಹೇಳುತ್ತಿದ್ದಾರೆ. ಅಟ್ಲಿ ಹೇಳುವ ಕತೆ ತಲೈವಾಗೆ ಇಷ್ಟವಾದರೆ ಸಿನಿಮಾ ಶುರುವಾಗಬಹುದು. ಇನ್ನು ಶಾರುಖ್ ಖಾನ್‌ಗೆ ಸಿನಿಮಾ ಮಾಡಿ ಅಟ್ಲಿ ಸಾಬೀತು ಮಾಡಿದ್ದಾರೆ. ಹಾಗಾಗಿ ಸಲ್ಮಾನ್ ಖಾನ್ ಸಹ ಒಪ್ಪಬಹುದು.
ಸದ್ಯ ಮಲ್ಟಿಸ್ಟಾರರ್ ಸಿನಿಮಾಗಳ ಟ್ರೆಂಡ್ ನಡೀತಿದೆ. ಅದರಲ್ಲೂ ಬೇರೆ ಬೇರೆ ಭಾಷೆಯ ಸ್ಟಾರ್ ನಟರು ಒಟ್ಟಿಗೆ ನಟಿಸುವುದು ಹೆಚ್ಚಾಗುತ್ತಿದೆ. ಈಗಾಗಲೇ ತೆಲುಗಿನ 'ಗಾಡ್ ಫಾದರ್' ಚಿತ್ರದಲ್ಲಿ ಚಿರಂಜೀವಿ ಜೊತೆ ಸಲ್ಮಾನ್ ಖಾನ್ ನಟಿಸಿದ್ದರು. ರಜನಿಕಾಂತ್ ಸಹ 'ವೆಟ್ಟೆಯಾನ್' ಚಿತ್ರದಲ್ಲಿ ಬಿಗ್ ಬಿ ಜೊತೆ ತೆರೆ ಹಂಚಿಕೊಂಡಿದ್ದರು. ನಿರ್ದೇಶಕ ಅಟ್ಲಿ ಅಂತಾದೊಂದು ಕಥೆ ಸಿದ್ಧಪಡಿಸಿದರೆ ರಜನಿ- ಸಲ್ಲು ಒಟ್ಟಿಗೆ ನಟಿಸಬಹುದು. ಆದರೆ ಇದೆಲ್ಲ ಸದ್ಯಕ್ಕೆ ಅಂತೆಕಂತೆ ಸುದ್ದಿ ಮಾತ್ರ. ಅಧಿಕೃತ ಮಾಹಿತಿ ಇನ್ನಷ್ಟೆ ಸಿಗಬೇಕಿದೆ.


Click it and Unblock the Notifications











