Ramayana: ನಿತೇಶ್ ತಿವಾರಿ ರಾಮಾಯಣಕ್ಕೆ ರಾಮ, ಸೀತೆ, ರಾವಣ ಬಳಿಕ ಹನುಮಂತ ಸಿಕ್ಕಾಯ್ತು!
ರಾಮಾಯಣ ಕಾವ್ಯ ಆಧರಿಸಿ ಬಾಲಿವುಡ್‌ನಲ್ಲಿ ನಿತೇಶ್ ತಿವಾರಿ ಸಿನಿಮಾ ಮಾಡೋಕೆ ಮುಂದಾಗಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಗದೇ ಇದ್ದರೂ ಇಂತಾದೊಂದು ಪ್ರಯತ್ನ ನಡೀತಿದೆ ಎಂದು ಬಾಲಿವುಡ್‌ನಲ್ಲಿ ಚರ್ಚೆ ಆಗುತ್ತಿದೆ. ರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್ ನಟಿಸ್ತಾರೆ ಎನ್ನಲಾಗ್ತಿದೆ.
ವಾಲ್ಮೀಕಿ ಬರೆದ ರಾಮಾಯಣ ಮಹಾಕಾವ್ಯದಲ್ಲಿ ರಾಮ ಭಕ್ತಿ ಹನುಮಂತನ ಪಾತ್ರಕ್ಕೂ ಬಹಳ ಮಹತ್ವ ಇದೆ. ಹನುಮಂತನೇ ರಾಮಾಯಣದ ಎರಡನೇ ನಾಯಕ ಎಂದರೂ ತಪ್ಪಾಗಲ್ಲ. ಹಾಗಾಗಿ ನಿತೇಶ್ ತಿವಾರಿ ಸಾರಥ್ಯದ ಚಿತ್ರದಲ್ಲಿ ಯಾರು ಹನುಮಂತನ ಪಾತ್ರ ಮಾಡುತ್ತಾರೆ ಎನ್ನುವ ಕುತೂಹಲ ಇತ್ತು. ಈಗಾಗಾಲೇ ಕಲಾವಿದರ ಆಯ್ಕೆ, ಲುಕ್ ಟೆಸ್ಟ್ ನಡೀತಿದ್ದು ಹನುಮಂತನ ಪಾತ್ರಕ್ಕೆ ಖ್ಯಾತ ನಟನನ್ನು ಒಪ್ಪಿಸುವ ಪ್ರಯತ್ನಗಳು ನಡೀತಿದೆ.

ಮೂರು ಭಾಗಗಳಾಗಿ ರಾಮಾಯಣ ಕಾವ್ಯವನ್ನು ತೆರೆಮೇಲೆ ತರುವ ಲೆಕ್ಕಾಚಾರದಲ್ಲಿದೆ ಚಿತ್ರತಂಡ. ಮುಂದಿನ ವರ್ಷ ಫೆಬ್ರವರಿಯಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ. ಜುಲೈನಲ್ಲಿ ರಣ್‌ಬೀರ್ ಹಾಗೂ ಯಶ್ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರಂತೆ. 2 ವರ್ಷಗಳ ಕಾಲ ಸಿನಿಮಾಗಳ ಚಿತ್ರೀಕರಣ ನಡೆಯಲಿದೆ. ಇನ್ನು ಹನುಮಂತನ ಪಾತ್ರವನ್ನೇ ಕೇಂದ್ರವಾಗಿಟ್ಟುಕೊಂಡು ಸಿನಿಮಾ ಮಾಡಲು ನಿತೇಶ್ ತಿವಾರಿ ಪ್ರಯತ್ನ ನಡೆಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.
ರಾಮಾಯಣ ಚಿತ್ರದ ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ನಟಿಸುತ್ತಾರೆ ಎಂದು ಬಾಲಿವುಡ್‌ನಲ್ಲಿ ಗುಲ್ಲಾಗಿದೆ. ಬಹಳ ಮಹತ್ವವಾದ ಈ ಪಾತ್ರಕ್ಕೆ ಸನ್ನಿ ನ್ಯಾಯ ಒದಗಿಸುತ್ತಾರೆ ಎಂದು ನಿತೇಶ್ ಅಂದುಕೊಂಡಿದ್ದಾರೆ. ಈಗಾಗಲೇ ಈ ಬಗ್ಗೆ ಚರ್ಚೆಗಳು ಆರಂಭವಾಗಿದ್ದು ಸನ್ನಿ ಡಿಯೋಲ್ ಸಹ ಹನುಮಂತನ ಪಾತ್ರದಲ್ಲಿ ಬಣ್ಣ ಹಚ್ಚಲು ಉತ್ಸುಕರಾಗಿದ್ದಾರೆ ಎನ್ನಲಾಗ್ತಿದೆ.
ಮುಂದೆ ಇದೇ ಚಿತ್ರದ ಹನುಮಂತನ ಪಾತ್ರವನ್ನು ಪ್ರಧಾನವಾಗಿಟ್ಟುಕೊಂಡು ಮತ್ತೊಂದು ಸಿನಿಮಾ ಮಾಡುವ ಲೆಕ್ಕಚಾರ ನಿರ್ದೇಶಕರಿಗೆಯಂತೆ. ಅದರಲ್ಲಿ ಸನ್ನಿ ಡಿಯೋಲ್ ಮುಂದುವರೆಯುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. 'ಗದರ್'-2 ಚಿತ್ರದಲ್ಲಿ ತಾರಾ ಸಿಂಗ್ ಆಗಿ ಸನ್ನಿ ಡಿಯೋಲ್ ಅಬ್ಬರಿಸಿದ್ದರು. ಈ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿ 500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು.
ಚಿತ್ರದಲ್ಲಿ ಸೀತೆಯಾಗಿ ನಟಿಸುತ್ತಿರುವ ಬಗ್ಗೆ ನಟಿ ಸಾಯಿ ಪಲ್ಲವಿ ಪ್ರತಿಕ್ರಿಯಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ರೌಡಿ ಬೇಬಿ "ಇದು ನನಗೆ ಅದೃಷ್ಟ. ಈ ಸಿನಿಮಾ ಚಿತ್ರೀಕರಣಕ್ಕೆ ಯಾವಾಗ ಕರೆಯುತ್ತಾರೆ ಎಂದು ಎದುರು ನೋಡುತ್ತಿದ್ದೇನೆ. ನಿಜಕ್ಕೂ ಬಹಳ ಸವಾಲಿನ ಪಾತ್ರ ಇದು. ಈ ಹಿಂದೆ ಖ್ಯಾತ ನಟಿಯರು ಈ ಪಾತ್ರ ಮಾಡಿದ್ದಾರೆ. ಅವರು ಮಾಡಿದ್ದರಲ್ಲಿ 10% ನಾನು ಮಾಡಿದರೂ ಅದು ಅದ್ಭುತ" ಎಂದಿದ್ದಾರೆ.
ರಾಮಾಯಣದ ಚಿತ್ರಕಥೆ ಕೇಳಲು ಶೀಘ್ರದಲ್ಲೇ ಮುಂಬೈಗೆ ಹೋಗುತ್ತಿದ್ದೇನೆ. ಈಗಾಗಲೇ ಭಾರತದಲ್ಲಿ ರಾಮಾಯಣ ಕಾವ್ಯ ಆಧರಿಸಿ ಸಾಕಷ್ಟು ಸಿನಿಮಾಗಳು ಬಂದಿವೆ. ಆದರೆ ಈವರೆಗೆ ಸಂಪೂರ್ಣವಾಗಿ ವಾಲ್ಮೀಕಿ ರಾಮಾಯಣವನ್ನು ಯಾರೂ ತೆರೆಗೆ ತಂದಿಲ್ಲ. ಆ ಕೊರತೆಯನ್ನು ಈ ಸಿನಿಮಾ ತೀರಿಸುತ್ತದೆ ಎಂದು ಸಾಯಿ ಪಲ್ಲವಿ ಅಭಿಪ್ರಾಯಪಟ್ಟಿದ್ದಾರೆ.
'KGF-2' ಬಳಿಕ ಯಶ್ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ನಾನು ಹೇಳುವವರೆಗೂ ಯಾವುದೇ ಸುದ್ದಿ ನಂಬಬೇಡಿ ಎಂದು ಈ ಹಿಂದೆ ರಾಕಿಂಗ್ ಸ್ಟಾರ್ ಹೇಳಿದ್ದಾರೆ. ಇನ್ನು ಕೆಲ ದಿನಗಳ ಹಿಂದೆ ಪರಭಾಷೆ ಸಿನಿಮಾದಲ್ಲಿ ನಟಿಸುವುದಿಲ್ಲ ಎನ್ನುವ ಅರ್ಥದಲ್ಲಿ ಯಶ್ ಮಾತನಾಡಿದ್ದರು. ಹಾಗಾದರೆ ನಿತೇಶ್ ತಿವಾರಿ ಸಾರಥ್ಯದ ರಾಮಾಯಣ ಚಿತ್ರದಲ್ಲಿ ಯಶ್ ನಟಿಸ್ತಾರಾ? ಇಲ್ವಾ? ಎನ್ನುವ ಗೊಂದಲ ಮೂಡಿದೆ.
ರಾಮಾಯಣ ಕಾವ್ಯದಲ್ಲಿ ರಾವಣನ ಪಾತ್ರಕ್ಕೆ ಬಹಳ ಮಹತ್ವ ಇದೆ. ಯಶ್ ಆ ಪಾತ್ರದಲ್ಲಿ ನಟಿಸಿದರೆ ಅಭಿಮಾನಿಗಳಿಗೇ ಹಬ್ಬವೇ ಸರಿ. ಆದರೆ ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಈವರೆಗೆ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗುವ ಸಾಧ್ಯತೆಯಿದೆ.


Click it and Unblock the Notifications











