ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ರಾಮ್‌ಚರಣ್; ಚಿತ್ರಕ್ಕೆ ರಾಜಮೌಳಿ ತಂದೆ ಕಥೆ
ಸಣ್ಣ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರಲ್ಲ. ಸ್ಟಾರ್ ನಟರನ್ನು ಬಳಸಿಕೊಂಡು ಸಣ್ಣ ಸಿನಿಮಾ ನಿರ್ಮಾಣ ಸಾಧ್ಯವಿಲ್ಲ ಎನ್ನುವಂತಾಗಿದೆ. ಹಾಗಾಗಿ ಫಿಲ್ಮ್ ಮೇಕರ್ಸ್ ದೊಡ್ಡ ದೊಡ್ಡ ಕನಸು ಕಾಣುತ್ತಿದ್ದಾರೆ. ಪ್ಯಾನ್ ಇಂಡಿಯಾ ಜಮಾನದಲ್ಲಿ ಕಲಾವಿದರು, ಕಲಾವಿದರು ಭಾಷೆ ಗಡಿ ಮೀರಿ ಬೇರೆ ಬೇರೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಒಂದ್ಕಾಲದಲ್ಲಿ ದಕ್ಷಿಣದ ಕಲಾವಿದರು, ತಂತ್ರಜ್ಞರ ಬಾಲಿವುಡ್ ಪ್ರವೇಶ ಬಹಳ ಸುದ್ದಿ ಆಗುತ್ತಿತ್ತು. ಈಗ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಬಾಲಿವುಡ್ ಕಲಾವಿದರು ಕೂಡ ದಕ್ಷಿಣದ ಸಿನಿಮಾಗಳಲ್ಲಿ ನಟಿಸೋಕೆ ತುದಿಗಾಲಿನಲ್ಲಿ ನಿಲ್ಲುವಂತಾಗಿದೆ. ಈಗ ಸಿನಿಮಾ ಬಜೆಟ್ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಸಂಭಾವನೆ ಏರುತ್ತಲೇ ಇದೆ. ಹೆಚ್ಚು ಹಣ ಕೊಟ್ಟರೆ ಯಾವ ಸಿನಿಮಾಗಳಲ್ಲಿ ನಟಿಸೋಕು ಸಿದ್ಧ ಎನ್ನುವಂತಾಗಿದೆ. ಸದ್ಯ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಚಿತ್ರದಲ್ಲಿ ತೆಲುಗು ನಟ ರಾಮ್‌ಚರಣ್ ನಟಿಸುತ್ತಾರೆ ಎನ್ನಲಾಗ್ತಿದೆ.

ಚಿರಂಜೀವಿ ಪುತ್ರನಿಗೆ ಬಾಲಿವುಡ್ ಹೊಸದೇನು ಅಲ್ಲ. ದಶಕಗಳ ಹಿಂದೆಯೇ 'ಜಂಝೀರ್' ಸಿನಿಮಾ ಮೂಲಕ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. ಆದರೆ ಸಿನಿಮಾ ಹೀನಾಯವಾಗಿ ಸೋತಿತ್ತು. ಆ ಬಳಿಕ ಅತ್ತ ತಲೆ ಹಾಕಲಿಲ್ಲ. ಕೆಲ ದಿನಗಳಿಂದ ಅಲ್ಲು ಅರ್ಜುನ್ ಹಾಗೂ ಜ್ಯೂ.ಎನ್‌ಟಿಆರ್ ನಿರ್ದೇಶನದ ಚಿತ್ರಕ್ಕೆ ಬನ್ಸಾಲಿ ಆಕ್ಷನ್ ಕಟ್ ಹೇಳ್ತಾರೆ ಎನ್ನುವ ಊಹಾಪೋಹ ಶುರುವಾಗಿತ್ತು. ಆದರೆ ಈಗ ರಾಮ್‌ಚರಣ್ ಹೆಸರು ಕೇಳಿಬರ್ತಿದೆ.
ಸದ್ಯ 'ಪೆದ್ದಿ' ಚಿತ್ರದಲ್ಲಿ ಚರಣ್ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ. ಬಳಿಕ ಸುಕುಮಾರ್ ನಿರ್ದೇಶನದ ಚಿತ್ರದಲ್ಲಿ ನಟಿಸುವುದು ಪಕ್ಕಾ ಆಗಿದೆ. ಆ ಬಳಿಕ ಬನ್ಸಾಲಿ ಜೊತೆ ಕೈ ಜೋಡಿಸುತ್ತಾರೆ ಎನ್ನಲಾಗ್ತಿದೆ. ಅದಕ್ಕೂ ಮುನ್ನ 'ಲವ್ & ವಾರ್' ಚಿತ್ರವನ್ನು ನಿರ್ದೇಶಕರು ಮುಗಿಸಬೇಕಿದೆ. ಅಂದಹಾಗೆ ಬನ್ಸಾರಿ, ಚರಣ್ ಚಿತ್ರಕ್ಕೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆಯುತ್ತಾರೆ ಎನ್ನಲಾಗ್ತಿದೆ. ಕಾಡಿನ ಹಿನ್ನೆಲೆಯ ಐತಿಹಾಸಿಕ ಸಿನಿಮಾ ಇದು ಎನ್ನುವ ಗುಸುಗುಸು ಶುರುವಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ.

ಈ ಹಿಂದೆ ಚರಣ್ ಹಾಗೂ ಬನ್ಸಾಲಿ ಕಾಂಬಿನೇಷನ್‌ನಲ್ಲಿ 'ಮಹಾರಾಜ ಸುಹೇಲ್ದೇವ್' ಸಿನಿಮಾ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಆದರೆ ಈಗ ಈ ಕಾಂಬೋ ನಿಜವಾಗುತ್ತದೆ ಎನ್ನಲಾಗ್ತಿದೆ. ರಾಮ್‌ಚರಣ್‌ಗೆ ಹೇಳಿಮಾಡಿಸಿದಂತಹ ಕಥೆ ಇದು. ಸಿನಿಮಾ ಅದ್ಭುತವಾಗಿ ಮೂಡಿ ಬರುತ್ತದೆ. ಈಗಾಗಲೇ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿದೆ ಎಂದು ಹೇಳಲಾಗ್ತಿದೆ.
ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಬುಚ್ಚಿಬಾಬು ನಿರ್ದೇಶನದ ಈ ಸಿನಿಮಾ ಟೀಸರ್, ಸಾಂಗ್ಸ್ ಹೊರಬಂದು ಸದ್ದು ಮಾಡ್ತಿದೆ. ಎ. ಆರ್ ರಹಮಾನ್ ಟ್ಯೂನ್ ಹಾಕಿದ್ದಾರೆ. ಜಾನ್ವಿ ಕಪೂರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಶಿವರಾಜ್‌ಕುಮಾರ್ ಚಿತ್ರದಲ್ಲಿ ಕುಸ್ತಿ ಉಸ್ತಾದ್ ಆಗಿ ನಾಯಕನ ಬೆಂಬಲಕ್ಕೆ ನಿಲ್ಲುವ ಗುರುವಾಗಿ ಕಾಣಿಸಿಕೊಂಡಿದ್ದಾರೆ.
80, 90ರ ದಶಕದ ಹಳ್ಳಿ ಹಿನ್ನೆಲೆಯ ಕಥೆ 'ಪೆದ್ದಿ' ಚಿತ್ರದಲ್ಲಿದೆ. ಅವತ್ತಿನ ಕಾಲದಲ್ಲಿ ಹಳ್ಳಿಗಳಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಟೂರ್ನಿಗಳು, ಪಂದ್ಯಗಳು, ಅಲ್ಲಿ ರಗಡ್ ಹೈದನ ಜಬರ್ದಸ್ತ್ ಆಟ, ಆತನ ಜೀವನದ ಏರಿಳಿತಗಳೇ ಚಿತ್ರದ ಕಥೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಮಾರ್ಚ್ 28ಕ್ಕೆ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಏಪ್ರಿಲ್ 30 ಸಿನಿಮಾ ರಿಲೀಸ್ ಎಂದು ಘೋಷಿಸಿದೆ. ಆದರೆ ಈಗ ಆ ದಿನಾಂಕವನ್ನು ಮುಂದೂಡುವಂತಾಗಿದೆ. ಜೂನ್ ಕೊನೆಗೆ 'ಪೆದ್ದಿ' ಆರ್ಭಟ ಶುರುವಾಗಬಹುದು ಎನ್ನಲಾಗ್ತಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ.


Click it and Unblock the Notifications