ಹಾರ್ಡ್ ಡಿಸ್ಕ್‌ನಲ್ಲಿದ್ದ ರಜನಿಕಾಂತ್ 'ಲಾಲ್ ಸಲಾಂ' ಸಿನಿಮಾ ಫುಟೇಜ್ ಮಾಯಾ? ಅಭಿಮಾನಿಗಳು ಶಾಕ್!
'ಜೈಲರ್' ಸಕ್ಸಸ್ ಸಂಭ್ರಮದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಗಳು ಐಶ್ವರ್ಯ ನಿರ್ದೇಶನದ 'ಲಾಲ್ ಸಲಾಂ' ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಚಿತ್ರದ ಮುಖ್ಯ ಪಾತ್ರದಲ್ಲಿ ರಜನಿಕಾಂತ್ ಬಣ್ಣ ಹಚ್ಚಿದ್ದಾರೆ. ಕ್ರಿಕೆಟ್ ದಂತಕತೆ ಕಪಿಲ್ ದೇವ್ ಕೂಡ ತಲೈವಾ ಜೊತೆ ತೆರೆ ಹಂಚಿಕೊಂಡಿದ್ದಾರೆ.
ಲೈಕಾ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ 'ಲಾಲ್ ಸಲಾಂ' ವಿಷ್ಣು ವಿಶಾಲ್ ಹೀರೊ ಆಗಿ ನಟಿಸಿದ್ದಾರೆ. ರಜನಿಕಾಂತ್ ಜೊತೆಗೆ ನಿರೋಷ, ಜೀವಿತಾ ರಾಜಶೇಖರ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಪಿಲ್ ದೇವ್ ತಾವಾಗಿಯೇ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಏಪ್ರಿಲ್ 14ಕ್ಕೆ ತಮಿಳು ಹೊಸ ವರ್ಷದ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಚಿತ್ರಕ್ಕೆ ಆಸ್ಕರ್ ವಿಜೇತ ಎ. ಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಆಗಸ್ಟ್ 7ರಂದು 'ಲಾಲ್ ಸಲಾಂ' ಸಿನಿಮಾ ಚಿತ್ರೀಕರಣ ಮುಗಿಸಲಾಗಿದೆ. ಇದ್ದಕ್ಕಿದಂತೆ ಚಿತ್ರದ ಹಾರ್ಡ್ ಡಿಸ್ಕ್ ಕರಪ್ಟ್ ಆಗಿದೆ. ಹಾಡ್ ಡಿಸ್ಕ್ ಕಾಣೆಯಾಗಿದೆ ಎನ್ನುವ ಗುಸುಗುಸು ಕಾಲಿವುಡ್‌ನಲ್ಲಿ ಶುರುವಾಗಿದೆ. ಡಿಜಿಟಲ್ ಜಮಾನದಲ್ಲಿ ಈಗ ಸಿನಿಮಾ ಫುಟೇಜ್ ಹಾರ್ಡ್ ಡಿಸ್ಕ್‌ಗಳಲ್ಲಿ ಶೇಖರಿಸಿ ಇಡುತ್ತಾರೆ. ಸಿನಿಮಾ ಎಡಿಟಿಂಗ್, ಸೆನ್ಸಾರ್‌ಗೆ ಹಾರ್ಡ್ ಡಿಸ್ಕ್‌ನಿಂದಲೇ ಬಳಸಿಕೊಳ್ಳಲಾಗುತ್ತದೆ. ಕೆಲವೊಮ್ಮೆ ಹಾರ್ಡ್ ಡಿಸ್ಕ್‌ನಿಂದಲೇ ಸಿನಿಮಾ ಲೀಕ್ ಆಗಿಬಿಡುವ ಸಾಧ್ಯತೆ ಇರುತ್ತದೆ.
ದಿಢೀರನೆ 'ಲಾಲ್ ಸಲಾಂ' ಸಿನಿಮಾ ಹಾಡ್ ಡಿಸ್ಕ್ ಸಮಸ್ಯೆ ಆಗಿದೆ. ಸಿನಿಮಾ ರಿಲೀಸ್ ಸದ್ಯಕ್ಕಿಲ್ಲ ಎನ್ನುವ ಊಹಾಪೋಹ ಶುರುವಾಗಿದೆ. ರಜನಿಕಾಂತ್ ನಟಿಸಿದ್ದ ಸನ್ನಿವೇಶಗಳು ಹಾರ್ಡ್ ಡಿಸ್ಕ್‌ನಲ್ಲಿ ಇಲ್ಲ. ಆ ದೃಶ್ಯಗಳನ್ನು ಮರಳಿ ಪಡೆಯಲು ವಿದೇಶದಿಂದ ನುರಿತ ತಂತ್ರಜ್ಞರನ್ನು ಕರೆಸಲಾಗುತ್ತಿದೆ ಅಂತೆಲ್ಲಾ ಗುಲ್ಲಾಗಿದೆ. ಇದನ್ನು ಕೇಳಿ ರಜನಿಕಾಂತ್ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಅರೇ ಸಿನಿಮಾ ಹಾರ್ಡ್ ಡಿಸ್ಕ್ ಇಲ್ಲ ಅಂದ್ರೆ ಏನು ಅರ್ಥ? ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಮತ್ತೊಂದು ಕಡೆ ರಜನಿಕಾಂತ್ ಹುಟ್ಟುಹಬ್ಬಕ್ಕೆ 'ಲಾಲ್ ಸಲಾಂ' ಟೀಸರ್ ರಿಲೀಸ್ ಎನ್ನುವ ಮಾತುಗಳು ಕೇಳಿಬರ್ತಿದೆ. ಟೀಸರ್ ಸೆನ್ಸಾರ್ ಸರ್ಟಿಫಿಕೇಟ್ ಫೋಟೊ ವೈರಲ್ ಆಗುತ್ತಿದೆ. ಟೀಸರ್ ಸೆನ್ಸಾರ್ ಆಗಿದೆ ಎಂದಮೇಲೆ ಹಾರ್ಡ್ ಡಿಸ್ಕ್ ಹಾಳಾಗಿದೆ ಅನ್ನೋದೆಲ್ಲಾ ಸುಳ್ಳುಸುದ್ದಿ, ಯಾರು ನಂಬಬೇಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಡಿಸೆಂಬರ್ 12ಕ್ಕೆ ರಜನಿಕಾಂತ್ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅದೇ ಸಂಭ್ರಮದಲ್ಲಿ 'ಲಾಲ್ ಸಲಾಂ' ಟೀಸರ್ ಹೊರ ಬರುತ್ತೆ ಎನ್ನುವ ಅಂದಾಜಿದೆ. 1.34 ನಿಮಿಷಗಳ ಸ್ಯಾಂಪಲ್ ಇದು ಎನ್ನಲಾಗ್ತಿದೆ. ಚಿತ್ರದಲ್ಲಿ ತಲೈವಾ, ಮೊಹಿದ್ದೀನ್ ಭಾಯ್ ಎನ್ನುವ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗ್ತಿದೆ. ಆ ಪಾತ್ರವನ್ನು ಹೈಲೆಟ್ ಮಾಡಿ ಟೀಸರ್ ಕಟ್ ಮಾಡಿರುವಂತೆ ಕಾಣುತ್ತಿದೆ.
'ಲಾಲ್ ಸಲಾಂ' ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ಆಗಿದ್ದು ಕ್ರಿಕೆಟ್ ಹಿನ್ನೆಲೆಯಲ್ಲಿ 90r ದಶಕದ ಕತೆಯನ್ನು ಕಟ್ಟಿಕೊಟ್ಟಿದ್ದಾರೆ ಎನ್ನಲಾಗ್ತಿದೆ. ವಿಷ್ಣು ರಂಗಸ್ವಾಮಿ ಛಾಯಾಗ್ರಹಣ ಚಿತ್ರಕ್ಕಿದೆ. ರಜನಿಕಾಂತ್ ನಟನೆಯ ಮುಂದಿನ 2 ಸಿನಿಮಾಗಳನ್ನು ಲೈಕಾ ಸಂಸ್ಥೆ ನಿರ್ಮಿಸ್ತಿದೆ. ಈ ಎರಡೂ ಸಿನಿಮಾಗಳನ್ನು ಸೇರಿಸಿ ರಜನಿಕಾಂತ್ ಭಾರೀ ಮೊತ್ತದ ಸಂಭಾವನೆ ನೀಡಿರುವುದಾಗಿ ಹೇಳಲಾಗುತ್ತಿದೆ.
ಲೈಕಾ ಸಂಸ್ಥೆಯ ಮುಂದಿನ ಚಿತ್ರದಲ್ಲಿ ತಲೈವಾ ಹೀರೊ ಆಗಿ ನಟಿಸ್ತಿದ್ದಾರೆ. ಇನ್ನು ಹೆಸರಿಡದ ಈ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್, ರಾಣಾ ದಗ್ಗುಬಾಟಿ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. 'ಜೈಭೀಮ್' ಸಿನಿಮಾ ಮಾಡಿದ್ದ ಜ್ಞಾನವೇಲ್ ಈ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ. ಈ ಸಿನಿಮಾ ಬಳಿಕ ಲೋಕೇಶ್ ಕನಕರಾಜ್ ನಿರ್ದೇಶನದ ಚಿತ್ರದದಲ್ಲಿ ರಜನಿ ಬಣ್ಣ ಹಚ್ಚಲಿದ್ದಾರೆ.


Click it and Unblock the Notifications











